ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಎಬಿವಿಪಿ, ಎನ್‌ಎಸ್‌ಯುಐ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ
Last Updated 19 ಡಿಸೆಂಬರ್ 2013, 9:33 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ 2006 ವಿರುದ್ಧ ನಗರದಲ್ಲಿ ಬುಧವಾರ ಎನ್‌ಎಸ್‌ಯುಐ ಹಾಗೂ ಎಬಿವಿಪಿ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿವಿಧೆಡೆ ಬೃಹತ್‌ ಪ್ರತಿಭಟನೆ ನಡೆಸಿದರು.

ಎನ್‌ಎಸ್‌ಯುಐ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೆ, ಎಬಿವಿಪಿ ಕಾರ್ಯಕರ್ತರು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಸರ್ಕಾರ ಪ್ರತಿಕೃತಿ ದಹನ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಮನವಿ ಸಲ್ಲಿಸಿದರು.

ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ 2006 ಕಾಯ್ದೆ ಸಂಪೂರ್ಣ ವಿದ್ಯಾರ್ಥಿ ವಿರೋಧಿಯಾಗಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕಾಯ್ದೆಯ ಅನುಷ್ಠಾನ ಮಾಡಬಾರದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ಆದೇಶ ಮುಂದಿಟ್ಟುಕೊಂಡು ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮದಿಂದ   ಕೇವಲ ಶ್ರೀಮಂತ ವರ್ಗದವರಿಗೆ ಮಾತ್ರ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣ ಲಭ್ಯವಾಗುವಂತಾಗುತ್ತದೆ ಎಂದು ದೂರಿದರು.

ಪ್ರತಿಭಟನೆಯ ನೇತೃತ್ವವನ್ನು ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜೆ.ಮಧುಸೂದನ್‌, ಮಾಜಿ ಅಧ್ಯಕ್ಷ ದೇವೇಂದ್ರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚೇತನ್, ಪದಾಧಿಕಾರಿಗಳಾದ ಶ್ರೀಜಿತ್, ಸಂತೋಷ್, ಬಾಲಾಜಿ, ಯತೀಶ್ ವಹಿಸಿದ್ದರು.

ಎಬಿವಿಪಿ ಮುಖಂಡರು ಮಾತನಾಡಿ, ಈ ಕಾಯ್ದೆಯ ಅನುಷ್ಠಾನದಿಂದ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಿಗೆ ಅನುಕೂಲವಾಗಲಿದೆ. ಆಡಳಿತ ಮಂಡಳಿಯವರಿಗೆ ವರದಾನವಾಗಲಿದ್ದು ಬಡ, ಹಿಂದುಳಿದ ವಿದ್ಯಾರ್ಥಿಗಳಿಗೆ ಮರಣ ಶಾಸನವಾಗಿದೆ. ಈ ಕಾಯ್ದೆಯ ಅನುಷ್ಠಾನದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವ್ಯವಸ್ಥೆಯ ನಾಶವಾಗುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರ ಈ ಕಾಯ್ದೆಯ ಅನುಷ್ಠಾನ ಮಾಡಬಾರದು. ಒಂದು ವೇಳೆ ಈ ಕಾಯ್ದೆ ಜಾರಿಗೊಳಿಸಿದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಎಬಿವಿಪಿ ತಾಲ್ಲೂಕು ಸಂಚಾಲಕ ಚರಣ್‌, ನಗರ ಕಾರ್ಯದರ್ಶಿ ದರ್ಶನ್ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT