ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಗುಂಡಿಗಳು

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಗುಂಡಿ ಬಿದ್ದ, ಕೆಟ್ಟು ಹೋದ ರಸ್ತೆಗಳು ಬೆಂಗಳೂರಿನ ಕೀರ್ತಿ, ಪ್ರತಿಷ್ಠೆಗೆ ಕಪ್ಪು ಚುಕ್ಕಿಗಳಾಗಿವೆ. ಯದ್ವಾತದ್ವಾ ಗುಂಡಿ ಬಿದ್ದ ಇಲ್ಲಿನ ರಸ್ತೆಗಳಲ್ಲಿ ಸುರಕ್ಷಿತವಾಗಿ ವಾಹನ ಓಡಿಸುವುದು ಎಂದರೆ ದೊಡ್ಡ ಸಾಹಸಕ್ಕೆ ಸಮ.

ಮೆಟ್ರೊ ರೈಲು ಮಾರ್ಗ ನಿರ್ಮಾಣ, ಕೇಬಲ್‌, ಒಳ­ಚರಂಡಿ ಅಥವಾ ನೀರಿನ ಕೊಳವೆ ಅಳವಡಿಕೆ ಸೇರಿದಂತೆ ನಾನಾ ಕಾರಣ­ಗಳಿಗಾಗಿ ಅಗೆಯುವ ರಸ್ತೆಯನ್ನು ನಂತರ ಸರಿಪಡಿಸುವ ಕೆಲಸ ಅಷ್ಟೇ ಚುರುಕಿ­ನಿಂದ ಆಗುತ್ತಿಲ್ಲ. ಕೆಟ್ಟ ರಸ್ತೆಗಳಿಂದಾಗಿಯೇ ಅನೇಕರು ಸಾವನ್ನಪ್ಪುತ್ತಿರುವುದು ವಿಷಾದದ ಸಂಗತಿ.

ಇಂಥ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡವರಿಗೆ ಒಂದಿಷ್ಟು ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಪ್ರವೃತ್ತಿ ಸರಿಯಲ್ಲ. ಇದಕ್ಕೆ ಕಾರಣರಾದ ಸಂಸ್ಥೆಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಬೇಕು. ಆಗ ಮಾತ್ರ ಜನರ ಜೀವದ ಜತೆ ಚೆಲ್ಲಾಟ ಆಡುವ ಮನೋಭಾವಕ್ಕೆ ತಡೆ ಬಿದ್ದೀತು.

ಮೂಲಸೌಕರ್ಯ ನಿರ್ಮಾಣ ಕಾರ್ಯಗಳಿಗೆ ರಸ್ತೆಗಳನ್ನು ಅಗೆಯುವುದು ಅನಿ­ವಾರ್ಯ. ಆದರೆ ಇಂತಹ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾ­ಗ್ರತೆಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಅಕ್ಷಮ್ಯ. ಎಚ್ಚರಿಕೆಯ ಫಲಕ­ಗಳನ್ನು ಕಡ್ಡಾಯವಾಗಿ ಹಾಕಬೇಕು ಎಂಬ ನಿಯಮವನ್ನೇ ಗಾಳಿಗೆ ತೂರ­ಲಾಗಿರುತ್ತದೆ. ಅಡ್ಡಗಟ್ಟೆಗಳ ನಿರ್ಮಾಣ, ಟೇಪ್ ಹಾಕಿ ಬೇಲಿ ನಿರ್ಮಿ­ಸುವುದು, ಪ್ರತಿಫಲಕಗಳ ಅಳವಡಿಕೆಯ ನಿಯಮಗಳ ಪಾಲನೆ­ಯಾಗದಿ­ರು­ವುದು ಮಾಮೂಲಾಗಿಹೋಗಿದೆ. ಇಂತಹ ಸುರಕ್ಷತಾ ಕ್ರಮ ಕೈಗೊಂಡರೆ ಯೋಜನಾ ವೆಚ್ಚ ಹೆಚ್ಚಾಗುತ್ತದೆ ಎಂದು ಅದರಲ್ಲೂ ಹಣ ಮಿಗಿಸುವ ಪ್ರಯತ್ನ ಕೊಲೆಗಡುಕತನದ್ದು.

ನಗರದ ರಸ್ತೆಗಳು ಕೆಟ್ಟು ಅಧ್ವಾನ­­ವಾಗುವಲ್ಲಿ ಬಿಬಿಎಂಪಿ, ಬೆಸ್ಕಾಂ, ಮೆಟ್ರೊ ರೈಲು ಯೋಜನೆ, ಜಲ­ಮಂಡಳಿ, ಬಿಡಿಎ, ಬಿಎಸ್‌ಎನ್‌ಎಲ್‌, ಖಾಸಗಿ ಮೊಬೈಲ್‌ ಕಂಪೆನಿಗಳು ಹೀಗೆ ವಿವಿಧ ನಾಗರಿಕ ಸೇವಾ ಸಂಸ್ಥೆಗಳ ಪಾಲು ದೊಡ್ಡದು. ಬೆಂಗಳೂರು ನಗರ ಜಿಲ್ಲಾ ಉಸ್ತು­ವಾರಿ ಮಂತ್ರಿಗಳು, ಅನೇಕ ಸಲ ರಸ್ತೆ ಗುಂಡಿ ಮುಚ್ಚಲು ಗಡುವು ಕೊಟ್ಟಿ­ದ್ದರು. ಎಂಜಿನಿಯರ್‌ಗಳನ್ನು ಮನೆಗೆ ಕಳಿಸುವುದಾಗಿ ಗುಡುಗಿದ್ದರು. ಆ ಗಡುವು ಮುಗಿದ ನಂತರವೂ ಗುಂಡಿಗಳೇನೂ ಕಡಿಮೆ­ಯಾಗಿಲ್ಲ.

ಇದನ್ನೆಲ್ಲ ನೋಡಿ­ದಾಗ ಬೆಂಗಳೂರಿನ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡುವ ಮನಸ್ಸು ಸಂಬಂಧಿ­ಸಿದ ಅಧಿಕಾರಶಾಹಿಗೆ ಇಲ್ಲವೇನೋ ಅಥವಾ ಮಂತ್ರಿಗಳು ನೀಡುವ ಗಡುವಿಗೂ ಅಧಿಕಾರಿಗಳು ಕಿಮ್ಮತ್ತು ಕೊಡುವುದಿಲ್ಲ­ವೇನೋ ಎನಿಸುತ್ತದೆ.

ವರದಿಯೊಂದರ ಪ್ರಕಾರ ಪಾಲಿಕೆ, ಬೆಸ್ಕಾಂ, ಬಿಡಿಎ, ಜಲಮಂಡಳಿ, ಮೆಟ್ರೊ ರೈಲು ನಿಗಮ ಸೇರಿ ನಗರದ ವಿವಿಧ ಸಾರ್ವಜನಿಕ ಸಂಸ್ಥೆಗಳ ಮೇಲೆ ₨ 14 ಸಾವಿರ ಕೋಟಿ ಸಾಲದ ಹೊರೆ ಇದೆ. ಹಾಗಂತ ಇದು ನಾಗರಿಕರಿಗೆ ಕನಿಷ್ಠ ಸೌಕರ್ಯ ಕಲ್ಪಿಸಲು ಅಡ್ಡಿಯಾಗಬಾರದು. ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡುವ ಹೊಣೆಯಿಂದ ಜಾರಿಕೊಳ್ಳಲು ಈ ಸಂಸ್ಥೆಗಳಿಗೆ ಅವಕಾಶ ಕೊಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT