ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಪರಿಚಾರಿಕೆ ವಿಡಂಬಾರಿ

Last Updated 5 ಆಗಸ್ಟ್ 2011, 13:05 IST
ಅಕ್ಷರ ಗಾತ್ರ

ಶಿರಸಿಯ ಬಸ್ ನಿಲ್ದಾಣದ ನೆರಳಿನಲ್ಲಿ `ಚಿಂತನ ಕನ್ನಡ ಪುಸ್ತಕ ಮಳಿಗೆ~ ಎನ್ನುವ ಪುಟ್ಟದೊಂದು ಅಂಗಡಿ ಇತ್ತೀಚಿನವರೆಗೆ ಪ್ರತಿದಿನವೂ ಜೀವಗೊಳ್ಳುತ್ತಿತ್ತು. ಆ ಅಂಗಡಿಯಾತ ಮಾರುತ್ತಿದ್ದುದು ವಿಜ್ಞಾನ ಹಾಗೂ ವಿಚಾರ ಸಾಹಿತ್ಯದ ಪುಸ್ತಕಗಳನ್ನು ಮಾತ್ರ. ಬಸ್‌ನಿಲ್ದಾಣದಲ್ಲಿ ಸುಳಿದಾಡುವ ಹಾದಿಹೋಕರು ಹಾಗೂ ಪ್ರಯಾಣಿಕರಿಗೆ ಪುಸ್ತಕದ ಮಹತ್ವ ವಿವರಿಸುವ ಮೂಲಕ ಅವರಿಗೆ ಪುಸ್ತಕ ಕೊಳ್ಳಲು ಅಂಗಡಿಯಾತ ಪ್ರೇರೇಪಿಸುತ್ತಿದ್ದ. ಕೆಲವೊಮ್ಮೆ ಬಸ್ಸಿನೊಳಗಡೆ ಹೋಗಿ ಅಲ್ಲಿ ಕೂತವರಿಗೆ ಪುಸ್ತಕ ಕೊಳ್ಳಲು ಕೋರುತ್ತಿದ್ದುದೂ ಉಂಟು. ಹಣ್ಣು ತಿಂಡಿಗಳ ಹಾಗೆ ಪುಸ್ತಕಗಳನ್ನು ಮಾರುವ ಈ ಹೊಸ ಪರಿ ಪ್ರಯಾಣಿಕರಿಗೆ ಸೋಜಿಗವನ್ನುಂಟುಮಾಡುತ್ತಿತ್ತು. ಹೀಗೆ, ಹತ್ತು ವರ್ಷಗಳ ಕಾಲ ಪುಸ್ತಕ ಪರಿಚಾರಿಕೆ ಮಾಡಿದ ವ್ಯಕ್ತಿಯ ಹೆಸರು ವಿ.ಗ. ಭಂಡಾರಿ. ಲೇಖಕರೂ ಆದ ಭಂಡಾರಿ ಸಾವಿರಾರು ಚುಟುಕುಗಳನ್ನು ಬರೆದಿದ್ದಾರೆ. ಕನ್ನಡ ಓದುಗರಿಗವರು ವಿಡಂಬಾರಿ ಎಂದೇ ಪರಿಚಿತರು.

ಭಂಡಾರಿ `ವಿಡಂಬಾರಿ~ ಆದದ್ದೊಂದು ಸ್ವಾರಸ್ಯಕರ ಕಥೆ. ಎಪ್ಪತ್ತರ ದಶಕದಲ್ಲೊಮ್ಮೆ ಕೇಂದ್ರ ಸರ್ಕಾರದ ನೌಕರರು ಸಂಪು ಹೂಡಿದ್ದರು. ಸಂಪಿನಲ್ಲಿ ಭಾಗವಹಿಸಿದ ಅನೇಕರನ್ನು ಹೆಣ್ಣುಗಂಡು ಭೇದವಿಲ್ಲದೆ ಸರ್ಕಾರ ಜೈಲಿಗೆ ದೂಡಿತು. ಸರ್ಕಾರದ ವರ್ತನೆಯಿಂದ ಬೇಸತ್ತ ಭಂಡಾರಿ ಅವರಲ್ಲಿ ಕೆಲವು ಲಯಬದ್ಧ ಸಾಲು ಮೂಡಿದವು.

`ಹೊಟ್ಟೆ ತುಂಬ ಅನ್ನ, ಮೈ ತುಂಬ ಬಟ್ಟೆ/ಬೇಕೆಂದು ಕೇಳಿದರು ನೌಕರರು ಗೊತ್ತೆ?/ಕೊಟ್ಟಿಹುದು ಸರಕಾರ ಬೆನ್ನುಮುರಿ ಲತ್ತೆ/ಈ ಸರಕಾರವನು ಜನ ನಂಬುವರು ಮತ್ತೆ~ ಎನ್ನುವ ಚುಟುಕವದು. ಇದು ಪ್ರಕಟವಾದರೆ ಚೆಂದ ಅನ್ನಿಸಿದ್ದೇ, ಭಂಡಾರಿ ಅದನ್ನು `ವಿಶಾಲ ಕರ್ನಾಟಕ~ಕ್ಕೆ ಕಳಿಸಿದರು. ಪತ್ರಿಕೆಯ ಪಿ.ಎಲ್. ಬಂಕಾಪುರ ಅವರಿಗೆ ಚುಟುಕ ಇಷ್ಟವಾಯಿತು. ಆದರೆ, ಸರ್ಕಾರಿ ನೌಕರನೊಬ್ಬ ತನ್ನ ನಿಜದ ಹೆಸರಿನಲ್ಲಿ ಇಂಥ ಚುಟುಕಗಳನ್ನು ಪ್ರಕಟಿಸುವುದು ಸರಿಯಾಗಲಾರದು ಎಂದು ಅವರಿಗನ್ನಿಸಿ, ಭಂಡಾರಿ ಒಪ್ಪಿಗೆಯೇ ಮೇರೆಗೆ `ವಿಡಂಬಾರಿ~ ಎನ್ನುವ ಹೆಸರಿನಲ್ಲಿ ಅದನ್ನು ಪ್ರಕಟಿಸಿದರು. ಇದಿಷ್ಟು ನಾಮಕರಣ ಕಥೆ.

ಹುಮ್ಮಸ್ಸಿನ ದಿನಗಳಲ್ಲಿ, ರಾಜ್ಯದ ಯಾವ ಭಾಗದಲ್ಲಿ ಸಾಹಿತ್ಯದ ಕಾರ್ಯಕ್ರಮ ನಡೆದರೂ ಅಲ್ಲಿಗೆ ವಿಡಂಬಾರಿ ತಮ್ಮ ಅಂಗಡಿ ಸಮೇತ ಹೋಗುತ್ತಿದ್ದರು. ಪುಸ್ತಕದ ಮಾರಾಟ ಅವರಿಗೆ ಖುಷಿ ಕೊಡುತ್ತಿತ್ತು. ಅದು, `ಮನುಷ್ಯನಾಗಿ ನಾನು ಮಾಡಲೇಬೇಕಾದ ಕೆಲಸವಾಗಿತ್ತು~ ಎನ್ನುವುದು ಅವರ ನಂಬಿಕೆ. ಬಾಲ್ಯದ ಕಹಿನೆನಪುಗಳಿಂದ ಪಾರಾಗಿ ಹೊಸತೊಂದು ಜೀವನ ಕಟ್ಟಿಕೊಳ್ಳಲು ಈ ಪುಸ್ತಕ ಸಾಂಗತ್ಯ ಅವರಿಗೆ ನೆರವಾಗಿತ್ತೆನಿಸುತ್ತದೆ. ಅವರು ಓದಿದ್ದು ಮೂರನೇ ತರಗತಿಯವರೆಗೆ ಮಾತ್ರ. ಈ ಕೊರತೆ-ಕೀಳರಿಮೆ ತುಂಬಿಕೊಳ್ಳಲು ಕೂಡ ಅವರಿಗೆ ಸಾಹಿತ್ಯ ಔಷಧದಂತೆ ಪರಿಣಮಿಸಿತೆಂದು ಅವರ ನಂಬಿಕೆ.

ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ಆರ್.ವಿ. ಭಂಡಾರಿ ಮುಂತಾದವರ ಪ್ರೋತ್ಸಾಹದಿಂದ ಬರವಣಿಗೆ ರೂಢಿಸಿಕೊಂಡ ವಿಡಂಬಾರಿ ಇದುವರೆಗೆ -- `ಒಗ್ಗರಣೆ~, `ಕವಳ~, `ಕುದಿಬಿಂದು~, `ವಿಡಂಬಾರಿ ಕಂಡದ್ದು~ ಎನ್ನುವ ನಾಲ್ಕು ಚುಟುಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಯಶವಂತ ಚಿತ್ತಾಲರು `ಒಗ್ಗರಣೆ~ ಸಂಕಲನಕ್ಕೆ ಮುನ್ನುಡಿ ಬರೆದುಕೊಡುವುದರ ಜೊತೆಗೆ ನಾಲ್ಕುನೂರು ರೂಪಾಯಿ ನೀಡಿ ಹರಸಿದ ನೆನಪು ಅವರಿಗೆ ಈಗಲೂ ಖುಷಿ ಕೊಡುತ್ತದೆ. ಪ್ರಕಟವಾಗದಿರುವ ಚುಟುಕುಗಳೇ ಅವರ ಬಳಿ ಸುಮಾರು ಎರಡೂವರೆ ಸಾವಿರದಷ್ಟಿವೆ. `ಅಂಚೆಪೇದೆಯ ಆತ್ಮಕಥನ~ ಎನ್ನುವುದು ಅವರ ಆತ್ಮಕಥನ.

ಹೊನ್ನಾವರ ತಾಲ್ಲೂಕಿನ `ಮೇಲಿನ ಇಡಗುಂಜಿ~ ವಿಡಂಬಾರಿ ಹುಟ್ಟೂರು. ಅವರು ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿದ್ದು ಅಂಚೆ ಇಲಾಖೆ. `ಡಿ~ ವರ್ಗದ ನೌಕರನಾಗಿ ವೃತ್ತಿ ಆರಂಭಿಸಿದ ಅವರು ಅಂಚೆಪೇದೆಯಾಗಿ ನಿವೃತ್ತಿ ಹೊಂದಿದರು. ಅವರಿಗೀಗ ಎಪ್ಪತ್ತೈದು ವರ್ಷ. ಸ್ವಂತ ಮನೆಯಿಲ್ಲ. ಹೊನ್ನಾವರಕ್ಕೆ ಹದಿನೈದು ಕಿ.ಮೀ. ದೂರದ ಕಡತೋಕದಲ್ಲಿರುವ ಮಗಳ ಮನೆಯಲ್ಲಿ ವಾಸ.

ಮೂಲತಃ ಸಂಕೋಚದ ವ್ಯಕ್ತಿತ್ವದ ವಿಡಂಬಾರಿ ಈಗಲೂ ಸಾಹಿತ್ಯದ ಕಾರ್ಯಕ್ರಮಗಳಲ್ಲಿ, ಕವಿಗೋಷ್ಠಿಗಳಲ್ಲಿ ಭಾಗವಹಿಸುವುದಿದೆ. ಉಳಿದಂತೆ ತಮ್ಮ ಪಾಡಿಗೆ ತಾವು ಹನಿಗವಿತೆಗಳನ್ನು ಬರೆದುಕೊಂಡು, ಆಗೀಗ ಪತ್ರಿಕೆಗಳಿಗೆ ಕಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT