ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ಬೋನಿಗೆ ಬಿದ್ದ ಜನಾರ್ದನ ಜೈಲಿಗೆ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಸಿಬಿಐನಿಂದ ಬಂಧಿತರಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯವು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಗಣಿ ಧಣಿ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಮನೆ ಮೇಲೆ ಸೋಮವಾರ ಬೆಳಿಗ್ಗೆ ದಾಳಿ ಮಾಡಿ ಶೋಧ ನಡೆಸಿದ ಸಿಬಿಐ ತಂಡ ಅವರನ್ನು ಮತ್ತು ಶ್ರೀನಿವಾಸ ರೆಡ್ಡಿಯನ್ನು ಬಂಧಿಸಿ ಹೈದರಾಬಾದ್‌ಗೆ ಕರೆದೊಯ್ಯಿತು. ನಂತರ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅವರಿಬ್ಬರನ್ನು ಹಾಜರು ಪಡಿಸಲಾಯಿತು.

ಈ ಪ್ರಕರಣದ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಳ್ಳುವುದಾಗಿ ಹೇಳಿದ ನ್ಯಾಯಾಲಯವು, ಆರೋಪಿಗಳು ತಮ್ಮ ಅರ್ಜಿಯನ್ನು ಅದೇ ದಿನ ಸಲ್ಲಿಸಲು ಅನುಮತಿ ನೀಡಿತು. ನಂತರ ಇಬ್ಬರು ಆರೋಪಿಗಳನ್ನು ಹೆಚ್ಚಿನ ಭದ್ರತೆ ಇರುವ ಚಂಚಲ್‌ಗುಡ ಜೈಲಿಗೆ ರವಾನಿಸಲಾಯಿತು.

ತಮ್ಮ ಕಕ್ಷಿದಾರರು ಜವಾಬ್ದಾರಿಯುತ ಗಣ್ಯ ವ್ಯಕ್ತಿ, ಕರ್ನಾಟಕದ ಮಾಜಿ ಸಚಿವರು. ಆದ್ದರಿಂದ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು  ರೆಡ್ಡಿ ಪರ ವಕೀಲರು ಕೋರಿದರು.

ಬೇಕಿದ್ದರೆ ತಮ್ಮ ಕಕ್ಷಿದಾರರ ಪಾಸ್‌ಪೋರ್ಟ್ ವಶ ಪಡಿಸಿಕೊಳ್ಳಿ, ಅವರು ತನಿಖೆಗೆ ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ. ಅವರಿಗೆ ಹೈದರಾಬಾದ್‌ನಲ್ಲೂ ಮನೆ ಇರುವುದರಿಂದ ತನಿಖೆಗೆ ಸಹಕಾರ ನೀಡುತ್ತಾರೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.

ಆದರೆ ಇದನ್ನು ವಿರೋಧಿಸಿದ ಸಿಬಿಐ, ಆರೋಪಿಗಳು ಅತ್ಯಂತ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ತನಿಖೆಗೆ ಖಂಡಿತವಾಗಿಯು ಅಡ್ಡಿ ಉಂಟು ಮಾಡುತ್ತಾರೆ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು. ಎರಡು ವಾರಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಕೋರಿ, ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಿತು. ಕಟಕಟೆಯಲ್ಲಿ ನಿಂತಿದ್ದ ಜನಾರ್ದನ ರೆಡ್ಡಿ, ಈ ಕಲಾಪವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಕ್ಕೂ ಮೊದಲು ಅವರಿಬ್ಬರನ್ನು ಸುಲ್ತಾನ್ ಬಜಾರ್ ಪ್ರದೇಶದಲ್ಲಿರುವ ಸಿಬಿಐ ಕಚೇರಿಯಲ್ಲಿ ಮೂರು ಗಂಟೆಗಳ ಕಾಲ ಇರಿಸಲಾಗಿತ್ತು. ಅಲ್ಲೇ ಅವರಿಗೆ ಊಟ ಸಹ ನೀಡಲಾಯಿತು. ನಂತರ ಅವರನ್ನು ಕಡ್ಡಾಯವಾಗಿದ್ದ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.  ಉಸ್ಮಾನಿಯಾ ಆಸ್ಪತ್ರೆ ವೈದ್ಯರ ತಂಡವು ತಪಾಸಣೆ ನಡೆಸಿ ಇಬ್ಬರು ಆರೋಗ್ಯದಿಂದ ಇದ್ದಾರೆ ಎಂದು ದೃಢೀಕರಿಸಿತು.

 

30 ಕೆಜಿ ಚಿನ್ನ, ರೂ 4.5 ಕೋಟಿ ನಗದು ವಶ
ಜನಾರ್ದನ ರೆಡ್ಡಿ ಮನೆಯಿಂದ  ಮೂರು ಕೋಟಿ ರೂಪಾಯಿ ಹಣ, 30ಕೆ.ಜಿ ಚಿನ್ನ, ಮಹತ್ವದ ದಾಖಲೆ ವಶಪಡಿಸಿಕೊಳ್ಳಲಾಗಿದೆ.

ಶ್ರೀನಿವಾಸರೆಡ್ಡಿ ಮನೆಯಿಂದ 1.5 ಕೋಟಿ ನಗದು, ಮಹತ್ವದ ದಾಖಲೆ ಜಪ್ತು ಮಾಡಲಾಗಿದೆ. ರೆಡ್ಡಿಗೆ ಸೇರಿದ ಹೆಲಿಕಾಪ್ಟರ್‌ಗಳನ್ನು ವಶಪಡಿಸಿಕೊಂಡಿಲ್ಲ ಎಂದೂ ಸಿಬಿಐ ತಿಳಿಸಿದೆ. 1530 ದಾಖಲೆಗಳು, 112 ಅದಿರು ಸ್ಯಾಂಪಲ್‌ಗಳು ವಶಪಡಿಸಿಕೊಂಡ ವಸ್ತುಗಳಲ್ಲಿ ಸೇರಿವೆ. 85 ಮಂದಿ ಶಂಕಿತರು/ಸಾಕ್ಷಿಗಳನ್ನು ಪ್ರಶ್ನಿಸಲಾಗಿದೆ. 
ಲೋಕಾಯುಕ್ತ ವರದಿ ಪರಿಗಣನೆ?
ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಈ ಸಂಬಂಧದ ಕರ್ನಾಟಕ ಲೋಕಾಯುಕ್ತರ ವರದಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಅಕ್ರಮ ಗಣಿಗಾರಿಕೆ ಕುರಿತು ಸಮಗ್ರ ವಿವರಗಳನ್ನು ಒಳಗೊಂಡಿರುವ ಲೋಕಾಯುಕ್ತರ ವರದಿಯನ್ನು ಅಧ್ಯಯನ ಮಾಡಲು ಸಿಬಿಐಗೆ ಯಾವುದೇ ಅಡ್ಡಿ ಇಲ್ಲ. ಆದರೆ, ಅದನ್ನೇ ಪುರಾವೆಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಸ್ವತಂತ್ರ ತನಿಖಾ ಸಂಸ್ಥೆ ಆಗಿರುವ ಸಿಬಿಐ ಖುದ್ದು ತನಿಖೆ ನಡೆಸಿ ಬಲವಾದ ಸಾಕಿ ಪುರಾವೆಗಳನ್ನು ಕಲೆ ಹಾಕಬೇಕು ಎಂದು ಮೂಲಗಳು ವಿವರಿಸಿವೆ.

`ಸತ್ಯ ಮೇವ ಜಯತೇ~: ಸಿಬಿಐ ಕಚೇರಿಯಿಂದ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಇದ್ದ ಕಾರಿಗೆ ವಿದ್ಯುನ್ಮಾನ ಮಾಧ್ಯಮದವರು ಮೈಕ್ ತೂರಿಸಿ ಪ್ರಶ್ನಿಸಿದರು. ಇದಕ್ಕೆ  ಪ್ರತಿಕ್ರಿಯಿಸಿದ  ಅವರು, `ಸತ್ಯ ಯಾವತ್ತಿದ್ದರೂ ಬಹಿರಂಗವಾಗುತ್ತದೆ. ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಜಯ ದಕ್ಕುತ್ತದೆ~ ಎಂದರು. ಅಷ್ಟರಲ್ಲಿ ಸಿಬಿಐ ಅಧಿಕಾರಿಗಳು ಮೈಕ್ ಕಿತ್ತುಕೊಂಡರು.

`ಆರೋಪಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದನ್ನು ಪುರಾವೆಗಳಿಂದ ಖಾತರಿ ಪಡಿಸಿಕೊಂಡೇ ನಾವು ಅವರನ್ನು ಬಂಧಿಸಿದ್ದೇವೆ~ ಎಂದು ಸಿಬಿಐ ಜಂಟಿ ನಿರ್ದೇಶಕ ಲಕ್ಷ್ಮಿನಾರಾಯಣ ಸುದ್ದಿಗಾರರಿಗೆ ಹೇಳಿದರು.

ರೆಡ್ಡಿ ಅವರ ಅಕ್ರಮ ವ್ಯವಹಾರಕ್ಕೆ ಸಹಕಾರ ನೀಡಿದ ಕೆಲವು ಸರ್ಕಾರಿ ಅಧಿಕಾರಿಗಳನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ಬಂಧಿಸಬಹುದು ಎಂದು ಸಿಬಿಐ ಮೂಲಗಳು ಸುಳಿವು ನೀಡಿವೆ.

ದಾಳಿ ಭೀತಿ- ಮಾರ್ಗ ಬದಲಾವಣೆ: ಭಾನುವಾರ ಮಧ್ಯರಾತ್ರಿಯ ಹೊತ್ತಿಗೆ ಬಳ್ಳಾರಿಗೆ ತೆರಳಿದ್ದ ಸಿಬಿಐ ತಂಡ, ಆರೋಪಿಗಳನ್ನು ಬಂಧಿಸಿ ಗುಂತಕಲ್- ಕರ್ನೂಲ್ ಮಾರ್ಗವಾಗಿ ವಾಪಸು ಹೈದರಾಬಾದ್‌ಗೆ ಆಗಮಿಸಿತು. ಆರೋಪಿಗಳಿಗೆ ಗುಂತಕಲ್‌ನಲ್ಲೇ ಉಪಾಹಾರ ನೀಡಲಾಯಿತು.

ಮಾರ್ಗ ಮಧ್ಯೆ ಗಣಿ ಮಾಫಿಯಾದ ಪುಂಡರು ದಾಳಿ ನಡೆಸಬಹುದೆಂಬ ಹಿನ್ನೆಲೆಯಲ್ಲಿ ಅಲ್ಲಲ್ಲಿ ಮಾರ್ಗ ಬದಲಾವಣೆ ಮಾಡಿ ಕರ್ನೂಲ್‌ಗೆ ಆರೋಪಿಗಳನ್ನು ಸುರಕ್ಷಿತವಾಗಿ ಕರೆತರಲಾಯಿತು. ನಂತರ ಎರಡು ವಾಹನಗಳನ್ನು ಬೇರೆ ಬೇರೆ ದಾರಿಯಲ್ಲಿ ಪೂರ್ವಭಾವಿಯಾಗಿ ಸಂಚರಿಸಿ ಯಾವುದೇ ಅಡ್ಡಿ ಆತಂಕಗಳು ಇಲ್ಲ ಎಂದು ಖಾತರಿ ಮಾಡಿಕೊಂಡ ಮೇಲೆ ಹೈದರಾಬಾದ್ ಕಡೆಗೆ ಪ್ರಯಣ ಮುಂದುವರಿಸಲಾಯಿತು.

ಸೋಮಶೇಖರ ರೆಡ್ಡಿ ದೌಡು: ಈ ಮಧ್ಯೆ ರಾಯದುರ್ಗ ಶಾಸಕ ರಾಮಚಂದ್ರ ರೆಡ್ಡಿ, ಬಳ್ಳಾರಿ ಶಾಸಕರೂ ಆದ ಜನಾರ್ದನ ರೆಡ್ಡಿ ಅವರ ಸೋದರ ಸೋಮಶೇಖರ ರೆಡ್ಡಿ ಮತ್ತು ಬ್ರಹ್ಮಣಿ ಉಕ್ಕು ಕಂಪೆನಿಯ ಕೆಲವು ಅಧಿಕಾರಿಗಳು ನಾಂಪಲ್ಲಿ ನ್ಯಾಯಾಲಯಕ್ಕೆ ಆಗಮಿಸಿ ಜನಾರ್ದನ ರೆಡ್ಡಿ ಮತ್ತು ವಕೀಲ  ಕೆ. ರಾಘವಾಚಾರಿ ಮತ್ತವರ ತಂಡದವರೊಂದಿಗೆ ಅನೇಕ ಸುತ್ತು ಮಾತುಕತೆ ನಡೆಸಿದರು. ಸಂಜೆ 4.40ರ ಹೊತ್ತಿಗೆ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಆ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮಗಳ ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು.

ಪ್ರಕರಣ ದಾಖಲಾದ ಕಲಂಗಳು
ಜಿ. ಜನಾರ್ದನ ರೆಡ್ಡಿ ಮತ್ತು ಬಿ.ವಿ. ಶ್ರೀನಿವಾಸ ರೆಡ್ಡಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ, ಗಣಿ ಭೂಮಿ ಒತ್ತುವರಿ, ವಂಚನೆ, ಖನಿಜ ಸಂಪತ್ತು ಕಳವು, ಅತಿಕ್ರಮ ಪ್ರವೇಶ ಕಲಂಗಳ ಅಡಿಯಲ್ಲಿ ಹಾಗೂ ಗಣಿ,  ಖನಿಜ ಸಂಪತ್ತು ಅಭಿವೃದ್ಧಿ ಮತ್ತು ನಿಯಂತ್ರಣ, ಅರಣ್ಯ ಸಂರಕ್ಷಣಾ  ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.

(ಐಪಿಸಿ 120-ಬಿ ಆರ್/ಡಬ್ಲ್ಯು 420, 379, 411, 447 ಕಲಂ, ಅರಣ್ಯ ಸಂರಕ್ಷಣಾ ಕಾಯ್ದೆ 26ನೇ ಕಲಂ,  ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ 21 ಆರ್/ಡಬ್ಲ್ಯು 4(1)(ಎ), 23ಕಲಂ, 1957 ಪಿಡಿ ಕಾಯ್ದೆಯ 13(2) ಆರ್/ಡಬ್ಲ್ಯು 13(1)(ಡಿ)ಕಲಂ)

ಜೊತೆಗೆ  ನಂಬಿಕೆ ದ್ರೋಹ (409), ಫೋರ್ಜರಿ ಮತ್ತು ವಂಚನೆ (468) ಕಲಂ ಅಡಿಯಲ್ಲಿ ಕೂಡ ನೋಟಿಸ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT