ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ, ರಾಜಕೀಯಕ್ಕೆ ಫೈಜ್‌ರಿಂದ ಗೌರವ'

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಏರಿಸಿದ ಮಹಾಕವಿ ಫೈಜ್ ಅಹ್ಮದ್ ಫೈಜ್' ಎಂದು ಹಿರಿಯ ಲೇಖಕ ಹಸನ್ ನಯೀಂ ಸುರಕೋಡ ಅಭಿಪ್ರಾಯಪಟ್ಟರು.

ಸಾಹಿತ್ಯ ಸಮುದಾಯ, ಅಖಿಲ ಭಾರತ ಉರ್ದು ಮಂಚ್, ಚಿಂತನ ಪುಸ್ತಕದ ಆಶ್ರಯದಲ್ಲಿ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ನಡೆದ `ಫೈಜ್‌ರೊಡನೆ ಒಂದು ಸಂಜೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಸಾಹಿತ್ಯ ಕ್ಷೇತ್ರಕ್ಕೆ ರಾಜಕಾರಣಿಗಳು ಮತ್ತು ರಾಜಕಾರಣಕ್ಕೆ ಸಾಹಿತಿಗಳು ಪ್ರವೇಶ ಮಾಡಬಹುದು. ಇಂದು ಆ ಎರಡೂ ಕ್ಷೇತ್ರಗಳು ಕುಲಗೆಟ್ಟು ಹೋಗಿವೆ. ಈ ಎರಡೂ ಕ್ಷೇತ್ರಕ್ಕೂ ಗೌರವ ತಂದುಕೊಟ್ಟವರು ಫೈಜ್' ಎಂದು ಅವರು ತಿಳಿಸಿದರು.

`ಫೈಜ್ ಮನುಕುಲಕ್ಕೆ ಸೇರಿದ ಮಹಾನ್ ಕವಿ. ಸಾಮಾಜಿಕ ಹಾಗೂ ರಾಜಕೀಯ ಆಂದೋಲನಗಳ ಜೊತೆಗೆ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಅವರು ಪ್ರಭುತ್ವಕ್ಕೆ ದೊಡ್ಡ ಸವಾಲು ಆಗಿದ್ದರು' ಎಂದು ಅವರು ಅಭಿಪ್ರಾಯಪಟ್ಟರು. 

`ಫೈಜ್ ನಾಮಾ' ಕೃತಿ ಬಿಡುಗಡೆ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಫಕೀರ್ ಮಹಮದ್ ಕಟ್ಪಾಡಿ ಮಾತನಾಡಿ, `ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸ ಇದೆ. ನಾಡಿನಲ್ಲಿ ಉರ್ದು ಸಾಹಿತ್ಯದ ಸಾಧನೆ ಮಹತ್ವದ್ದು. ಅಲ್ಲದೆ ಕನ್ನಡ ಹಾಗೂ ಉರ್ದು ಭಾಷೆಗೆ ನಿಕಟ ಬಾಂಧವ್ಯ ಇದೆ. ಕನ್ನಡದ ನೂರಾರು ಪದಗಳು ಉರ್ದುವಿನಲ್ಲಿ, ಉರ್ದುವಿನ ನೂರಾರು ಪದಗಳು ಕನ್ನಡದಲ್ಲಿ ಇವೆ. ಎರಡೂ ಭಾಷೆಗಳಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ನಡೆದಿದೆ' ಎಂದರು.

`ಫೈಜ್ ಒಡಲಲ್ಲಿ ನಿಗಿನಿಗಿ ಕೆಂಡ ಇರಿಸಿಕೊಂಡಿದ್ದರು. ಒಳಗೆ ನೋವು ಇದ್ದರೂ ಹೊರಗೆ ಸಿಹಿಯಾದ ವಾತಾವರಣ ನಿರ್ಮಿಸಿದರು. ಹೋರಾಟದ ಕೆಚ್ಚನ್ನು ಇರಿಸಿಕೊಂಡೇ ಪ್ರೇಮ ಕವನ ಬರೆದರು. ಕಾವ್ಯ ಮತ್ತು ರಾಜಕೀಯವನ್ನು ಸಮಾನವಾಗಿ ಕಂಡು ಎರಡೂ ಕ್ಷೇತ್ರಕ್ಕೂ ವಿನಯ ಮತ್ತು ಸೌಂದರ್ಯವನ್ನು ನೀಡುವಲ್ಲಿ ಯಶಸ್ವಿಯಾದರು' ಎಂದು ಅವರು ಪ್ರತಿಪಾದಿಸಿದರು.

`ಅವರ ಕವನಗಳು ಜನರ ಬದುಕಿನ ನೆಲೆಯಲ್ಲೇ ಸುತ್ತಾಡುತ್ತವೆ. ಅವರ ಅನುಭವದ ವಿಚಾರಗಳು ಎಲ್ಲಿಯೂ ಘೋಷಣೆಗಳಾಗಲಿಲ್ಲ. ಫೈಜ್ ಎಡಪಂಥೀಯ ಧೋರಣೆಯನ್ನು ಎಲ್ಲಿಯೂ ಸವಕಲುಗೊಳಿಸದೆ ತತ್ವನಿಷ್ಠರಾಗಿ ಯಾವುದೇ ರಾಜಿ ಮಾಡಿಕೊಳ್ಳದೆ ಕಾವ್ಯ ಸೃಷ್ಟಿ ಮಾಡಿದರು' ಎಂದರು.

`ಫೈಜ್-ಕವಿ ಮತ್ತು ಕಾವ್ಯ'ದ ಕುರಿತು ಉರ್ದು ಕವಿ ಮೊಹಮ್ಮದ್ ಅಜಮ್ ಶಾಹಿದ್ ಮಾತನಾಡಿ, `ಫೈಜ್ ಒಂದು ಸಮುದಾಯಕ್ಕೆ, ಒಂದು ದೇಶಕ್ಕೆ ಸೀಮಿತರಾದ ಕವಿ ಅಲ್ಲ. ಅವರು ವಿಶ್ವಕ್ಕೆ ಸೇರಿದ ಅಗ್ರಪಂಕ್ತಿಯ ಕವಿ' ಎಂದು ಶ್ಲಾಘಿಸಿದರು.

`ಫೈಜ್ ಜೈಲಿಗೆ ಹೋಗದಿದ್ದರೆ ಇನ್ನಷ್ಟು ಅದ್ಭುತವಾಗಿ ಬರೆಯುತ್ತಿದ್ದರು ಎಂಬ ಒಂದು ವಾದವಿದೆ. ಜೈಲಿನ ಅನುಭವ ಹಾಗೂ ನೋವಿನಿಂದ ಅವರ ಕಾವ್ಯದ ಪ್ರಖರತೆ ಹೆಚ್ಚಿತು ಎಂದು ವಾದಿಸುವವರು ಇದ್ದಾರೆ. ಅವರು ಪ್ರಗತಿಪರ ಕವಿ ಆಗಿದ್ದರು. ಆದರೆ, ಘೋಷಣೆಯ ಕವಿ ಆಗಲಿಲ್ಲ' ಎಂದು ಅವರು ತಿಳಿಸಿದರು.
ಜನವಾದಿ ಮಹಿಳಾ ಸಂಘಟನೆಯ ವಿಮಲ ಕೆ.ಎಸ್, `ಸುಧಾ' ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ.ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಕೃತಿ ಮೇಲಿನ ಕೆಟ್ಟ ದಾಳಿ
`ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿದ್ದ ಉರ್ದು ಸಾಹಿತ್ಯ ಅಕಾಡೆಮಿಯನ್ನು ರಾಜ್ಯದ ಭಂಡ ಸರ್ಕಾರವು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಸ್ತಾಂತರ ಮಾಡಿರುವುದು ಸಂಸ್ಕೃತಿಯ ಮೇಲೆ ನಡೆದ ಕೆಟ್ಟ ದಾಳಿ' ಎಂದು ಫಕೀರ್ ಮಹಮದ್ ಕಟ್ಪಾಡಿ ಕಿಡಿ ಕಾರಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, `ಮಧ್ಯಪ್ರದೇಶದಲ್ಲೂ ಇದೇ ರೀತಿ ಮಾಡಲಾಗಿದೆ. ಇಂತಹ ಪ್ರವೃತ್ತಿಯಿಂದ ಸಾಂಸ್ಕೃತಿಕ ನೆಲೆಗೆ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಹಿಂದೆ ನಮ್ಮ ಜನರನ್ನು ಬೇರೆ ಮಾಡುವ ಹುನ್ನಾರ ಇದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT