ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿ ಬಗ್ಗೆ ಚಿಂತಿಸದ ಪಾಲಿಕೆ

Last Updated 5 ಜುಲೈ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು: `ಬಿಬಿಎಂಪಿ ಆಡಳಿತ ಕಳೆದ ಮೂರು ವರ್ಷಗಳಿಂದಲೂ ಸಾಲ ಪಡೆಯುವುದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ಆದರೆ, ಸಾಲ ಮರು ಪಾವತಿಸುವಂತಹ ಆದಾಯ ಮೂಲದ ಬಗ್ಗೆ ಯಾವುದೇ ಪ್ರಸ್ತಾಪ ಮಾಡುತ್ತಿಲ್ಲ. ಈ ಬಗ್ಗೆ ಜನರಿಗೆ ಮಾಹಿತಿ ಬಹಿರಂಗಪಡಿಸುವುದು ಪಾಲಿಕೆಯ ಮೂಲಭೂತ ಕರ್ತವ್ಯ~ ಎಂದು ಮಾಜಿ ಮೇಯರ್, ಕಾಂಗ್ರೆಸ್ ಸದಸ್ಯ ಕೆ. ಚಂದ್ರಶೇಖರ್ ಗುರುವಾರ ಒತ್ತಾಯಿಸಿದರು.

ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಡಿ. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ 2012-13ನೇ ಸಾಲಿನ ಬಜೆಟ್ ಮೇಲಿನ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
`ಈ ವರ್ಷದ ಬಜೆಟ್‌ನಲ್ಲಿಯೂ ದೀರ್ಘಾವಧಿ ಸಾಲ ಪಡೆಯುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ, ಯಾವ ವರ್ಷದಲ್ಲಿ ಎಷ್ಟು ಸಾಲ ತೀರಿಸಲು ಸಾಧ್ಯ. ಅದಕ್ಕೆ ಆದಾಯ ಮೂಲ ಯಾವುದು ಎಂಬುದರ ಬಗ್ಗೆ ಪಾಲಿಕೆ ಪ್ರಸ್ತಾಪ ಮಾಡದಿರುವುದು ಅಂದಾಜುಗಳ ಲೋಪವನ್ನು ಎತ್ತಿ ತೋರುತ್ತದೆ~ ಎಂದು ಅವರು ಟೀಕಿಸಿದರು.

ರೂ. 4000 ಕೋಟಿ ಮೀರಲು ಸಾಧ್ಯವಿಲ್ಲ:
`ಈ ಸಾಲಿನ ಬಜೆಟ್‌ನಲ್ಲಿ ಏನೆಲ್ಲಾ ಪ್ರಯತ್ನ ಮಾಡಿದರೂ 4000 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವರಮಾನ ನಿರೀಕ್ಷಿಸಲು ಸಾಧ್ಯವಿಲ್ಲ. ಆಸ್ತಿ ತೆರಿಗೆ, ಜಾಹೀರಾತು ತೆರಿಗೆ, ವ್ಯಾಪಾರ ಪರವಾನಗಿ, ಇತರೆ ಆದಾಯ 1500 ಕೋಟಿ ರೂಪಾಯಿ ಸೇರಿ ಒಟ್ಟು 2,990 ಕೋಟಿ ವರಮಾನ ಸಂಗ್ರಹಿಸಬಹುದು. ಇದಕ್ಕೆ `ಹುಡ್ಕೊ~ದಿಂದ ಈಗಾಗಲೇ ಮಂಜೂರಾಗಿರುವ 1000 ಕೋಟಿ ಮೊತ್ತ ಸೇರಿ 3,990 ಕೋಟಿ ರೂಪಾಯಿ ಆದಾಯ ಬರಲಿದೆಯಷ್ಟೆ~ ಎಂದು ಅವರು ಹಿಂದಿನ ಎರಡು ವರ್ಷಗಳಲ್ಲಿ ಸಂಗ್ರಹವಾಗಿರುವ ವರಮಾನ ಆಧಾರದ ಮೇಲೆ ಅಂಕಿ-ಅಂಶಗಳ ಸಹಿತ ಬಜೆಟ್‌ನ ಮೇಲೆ ಬೆಳಕು ಚೆಲ್ಲಿದರು.

`ಇನ್ನು, ಬಾಕಿ ಇರುವ ಬಿಲ್‌ಗಳ ಮೊತ್ತ 1000 ಕೋಟಿ, ಮುಂದುವರಿದ ಕಾಮಗಾರಿಗಳ ಮೊತ್ತ 2,100 ಕೋಟಿ ಹಾಗೂ ಸಾಲ ಮರು ಪಾವತಿ, ಆಡಳಿತಾತ್ಮಕ ಖರ್ಚು, ನೌಕರರ ವೇತನ, ಪಿಂಚಣಿ ಮೊತ್ತ 2,400 ಕೋಟಿ ಸೇರಿದಂತೆ ಒಟ್ಟು 5,500 ಕೋಟಿ ರೂಪಾಯಿ ಭರಿಸಬೇಕಾಗಿದೆ.

ಇದಲ್ಲದೆ, 2011-12ನೇ ಸಾಲಿನಲ್ಲಿ 1000 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ `ಜಾಬ್ ಕೋಡ್~ ನೀಡಿದ ನಂತರ ಕಾರ್ಯಾದೇಶ ಪತ್ರ ನೀಡಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಆ ಮೊತ್ತವನ್ನು ಬಜೆಟ್‌ನಲ್ಲಿ ನಮೂದಿಸಿಲ್ಲ. ಹೀಗಾಗಿ, ಒಟ್ಟು 6,500 ಕೋಟಿ ರೂಪಾಯಿಗಳನ್ನು ಪಾಲಿಕೆ ಕಡ್ಡಾಯವಾಗಿ ಖರ್ಚು ಮಾಡಬೇಕಾಗಿದೆ. ಬಜೆಟ್‌ನಲ್ಲಿ ವರಮಾನ ನಿರೀಕ್ಷೆ, ಖರ್ಚು-ವೆಚ್ಚಗಳನ್ನೆಲ್ಲಾ ಸರಿದೂಗಿಸಿದರೂ 2,969.50 ಕೋಟಿ ರೂಪಾಯಿಗಳ ಕೊರತೆ ಕಂಡು ಬರುತ್ತದೆ~ ಎಂದು ಅವರು ವಿಶ್ಲೇಷಿಸಿದರು.

 ಪ್ರತಿಭಟನೆ ಮೂಲಕ ಅವಕಾಶ: ಇದಕ್ಕೂ ಮುನ್ನ ಕೆ. ಚಂದ್ರಶೇಖರ್ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆಯೇ ಮೇಯರ್ ಡಿ. ವೆಂಕಟೇಶಮೂರ್ತಿ ಅವರು ಕಾಂಗ್ರೆಸ್‌ನ ಆಶಾ ಸುರೇಶ್ ಅವರಿಗೆ ಅವಕಾಶ ಮಾಡಿಕೊಟ್ಟರು. ಇದರಿಂದ ಸಿಟ್ಟಿಗೆದ್ದ ಚಂದ್ರಶೇಖರ್, `ನಾನು ಮೊದಲ ದಿನವೇ ನಿಮಗೆ ಪತ್ರ ಕಳಿಸಿದ್ದೇನೆ. ಯಾವ ಕಾರಣಕ್ಕಾಗಿ ಅವಕಾಶ ನೀಡುತ್ತಿಲ್ಲ~ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು.

`ಇದುವರೆಗೆ ಒಬ್ಬ ಮಹಿಳಾ ಸದಸ್ಯರಿಗೂ ಮಾತನಾಡಲು ಅವಕಾಶ ನೀಡಿಲ್ಲ. ಹೀಗಾಗಿ, ಆಶಾ ಸುರೇಶ್ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟೆ~ ಎಂದು ಮೇಯರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ಈ ನಡುವೆ, ಚಂದ್ರಶೇಖರ್ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ಎಂ. ಉದಯಶಂಕರ್ ಸಭಾತ್ಯಾಗ ಮಾಡಿದರು. ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ. ನಾಗರಾಜ್, ಜೆಡಿಎಸ್ ಗುಂಪಿನ ಮಾಜಿ ನಾಯಕ ಪದ್ಮನಾಭರೆಡ್ಡಿ ಚಂದ್ರಶೇಖರ್ ಬೆಂಬಲಕ್ಕೆ ನಿಂತರು. ಮಹಿಳಾ ಸದಸ್ಯೆ ಆಶಾ ಸುರೇಶ್ ಕೂಡ, `ಮೊದಲು ಹಿರಿಯ ಸದಸ್ಯರಾದ ಚಂದ್ರಶೇಖರ್ ಅವರಿಗೆ ಮಾತನಾಡಲು ಅವಕಾಶ ನೀಡಿ. ನಾನು ಆ ಮೇಲೆ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ~ ಎಂದು ಹೇಳಿದಾಗ ಅನಿವಾರ್ಯವಾಗಿ ಮೇಯರ್, ಚಂದ್ರಶೇಖರ್ ಅವರಿಗೆ ಅವಕಾಶ ಮಾಡಿಕೊಟ್ಟರು.

ಬೋಗಸ್, ಬಂಡಲ್ ಬಜೆಟ್: ಜೆಡಿಎಸ್‌ನ ಹಿರಿಯ ಸದಸ್ಯ ಪದ್ಮನಾಭರೆಡ್ಡಿ ಮಾತನಾಡಿ, `2012-13ನೇ ಸಾಲಿನ ಬಜೆಟ್ ಬೋಗಸ್, ಬಂಡಲ್, ಗಾನಾ ಬಜಾನಾ ಬಜೆಟ್~ ಎಂದು ಟೀಕಿಸಿದರು.

`ಈ ವರ್ಷ ಎಲ್ಲ ಮೂಲಗಳಿಂದಲೂ ಪಾಲಿಕೆಗೆ ಕೇವಲ 3,800 ಕೋಟಿ ರೂಪಾಯಿ ಮಾತ್ರ ಆದಾಯ ಬರಲಿದೆ. ಹೀಗಾಗಿ, ಈ ವರ್ಷವೂ ಕೇವಲ ಶೇ 40ರಷ್ಟು ಪ್ರಗತಿ ನಿರೀಕ್ಷಿಸಲು ಸಾಧ್ಯ. ಮುಂದಿನ 15 ವರ್ಷ ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಮಾತ್ರ ಪಾಲಿಕೆಗೆ ವಾಸ್ತವ ಬಜೆಟ್ ಮಂಡಿಸಲು ಸಾಧ್ಯವಾಗುತ್ತದೆ~ ಎಂದರು.

`ಕಳೆದ ವರ್ಷದ ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಕಾಮಗಾರಿಗಳನ್ನೇ ಪಾಲಿಕೆಗೆ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷದ ಬಜೆಟ್ ವಾಪಸು ತೆಗೆದುಕೊಂಡು ಕಳೆದ ವರ್ಷದ ಬಜೆಟ್ ಅನುಷ್ಠಾನಗೊಳಿಸಲು ಆಯುಕ್ತರಿಗೆ ಅಧಿಕಾರ ನೀಡಬೇಕು~ ಎಂದು ಅವರು ಒತ್ತಾಯಿಸಿದರು.
 

ಅಡುಗೆ ಅನಿಲ ಬದಲಿಗೆ ಸೈಕಲ್ ಕೊಡಿ
 

ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಿರುವುದರಿಂದ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಲಿರುವುದರಿಂದ ಅದರ ಬದಲಿಗೆ ಮನೆ-ಮನೆಗಳಿಗೆ ಹಾಲು ಹಾಗೂ ದಿನಪತ್ರಿಕೆಗಳನ್ನು ಹಾಕುವಂತಹ ಮಕ್ಕಳಿಗೆ ಶೇ22:75ರ ಅನುದಾನದಡಿ ಸೈಕಲ್ ನೀಡುವಂತೆ ಬಿಜೆಪಿ ಸದಸ್ಯ ಎನ್.ಆರ್. ರಮೇಶ್ ಸಲಹೆ ಮಾಡಿದರು.

`ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವುದರಿಂದ ಕಡಿಮೆ ದರದಲ್ಲಿ ಪಡಿತರ ಸಿಗುವುದಿಲ್ಲ. ಅಲ್ಲದೆ, ಅವರು ಎಪಿಎಲ್ ಪಟ್ಟಿಗೆ ಸೇರ್ಪಡೆಯಾಗುವುದರಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ~ ಎಂದು ಸಭೆಯ ಗಮನಸೆಳೆದರು.

`ಬಜೆಟ್‌ನಲ್ಲಿ ಒದಗಿಸಿರುವ ಅನುದಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ 171 ಮಂದಿ ಹೊಸ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ, ಈ ಬಗ್ಗೆ ಕಾರ್ಯಾಗಾರ ಏರ್ಪಡಿಸಬೇಕು. ಮೇಯರ್ ನಿಧಿಯ 150 ಕೋಟಿ ರೂಪಾಯಿಗಳನ್ನು 198 ವಾರ್ಡ್‌ಗಳ ಸದಸ್ಯರಿಗೆ ತಾರತಮ್ಯ ಮಾಡದೆ ಸಮಾನವಾಗಿ ಹಂಚಿಕೆ ಮಾಡಬೇಕು~ ಎಂದು ಮನವಿ ಮಾಡಿದರು.

ಸಭೆಯಲ್ಲಿ ಕೇಳಿಸಿದ್ದು...

ಮಾಜಿ ಮೇಯರ್ ಕೆ.ಚಂದ್ರಶೇಖರ್ `ಬ್ರಹ್ಮಚಾರಿ~ ಎಂಬುದು ಆಯುಕ್ತರಿಗೆ ಗೊತ್ತಾಗಿದ್ದೇ ನಿನ್ನೆ - ಡಿ. ವೆಂಕಟೇಶಮೂರ್ತಿ, ಮೇಯರ್

ಈ ದೇಶದಲ್ಲಿ ಕೆಲವೇ ಕೆಲವು `ಬ್ರಹ್ಮಚಾರಿ~ಗಳು ದಾಖಲೆ ಸೃಷ್ಟಿಸಿದ್ದಾರೆ. ಅಂಥವರಲ್ಲಿ ಒಬ್ಬರು ವಾಜಪೇಯಿ, ಇನ್ನೊಬ್ಬರು ಜಾರ್ಜ್ ಫರ್ನಾಂಡಿಸ್, ಮತ್ತೊಬ್ಬ ನಾನು
- ಕೆ. ಚಂದ್ರಶೇಖರ್, ಕಾಂಗ್ರೆಸ್ ಸದಸ್ಯ

ಬಿಬಿಎಂಪಿ ಗುಂಡಿಗಳಿಗೆ ಹಣ ಹಾಕುತ್ತಿದೆಯೋ ಅಥವಾ ಗಿಡ ನೆಡುತ್ತಿದೆಯೋ ಗೊತ್ತಿಲ್ಲ. ಪಾಲಿಕೆ ನೆಟ್ಟ ಗಿಡಗಳೆಲ್ಲಾ ಉಳಿದಿದ್ದರೆ ನಾವೆಲ್ಲಾ ನಡೆದಾಡಲೂ ಜಾಗ ಇರುತ್ತಿರಲಿಲ್ಲ
- ಪದ್ಮನಾಭರೆಡ್ಡಿ, ಜೆಡಿಎಸ್ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT