ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವದಲ್ಲಿ ಮಿಡಿ ಸೌತೆ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಮಿಡಿ ಸೌತೆ ಅಥವಾ ಉಪ್ಪಿನಕಾಯಿ ಸೌತೆಕಾಯಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ. `ಗರ್ಕಿನ್~ (ಕುಕುಮಿಸ್ ಸಟೈವಸ್) ಎಂದೇ ಪ್ರಸಿದ್ಧಿಯಾಗಿರುವ ಮಿಡಿ ಸೌತೆಯನ್ನು ಒಪ್ಪಂದದಡಿ ಬೆಳೆಸಿ ವಿದೇಶಕ್ಕೆ ರಫ್ತು ಮಾಡಲಾಗುತ್ತದೆ. ಇದನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಹೆಚ್ಚಿನ ಲಾಭ ಗಳಿಸುವ ವಿಧಾನವನ್ನು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಸಾವಯವ ಕೃಷಿ ಪದ್ಧತಿಯಲ್ಲಿ ಭಾರತೀಯ ವಾತಾವರಣಕ್ಕೆ ಅನುಗುಣವಾಗಿ ಯಶಸ್ವಿಯಾಗಿ ಬೆಳೆಸಲು `ಕ್ಯಾಲಿಪ್ಸೊ ಹಾಗೂ ಅಯಾಕ್ಸ್~ ತಳಿಗಳು  ಸೂಕ್ತವಾಗಿವೆ. ಇವು ರೋಗ ನಿರೋಧಕ ಶಕ್ತಿ ಹೊಂದಿವೆ. ಮಿಡಿ ಸೌತೆಯಿಂದ ಮಾಡುವ ಉಪ್ಪಿನಕಾಯಿ ವಿಶೇಷ ರುಚಿ ಹೊಂದಿರುತ್ತದೆ. ಹೀಗಾಗಿಯೇ ಮಿಡಿ ಸೌತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.

ಮಿಡಿ ಉಪ್ಪಿನಕಾಯಿ ಸೌತೆಯನ್ನು ಹಲವು ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಆದರೆ, ಹೆಚ್ಚು ಸಾವಯವ ಪದಾರ್ಥಗಳಿಂದ ಕೂಡಿದ 5.8 ರಿಂದ 7ರ ರಸಸಾರ ಹೊಂದಿರುವ, ನೀರು ಚೆನ್ನಾಗಿ ಬಸಿದು ಹೋಗುವ ಗೋಡು ಅಥವಾ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತವಾಗಿದೆ. ನೀರು ಸರಾಗವಾಗಿ ಬಸಿದು ಹೋಗದ ಎರೆ ಮಣ್ಣು ಇರುವೆಡೆ ಈ ಬೆಳೆ ತೆಗೆಯಲು ಸೂಕ್ತವಲ್ಲ. ನೀರು ಬಸಿದು ಹೋಗದೆ ಇರುವ ಸಂದರ್ಭದಲ್ಲಿ ಬೇರಿನ ಸುತ್ತಲೂ ಆಮ್ಲಜನಕದ ಕೊರತೆಯಿಂದಾಗಿ ಬೆಳೆಯು ಚೆನ್ನಾಗಿ ಬೆಳೆಯದೆ ಇರುವ ಸಾಧ್ಯತೆ ಇರುತ್ತದೆ.

ಇದು ಉಷ್ಣ ವಲಯದ ತರಕಾರಿ ಬೆಳೆ. 26ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಅಥವಾ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದ್ದಲ್ಲಿ ಕಾಯಿ ಕಚ್ಚುವುದು ಕುಂಠಿತಗೊಳ್ಳುತ್ತದೆ.

ಸಾವಯವ ಕೃಷಿಯಲ್ಲಿ ಬಿತ್ತನೆ ಮಾಡಲು ಮುಂಗಾರಿಗೆ ಮೊದಲಿನ ಕಾಲ ಸೂಕ್ತ. ಒಳ್ಳೆಯ ಬೆಳೆ ಮತ್ತು ಇಳುವರಿ ಪಡೆಯಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಹೇಳಿ ಮಾಡಿಸಿದ ಸಮಯ.

ಬಿತ್ತನೆ ವಿಧಾನ
ಬೀಜಗಳನ್ನು 1ರಿಂದ 2 ಸೆಂ. ಆಳಕ್ಕೆ ಮಣ್ಣಿನಲ್ಲಿ ಬಿತ್ತಬೇಕು. ಇದರಿಂದ ಅಗತ್ಯವಿರುವಷ್ಟು ಮಣ್ಣಿನ ಪದರು ಹಾಗೂ ತೇವಾಂಶ ದೊರೆತು ಬೀಜ ಬೇಗನೇ ಮೊಳೆತು ಗಿಡಗಳು ವೇಗವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಾವಯವ ಕೃಷಿಯಲ್ಲಿ ಬೆಳೆಯುವಾಗ ಹೆಚ್ಚಿಗೆ ಅಂತರ ಅಂದರೆ ಸಾಲಿನಿಂದ ಸಾಲಿಗೆ 4 ಅಡಿ ಹಾಗೂ ಗಿಡದಿಂದ ಗಿಡಕ್ಕೆ 1 ಅಡಿ ಕೊಡುವುದರಿಂದ ಗಾಳಿಯಾಡಲು ಅನುಕೂಲವಾಗಿ, ಎಲೆಗಳಿಗೆ ಹರಡುವ ರೋಗಗಳ ಬಾಧೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಬಿತ್ತನೆ ಮಾಡಿದ 40 ದಿನಗಳವರೆಗೂ ಮುಖ್ಯ ತಾಕನ್ನು ಕಳೆ ರಹಿತವಾಗಿಡಬೇಕು. ಸಾಮಾನ್ಯವಾಗಿ ಕೈಯಿಂದ ಕಳೆ ಕೀಳುವುದರಿಂದ ಮಣ್ಣು ಸಡಿಲಗೊಳಿಸಲು ಅನುವಾಗುತ್ತದೆ. ಬಿತ್ತನೆ ಮಾಡಿದ 15 ದಿನಗಳ ನಂತರ ಮೊದಲನೇ ಬಾರಿಗೆ ಹಾಗೂ 30 ದಿನಗಳ ನಂತರ ಎರಡನೇ ಸಲ ಕಳೆ ಕೀಳಬಹುದು. ಇದಾದ ನಂತರ ಬೆಳೆ ಸಾಲುಗಳ ನಡುವೆ ಅಂತರ ಬೇಸಾಯ ಮಾಡಬೇಕು. ಪರಿಣಾಮಕಾರಿಯಾಗಿ ಕಳೆ ನಿಯಂತ್ರಣ ಮಾಡಲು ಹಾಗೂ ಹನಿ ನೀರಾವರಿ ಪದ್ಧತಿಯಲ್ಲಿ ನೀರುಣಿಸುವ ಪ್ರಮಾಣವನ್ನು ಕಡಿಮೆಗೊಳಿಸಲು ಕಪ್ಪು ಬಣ್ಣದ ತೆಳು ಪ್ಲಾಸ್ಟಿಕ್ ಹೊದಿಕೆ ಉಪಯೋಗಿಸಬಹುದು. ಉತ್ತಮ ಗುಣಮಟ್ಟದ ಕಾಯಿಗಳನ್ನು ಪಡೆಯಲು ಆಧಾರ ಒದಗಿಸಿ ದಾರಗಳಿಗೆ ಬಳ್ಳಿಗಳನ್ನು ಹಬ್ಬಿಸಬೇಕು.

ರೋಗ ನಿಯಂತ್ರಣ
ಬಿತ್ತನೆ ಮಾಡುವ 15 ದಿನಗಳ ಮೊದಲು ಮುಖ್ಯ ತಾಕಿನ ಸುತ್ತಲೂ 2 ರಿಂದ 3 ಸಾಲು ಮೆಕ್ಕೆ ಜೋಳ ಅಥವಾ ಗೋವಿನ ಜೋಳವನ್ನು ದಟ್ಟವಾಗಿ ಬಿತ್ತಬೇಕು. ಇದರಿಂದ ಬೇರೆ ತಾಕುಗಳಿಂದ ಒಳ ಬರುವ ಕೀಟಗಳ ಹಾವಳಿ ಕಡಿಮೆಗೊಳಿಸಬಹುದು. ಬಿತ್ತನೆ ಮಾಡಿದ 2 ವಾರಗಳ ನಂತರ ಮೊದಲು ಚಿಗುರಿದ ಎರಡು ಎಲೆಗಳನ್ನು ಚಿವುಟಿ ಹಾಕುವುದರಿಂದ ರಂಗೋಲಿ ಹುಳದ ಹಾವಳಿ ನಿಯಂತ್ರಿಸಬಹುದು.
 
4 ರಿಂದ 5 ವಾರಗಳ ನಂತರ ಬೇವಿನ ಹಿಂಡಿಯನ್ನು ಹೆಕ್ಟೇರಿಗೆ 250 ಕೆ.ಜಿಯಂತೆ ಮಣ್ಣಿಗೆ ಸೇರಿಸಬೇಕು. ಬೆಳೆ ಹಾನಿ ಮಾಡುವ ಕೆಂಪು ಕುಂಬಳ ದುಂಬಿ, ಹಣ್ಣು ನೊಣ, ಕಾಯಿಕೊರಕ ಹುಳುಗಳ ನಿಯಂತ್ರಣಕ್ಕಾಗಿ ಶೇ 4ರ ಬೇವಿನ ಬೀಜದ ಪುಡಿಯ ಸಾರ ಅಥವಾ ಶೇ 0.7ರ ಪ್ರಮಾಣದ ಬೇವಿನ ಸೊಪ್ಪಿನ ಕಷಾಯವನ್ನು ಬಿತ್ತನೆ ಮಾಡಿದ 10, 17 ಮತ್ತು 23 ದಿನಗಳ ನಂತರ ಸಿಂಪರಣೆ ಮಾಡಬೇಕು. ಹಣ್ಣು ನೊಣದ ನಿಯಂತ್ರಣಕ್ಕಾಗಿ ಲಿಂಗಾಕರ್ಷಕ (ಕ್ಯೂಲೂರ್) ಬಲೆ ಉಪಯೋಗಿಸುವುದು ಹೆಚ್ಚು ಪರಿಣಾಮಕಾರಿ.

ಹೆಚ್ಚಿನ ಮಾಹಿತಿಗೆ ಎಂ. ಪ್ರಭಾಕರ್,  ಪ್ರಧಾನ ವಿಜ್ಞಾನಿ, ತೋಟಗಾರಿಕಾ ವಿಭಾಗ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ, ಬೆಂಗಳೂರು. ಮೊಬೈಲ್ ಸಂಖ್ಯೆ: 98802 50548.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT