ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಿಕ್ಕಾಪಟ್ಟೆ' ಹಾಡು

Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

`ಸಿಕ್ಕಾಪಟ್ಟೆ ಇಷ್ಟಪಟ್ಟೆ' ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ ಅದು. ಶ್ರವಂತ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರದಲ್ಲಿ ಬರೋಬ್ಬರಿ ಆರು ನಾಯಕಿಯರು. ನಮಿತಾ, ಕಿರಣ್ ರಾಥೋಡ್, ಮೇಘನಾ ನಾಯ್ಡು, ಕೀರ್ತಿ ಚಾವ್ಲಾ, ಶಿವಾನಿ ಹಾಗೂ ಆರತಿ ರಾವ್. ಇವರಲ್ಲಿ ಭಾರತೀಯ ಚಿತ್ರರಂಗದಲ್ಲಿ ಅಷ್ಟಿಷ್ಟು ಹೆಸರು ಮಾಡಿದ ನಟಿಯರೂ ಇದ್ದಾರೆ.

ಆದರೆ ಸಮಾರಂಭದಲ್ಲಿ ಎಲ್ಲ ನಾಯಕಿಯರೂ ಹಾಜರಿರಲಿಲ್ಲ. ಇದ್ದದ್ದು ಆರತಿ ಮಾತ್ರ. ಅವರಿಗೆ ಇದು ಮೊದಲನೇ ಚಿತ್ರ. ಹೊಸಬಳಾದ ತಮಗೆ ಚಿತ್ರ ಹೆಸರು ತಂದುಕೊಡಲಿದೆ ಎಂದು ಆರತಿ ಆಶಿಸಿದರು. ತಮಿಳು ಮೂಲದ ನಿರ್ದೇಶಕ ಹರಿರಾಜನ್ ಅಭಿನಯಕ್ಕೆ ನೀಡಿದ ಪ್ರೋತ್ಸಾಹವನ್ನೂ ಈ ಸಂದರ್ಭದಲ್ಲಿ ನೆನೆದರು.

ನೃತ್ಯದಲ್ಲಿ ನಟಿ ನಮಿತಾ ಜತೆ ಹೆಜ್ಜೆ ಹಾಕಿದ ಖುಷಿಯಲ್ಲಿದ್ದರು ಶ್ರವಂತ್. `ಅಟ್ಟಹಾಸ'ದಲ್ಲಿ ಪೊಲೀಸ್ ಅಧಿಕಾರಿಯಾಗಿ, `ಪರಾರಿ'ಯಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಅವರಿಗೆ ಇದೊಂದು ಮಹತ್ವದ ಚಿತ್ರವಾಗಿ ಕಂಡಿದೆ. ಆದರೂ ಕತೆಯೇ ನಾಯಕ ಎನ್ನುವುದನ್ನು ಅವರು ಮರೆಯಲಿಲ್ಲ. ಸಿನಿಮಾದೊಳಗೊಂದು ಸಿನಿಮಾ ಕತೆ ಹೊಂದಿರುವ `ಸಿಕ್ಕಾಪಟ್ಟೆ...'ಯಲ್ಲಿ ಮೇಕಪ್ ಹುಡುಗನ ಪಾತ್ರ ಅವರಿಗೆ. ಅವರ ಅಭಿನಯ ಚಾತುರ್ಯವನ್ನು ತೋರಲು ಚಿತ್ರ ಸಾಕಷ್ಟು ಅವಕಾಶ ನೀಡಿದೆಯಂತೆ.

ಚಿತ್ರದ ಛಾಯಾಗ್ರಾಹಕ ಜೆ.ಜಿ. ಕೃಷ್ಣ. `ಸಿಕ್ಕಾಪಟ್ಟೆ' ನಿರ್ಮಾಣಕ್ಕೆ ಸುದೀರ್ಘ ಒಂದೂವರೆ ವರ್ಷಗಳ ಕಾಲ ಏಕೆ ಹಿಡಿಯಿತು ಎಂಬುದನ್ನು ಅವರು ಬಿಡಿಸಿಟ್ಟರು. ಆರು ಮಂದಿ ನಾಯಕಿಯರನ್ನು ಹಾಕಿಕೊಂಡದ್ದೇ ವಿಳಂಬಕ್ಕೆ ಕಾರಣವಂತೆ.

ಕನ್ನಡ ಚಿತ್ರರಂಗದ ದುಃಸ್ಥಿತಿಯನ್ನು ವಿವರಿಸಿದ್ದು ವಿತರಕ ಗಂಗರಾಜು ಹಾಗೂ ನಿರ್ಮಾಪಕ ಸಾ.ರಾ. ಗೋವಿಂದು. ಪರಭಾಷೆ ಚಿತ್ರಗಳಿಗೆ ಕಡಿವಾಣ ಹಾಕಲು ಕನ್ನಡ ಚಿತ್ರರಂಗದವರೇ ಒಪ್ಪದ ಸ್ಥಿತಿ ಇದೆ. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ನ್ಯಾಯ ದೊರೆತರೆ ಕನ್ನಡ ಚಿತ್ರರಂಗಕ್ಕೆ ಒಳಿತಾಗಲಿದೆ ಎಂಬುದು ಗೋವಿಂದು ಅವರ ಮಾತಿನ ಹೂರಣವಾಗಿತ್ತು.

ಮತ್ತೊಬ್ಬ ನಟ ಮನೀಷ್, ನಿರ್ದೇಶಕ ಹರಿರಾಜನ್, ನಿರ್ಮಾಪಕ ಮನೋಹರನ್, ಚಿತ್ರೋದ್ಯಮಿ ಉಮೇಶ್ ಬಣಕಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT