ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಕುರ್ಚಿಯಲ್ಲಿ ಮತ್ತೆ ಕೂರುವೆ: ಬಿಎಸ್‌ವೈ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಶಿಕಾರಿಪುರ: `ನಾನು ಈಗ ಸಿಎಂ ಅಲ್ಲ. ಈಗಿರುವ ಮುಖ್ಯಮಂತ್ರಿಯ ಹತ್ತಿರ ಕೈಚಾಚಿ ಬೇಡುವುದಿಲ್ಲ. ಇನ್ನು ನಾಲ್ಕೈದು ತಿಂಗಳಲ್ಲಿ ನಾನೇ ಆ ಕುರ್ಚಿಯಲ್ಲಿ ಕೂತು ನಿಮ್ಮ ಕೆಲಸಗಳನ್ನು ಮಾಡಿಕೊಡುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ತಾಲ್ಲೂಕಿನ ಚುಂಚಿನಕೊಪ್ಪ, ಹೋತನಕಟ್ಟೆ, ಮಲ್ಲಾಪುರ ಹಾಗೂ ಮುಡಬ ಸಿದ್ದಾಪುರ ಗ್ರಾಮಗಳಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

`ಚುನಾವಣೆ ಸಮಯ ನಾನು ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ಆ ಸಂದರ್ಭದಲ್ಲಿ ಎಲ್ಲ ಸಮುದಾಯದ ಮುಖಂಡರು ಪೂರ್ಣ ಜವಾಬ್ದಾರಿ ತೆಗೆದುಕೊಂಡು ಚುನಾವಣೆಯಲ್ಲಿ ನನ್ನ ಪರವಾಗಿ ಓಡಾಡಬೇಕು. ಒಂದೂ ಓಟು ಬೇರೆ ಕಡೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಕೋರಿದರು.

ನವೆಂಬರ್‌ನಲ್ಲಿ ಸುಮಾರು 25 ಸಾವಿರ ಮಹಿಳೆಯರಿಗೆ ಬಾಗಿನ ಕೊಡುವ ಕಾರ್ಯಕ್ರಮ ಆಯೋಜಿಸಿದ್ದು, ಆ ಸಮಾವೇಶಕ್ಕೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಯಡಿಯೂರಪ್ಪ ಆಹ್ವಾನ ನೀಡಿದರು.

ಕಾದು ನೋಡುವ: ಈಶ್ವರಪ್ಪ
ಕೊಪ್ಪಳ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ಇದೆ. ಅವರು ನಮ್ಮ ನಾಯಕರು. ಅವರು ಪಕ್ಷವನ್ನು `ಬ್ಲ್ಯಾಕ್‌ಮೇಲ್~ ಮಾಡುತ್ತಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶುಕ್ರವಾರ ಹೇಳಿದರು.

ಅವರು ತಾಲ್ಲೂಕಿನ ಹುಲಿಗಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.
ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರಿಗೆ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರೂ ತಿದ್ದಿಕೊಳ್ಳದಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಪಕ್ಷದ ಮುಖಂಡ ವಿ.ಧನಂಜಯ ಕುಮಾರ್ ಅವರನ್ನು ಉಚ್ಚಾಟನೆ ಮಾಡಿರುವುದೇ ಸಾಕ್ಷಿ ಎಂದು ಹೇಳಿದರು.

`ಬಿಜೆಪಿಯಲ್ಲೇ ಇರಬೇಕು~
ಗುಲ್ಬರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಯಲ್ಲೇ ಬೆಳೆದವರು. ಹೀಗಾಗಿ ಈ ಪಕ್ಷದಲ್ಲಿ ಅವರು ಇರಬೇಕು ಎಂದು ಕಾನೂನು ಹಾಗೂ ನಗರಾಭಿವೃದ್ಧಿ ಸಚಿವ ಸುರೇಶಕುಮಾರ ಶುಕ್ರವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಆರೋಪ ಕೇಳಿಬಂದ ಕಾಲದಿಂದಲೂ ಸರ್ಕಾರದಲ್ಲಿರುವ ಪ್ರತಿಯೊಬ್ಬ ಮಂತ್ರಿ ಹಾಗೂ ಶಾಸಕರು ಅವರ ವಿಚಾರಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ.

ಅವರಿಗೆ ಅಸಮಾಧಾನವಿದೆ ಎನ್ನುವುದು ನಿಜ. ಪಕ್ಷದ ಅಧ್ಯಕ್ಷ ಹುದ್ದೆ ಸಿಗಲಿಲ್ಲ ಎಂದ ಮಾತ್ರಕ್ಕೆ ಪಕ್ಷ ತೊರೆಯುವುದು ಸರಿಯಲ್ಲ.  ರಾಜ್ಯ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಯಾವುದೇ ಪ್ರಾದೇಶಿಕ ಪಕ್ಷವೂ ಗಟ್ಟಿಯಾಗಿ ಉಳಿದುಕೊಂಡಿಲ್ಲ. ಹೊಸದಾಗಿ ಪಕ್ಷ ಕಟ್ಟುವವರ ಬಗ್ಗೆ ನಾನೇನು ಹೇಳಲಾರೆ ಎಂದರು.

`ಶೋಭಾ ಕೂಡ ಹೋಗಲ್ಲ~
ಕೊಪ್ಪಳ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದರೆ ಅವರೊಂದಿಗೆ ಯಾವ ಶಾಸಕರೂ  ಹೋಗುವುದಿಲ್ಲ. ಇಂಧನ ಸಚಿವ ಶೋಭಾ ಕರಂದ್ಲಾಜೆ ಸಹ ಹೋಗುವುದಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಅವರು ತಾಲ್ಲೂಕಿನ ಹುಲಿಗಿ ಗ್ರಾಮದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT