ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಸಂಭ್ರಮದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ

Last Updated 21 ಏಪ್ರಿಲ್ 2011, 5:30 IST
ಅಕ್ಷರ ಗಾತ್ರ

ದಾವಣಗೆರೆ:  ವ್ಯಕ್ತಿಯೊಬ್ಬ ವಿಪರೀತ ಗಂಟಲು ನೋವಿಂದ ಬಳಲುತ್ತಿದ್ದರು. ದಾವಣಗೆರೆಯಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದ ಕಾರಣ ಹುಬ್ಬಳ್ಳಿಯ ಸಹಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದರು. ಬಳಿಕ ವೈದ್ಯರಿಗೆ ಹಣ ನೀಡಲು ರೋಗಿಯ ತಂದೆ ಹೋದಾಗ ‘ನೀವು ಉದ್ಯಮಿ. ಅಲ್ಲಿಯೇ ಒಂದು ಸುಸಜ್ಜಿತ ಆಸ್ಪತ್ರೆ ಕಟ್ಟಿಸಿ; ಅದೇ ನನಗೆ ನೀಡುವ ಸಂಭಾವನೆ’ ಎಂದು ಸಲಹೆ ಕೊಟ್ಟರು.

ಅವರ ಮಾತನ್ನೇ ಸವಾಲಾಗಿ ಸ್ವೀಕರಿಸಿ ದಾವಣಗೆರೆಯ ‘ಚಿಗಟೇರಿ ಜಿಲ್ಲಾ ಆಸ್ಪತ್ರೆ’ ನಿರ್ಮಾಣಕ್ಕೆ ನೆರವಾದರು. ಸಾವಿರಾರು ರೋಗಿಗಳ ನೋವು ನೀಗಿಸಿದ ಪುಣ್ಯ ಕಟ್ಟಿಕೊಂಡರು. ಅದೇ ಆಸ್ಪತ್ರೆ ಏ. 20ಕ್ಕೆ ಐವತ್ತು ವರ್ಷ ಪೂರೈಸಿ, ಸಾರ್ಥಕ ‘ಸುವರ್ಣ ಸಂಭ್ರಮ’ದಲ್ಲಿ ಇದೆ. ಸುತ್ತಮುತ್ತಲ ರೋಗಿಗಳ ನೋವಿಗೆ ನೆರಳಾದವರೇ ಧರ್ಮಪ್ರಕಾಶ ಚಿಗಟೇರಿ ಮುರಿಗೆಪ್ಪ. ಅಂದು ತಮ್ಮ ಎರಡನೇ ಪುತ್ರ ಜಯಣ್ಣ ಅವರನ್ನು ಹುಬ್ಬಳಿ ಆಸ್ಪತ್ರೆಗೆ ಸೇರಿಸಿದಾಗ ಕೇಳಿದ ಮಾತಿನ ಪ್ರೇರಣೆ ಪಡೆದು ಆಸ್ಪತ್ರೆ ನಿರ್ಮಾಣಕ್ಕೆ `1.5 ಲಕ್ಷ ದಾನ ನೀಡಿದರು. 1956ರಲ್ಲಿ ಗುಂಡಿ ವೃತ್ತದ ಬಳಿಯ ಆಸ್ಪತ್ರೆ ಆವರಣದಲ್ಲಿ ನಡೆದ ಶಂಕುಸ್ಥಾಪನೆ ಸಮಾರಂಭಕ್ಕೆ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ಸಹ ಆಗಮಿಸಿದ್ದರು. ಅವರ ಸಾಮಾಜಿಕ ಕಳಿಕಳಿ ನೋಡಿ ಬೆನ್ನು ತಟ್ಟಿದ್ದರು.

ಆದರೆ, ಅವರ ಕನಸು ನನಸಾಗುವ ಮೊದಲೇ 1957ರಲ್ಲಿ ತೀರಿಕೊಂಡರು. ಅವರ ಮಕ್ಕಳಾದ ವೀರಭದ್ರಪ್ಪ ಚಿಗಟೇರಿ ಹಾಗೂ ಜಯಣ್ಣ ಚಿಗಟೇರಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ನೆರವಾದರು. ನಂತರ, ಅಗತ್ಯ ಸಲಕರಣೆಗೆಂದು ಮತ್ತೆ ` ಒಂದು ಲಕ್ಷ ನೀಡಿದರು. 1961 ಏ. 20ಕ್ಕೆ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ನಡೆಯಿತು. ಅಂದಿನ ಕಾರ್ಯಕ್ರಮಕ್ಕೆ ಗೌರ್ನಮೆಂಟ್ ಆಫ್ ಮೈಸೂರಿನ ಸಿಎಂ ಬಿ.ಡಿ. ಜತ್ತಿ ಹಾಗೂ ಮೈಸೂರು ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪ ಆಗಮಿಸಿದ್ದರು.

ದಾನ ನೀಡುವುದಕ್ಕೆ ಹೆಸರಾಗಿದ್ದ ಧರ್ಮಪ್ರಕಾಶ ಚಿಗಟೇರಿ ಮುರಿಗೆಪ್ಪ ಅವರ ಪೂರ್ವಿಕರದ್ದು ಮೂಲತಃ ಹರಪನಹಳ್ಳಿಯ ಚಿಗಟೇರಿ. ಹೀಗಾಗಿ, ಅವರ ಮನೆತನಕ್ಕೆ ‘ಚಿಗಟೇರಿಯವರು’ ಎಂಬ ಹೆಸರೂ ಬೆಸೆದುಕೊಂಡಿದೆ. 1887ರಲ್ಲಿ ಸಾಮಾನ್ಯ ಮನೆತನದಲ್ಲಿ ಜನಿಸಿದ ಅವರು, ಚಿಕ್ಕಂದಿನಲ್ಲೇ ಕಷ್ಟಪಟ್ಟು ದುಡಿಯಲು ಪ್ರಾರಂಭಿಸಿದರು. ಅವರು ಅರಳೆ (ಹತ್ತಿ) ವ್ಯಾಪಾರದಲ್ಲಿ ಪ್ರವೀಣರಾಗಿದ್ದು, ಸಾಕಷ್ಟು ಅನುಭವವಿತ್ತು. ಆತ್ಮವಿಶ್ವಾಸ ಮೈಗೂಡಿಸಿಕೊಂಡಿದ್ದ ಅವರು ಮೀರಜ್, ಸಾಂಗ್ಲಿ, ನಾಸಿಕ್, ಪಾಂಡಿಚೇರಿ, ಕೊಯಮತ್ತೂರು, ಮೈಸೂರು, ಬೆಂಗಳೂರು - ಹೀಗೆ ದೇಶದ ನಾನಾಕಡೆ ಓಡಾಡಿದ ಅನುಭವಿಗಳು. 1948ರಲ್ಲಿ ‘ಶಂಕರ ಮಿಲ್ಸ್’ ಪಾರಂಭಿಸಿ, ದುಡಿಯುವ ಕೈಗಳಿಗೆ ನೆರವಾದರು. - ಹೀಗೆ ಬದುಕಿನ ಜತೆಗೆ ಸಾಕಷ್ಟು ಸಾಮಾಜಿಕ ಕಾರ್ಯ ಮಾಡಿದ ವ್ಯಕ್ತಿ ಮುರಿಗೆಪ್ಪ.

ಸದಾ ಸ್ಫೂರ್ತಿಯ ಚಿಲುಮೆಯಾಗಿದ್ದ ಮುರಿಗೆಪ್ಪ, ಶೈಕ್ಷಣಿಕ ಕ್ಷೇತ್ರಕ್ಕೂ ತಮ್ಮದೇ ಕೊಡುಗೆ ನೀಡಿದ್ದಾರೆ. ದಾವಣಗೆರೆ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಚಿತ್ರದುರ್ಗ ಜಿಲ್ಲೆ ಅವಲಂಬಿಸಬೇಕಿತ್ತು. ಅದನ್ನು ಮನಗಂಡ ಅವರು ಮೊಟ್ಟಮೊದಲ ಬಾರಿಗೆ ಹೈಸ್ಕೂಲ್ ಕಟ್ಟಡಕ್ಕೆ ` 25 ಸಾವಿರ ದಾನ ನೀಡಿದರು. ಬಳಿಕ ಎಷ್ಟೋ ಮಂದಿ ಶಾಲಾ-ಕಾಲೇಜಿಗೆ ದಾನ ನೀಡಿದರು. ಅವರ ದಾನ ಎಲ್ಲರಿಗೂ ದಾರಿದೀಪವಾಯಿತು.

ಜಯದೇವ ವಿದ್ಯಾರ್ಥಿನಿಲಯದ ಒಂದು ತಿಂಗಳ ವೆಚ್ಚ ಮಾಡಲು ಒಪ್ಪಿಕೊಂಡಿದ್ದು, ಅನೇಕ ಅರ್ಹ ವಿದ್ಯಾರ್ಥಿಗಳನ್ನು ನಿಲಯಕ್ಕೆ ತಮ್ಮ ವೆಚ್ಚದಲ್ಲಿ ಸೇರಿಸಿದ್ದು ಶಿಕ್ಷಣ ಕ್ಷೇತ್ರದ ಆಸಕ್ತಿಗೆ ಹಿಡಿದ ಕನ್ನಡಿ.
ದಾನಗಳ ಸರಮಾಲೆ ಧಾರವಾಡದ ರಾಜಾ ಲಖಮನಗೌಡ ಪ್ರೌಢಶಾಲೆ ಕಟ್ಟಡ, ಬಾಗಲಕೋಟೆ ಬಸವೇಶ್ವರ ಕಾಲೇಜು, ಮುಂಬೈ ವೀರಶೈವ ಸಂಘ, ಬಳ್ಳಾರಿ ವೀರಶೈವ ಕಾಲೇಜು ನಿಧಿ, ನೀಲಗಿರಿ ಜಿಲ್ಲಾ ವಿದ್ಯಾಭಿವೃದ್ಧಿ ಸಂಸ್ಥೆ - ಹೀಗೆ ಹಲವು ಕಡೆ ದಾನ ನೀಡಿದ್ದಾರೆ. ಮುರಿಗೆಪ್ಪ ಅವರ ಸಾಧನೆ ಕುರಿತು ಕೃತಿ ಹೊರಬಂದಿದೆ.

‘50 ವರ್ಷ ಆಗಿರುವ ಹಿನ್ನೆಲೆಯಲ್ಲಿ ಕಟುಂಬದ ಸದಸ್ಯರೊಂದಿಗೆ ಚರ್ಚಿಸಿ ಮುಂದೆ ಯಾವರೀತಿ ಸಹಾಯ ಮಾಡಲು ಸಾಧ್ಯ ಎಂಬುದರ ಬಗ್ಗೆ ನಿರ್ಧರಿಸುತ್ತೇವೆ. ಆಸ್ಪತ್ರೆ ಪ್ರಾರಂಭವಾದ ಬಳಿಕ ದಾವಣಗೆರೆ ಚಿತ್ರಣವೇ ಬದಲಾಯಿತು. ಸುತ್ತಮುತ್ತಲ ಊರುಗಳ ರೋಗಿಗಳಿಗೆ ಸಾಕಷ್ಟು ಅನುಕೂಲವಾಯಿತು.  ಅಲ್ಲದೇ, ಇದೇ ಆವರಣದಲ್ಲಿ ಸರ್ಕಾರಿ ವೈದ್ಯಕೀಯ  ಕಾಲೇಜು ಸ್ಥಾಪಿಸಬೇಕು’ ಎಂದು ಮುರಿಗೆಪ್ಪ ಅವರ ಕುಟುಂಬದವರಾದ ಮುರುಘರಾಜೇಂದ್ರ ಜೆ. ಚಿಗಟೇರಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಈಗ ಅವ್ಯವಸ್ಥೆಯ ಆಗರ...
ದಾವಣಗೆರೆ:  ದಾನದಿಂದ ನಿರ್ಮಾಣವಾದ ಆಸ್ಪತ್ರೆಯ ಕಟ್ಟಡಕ್ಕೆ ಈಗ ಐವತ್ತು ವರ್ಷ. ಆದರೆ, ಅವ್ಯವಸ್ಥೆ ಆಗರ. ಎಲ್ಲೆಂದರಲ್ಲಿ ಕಸದ ರಾಶಿ, ಆಗಲೋ -ಈಗಲೋ ಬೀಳುವಂತೆ ಇರುವ ಕಟ್ಟಡ, ರೋಗಿಗಳಿಗೆ ಸಿಗದ ಉತ್ತಮ ಚಿಕಿತ್ಸಾ ಸೌಲಭ್ಯ, ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪುವ ರೋಗಿಗಳು, ಪ್ರತಿಭಟನೆ, ಆಸ್ಪತ್ರೆಯ ಛಾವಣಿ ಕುಸಿದು ಸಾಯುವ ಮಂದಿ - ಇದು ಸಾಮಾನ್ಯ ಸಂಗತಿಯಾಗಿದೆ.

ಒಮ್ಮೆ ಆಸ್ಪತ್ರೆಯ ಒಳಗೆ ಕಾಲಿಟ್ಟರೆ ಸಾಕು ಎಲ್ಲೆಲ್ಲೂ ರೋಗಿಗಳೇ ಕಾಣಸಿಗುತ್ತಾರೆ. ದಾಖಲಾತಿ ವಿಭಾಗ, ಹೊರರೋಗಿಗಳ ವಿಭಾಗ, ವೈದ್ಯಕೀಯ ವಿಭಾಗ ಎಲ್ಲೆಡೆ ಸಾಲುಸಾಲು ಅವ್ಯವಸ್ಥೆ. ಸುವರ್ಣ ಚತುಷ್ಪಥ ಹೆದ್ದಾರಿ ಯೊಜನೆ ಅಡಿ ಅಪಘಾತ ಚಿಕಿತ್ಸಾ ಕೇಂದ್ರದ ಕಟ್ಟಡ ಮಾತ್ರ ಸುಭದ್ರವಾಗಿದೆ. ಆದಷ್ಟು ಶೀಘ್ರವೇ ದಾನಿಯಿಂದ ನಿರ್ಮಾಣವಾದ ಕಟ್ಟಡಕ್ಕೆ ಸರ್ಕಾರ ಕಾಯಕಲ್ಪ ನೀಡಬೇಕು ಎಂಬುದು ರೋಗಿಗಳ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT