ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ವಾಹನಗಳಿಗೆ ಬೆಂಕಿ

Last Updated 22 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಕರೆ ನೀಡಿದ್ದ ಬಂದ್‌ಗೆ ಶನಿವಾರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸುಗಳು ರಾಜ್ಯದಾದ್ಯಂತ ಪ್ರತಿಭಟನಾಕಾರರ ಕೆಂಗಣ್ಣಿಗೆ ಗುರಿಯಾದವು. ದಿಢೀರ್ ಬಂದ್‌ನಿಂದಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಬಹುತೇಕ ಕಡೆ ಮುಚ್ಚಿದ್ದವು. ಹಲವು ಕಡೆ ಜನಜೀವನ ಅಸ್ತವ್ಯಸ್ತವಾಗಿತ್ತು.

ರಾಜ್ಯದ ವಿವಿಧೆಡೆ ಒಟ್ಟು ಏಳು ಬಸ್‌ಗಳು ಜಖಂಗೊಂಡಿವೆ. ಬೆಂಗಳೂರಿನಲ್ಲಿ ಬಿಎಂಟಿಸಿಗೆ ಸೇರಿದ ಒಟ್ಟು 70 ಬಸ್ಸುಗಳು ಪ್ರತಿಭಟನಾಕಾರರ ದಾಳಿಗೆ ಗುರಿಯಾಗಿವೆ.ನಗರದ ವಿವಿಧ ಬಸ್ ಡಿಪೊಗಳ ಮುಂದೆ ನಿಂತಿದ್ದ ಮತ್ತು ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಇದರಿಂದ ಸಂಸ್ಥೆಗೆ ಸುಮಾರು ಏಳು ಲಕ್ಷ ರೂಪಾಯಿ ನಷ್ಟವಾಗಿದೆ.

ಬಂದ್ ವೇಳೆ ನಗರದಲ್ಲಿ ಕಲ್ಲು ತೂರಾಟ, ಪ್ರತಿಭಟನೆ ಮತ್ತು ಲಘು ಲಾಠಿ ಪ್ರಹಾರದಂತಹ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಪರಿಸ್ಥಿತಿ ಶಾಂತಿಯುತವಾಗಿತ್ತು. ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಎದುರು ಸಂಸದ ಅನಂತ್‌ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಾಜಭವನದತ್ತ ಹೋಗಲು ಯತ್ನಿಸಿದ ಶಾಸಕರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಅರವಿಂದ ಲಿಂಬಾವಳಿ, ಎಂ.ಶ್ರೀನಿವಾಸ್, ಎಸ್.ರಘು ಹಾಗೂ ನೂರಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ನಂತರ ಅವರನ್ನು ಬಿಡುಗಡೆ ಮಾಡಿದರು.

ಮೈಸೂರು ಜಿಲ್ಲೆಯಲ್ಲಿ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಜೆಡಿಎಸ್ ಕಾರ್ಯಕರ್ತರು ಸಹ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು. ಬಂದ್ ಕರೆಗೆ ಹಾಸನ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಸ್ವಲ್ಪ ಬಲಿಷ್ಠವಾಗಿರುವ ಅರಸೀಕೆರೆ ಹಾಗೂ ಬೇಲೂರು ತಾಲ್ಲೂಕುಗಳನ್ನು ಬಿಟ್ಟರೆ ಬೇರೆಲ್ಲೂ ಬಂದ್ ಕರೆಗೆ ಜನರು ಸ್ಪಂದಿಸಿಲ್ಲ. ಮಡಿಕೇರಿ ಪಟ್ಟಣದಲ್ಲಿ ಬಂದ್ ಯಶಸ್ವಿಯಾಗಿದೆ.

ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಚಾಮರಾಜನಗರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಬಂದ್ ಶಾಂತಿಯುತವಾಗಿತ್ತು. ಕೆಲವು ಕಡೆ ಜೆಡಿಎಸ್ ಕಾರ್ಯಕರ್ತರು ಅಂಗಡಿ ಬಾಗಿಲು ಮುಚ್ಚಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ತುಮಕೂರು ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಹೆದ್ದಾರಿಯಲ್ಲಿ ಸಂಚಾರಕ್ಕೆ ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ. ಇದರಿಂದ ಸಾವಿರಾರು ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು. ನಗರದಲ್ಲೂ ಪ್ರತಿಭಟನೆಯ ಬಿಸಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಕುಣಿಗಲ್ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದ 80 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ, ನಂತರ ಬಿಡುಗಡೆ ಮಾಡಿದರು. ಕೋಲಾರ ನಗರದ ಟೇಕಲ್ ವೃತ್ತದಲ್ಲಿ ಪೆಟ್ರೋಲ್ ಬಂಕ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆಯಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಒಂದು ಖಾಸಗಿ ಬಸ್‌ಗೆ ಮತ್ತು ಬಾಗೇಪಲ್ಲಿಯಲ್ಲಿ ಒಂದು ಲಾರಿಗೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಕರಾವಳಿ ಭಾಗದಲ್ಲಿ ಶನಿವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಮಲೆನಾಡಿನಲ್ಲಿ ಘರ್ಷಣೆ, ಕಲ್ಲೆಸೆತ ಘಟನೆ ವರದಿಯಾಗಿದೆ. ಮಂಗಳೂರು ನಗರದ ಭಾಗಶಃ ಬಂದ್ ಆಗಿತ್ತು. ಸರ್ಕಾರಿ, ಖಾಸಗಿ ಬಸ್ ಸಂಚಾರ ಸ್ಥಗಿತವಾಗಿತ್ತು. ಬೆಳಿಗ್ಗೆ ಒಂದು ಸುವರ್ಣ ಸಾರಿಗೆ ಬಸ್‌ಗೆ ಕಲ್ಲೆಸೆದಿರುವುದು ಬಿಟ್ಟರೆ ಯಾವುದೇ ಗಲಭೆ ನಡೆದ ಕುರಿತು ವರದಿಯಾಗಿಲ್ಲ.

ಚಿಕ್ಕಮಗಳೂರಿನಲ್ಲಿ ಘರ್ಷಣೆ: ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಅಂಗಡಿ ಬಾಗಿಲು ಮುಚ್ಚಿಸುತ್ತಿದ್ದಾರೆ ಎಂದು ಆರೋಪಿಸಿದ ಜೆಡಿಎಸ್ ಕಾರ್ಯಕರ್ತರು, ಅಂಗಡಿಗಳ ಬಾಗಿಲು ತೆರೆಸಲು ಮುಂದಾಗಿದ್ದರಿಂದ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಎರಡೂ ಪಕ್ಷಗಳ ಕಾರ್ಯಕರ್ತರು ಗುಂಪುಗೂಡಿದಾಗ ಕಲ್ಲುಗಳು ತೂರಿ ಬಂದವು. ಪೊಲೀಸರು ಲಘುವಾಗಿ ಲಾಠಿ ಬೀಸಿ ಗುಂಪು ಚದುರಿಸಿದರು.

ಬಸ್ಸುಗಳಿಗೆ ಬೆಂಕಿ: ಬಂದ್ ಕರೆಯು ಹರಪನಹಳ್ಳಿ ತಾಲ್ಲೂಕು ಹೊರತುಪಡಿಸಿದರೆ ದಾವಣಗೆರೆ ಜಿಲ್ಲೆಯಲ್ಲಿ ಯಶಸ್ವಿಯಾಯಿತು. ಕೆಲ ಕಿಡಿಗೇಡಿಗಳು ಶನಿವಾರ ಬೆಳಗಿನ ಜಾವ ಹೊನ್ನಾಳಿ ಬಳಿ ಎರಡು ಕೆಎಸ್‌ಆರ್‌ಟಿಸಿ ಬಸ್ ಸುಟ್ಟುಹಾಕಿದ್ದಾರೆ. ನಗರದಲ್ಲಿ ಎರಡು ಬಸ್‌ಗಳ ಮೇಲೆ ಕಲ್ಲು ತೂರಿದ ಪರಿಣಾಮ ಗಾಜು ಒಡೆದಿವೆ.ಚಿತ್ರದುರ್ಗ ಜಿಲ್ಲೆಯಲ್ಲಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಮರ್ಚೆಂಟ್ಸ್ ಸಹಕಾರ ಸೌಹಾರ್ದ ಬ್ಯಾಂಕ್ ಕಿಟಕಿಗೆ ಕಿಡಿಗೇಡಿಗಳು ಕಲ್ಲೆಸೆದ ಘಟನೆಯೂ ನಡೆಯಿತು.

ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಹುತೇಕ ಶಾಂತಿಯುತವಾಗಿತ್ತು. ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಮುಂಜಾನೆ ಶಿವಮೊಗ್ಗ-ಬೆಂಗಳೂರು ಇಂಟರ್‌ಸಿಟಿ ರೈಲನ್ನು ಕೆಲ ನಿಮಿಷ ತಡೆದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭದ್ರಾವತಿಯಲ್ಲಿ ಬಸ್ ಮೇಲೆ ಕಲ್ಲೆಸೆತ, ಸಾಗರದಲ್ಲಿ ಮಾತಿನ ಚಕಮಕಿ, ಶಿಕಾರಿಪುರ, ಸೊರಬ, ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದವು.

ಉತ್ತಮ ಪ್ರತಿಕ್ರಿಯೆ: ಉತ್ತರ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಬಂದ್ ಶಾಂತಿಯುತವಾಗಿತ್ತು. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಾಪುರ, ಹಾವೇರಿ, ಗದಗ ಸೇರಿದಂತೆ ಹಲವು ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಕಲ್ಲು ತೂರಾಟ ಹಾಗೂ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ರೈಲು ತಡೆ ನಡೆಸಿದರು.

ಲಘು ಲಾಠಿ ಪ್ರಹಾರ, ನೂರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ಬಂಧನವನ್ನು ಹೊರತು ಪಡಿಸಿ ಗುಲ್ಬರ್ಗದಲ್ಲಿ ಬಂದ್ ಶಾಂತಿಯುತವಾಗಿತ್ತು. ರಾಯಚೂರು ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಪ್ಪಳ ನಗರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೀದರ್ ಜಿಲ್ಲೆಯಾದ್ಯಂತ ಬಹುತೇಕ ಶಾಂತಿಯುತವಾಗಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಯಾದಗಿರಿ ಜಿಲ್ಲೆಯಲ್ಲಿ ಶಾಂತಿಯುತ ಬಂದ್ ಭಾಗಶಃ ಯಶಸ್ವಿಯಾಗಿದೆ. ಸುರಪುರ  ಡಿಪೊದಲ್ಲಿ ಶುಕ್ರವಾರ ರಾತ್ರಿ 6 ಬಸ್‌ಗಳಿಗೆ ಕಲ್ಲು ತೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT