ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸ್ವಕ್ಷೇತ್ರದಲ್ಲೇ ನಾಂದಿ ಹಾಡಿ: ಎಚ್.ಡಿ. ಕುಮಾರಸ್ವಾಮಿ ಸಲಹೆ.ಮುಖ್ಯಮಂತ್ರಿಯನ್ನು ಜನರೇ ಕಿತ್ತೊಗೆಯಲಿ

Last Updated 20 ಫೆಬ್ರುವರಿ 2011, 10:35 IST
ಅಕ್ಷರ ಗಾತ್ರ

ಶಿವಮೊಗ್ಗ: ಜನನಾಯಕರಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಳನಾಯಕರಾಗಿ ಬದಲಾದ ಹಿನ್ನೆಲೆಯಲ್ಲಿ ಜನರೇ ಅವರನ್ನು ಕಿತ್ತೊಗೆಯಬೇಕು. ಅದಕ್ಕೆ ಮುಖ್ಯಮಂತ್ರಿ ಸ್ವಕ್ಷೇತ್ರದಲ್ಲೇ ನಾಂದಿ ಹಾಡಬೇಕು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಶಿಕಾರಿಪುರದ ನರಸಪ್ಪ ಸ್ಮಾರಕ ಬಯಲು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಸಾರ್ವಜನಿಕ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕಾರಿಪುರಕ್ಕೆ ಅಳಿಯನಾಗಿ ಬಂದ ಯಡಿಯೂರಪ್ಪ ಅವರನ್ನು ಇಲ್ಲಿನ ಜನ ಉದಾರತೆಯಿಂದ ರಾಜಕೀಯವಾಗಿ ಈ ಎತ್ತರಕ್ಕೆ ತಂದಿದ್ದಾರೆ. ಆದರೆ, ಅದಕ್ಕೆ ಪ್ರತಿಫಲವಾಗಿ ಯಡಿಯೂರಪ್ಪ, ಬಡವರನ್ನು ಅಕ್ಷರಶಃ ಬೀದಿಗೆ ತಂದಿದ್ದಾರೆ. ಆದ್ದರಿಂದ, ಕೆಟ್ಟ ವ್ಯವಸ್ಥೆಯ ನಿರ್ಮೂಲನೆಗೆ ಜನ ಪಣತೊಡಬೇಕು ಎಂದು ಹೇಳಿದರು. ಇಷ್ಟೆಲ್ಲಾ ಅಕ್ರಮಗಳು ಬಹಿರಂಗಗೊಂಡ ನಂತರವೂ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಸುಮಾರು 200ಎಕರೆ ಜಮೀನು ನೋಂದಣಿ ಮಾಡಿಸಿದ್ದಾರೆ. ಹಗರಣಗಳ ಸಮಗ್ರ ತನಿಖೆ ಆರಂಭಿಸಿದರೆ ಒಂದು ಇಂಚು ಭೂಮಿ ನಿಮಗೆ ಹಿಂದಕ್ಕೆ ಸಿಗುವುದಿಲ್ಲ ಎಂದು ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದರು.

‘ನನ್ನ ಅಧಿಕಾರಾವಧಿಯಲ್ಲಿ ಡಿನೋಟಿಫಿಕೇಷನ್ ಮಾಡಿದ್ದು ಸಂಬಂಧಿಕರಿಗಾಗಿ ಅಲ್ಲ; ಬಡವರಿಗೆ ನೀಡಲು. ಅಷ್ಟಕ್ಕೂ ಯಡಿಯೂರಪ್ಪ ಅವರ ಒತ್ತಾಯದ ಮೇರೆಗೆ ಮೊದಲ ನಿವೇಶನವನ್ನು ಸಂಸದ ಡಿ.ವಿ. ಸದಾನಂದಗೌಡರಿಗೆ ನೀಡಿದ್ದೆ’ ಎಂದು ಸೂಚ್ಯವಾಗಿ ಚುಚ್ಚಿದ ಅವರು, ಹಗರಣಗಳಲ್ಲಿ ಹುದುಗಿರುವ ಮುಖ್ಯಮಂತ್ರಿಗಳು ಜಾತಿ ಮತ್ತು ಅಧಿಕಾರದ ಹೆಸರಿನಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡಿದ್ದಾರೆ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮಾತನಾಡಿ, ಸೋಲಿಸಿ ನಮಗೆ ರೂಢಿ ಇದೆ. ಆದ್ದರಿಂದ, ಭ್ರಷ್ಟ ಮುಖ್ಯಮಂತ್ರಿಯನ್ನು ಮತ್ತೊಮ್ಮೆ ಸೋಲಿಸುವ ತುರ್ತಿದೆ. ಇದಕ್ಕೆ ಜನ ಸನ್ನದ್ಧರಾಗಬೇಕು ಎಂದರು. ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಶಕೀಲ್ ಅಹಮದ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ಶಾರದಾ ಪೂರ್ಯನಾಯ್ಕ ಮಾತನಾಡಿದರು.

ಎಂ.ಬಿ. ಶಿವಣ್ಣ, ಎಂ. ಸಮೀವುಲ್ಲಾ, ಗಾಜನೂರು ಗಣೇಶ್, ಪವಿತ್ರಾ ರಾಮಯ್ಯ, ರಾಜಮ್ಮ, ಆಯನೂರು ಶಿವಾನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.
ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು.

ವಾಮಾಚಾರ: ನಾಳೆ ಮಾಹಿತಿ ಬಹಿರಂಗ
ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ನಡೆಸಿದ ವಾಮಾಚಾರದ ಬಗ್ಗೆ ಫೆ. 21ರಂದು ಮಾಹಿತಿ ಬಹಿರಂಗಪಡಿಸಲಾಗುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಶಿಕಾರಿಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ವಾಮಾಚಾರ ನಡೆದಿದೆ. ಆರೋಪಿಗಳನ್ನು ಹಿಡಿದುಕೊಟ್ಟರೂ ದೂರು ಸ್ವೀಕರಿಸಿಲ್ಲ. ಜೆಎಂಎಫ್‌ಸಿ ನ್ಯಾಯಾಧೀಶರ ಮುಂದೆಯೂ ಆರೋಪಿಗಳನ್ನು ಹಾಜರುಪಡಿಸದೆ, ತಹಶೀಲ್ದಾರ್ ಎದುರು ಜಾಮೀನು ನೀಡಿ, ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು. ಈ ವಾಮಾಚಾರ ಮುಖ್ಯಮಂತ್ರಿ ಪರವಾಗಿತ್ತೋ ಅಥವಾ ವಿರುದ್ಧವಾಗಿತ್ತೋ ಎಂಬ ಬಗ್ಗೆ ಅಂದು ಬೆಂಗಳೂರಿನಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT