ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಪ್ರಕ್ರಿಯೆ ಶುಲ್ಕ ಖೋತಾ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗೃಹ ಸಾಲ ಉತ್ತೇಜಿಸಲು ಬ್ಯಾಂಕ್‌ಗಳು ಹಲವಾರು ಕ್ರಮಗಳನ್ನು   ಕೈಗೊಳ್ಳುತ್ತಿವೆ. ಈಗಾಗಲೇ ಪೂರ್ವ ಪಾವತಿ ದಂಡದ ಮೊತ್ತ ರದ್ದುಪಡಿಸಿರುವ ಬ್ಯಾಂಕ್‌ಗಳು ಈಗ ಸಾಲ ಮಂಜೂರು ಮಾಡುವಾಗ ವಸೂಲು ಮಾಡುವ ಪ್ರಕ್ರಿಯೆ ಶುಲ್ಕದಲ್ಲಿ ರಿಯಾಯ್ತಿ ನೀಡಲು ಮುಂದಾಗಿವೆ.  ರೂ. 30 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಗೃಹ ಸಾಲದ ಬೇಡಿಕೆ ಸಾಧಾರಣ ಮಟ್ಟದಲ್ಲಿ ಇರುವುದರಿಂದ, ಸಾಲ ಉತ್ತೇಜಿಸಲು ಬ್ಯಾಂಕ್‌ಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಬ್ಯಾಂಕ್ ಬಡ್ಡಿ ದರಗಳು ತಕ್ಷಣಕ್ಕೆ ಕಡಿಮೆಯಾಗುವ ಸಾಧ್ಯತೆಗಳು ಇಲ್ಲದಿರುವುದರಿಂದ ಶುಲ್ಕ ಕಡಿತ, ರಿಯಾಯ್ತಿ ಮತ್ತಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ. ಮುಂದಿನ ಕೆಲ ತಿಂಗಳ ಕಾಲ ಈ ರಿಯಾಯ್ತಿ ಮುಂದುವರೆಯುವ ಸಾಧ್ಯತೆ ಇದೆ.

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಸಾಲ ಪ್ರಕ್ರಿಯೆ ಶುಲ್ಕವನ್ನು (processing fee) ಕಡಿತಗೊಳಿಸಿದೆ. ಗೃಹ ಸಾಲ ಉತ್ತೇಜಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ಇತರ ಬ್ಯಾಂಕ್‌ಗಳೂ ಇದೇ ಬಗೆಯ ಕಡಿತ ಘೋಷಿಸುವ ಸಾಧ್ಯತೆಗಳು ಇವೆ.

ರೂ. 75 ಲಕ್ಷಕ್ಕಿಂತ ಹೆಚ್ಚಿನ  ಗೃಹ ಸಾಲಗಳ ಮೇಲಿನ ಪ್ರಕ್ರಿಯೆ ಶುಲ್ಕವನ್ನು ರೂ. 20 ಸಾವಿರದಿಂದ ರೂ. 10 ಸಾವಿರಕ್ಕೆ ಇಳಿಸಲಾಗಿದೆ. ರೂ. 30ರಿಂದ ರೂ. 75 ಲಕ್ಷ ವರೆಗಿನ ಸಾಲ ಮೇಲಿನ ಶುಲ್ಕವನ್ನು ರೂ.10 ಸಾವಿರದಿಂದ ರೂ. 6,500ಕ್ಕೆ ಕಡಿತ ಮಾಡಲಾಗಿದೆ.
 
ರೂ. 30 ಲಕ್ಷಕ್ಕಿಂತ ಕಡಿಮೆ ಮೊತ್ತದ ಸಾಲಕ್ಕೆ ಶೇ 0.25ರಷ್ಟು ಶುಲ್ಕ ವಿಧಿಸುವುದನ್ನು ಮುಂದುವರಿಸಲಾಗಿದೆ. ಈ ಹೊಸ ಸಾಲ ಪ್ರಕ್ರಿಯೆ ಶುಲ್ಕವು ಈಗಾಗಲೇ ಜಾರಿಗೆ ಬಂದಾಗಿದೆ.

ಐಸಿಐಸಿಐ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್‌ಗಳು, ಸ್ಥಿರ ಮತ್ತು ಬದಲಾಗುವ ಬಡ್ಡಿ ದರಗಳ ಗೃಹ ಸಾಲಗಳಿಗೆ ಶೇ 0.5ರಷ್ಟು ಶುಲ್ಕ ವಸೂಲಿ ಮಾಡುತ್ತಿವೆ.

ಬ್ಯಾಂಕ್ ಆಫ್ ಬರೋಡಾ ಶೇ 0.4ರಷ್ಟು ಅಥವಾ ಗರಿಷ್ಠ ರೂ. 50 ಸಾವಿರದಷ್ಟು ಶುಲ್ಕ ವಿಧಿಸುತ್ತದೆ. ಬ್ಯಾಂಕ್ ಆಫ್ ಇಂಡಿಯಾ, ರೂ. 25ರಿಂದ ರೂ. 75 ಲಕ್ಷದ ವರೆಗಿನ ಸಾಲಕ್ಕೆ ರೂ. 20 ಸಾವಿರದಂತೆ ಶುಲ್ಕ ವಿಧಿಸುತ್ತದೆ.

ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ನ (ಎನ್‌ಎಚ್‌ಬಿ) ಆದೇಶದ ಅನ್ವಯ, ಬ್ಯಾಂಕ್‌ಗಳು ಈಗಾಗಲೇ ಸಾಲದ ಪೂರ್ವ ಪಾವತಿ ಮೇಲಿನ ದಂಡವನ್ನು ರದ್ದುಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT