ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್ಘ ನೆರಳು!

Last Updated 7 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

`ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸು ನಲವತ್ತೆಂಟು ನಿಮಿಷದಷ್ಟಿದೆ. ನಿಜವಾದ ಸಿನಿಮಾ ತೆರೆದುಕೊಳ್ಳುವುದೇ ಆಗ' ಎಂದರು ನಿರ್ದೇಶಕ ವಿನೋದ್ ಖನದಲಿ. ಬಿಸಿಲಿಗಿಂತ ನೆರಳೇ ಚಿತ್ರದಲ್ಲಿ ಹೆಚ್ಚು ಎನ್ನುವುದು ಅವರ ಮಾತಿನ ವರಸೆ.

ಅವರ ನಿರ್ದೇಶನದ `ನೆರಳು' ಚಿತ್ರದ ಹಾಡುಗಳ ದನಿಮುದ್ರಿಕೆ ಬಿಡುಗಡೆ ಸಮಾರಂಭವದು. ನಿರ್ಮಾಪಕ ಉಮೇಶ್ ಬಣಕಾರ್ ಹಾಡಿನ ಸಿ.ಡಿ.ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಹೊಸಬರ ತಂಡವಾದರೂ ನಿರ್ದೇಶಕರ ಆತ್ಮವಿಶ್ವಾಸಕ್ಕೆ ಕೊರತೆಯಿರಲಿಲ್ಲ. ಇದು ಸಾಮಾನ್ಯ ಪ್ರೇಮಕಥೆಯಂತೆ ಕಾಣುವ ಚಿತ್ರದಲ್ಲಿ ಊಹಿಸಲಾಗದ ತಿರುವು ಇದೆಯಂತೆ.

ಮೊದಲರ್ಧದಲ್ಲಿ ವಿಶೇಷವಿಲ್ಲ ಎನ್ನುವುದನ್ನು ಒಪ್ಪಿಕೊಂಡ ನಿರ್ದೇಶಕರು ದ್ವಿತೀಯಾರ್ಧದ ಕೊನೆಯ 48 ನಿಮಿಷದಲ್ಲಿ ಇಡೀ ಚಿತ್ರ ಬಿಚ್ಚಿಕೊಳ್ಳುತ್ತದೆ. ಅದೇ ವಿಶೇಷ ಎಂದರು.

`ನೆರಳು' ಚಿತ್ರದಲ್ಲಿ ಇಬ್ಬರು ನಾಯಕರಿಗೆ ಒಬ್ಬ ನಾಯಕಿ. ಈ ಮೂವರ ನಡುವೆ ಸಾಗುವ ಪ್ರೇಮಕ್ಕೆ ಸಾಕಷ್ಟು ತಿರುವುಗಳಿವೆಯಂತೆ. ಶ್ರೀಹರ್ಷ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದರೆ, ಶ್ರೀಧರ್ ಎಲ್ಲಾ ಐದು ಹಾಡುಗಳಿಗೆ ಸಾಹಿತ್ಯ ಹೊಸೆದಿದ್ದಾರೆ.

ಅವರ ರಚನೆಯ ಹಾಡೊಂದು ಯೋಗರಾಜ್ ಭಟ್ಟರ ಸಾಹಿತ್ಯದ ಮಟ್ಟದಲ್ಲಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಚಿತ್ರದ ಕಥೆ ತಮ್ಮ ಜೀವನಕ್ಕೆ ಹತ್ತಿರವಾಗಿದ್ದರಿಂದ ಹಾಡುಗಳನ್ನು ಅನುಭವಿಸಿ ಬರೆಯಲು ಸಾಧ್ಯವಾಯಿತು ಎಂದರು ಶ್ರೀಧರ್. ಸಂಗೀತ ನಿರ್ದೇಶಕ ಶ್ರೀಹರ್ಷ ಅವರಿಗಿದು ಮೊದಲ ಅನುಭವ.

ನಾಯಕದ್ವಯರಲ್ಲಿ ಹಾಜರಿದ್ದವರು ಸಂಜೀವ್ ಮಾತ್ರ. `ಮೈ ಆಟೋಗ್ರಾಫ್'ನಲ್ಲಿ ಗುರುತಿಸಿಕೊಂಡ ಸಂಜೀವ್ `ಮರುಭೂಮಿ' ಎಂಬ ಚಿತ್ರದಲ್ಲಿ ನಟಿಸಿದ್ದರೂ ಅದು ಬಿಡುಗಡೆ ಭಾಗ್ಯ ಕಂಡಿಲ್ಲ. ಚಿಕ್ಕದಾದರೂ ಚೊಕ್ಕದಾದ, ಮನಸ್ಸಿನಲ್ಲಿ ಉಳಿಯುವ ಪಾತ್ರ ತಮ್ಮದೆನ್ನುವುದು ಅವರ ವಿವರಣೆ. ಮತ್ತೊಬ್ಬ ನಾಯಕ ಆಕಾಶ್ ಗೈರು ಹಾಜರಾಗಿದ್ದರು.

ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಬಂದ ನಟಿ ಶ್ರುತಿ ರಾಜ್ ಕಡೆಯಿಂದ ಔಪಚಾರಿಕ ಕ್ಷಮೆ ಕೋರಿಕೆ ಹೊರಬಂತು. ಅವರಿಗಿದು ಐದನೇ ಚಿತ್ರ. ಮೊದಲ ಬಾರಿಗೆ ಇಬ್ಬರು ನಾಯಕರ ಜೊತೆ ಎರಡು ಛಾಯೆಗಳಿರುವ ಪಾತ್ರದಲ್ಲಿ ನಟಿಸಿರುವುದು ಅವರಿಗೆ ವಿಶಿಷ್ಟ ಅನುಭವ ನೀಡಿದೆ.

ಸ್ವಂತ ಉದ್ದಿಮೆ ನಡೆಸುತ್ತಿರುವ ಅತುಲ್ ಕುಲಕರ್ಣಿ ಸಿನಿಮಾ ನಿರ್ಮಿಸಬೇಕೆಂಬ ಬಯಕೆಯನ್ನು ಈ ಚಿತ್ರದ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ.

ಚಿತ್ರೀಕರಣದ ಪ್ರತಿದಿನವೂ ಅಲ್ಲಿ ಹಾಜರಿರುತ್ತಿದ್ದ ಅವರು, ಚಿತ್ರತಂಡಕ್ಕೆ ಉದಾರತೆ ಪ್ರದರ್ಶಿಸುವುದರಲ್ಲಿ ಹಿಂದೆ ಬೀಳಲಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ. ಚಿತ್ರ ಮೂಡಿಬಂದ ಬಗೆ ಅವರಿಗೆ ಖುಷಿ ನೀಡಿದೆ. ಮಾರ್ಚ್ ಮೊದಲ ವಾರದಲ್ಲಿ ಚಿತ್ರಮಂದಿರದಲ್ಲಿ `ನೆರಳು' ನೀಡುವ ಉದ್ದೇಶ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT