ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖೀ ಜೀವನಕ್ಕೆ ಮಾರ್ಗ ಹಲವು

Last Updated 10 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

`ಸಾರ್, ನನ್ನ ಗಂಡ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದ. ದಿನದ 24 ಗಂಟೆ ಕುಡಿಯಲು ಆರಂಭಿಸಿದ. ಆತನಿಗೆ ಟಿ.ಬಿ, ಸಕ್ಕರೆ ಕಾಯಿಲೆ ಇತ್ತು. ಮೈತುಂಬ ಬೇನೆ, ಮನೆತುಂಬ ಸಾಲ ತಾಳಲಾರದೆ ಎರಡು ದಿನದ ಹಿಂದೆ ನೇಣು ಹಾಕಿಕೊಂಡ~ ಎಂದು 40 ವರ್ಷದ ರೂಪಾ ತನ್ನ ನೋವು ತೋಡಿಕೊಂಡಳು.

`ಡಾಕ್ಟ್ರೇ, 16 ವರ್ಷದ ನನ್ನ ಮಗ ಪಿಯುಸಿ ಓದುತ್ತಿದ್ದ. ವೈದ್ಯನಾಗಬೇಕು ಎಂಬ ಕನಸು ಕಾಣುತ್ತಿದ್ದ. ಆದರೆ ಪರೀಕ್ಷೆಯ ಒತ್ತಡ ತಾಳಲಾರದೇ ಸಮುದ್ರದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ. ಹೀಗೆ ನಮ್ಮ ಮನೆಯಲ್ಲಿ ಒಟ್ಟು ಮೂರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ~ ಎಂದು ಪಾಲಕರು ಅಲವತ್ತುಕೊಂಡರು.

ಇಂದಿನ ಒತ್ತಡದ ಜೀವನ, ಒಂಟಿತನ, ಮದ್ಯ ಸೇವನೆ, ಮಾದಕ ವಸ್ತುಗಳ ಸೇವನೆ, ಹಣದ ವಿಪರೀತ ದಾಹ, ದುರಾಸೆ, ಕರುಣೆ, ಅನುಕಂಪವಿಲ್ಲದ ಸ್ನೇಹ, ಸಂಬಂಧ ಮೊದಲಾದವು ಹಲವು ವ್ಯಕ್ತಿಗಳಿಗೆ `ಆತ್ಮಹತ್ಯೆ~ ಮಾಡಿಕೊಳ್ಳಲು ಪ್ರೇರೇಪಿಸುತ್ತವೆ.

ಪಾಶ್ಚಾತ್ಯ ದೇಶಗಳು ಒಳಗೊಂಡಂತೆ ನಮ್ಮ ದೇಶದಲ್ಲಿ ಸಹ ಪ್ರತಿವರ್ಷ ಆತ್ಮಹತ್ಯೆಯಂಥ ಅನೇಕ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ತೀವ್ರವಾದ ಖಿನ್ನತೆ (ಡಿಪ್ರೆಶನ್), ಡಿಮೇನಿಯಾ, ಸ್ಕೀಜೋಪ್ರೆನಿಯಾ ಕೂಡ ಆತ್ಮಹತ್ಯೆಯ ಪ್ರಯತ್ನದ ಮೂಲಕ ತಮ್ಮ ಮೊದಲಿನ ಲಕ್ಷಣಗಳನ್ನು ತೋರಬಲ್ಲವು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ಜನ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುತ್ತಾರೆ.

ವೃದ್ಧಾಪ್ಯ ಹಾಗೂ ಹದಿಹರೆಯಗಳೆರಡೂ ಆತ್ಮಹತ್ಯೆಗೆ ಪ್ರಚೋದನೆ ನೀಡಬಲ್ಲವು. ಇಂದು ಕಾಳಜಿ ವಹಿಸುವುದು ಅವಶ್ಯ. ಬಡತನ, ನಿರುದ್ಯೋಗ, ಮೇಲ್ವರ್ಗದವರಿಂದ ತುಳಿತ, ಜಾತಿ ಹಾಗೂ ಸಾಂಸ್ಕೃತಿಕ ನಿಂದನೆ ಇವು ಸೂಕ್ಷ್ಮ  ವ್ಯಕ್ತಿಗೆ ಹತಾಶೆಯುಂಟು ಮಾಡಿ, ಆತ್ಮಹತ್ಯೆಗೆ ಪ್ರಚೋದಿಸಬಲ್ಲವು.

ಆತ್ಮಹತ್ಯೆ ತಡೆಗಟ್ಟಲು ಹಲವು ವಿಧಾನಗಳನ್ನು ಅನುಸರಿಸಬಹುದು.

*ಜನಸಂಪರ್ಕ ಬಹಳ ಮುಖ್ಯ-ಮನುಷ್ಯ ಸಂಘಜೀವಿ ಎಂಬುದನ್ನು ಅರಿತು ಸ್ನೇಹಿತರೊಡನೆ, ಬಂಧುಗಳೊಡನೆ, ತಮ್ಮ ಗುರು ಹಿರಿಯರೊಂದಿಗೆ ನಿಕಟ ಸಂಪರ್ಕ ಹೊಂದಿರಬೇಕು. ಅವರೊಂದಿಗೆ ತಮ್ಮ ಮನದ ನೋವು, ವಿಫಲತೆ, ಖಿನ್ನತೆಯನ್ನು ನೇರವಾಗಿ ಹಂಚಿಕೊಳ್ಳಬೇಕು.

*ವೈದ್ಯರಿಗೆ, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಈ ವಿಷಯ ಕುರಿತು ಅರಿವು ಮೂಡಿಸುವುದು.

*ಆತ್ಮಹತ್ಯೆ ಮಾಡಿಕೊಳ್ಳಲು ಅನುಸರಿಸುವ ವಿಧಾನಗಳು ನಿಲುಕದಂತೆ ಎಚ್ಚರವಹಿಸುವುದು. ಉದಾ: ಔಷಧಿಗಳು, ಕ್ರಿಮಿನಾಶಕ ವಸ್ತುಗಳು, ರಿವಾಲ್ವರ್‌ಗಳನ್ನು ಸುರಕ್ಷಿತ ಸ್ಥಳದಲ್ಲಿ ಸುಲಭವಾಗಿ ಕೈಗೆಟುಕದಂತೆ ಇಡುವುದು. ಸೇತುವೆ, ಎತ್ತರವಾದ ಕಟ್ಟಡಗಳಲ್ಲಿ 24 ಗಂಟೆ ಭದ್ರತಾ ಸಿಬ್ಬಂದಿ ನೇಮಿಸಬೇಕು.

* ಆತ್ಮಹತ್ಯೆ ಮಾಡಿಕೊಂಡು ಸತ್ತವರ ಸಂಬಂಧಿಕರಿಗೆ ಸೂಕ್ತ ಕಳಕಳಿ, ಸಹಾಯ, ಆಪ್ತಸಮಾಲೋಚನೆ ಒದಗಿಸುವುದು. ಆತ್ಮಹತ್ಯೆ ತಡೆಗಟ್ಟುವಿಕೆಯಲ್ಲಿ ಕೇವಲ ಮನೋವೈದ್ಯರ ಕಾರ್ಯ ಸಾಕಾಗದು. ಇತರ ವೈದ್ಯರು, ಸಂಶೋಧಕರು, ಶಿಕ್ಷಕರು, ಪೊಲೀಸರು, ಮಾಧ್ಯಮ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ವಿಭಿನ್ನ ಸಂಸ್ಕೃತಿಯ ಪ್ರಮುಖರು, ರಾಜಕಾರಣಿಗಳು, ಸಮುದಾಯದ ಮುಖ್ಯಸ್ಥರು, ಮಿತ್ರರು ತಮ್ಮ  ಸಹಾಯ ಹಸ್ತ ಚಾಚಬೇಕು.

`ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ~ಗೆ ಈ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.
ಸೆಪ್ಟೆಂಬರ್ 10 ರಂದು ಹೊಸ ಆವಿಷ್ಕಾರ, ವಿಚಾರ, ಪಾಲಿಸಿ, ಯೋಜನೆಗಳನ್ನು ಆರಂಭಿಸಬೇಕು. ಮಾಧ್ಯಮಗಳಲ್ಲಿ ಲೇಖನ ಬರೆಯುವುದರ ಮೂಲಕ, ಮ್ಯಾರಾಥಾನ್ ವಾಕ್, ಕ್ಯಾಂಡಲ್‌ಲೈಟ್ ಕಾರ್ಯಕ್ರಮ, `ಖಿನ್ನತೆ~ ಬಗ್ಗೆ ಸ್ಕ್ರೀನಿಂಗ್ ಮಾಡುವುದು. ಅಂದು ಪ್ರತಿಯೊಬ್ಬರು ತಮ್ಮ ಮನೆಯ ಕಿಟಕಿಯಲ್ಲಿ ರಾತ್ರಿ 8ಕ್ಕೆ ಮೇಣಬತ್ತಿ ಹಚ್ಚುವುದು.

ನೆನಪಿಡಿ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಸುಖಿ ಜೀವನ ನಡೆಸಲು ಹಲವಾರು ಮಾರ್ಗಗಳಿವೆ. ಆತ್ಮಗೌರವ, ಆತ್ಮಾವಲೋಕನ, ಆತ್ಮರಕ್ಷಣೆ ಇರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT