ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ದವಡೆಯಲ್ಲಿ `ತಾಯ್ತನ'ದ ಕನಸು!

Last Updated 22 ಡಿಸೆಂಬರ್ 2012, 20:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತುರ್ತು ವೈದ್ಯಕೀಯ ಸೇವೆ ಅಲಭ್ಯ, ಆರೈಕೆಯ ಕೊರತೆ, ಮಗು ಬೇಡವೆಂದು ಗರ್ಭಪಾತ... ಮತ್ತಿತರ ಕಾರಣಗಳಿಗೆ ಗರ್ಭಾವಸ್ಥೆಯಲ್ಲಿ ಅಥವಾ ತಾಯಿಯಾದ ಏಳು ವಾರದೊಳಗಾಗಿ ಸಾವಿನ ಮನೆಯ ಕದ ತಟ್ಟುವ ಗೃಹಿಣಿಯರ ಸಂಖ್ಯೆ ಹೆಚ್ಚುತ್ತಿದೆ. ಕರುಳಬಳ್ಳಿ ಕುಡಿಯೊಡೆಯುತ್ತಲೇ ಒಡಲಲ್ಲಿ ತಾಯ್ತನದ ಕನಸು ಕಾಣುವ ಮಹಿಳೆಯರ ಎದೆಯಲ್ಲಿ ಆತಂಕ ಹುಟ್ಟಿಸುವ ಸಂಗತಿಯಿದು!

ಪ್ರಸವಪೂರ್ವ ಮತ್ತು ಪ್ರಸವನಂತರ ಸಾವಿಗೀಡಾಗುವವರ ಪ್ರಮಾಣ ಕರ್ನಾಟಕದಲ್ಲಿ ಒಂದು ಲಕ್ಷಕ್ಕೆ 178. ದೇಶದಲ್ಲಿ ಈ ಸಂಖ್ಯೆ 240. ಈ ಪೈಕಿ ಶೇಕಡಾ 80ರಷ್ಟು ಸಾವು ಹಳ್ಳಿಗಳಲ್ಲಿ, ಶೇ 20ರಷ್ಟು ನಗರಪ್ರದೇಶದಲ್ಲಿ ಸಂಭವಿಸುತ್ತಿವೆ ಎನ್ನುತ್ತವೆ ಇತ್ತೀಚಿನ ಅಂಕಿಅಂಶ.

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಕಿಮ್ಸ) ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹಿರೇಮಠ, ಕಳೆದೊಂದು ವರ್ಷದಿಂದ ನಡೆಸಿದ ಅಧ್ಯಯನ ಈ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಅವರು, `ಗರ್ಭಧರಿಸಿದ ಕ್ಷಣದಿಂದ ಪ್ರಸವ ಸಂಭವಿಸುವ 42 ದಿನಗಳೊಳಗಿನ ಅವಧಿಯಲ್ಲಿ ಸಾವಿಗೀಡಾಗುವವರ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿದೆ. 1998-99ಕ್ಕಿಂತ 2011-12ಕ್ಕೆ ಈ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಕಡಿಮೆ ಕಂಡರೂ ವಾಸ್ತವ ಸ್ಥಿತಿ ಭಿನ್ನವಾಗಿದೆ. ನೆರೆಯ ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಇಂತಹ ಸಾವು ಹೆಚ್ಚು ಸಂಭವಿಸುತ್ತಿವೆ. ರಾಜ್ಯದಲ್ಲಿ ಕೊಪ್ಪಳ, ರಾಯಚೂರು, ತುಮಕೂರು ಜಿಲ್ಲೆ ಮುಂಚೂಣಿಯಲ್ಲಿದೆ' ಎಂದರು.

`ಅತಿಯಾದ ರಕ್ತಸ್ರಾವ, ಗರ್ಭಚೀಲದ ಹರಿಯುವಿಕೆ, ರಕ್ತದೊತ್ತಡ ಮುಂತಾದವು ಇಂತಹ ಸಾವಿಗೆ ಪ್ರಮುಖ ಕಾರಣವಾದರೂ, ಗ್ರಾಮೀಣ ಭಾಗದಲ್ಲಿ ತಜ್ಞ ಪ್ರಸೂತಿ ವೈದ್ಯರ ಅಲಭ್ಯತೆ, ವೈದ್ಯಕೀಯ ಸೌಲಭ್ಯದ ಕೊರತೆಯೂ ಮುಖ್ಯವಾಗುತ್ತದೆ. ನಗರ ಕೇಂದ್ರೀಕರಿಸಿ ವೈದ್ಯಕೀಯ ಸೇವೆ ನಡೆಸುವ ಪ್ರಸೂತಿ ತಜ್ಞರು, ಹಳ್ಳಿಗಳತ್ತ ಮುಖ ಮಾಡದ ಹೊರತು ಈ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಿಲ್ಲ' ಎಂದರು.

`ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಮುಂದುವರಿದ ಸಾಂಪ್ರದಾಯಿಕ ಹೆರಿಗೆ, ಪ್ರಸವಪೂರ್ವ ಆರೈಕೆ ಇಲ್ಲದಿರುವುದು, ತುರ್ತು ಸಂದರ್ಭ ಎದುರಿಸುವಲ್ಲಿ ವಿಫಲತೆ, ಸ್ವಇಚ್ಛೆಯ ಗರ್ಭಪಾತ, ಅನಕ್ಷರತೆ, ಬಡತನ.. ಇವೆಲ್ಲ ಸದ್ಯದ ವಾಸ್ತವಿಕತೆ. ಮಹಿಳೆ ಗರ್ಭ ಧರಿಸುತ್ತಿದ್ದಂತೆ ಪ್ರಸೂತಿ ಸಮಸ್ಯೆ ಬಂದೇಬರುತ್ತದೆ ಎಂದು ನಿರೀಕ್ಷಿಸಲು ಅಥವಾ ಬಾರದಂತೆ ತಡೆಯಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆ ನೀಡಲು ಸಾಧ್ಯ ಎನ್ನುವುದು ಅಧ್ಯಯನದಿಂದ ಸಾಬೀತಾಗಿದೆ' ಎಂದರು.
 

ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ (ಕೆಎನ್‌ಒಜಿಎ) ನಿಯೋಜಿತ ಅಧ್ಯಕ್ಷರಾಗಿರುವ ಡಾ. ಹಿರೇಮಠ, `ನ್ಯಾಯ ಸಮ್ಮತವಲ್ಲದ' ಇಂತಹ ಸಾವು ನಿಯಂತ್ರಿಸಲು ವಿನೂತನ ಯೋಜನೆಯನ್ನು ರಾಜ್ಯದಾದ್ಯಂತ ಅನುಷ್ಠಾನಗೊಳಿಸುವ ಸಿದ್ಧತೆಯಲ್ಲಿದ್ದಾರೆ. ಸಂಘದಲ್ಲಿ ನಾಲ್ಕು ಸಾವಿರ ಸದಸ್ಯರಿದ್ದು, ಅವರ ನೆರವಿನಿಂದ ಆರೋಗ್ಯ ಇಲಾಖೆ ಸಹಕಾರದಲ್ಲಿ ಹಳ್ಳಿಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದತ್ತು ಪಡೆದು ಅಲ್ಲಿ ಪ್ರತಿ ತಿಂಗಳಲ್ಲಿ ಎರಡು ದಿನ ಗರ್ಭಿಣಿಯರಿಗೆ ಆರೋಗ್ಯ ಸೇವೆ-ಸಲಹೆ ಉಚಿತವಾಗಿ ನೀಡುವ ಚಿಂತನೆ ಅವರದ್ದು.

`ಪ್ರಾಯೋಗಿಕವಾಗಿ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಗ್ರಾಮದಲ್ಲಿ ಈ ಯೋಜನೆ ಆರಂಭಿಸಲಾಗಿದ್ದು ಸದ್ಯದಲ್ಲೆ ಇಡೀ ಜಿಲ್ಲೆಗೆ ವಿಸ್ತರಿಸಲಾಗುವುದು. ಹಂತಹಂತವಾಗಿ ರಾಜ್ಯದಾದ್ಯಂತ ವಿಸ್ತರಿಸುವ ಯೋಚನೆಯಿದೆ. ಸಂಘದ ಜೊತೆ ಸರ್ಕಾರವೂ ಕೈಜೋಡಿಸಬೇಕು' ಎನ್ನುವುದು ಡಾ. ಹಿರೇಮಠ ಆಶಯ.

`ಒಂದೇ ತಿಂಗಳಲ್ಲಿ 212 ಮರಣ!'
ಪ್ರಸವಪೂರ್ವ, ಪ್ರಸವನಂತರದ ಸಾವು ಧಾರವಾಡ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೆ ಸರಾಸರಿ 178 ಇದೆ.  ಕಳೆದ ಒಂದು ತಿಂಗಳಲ್ಲಿ ಒಂದು ಲಕ್ಷಕ್ಕೆ 212 ಸಾವು ಸಂಭವಿಸಿದೆ!

ಕಿಮ್ಸ ಮತ್ತು ಎಸ್‌ಡಿಎಂ ಈ ಎರಡೂ ವೈದ್ಯಕೀಯ ಕಾಲೇಜು ಆಸ್ಪತೆಗಳಾಗಿದ್ದು, ಎಂಟು ಜಿಲ್ಲೆಗಳಿಂದ ಹೆರಿಗೆಗಾಗಿ ಇಲ್ಲಿಗೆ ಬರುವುದರಿಂದ ಇಲ್ಲಿ ಪ್ರಮಾಣ ಹೆಚ್ಚಿದೆ' ಎಂದು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಯೋಜನಾ ಅಧಿಕಾರಿ ಡಾ.ಸುಭಾಸ್ ಬಬ್ರುವಾಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT