ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಳೀಯ ಪಡೆ ಫೈನಲ್‌ಗೆ ಲಗ್ಗೆ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ: ಮೂರು ವರ್ಷಗಳ ಹಿಂದಿನ ಆ ಸೇಡನ್ನು ಶ್ರೀಲಂಕಾ ತಂಡದವರು ಕೊನೆಗೂ ತೀರಿಸಿಕೊಂಡೇ ಬಿಟ್ಟರು. ಏಕೆಂದರೆ ಇಂಗ್ಲೆಂಡ್‌ನಲ್ಲಿ 2009ರಲ್ಲಿ ನಡೆದ ಚುಟುಕು ವಿಶ್ವಕಪ್ ಫೈನಲ್‌ನಲ್ಲಿ ಲಂಕಾ ತಂಡವನ್ನು ಬಗ್ಗುಬಡಿದಿದ್ದ ಪಾಕಿಸ್ತಾನ ಚಾಂಪಿಯನ್ ಆಗಿತ್ತು.

ಆದರೆ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ 16 ರನ್‌ಗಳಿಂದ ಪಾಕ್ ತಂಡವನ್ನು ಸೋಲಿಸಿದ ಸಿಂಹಳೀಯ ಬಳಗ ಫೈನಲ್ ಪ್ರವೇಶಿಸಿತು.

ಆತಿಥೇಯ ಲಂಕಾ ನೀಡಿದ 140 ರನ್‌ಗಳ ಗುರಿಗೆ ಉತ್ತರವಾಗಿ ಮೊಹಮ್ಮದ್ ಹಫೀಜ್ ಬಳಗ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 123 ರನ್ ಗಳಿಸಿತು. ಎಡಗೈ ಸ್ಪಿನ್ನರ್ ರಂಗನಾ ಹೇರತ್ (25ಕ್ಕೆ3), ಅಜಂತಾ ಮೆಂಡಿಸ್ (27ಕ್ಕೆ2) ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್ (27ಕ್ಕೆ2) ಅವರ ಪ್ರಭಾವಿ ಬೌಲಿಂಗ್ ದಾಳಿಗೆ ಪಾಕ್ ನಡುಗಿ ಹೋಯಿತು.

ನಾಯಕ ಹಫೀಜ್ (42; 40 ಎಸೆತ) ನಡೆಸಿದ ಪ್ರಯತ್ನ ಸಾಕಾಗಲಿಲ್ಲ. 24 ರನ್‌ನಲ್ಲಿದ್ದಾಗ ಮ್ಯಾಥ್ಯೂಸ್ ಬೌಲಿಂಗ್‌ನಲ್ಲಿ ಲಾಂಗ್‌ಆನ್‌ನಲ್ಲಿ ಲಸಿತ್ ಮಾಲಿಂಗ ಕ್ಯಾಚ್ ಕೈಚೆಲ್ಲಿದ್ದರು. ಆದರೆ ಅದು ಹೆಚ್ಚು ಅಪಾಯಕ್ಕೆ ಕಾರಣವಾಗಲಿಲ್ಲ.

ಅಷ್ಟೇನು ಸವಾಲಿನಿಂದ ಕೂಡಿರದ ಗುರಿ ಎದುರು ಪಾಕ್‌ನ ಆರಂಭ ಉತ್ತಮವಾಗಿಯೇ ಇತ್ತು. ಹಫೀಜ್ ಹಾಗೂ ಇಮ್ರಾನ್ ನಜೀರ್ ಮೊದಲ ವಿಕೆಟ್‌ಗೆ 31 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.
ಆದರೆ ಈ ತಂಡ ಒಮ್ಮೆಲೇ ಕುಸಿತ ಕಂಡಿತು. ತಂಡದ ಮೊತ್ತ 64 ರನ್ ಆಗುವಷ್ಟರಲ್ಲಿ 4 ವಿಕೆಟ್ ಪತನಗೊಂಡಿದ್ದವು.

ಅಷ್ಟರಲ್ಲಿ 11 ಓವರ್‌ಗಳು ಮುಗಿದು ಹೋಗಿದ್ದವು. ಈ ಹಂತದಲ್ಲಿ ಜೊತೆಗೂಡಿದ ಹಫೀಜ್ ಹಾಗೂ ಉಮರ್ ಅಕ್ಮಲ್ ಗೆಲುವಿನ ಆಸೆ ಮೂಡಿಸಿದ್ದರು. ಆಗ ಹೇರತ್ ಸತತ ಎರಡು ಎಸೆತಗಳಲ್ಲಿ ಹಫೀಜ್ ಹಾಗೂ ಅಫ್ರಿದಿ ವಿಕೆಟ್ ಕಬಳಿಸಿದರು. ಮತ್ತೆ ವೈಫಲ್ಯ ಕಂಡ ಅಫ್ರಿದಿ ಕೇರಂ ಬಾಲ್ ಎಸೆತದಲ್ಲಿ ಬೌಲ್ಡ್ ಆದರು.

ಲಂಕಾ ತಂಡದವರು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದರು. ಆದರೆ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಆಡಿದ ಆತಿಥೇಯ ಬ್ಯಾಟ್ಸ್‌ಮನ್‌ಗಳು ಆರಂಭದಿಂದಲೇ ಪರದಾಡಿದರು.

ಪಾಕ್ ಬೌಲರ್‌ಗಳು ಬಿಗು ಬೌಲಿಂಗ್ ಮೂಲಕ ಜಯವರ್ಧನೆ ಬಳಗವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೂ ಆರಂಭಿಕ ಬ್ಯಾಟ್ಸ್ ಮನ್‌ಗಳಾದ ನಾಯಕ ಜಯವರ್ಧನೆ (42; 36 ಎ, 7 ಬೌ.) ಹಾಗೂ ತಿಲಕರತ್ನೆ ದಿಲ್ಶಾನ್ ಮೊದಲ ವಿಕೆಟ್‌ಗೆ 62 ಎಸೆತಗಳಲ್ಲಿ 61 ರನ್ ಕಲೆಹಾಕಿದರು. ಜಯವರ್ಧನೆ ಔಟ್ ಆದ ಬಳಿಕ ರನ್‌ರೇಟ್ ಕುಸಿತಗೊಂಡಿತು.

ಲಂಕಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 139 ರನ್ ಗಳಿಸಿತು. ಈ ಪಿಚ್‌ನಲ್ಲಿ ರನ್ ಗಳಿಸಲು ಉಭಯ ತಂಡದ ಬ್ಯಾಟ್ಸ್‌ಮನ್‌ಗಳೂ ಪರದಾಡಿದರು.

ಸ್ಕೋರ್ ವಿವರ

ಶ್ರೀಲಂಕಾ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139

ಮಾಹೇಲ ಜಯವರ್ಧನೆ ಸಿ ರಾಜಾ ಹಸನ್ ಬಿ ಶಾಹೀದ್ ಅಫ್ರಿದಿ  42

ತಿಲಕರತ್ನೆ ದಿಲ್ಶಾನ್ ಎಲ್‌ಬಿಡಬ್ಲ್ಯು ಬಿ ಉಮರ್ ಗುಲ್  35

ಕುಮಾರ ಸಂಗಕ್ಕಾರ ಸಿ ಶೋಯಬ್ ಮಲಿಕ್ ಬಿ ಮೊಹಮ್ಮದ್ ಹಫೀಜ್  18

ಜೀವನ್ ಮೆಂಡಿಸ್ ಸ್ಟಂಪ್ಡ್ ಕಮ್ರನ್ ಅಕ್ಮಲ್ ಬಿ ಸಯೀದ್ ಅಜ್ಮಲ್  15
ತಿಸ್ಸಾರ ಪೆರೇರಾ ಔಟಾಗದೆ  11

ಆ್ಯಂಜೆಲೊ ಮ್ಯಾಥ್ಯೂಸ್ ಔಟಾಗದೆ  10

ಇತರೆ (ಬೈ-3, ವೈಡ್-4, ನೋಬಾಲ್-1)  08

ವಿಕೆಟ್ ಪತನ: 1-63 (ಜಯವರ್ಧನೆ; 10.2); 2-84 (ಸಂಗಕ್ಕಾರ; 12.5); 3-117 (ದಿಲ್ಶಾನ್; 17.5); 4-118 (ಜೀವನ್; 18.0)

ಬೌಲಿಂಗ್: ಸೊಹೇಲ್ ತನ್ವಿರ್ 3-0-11-0 (ವೈಡ್-1), ರಾಜಾ ಹಸನ್ 4-0-26-0, ಸಯೀದ್ ಅಜ್ಮಲ್ 4-0-33-1 (ವೈಡ್-1), ಶಾಹೀದ್ ಅಫ್ರಿದಿ 4-0-28-1, ಮೊಹಮ್ಮದ್ ಹಫೀಜ್ 2-0-12-1 (ವೈಡ್-1), ಉಮರ್ ಗುಲ್ 3-0-26-1 (ನೋಬಾಲ್-1, ವೈಡ್-1)

 ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 123

ವೊಹಮ್ಮದ್ ಹಫೀಜ್ ಸ್ಟಂಪ್ಡ್ ಕುಮಾರ ಸಂಗಕ್ಕಾರ ಬಿ ರಂಗನಾ ಹೇರತ್  42

ಇಮ್ರಾನ್ ನಜೀರ್ ಬಿ ಅಜಂತಾ ಮೆಂಡಿಸ್  20

ನಾಸೀರ್ ಜಮ್‌ಶೆದ್ ಎಲ್‌ಬಿಡಬ್ಲ್ಯು ಬಿ ಆ್ಯಂಜೆಲೊ ಮ್ಯಾಥ್ಯೂಸ್  04

ಕಮ್ರನ್ ಅಕ್ಮಲ್ ಸಿ ಮಾಹೇಲ ಜಯವರ್ಧನೆ ಬಿ ಆ್ಯಂಜೆಲೊ ಮ್ಯಾಥ್ಯೂಸ್  01

ಶೋಯಬ್ ಮಲಿಕ್ ಬಿ ರಂಗನಾ ಹೇರತ್  06

ಉಮರ್ ಅಕ್ಮಲ್ ಔಟಾಗದೆ  29

ಶಾಹೀದ್ ಅಫ್ರಿದಿ ಬಿ ರಂಗನಾ ಹೇರತ್  00

ಸೊಹೇಲ್ ತನ್ವಿರ್ ಸ್ಡಂಪ್ಡ್ ಕುಮಾರ ಸಂಗಕ್ಕಾರ ಬಿ ಅಜಂತಾ ಮೆಂಡಿಸ್  08

ಉಮರ್ ಗುಲ್ ಔಟಾಗದೆ  02

ಇತರೆ (ಲೆಗ್‌ಬೈ-2, ವೈಡ್-9)  11


ವಿಕೆಟ್ ಪತನ: 1-31 (ಇಮ್ರಾನ್; 5.6); 2-55 (ಜೆಮ್‌ಶೆದ್; 9.1); 3-57 (ಕಮ್ರನ್; 9.4); 4-64

(ಶೋಯಬ್; 10.6); 5-91 (ಹಫೀಜ್; 14.1); 6-91 (ಅಫ್ರಿದಿ; 14.2); 7-113 (ತನ್ವಿರ್; 17.4).

ಬೌಲಿಂಗ್: ಆ್ಯಂಜೆಲೊ ಮ್ಯಾಥ್ಯೂಸ್ 4-0-27-2, ನುವಾನ್ ಕುಲಶೇಖರ 3-0-15-0 (ವೈಡ್-2), ಲಸಿತ್

ಮಾಲಿಂಗ 4-0-19-0 (ವೈಡ್-3), ಅಜಂತಾ ಮೆಂಡಿಸ್ 4-0-27-2, ತಿಸ್ಸಾರ ಪೆರೇರಾ 1-0-8-0, ರಂಗನಾ ಹೇರತ್ 4-0-25-3

ಫಲಿತಾಂಶ: ಶ್ರೀಲಂಕಾ ತಂಡಕ್ಕೆ 16 ರನ್ ಜಯ ಹಾಗೂ ಫೈನಲ್ ಪ್ರವೇಶ. ಪಂದ್ಯ ಶ್ರೇಷ್ಠ: ಮಾಹೇಲ ಜಯವರ್ಧನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT