ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯಿರಿ

ಮೊಳಕಾಲ್ಮುರು: ಕೃಷಿ ವಸ್ತು ಪ್ರದರ್ಶನ, ವಿಚಾರ ಸಂಕಿರಣ
Last Updated 12 ಡಿಸೆಂಬರ್ 2012, 6:53 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಹೆಚ್ಚುತ್ತಿರುವ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳು ಉಲ್ಬಣಗೊಂಡಿವೆ ಎಂದು ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಮಹಮದ್ ಒಬೇದುಲ್ಲಾ ಹೇಳಿದರು.
ತಾಲ್ಲೂಕಿನ ರಾಂಪುರ ರೈತಸಂಪರ್ಕ ಕೇಂದ್ರ ಆವರಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭೂಮಿ ಸತ್ವ ಕಡಿಮೆ, ವಿಷಯುಕ್ತ ಆಹಾರ ಉತ್ಪಾದನೆ, ವಿವಿಧ ಅನಾರೋಗ್ಯ ಸಮಸ್ಯೆಗಳು ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಕಂಡುಬರುತ್ತಿವೆ. ಅದನ್ನು ಸರಿಪಡಿಸಲು ಸಾವಯವ ಗೊಬ್ಬರ ಬಳಕೆ ಮಾಡಬೇಕಿದೆ. ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಸಾವಯವ ಗೊಬ್ಬರವನ್ನು ರೈತರು ಉತ್ಪತ್ತಿ ಮಾಡಿಕೊಳ್ಳಬಹುದಾಗಿದ್ದು, ಅದಕ್ಕೆ ಪೂರಕವಾಗಿ ಸರ್ಕಾರ ವಿವಿಧ ಪ್ರೋತ್ಸಾಹ ಕಾರ್ಯಕ್ರಮ ಜಾರಿಗೆ ತಂದಿದ್ದು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಬಹುವರ್ಷಗಳಿಂದ ಶೇಂಗಾ ಬೆಳೆ ಬೆಳೆಯಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ, ಸುಧಾರಿತ ಶೇಂಗಾ ತಳಿಗಳನ್ನು ಬಿತ್ತನೆ ಮಾಡುವ ಜತೆಗೆ ಕಡಿಮೆ ನೀರಿನಲ್ಲಿ ಬೆಳೆಯುವ ಪರ್ಯಾಯ ಬೆಳೆಗಳತ್ತ ಮುಖ ಮಾಡಬೇಕು. ಇಲ್ಲವಾದಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಅನುಮಿ ಹನುಮಂತರೆಡ್ಡಿ ಮಾತನಾಡಿ, ಒಂದು ಆಕಳಿನ ತ್ಯಾಜ್ಯ ಬಳಕೆ ಮಾಡಿಕೊಂಡು ಐದು ಎಕರೆ ಪ್ರದೇಶಕ್ಕೆ ಸಾವಯವ ಗೊಬ್ಬರ ಉತ್ಪತ್ತಿ ಮಾಡಬಹುದಾಗಿದ್ದು, ಇದು ಈಗಾಗಲೇ ಸಾಬೀತಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಕಾಂತರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ. ಉಪಾಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ವಿಷಯ ತಜ್ಞ ಜೆ. ತಿಪ್ಪೇಸ್ವಾಮಿ ಹತ್ತಿ ಬೆಳೆ ಕುರಿತು ಮಾಹಿತಿ ನೀಡಿದರು.
ತಾ.ಪಂ. ಸದಸ್ಯರಾದ ಅಡವಿ ಮಾರಣ್ಣ, ಹನುಮಂತಪ್ಪ, ಚಿದಾನಂದಪ್ಪ, ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಸಹಕಾರ ಯೂನಿಯನ್ ಬ್ಯಾಂಕ್ ಜಿಲ್ಲಾಧ್ಯಕ್ಷ ಜಿಂಕಲು ಬಸವರಾಜ್, ಕೃಷಿ ಇಲಾಖೆಯ ಸಾಮ್ಯನಾಯ್ಕ, ಬೈಲಪ್ಪ, ರಹೀಂ ಷರೀಫ್, ಭೈಫ್ ಸಂಸ್ಥೆಯ ಕೃಷ್ಣಮೂರ್ತಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT