ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆ-ಒಡವೆ ಎಲ್ಲ ನನ್ನದಲ್ಲ:ಜಯಾ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎನ್ನುವ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಇಲ್ಲಿನ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ನ್ಯಾಯಾಲಯ ನವೆಂಬರ್ 8ಕ್ಕೆ ಮುಂದೂಡಿದೆ.

ಅಂದು ನಡೆಯಲಿರುವ ವಿಚಾರಣೆಯ ವೇಳೆ ಜಯಲಲಿತಾ ಅವರು ಖುದ್ದು ಹಾಜರಿರಬೇಕು ಎಂದೂ ನ್ಯಾಯಾಲಯ ಸೂಚಿಸಿದೆ. ಆದರೆ, ಪ್ರಕರಣದ ವಿಚಾರಣೆಯನ್ನು ನ. 8ಕ್ಕೆ ಮುಂದೂಡಿರುವ ವಿಶೇಷ ನ್ಯಾಯಾಲಯದ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಜಯಲಲಿತಾ ಪರ ವಕೀಲರು ಹೇಳಿದ್ದಾರೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಂ. ಮಲ್ಲಿಕಾರ್ಜುನಯ್ಯ ಅವರು ಜಯಲಲಿತಾ ಅವರಿಗೆ ಶುಕ್ರವಾರ ಒಟ್ಟು 191 ಪ್ರಶ್ನೆಗಳನ್ನು ಕೇಳಿದರು. ಇದರಿಂದಾಗಿ ಎರಡು ದಿನ ಸತತವಾಗಿ ನಡೆದ ವಿಚಾರಣೆಯ ಸಂದರ್ಭ ಜಯಲಲಿತಾ ಒಟ್ಟು 570 ಪ್ರಶ್ನೆಗಳನ್ನು ಎದುರಿಸಿದಂತಾಗಿದೆ. ಇನ್ನೂ 769 ಪ್ರಶ್ನೆಗಳು ಬಾಕಿ ಇವೆ ಎಂದು ರಾಜ್ಯದ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಅವರು ವಿಚಾರಣೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. `ವಿಚಾರಣೆಯನ್ನು ನಾಳೆಯೇ (ಶನಿವಾರ) ನಡೆಸುವ ಇರಾದೆ ವಿಶೇಷ ನ್ಯಾಯಾಲಯಕ್ಕೆ ಇತ್ತು.

ಆದರೆ ನವದೆಹಲಿಯಲ್ಲಿ ಶನಿವಾರ ನಡೆಯಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಜಯಲಲಿತಾ ಅವರು ಭಾಗವಹಿಸಬೇಕಿರುವ ಹಿನ್ನೆಲೆಯಲ್ಲಿ ನ. 4ರಂದು ವಿಚಾರಣೆ ನಡೆಸಲು ನ್ಯಾಯಾಲಯ ಒಲವು ತೋರಿತು.

ಅಂದೂ ಜಯಲಲಿತಾ ವಿಶೇಷ ಸಭೆಯಲ್ಲಿ ಭಾಗವಹಿಸಬೇಕಿರುವ ಕಾರಣ ನ. 8ರಂದು ವಿಚಾರಣೆ ಮುಂದುವರಿಸುವುದಾಗಿ ನ್ಯಾಯಾಲಯ ಹೇಳಿದೆ~ ಎಂದು ಆಚಾರ್ಯ ತಿಳಿಸಿದರು.

`ಅವು ನನ್ನದಲ್ಲ~: 2008ರ ಆಗಸ್ಟ್‌ನಲ್ಲಿ ಜಯಲಲಿತಾ ಅವರ ನಿವಾಸದಲ್ಲಿ ವಶಪಡಿಸಿಕೊಳ್ಳಲಾದ ಸಾವಿರಾರು ಸೀರೆಗಳು, ಬಂಗಾರದ ಒಡವೆಗಳು ಮತ್ತು ಬೆಳ್ಳಿಯ ಸಾಮಗ್ರಿಗಳ ಕುರಿತೂ ನ್ಯಾಯಾಲಯ ಪ್ರಶ್ನೆ ಮಾಡಿತು. `ಎಲ್ಲ ಸೀರೆಗಳು ಮತ್ತು ಚಪ್ಪಲಿಗಳು ನನ್ನದಲ್ಲ. ಬಂಗಾರದ ಒಡವೆಗಳು ನನ್ನದಾದರೂ ಅವುಗಳನ್ನು ನಾನು ಮುಖ್ಯಮಂತ್ರಿ ಆಗುವ ಮೊದಲೇ ಸಂಪಾದಿಸಿದ್ದೆ. ಹಳೆಯ ಒಡವೆಗಳ ಬಂಗಾರವನ್ನೇ ಬಳಸಿ ಹೊಸ ಒಡವೆಗಳನ್ನೂ ಮಾಡಿಸಿಕೊಂಡಿದ್ದೆ~ ಎಂದು ಜಯಲಲಿತಾ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ಆಚಾರ್ಯ ಮಾಹಿತಿ ನೀಡಿದರು.

`ಪೊಲೀಸರು ದಾಳಿಯ ವೇಳೆ ಕೆಲವು ಬೆಳ್ಳಿಯ ಸಾಮಗ್ರಿಗಳನ್ನು ತಂದಿಟ್ಟು ಅವು ನನ್ನದೆಂದು ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ನಾನು ಕೇವಲ ಒಂದು ರೂಪಾಯಿ ಸಂಬಳ ಪಡೆಯುತ್ತಿದ್ದದ್ದು ನಿಜ. ಶಶಿಕಲಾ, ಸುಧಾಕರನ್ ಮತ್ತು ಇಳವರಸಿ ಅವರ ಮಾಲೀಕತ್ವದ ಕಂಪೆನಿಗಳಲ್ಲಿ ನಾನು ಪಾಲುದಾರ ಮಾತ್ರ ಆಗಿದ್ದೆ~ ಎಂದೂ ಅವರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರು ಎಂದು ಆಚಾರ್ಯ ತಿಳಿಸಿದರು.

ನ. 8ರಂದು ನಡೆಯಲಿರುವ ವಿಚಾರಣೆಯ ವೇಳೆ ಜಯಲಲಿತಾ ಅವರು ಹಾಜರಿರುವುದು ಕಡ್ಡಾಯ. ಒಂದು ವೇಳೆ ಅವರು ಖುದ್ದು ಹಾಜರಾತಿಯಿಂದ ತಪ್ಪಿಸಿಕೊಂಡರೆ ನ್ಯಾಯಾಲಯ ಅವರ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಬಹುದು. ಆದರೆ ಪರಿಸ್ಥಿತಿ ಆ ಹಂತ ತಲುಪುವುದಿಲ್ಲ ಎಂದು ಆಚಾರ್ಯ ಹೇಳಿದರು.

`ಸುಪ್ರೀಂ ಕೋರ್ಟ್‌ಗೆ ಅರ್ಜಿ~: ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯಂತೆ ವಿಶೇಷ ನ್ಯಾಯಾಲಯ ಜಯಲಲಿತಾ ಅವರ ವಿಚಾರಣೆಯನ್ನು ಎರಡು ದಿನಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ನ್ಯಾಯಾಲಯ ನ. 8ರಂದು ನಡೆಯಲಿರುವ ವಿಚಾರಣೆಗೆ ಜಯಲಲಿತಾ ಅವರು ಖುದ್ದು ಹಾಜರಿರಬೇಕು ಎಂದು ಸೂಚಿಸಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಜಯಲಲಿತಾ ಪರ ವಕೀಲ ಬಿ. ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ದೀಪಾವಳಿ ಹಬ್ಬದ ಪ್ರಯುಕ್ತ ಮುಂದಿನ ವಾರ ಸುಪ್ರೀಂ ಕೋರ್ಟ್‌ನ ಕಲಾಪಗಳಿಗೆ ರಜೆ ಇರುವ ಕಾರಣ, ಹಬ್ಬದ ನಂತರ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ವಿಚಾರಣೆ ಸಂಜೆ 5 ಗಂಟೆಯವರೆಗೂ ನಡೆಯಿತು. ಈ ನಡುವೆ ಊಟದ ಬಿಡುವಿನಲ್ಲಿ ಜಯಲಲಿತಾ ಅವರಿಗೆ ನಗರದ ಖಾಸಗಿ ಹೋಟೆಲ್‌ನಿಂದ ಅನ್ನ, ಸಾಂಬಾರ್ ಮತ್ತ ರಸಂ ಪೂರೈಸಲಾಯಿತು ಎಂದು ತಿಳಿದುಬಂದಿದೆ.  ಜಯಲಲಿತಾ ಸಂಪುಟದ ಸಚಿವರಾದ ವಿಶ್ವನಾಥನ್ (ಇಂಧನ), ಪನ್ನೀರ್ ಸೆಲ್ವಂ (ಹಣಕಾಸು) ಮತ್ತು ಸಂಗೋಟಿಯನ್ (ಕೃಷಿ) ಅವರೂ ವಿಚಾರಣೆಯ ವೇಳೆ ಹಾಜರಿದ್ದರು.

ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಿದ ಜಯಲಲಿತಾ, ಅಲ್ಲಿಂದ ಪರಪ್ಪನ ಅಗ್ರಹಾರಕ್ಕೆ ಸುಮಾರು 30 ಭದ್ರತಾ ವಾಹನಗಳ ಬೆಂಗಾವಲಿನಲ್ಲಿ ಬಂದರು. ಮಾರ್ಗದುದ್ದಕ್ಕೂ ಪೊಲೀಸ್ ಸರ್ಪಗಾವಲು ಇತ್ತು. ಆದರೆ, ಗುರುವಾರ ಕಂಡುಬಂದಷ್ಟು ಜನಜಂಗುಳಿ ಶುಕ್ರವಾರ ಇರಲಿಲ್ಲ. ಸಿಗ್ನಲ್ ರಹಿತ ಸಂಚಾರಕ್ಕೆ ಅವಕಾಶ ಮಾಡಲಾಗಿದ್ದ ಕಾರಣ, ಸಾರ್ವಜನಿಕರು ಕೆಲವು ಕಾಲ ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT