ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ವಿವಾಹದಲ್ಲಿ ಶಾಸಕರ ಪುತ್ರಿ ಮದುವೆ

Last Updated 3 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಅರಸೀಕೆರೆ: ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಮಾ.24ರಂದು ನಡೆಯುವ 101 ಜೋಡಿ ಸಾಮೂಹಿಕ ವಿವಾಹದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರ ಪುತ್ರಿ ಎಸ್. ಮಾನಸ ಅವರ ವಿವಾಹ ಎ. ವರುಣ ಅವರೊಂದಿಗೆ ಸರಳ ರೀತಿಯಲ್ಲಿ ನಡೆಯಲಿದೆ ಎಂದು ವಿವಾಹ ಸಮಿತಿ ಅಧ್ಯಕ್ಷ ಹಾಗೂ ಪುರಸಭಾಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ ಮಂಗಳವಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ವಿವಾಹ ಮಹೋತ್ಸವವು ಎಲ್ಲಾ ಧರ್ಮಿಯ ಮಠಾಧೀಶರ ಸಾನಿಧ್ಯದಲ್ಲಿ ನಡೆಯಲಿದ್ದು, ಮಾಜಿ ಸಚಿವರು, ಶಾಸಕರು, ರಾಜಕೀಯ ಮುಖಂಡರು,ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರೂ ಸೇರಿದಂತೆ ನಾಗರಿಕರು ಜಾತ್ಯತೀತ ಹಾಗೂ ಪಕ್ಷಾತೀತವಾಗಿ ನಡೆಯಲಿದೆ ಎಂದರು.

ಅಲ್ಲದೇ, ಈ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ನವ ವಧು-ವರರಿಗೆ ಬಟ್ಟೆ, ವಧುವಿಗೆ ಮಾಂಗಲ್ಯ ಹಾಗೂ ಕಾಲುಂಗರ ನೀಡಲಾಗುವುದು. ವಿವಾಹದಲ್ಲಿ ಪಾಲ್ಗೊಳ್ಳುವ ವಧು-ವರರು ತಪ್ಪದೇ ತಮ್ಮ ವಯಸ್ಸಿನ ಧೃಢೀಕರಣ ಪತ್ರ ದಾಖಲೆಗಳನ್ನು ಸಮಿತಿಗೆ ಒದಗಿಸಬೇಕು. ವಧುವಿಗೆ 18 ಹಾಗೂ ವರನಿಗೆ 21 ವರ್ಷ ಕಡ್ಡಾಯವಾಗಿರಬೇಕು. ಆಸಕ್ತವುಳ್ಳ ಪೋಷಕರು ವಿವಾಹದ ನೋಂದಾವಣಿಯನ್ನು ಸಾಮೂಹಿಕ ವಿವಾಹ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಸುಬ್ರಮಣ್ಯಬಾಬು ಹಾಗೂ ಶಾಸಕರ ಕಚೇರಿ ಮಾರುತಿನಗರ ಈ ವಿಳಾಸದಲ್ಲಿ ಮಾಡಿಸಿಕೊಳ್ಳಬೇಕು. ನೋಂದಾವಣಿಗೆ ಕಡೇ ದಿನ ಮಾ.5 ಎಂದು ಅವರು ಹೇಳಿದರು.

ಆರೋಪ ಸತ್ಯಕ್ಕೆ ದೂರ: ಪುರಸಭಾ ವ್ಯಾಪ್ತಿಯಲ್ಲಿ ನಡೆದಿರುವ ಯಾವುದೇ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು ಬಿಜೆಪಿ ಮುಖಂಡ ಗುರುಸಿದ್ದಪ್ಪ ಕಳಪೆ ಮಟ್ಟದಿಂದ ಕೂಡಿವೆ ಎಂದು ಆರೋಪ ಮಾಡಿರುವುದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶದಿಂದ ಕೂಡಿದ್ದು ಈ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ಸ್ಪಷ್ಟಪಡಿಸಿದ ಅವರು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಸಣ್ಣ ಹಾಗೂ ಮಧ್ಯಮ ಪಟ್ಟಣ ಅಭಿವೃದ್ದಿ ಯೋಜನೆಯಡಿ ಪುರಸಭೆಗೆ ಐದು ಕೋಟಿ ರೂಪಾಯಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದ್ದು, ಈ ಪೈಕಿ 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿವೆ. ಪಾರದರ್ಶಕವಾಗಿ ಕಾಮಗಾರಿ ಟೆಂಡರ್ ಕರೆದಿದ್ದು ಗುತ್ತಿಗೆದಾರರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಈ ಕಾಮಗಾರಿಯನ್ನು ಹಂತ ಹಂತವಾಗಿ ಸರ್ಕಾರದಿಂದ ನೇಮಕಗೊಂಡಿರುವ ಅಧಿಕಾರಿಗಳು ಪರಿಶೀಲಿಸಿದ ಮೇಲೆ ಬಿಲ್ ಹಣ ಪಾವತಿಸಲಾಗುತ್ತದೆ. ಒಂದು ವೇಳೆ ಕಾಮಗಾರಿ ಕಳಪೆಯಿಂದ ಕೂಡಿದ್ದರೆ ಪರಿಶೀಲಿಸಿ ತಡೆಹಿಡಿಯಲಿ ಬೇಡ ಅಂದವಾರ್ಯಾರು ಎಂದು ಹೇಳಿದರು.

ವಿರೋಧ ಪಕ್ಷದ ಮುಖಂಡರು ಟೀಕೆಗೋಸ್ಕರ ವಿನಾಕಾರಣ ಆರೋಪ ಮಾಡುವುದು ಉತ್ತಮ ಬೆಳವಣಿಗೆಯಲ್ಲ. ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಯುಂಟು ಮಾಡುವುದನ್ನು ಬಿಟ್ಟು ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಜನಪ್ರತಿನಿಧಿಗಳು ಮತ್ತು ಶಾಸಕರೊಂದಿಗೆ ಕೈಜೋಡಿಸಬೆಕು ಎಂದರು. ಪುರಸಭಾ ಸದಸ್ಯರಾದ ಎಂ. ಶಮೀವುಲ್ಲಾ, ಶಾಂತ್‌ರಾಜ್, ಅಬ್ದುಲ್‌ಕರೀಂ ಮಾಜಿ ಸದಸ್ಯ ಸುಬ್ರಮಣ್ಯಬಾಬು. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT