ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್ ಸೈನಾಗೆ ಜಯ

Last Updated 30 ಜುಲೈ 2012, 20:20 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಸೈನಾ ನೆಹ್ವಾಲ್ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ವೆಂಬ್ಲಿ   ಅರೆನಾ ಕೋರ್ಟ್‌ನಲ್ಲಿ ಸೋಮವಾರ ನಡೆದ ಒಲಿಂಪಿಕ್ಸ್   ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಎರಡನೇ ಪಂದ್ಯದಲ್ಲೂ ಗೆದ್ದ ಅವರು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

`ಇ~ ಗುಂಪಿನ ಈ ಪಂದ್ಯದಲ್ಲಿ ಭಾರತದ ಸೈನಾ 21-4, 21-14ರಲ್ಲಿ ಬೆಲ್ಜಿಯಂನ ಲಿಯಾನೆ ತನ್ ಅವರನ್ನು ಪರಾಭವಗೊಳಿಸಿದರು. ಐದನೇ ರ‌್ಯಾಂಕ್‌ನ ಆಟಗಾರ್ತಿ ಮೊದಲ ಗೇಮ್‌ನಲ್ಲಿ ಸುಲಭವಾಗಿ ಗೆದ್ದರು. ಇದರಲ್ಲಿ ಸತತ ಏಳು ಪಾಯಿಂಟ್ ಜಯಿಸಿ ಎದುರಾಳಿ ಮೇಲೆ ಒತ್ತಡ ಹೇರಿದರು. ಹಾಗಾಗಿ ಈ ಗೇಮ್ ಕೇವಲ 10 ನಿಮಿಷದಲ್ಲಿ ಮುಗಿದು ಹೋಯಿತು. ನೆಹ್ವಾಲ್ ತಮ್ಮ ಸರ್ವ್‌ನಲ್ಲಿಯೇ 18 ಪಾಯಿಂಟ್ ಗ್ದ್ದೆದಿದ್ದು ವಿಶೇಷ.

ಎರಡನೇ ಗೇಮ್‌ನ ಆರಂಭದಲ್ಲಿ ಮಾತ್ರ ಪೈಪೋಟಿ ಎದುರಾಯಿತು. ನೆಟ್ ಬಳಿ ಶಟಲ್ ಡ್ರಾಪ್ ಮಾಡುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ಬೆಲ್ಜಿಯಂನ ಆಟಗಾರ್ತಿ ಪ್ರಯತ್ನಿಸಿದರು. ಈ ಹಂತದಲ್ಲಿ ಸೈನಾ 11-8ರಲ್ಲಿ ಮುಂದಿದ್ದರು. ವಿಶ್ರಾಂತಿ ವೇಳೆ ಕೋಚ್ ಪಿ.ಗೋಪಿಚಂದ್ ಕೆಲ ಸಲಹೆ ನೀಡಿದರು.

ನಂತರ ನೆಹ್ವಾಲ್ ಆಕರ್ಷಕ   ಸ್ಮ್ಯಾಷ್‌ಗಳ ಮೂಲಕ ಲಾಯನೆ ಅವರ ಮೇಲೆ ಪಾರಮ್ಯ ಮೆರೆದರು.    ಒಮ್ಮೆಲೇ 20-12 ಪಾಯಿಂಟ್‌ಗೆ ಬಂದು ನಿಂತರು. ಬಳಿಕ ಆಕರ್ಷಕ ಡ್ರಾ ಮೂಲಕ ಈ ಗೇಮ್ ತಮ್ಮದಾಗಿಸಿಕೊಂಡು ಪಂದ್ಯ ಗೆದ್ದರು. ಈ ಗೇಮ್ ಗೆಲ್ಲಲು ಸೈನಾ 14 ನಿಮಿಷ ತೆಗೆದುಕೊಂಡರು. 22 ವರ್ಷ ವಯಸ್ಸಿನ ಸೈನಾ ಚುರುಕಿನ ಆಟದಿಂದ ಗಮನ ಸೆಳೆದರು.

ನಾಲ್ಕು ವರ್ಷಗಳ ಹಿಂದೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಮಿಂಚಿನ ಸಂಚಲನಕ್ಕೆ ಕಾರಣವಾಗಿದ್ದ ಹೈದರಾಬಾದ್‌ನ ಆಟಗಾರ್ತಿ ಅಮೋಘ ಫಾರ್ಮ್‌ನಲ್ಲಿದ್ದಾರೆ. ಅವರು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಹಾಲೆಂಡ್‌ನ ಯೋ ಜೀ ಅವರು ಎದುರಾಗುವ ಸಾಧ್ಯತೆ ಇದೆ. 20ನೇ ರ‌್ಯಾಂಕ್‌ನ ಯೋ ಜಿ ಚೀನಾ ಮೂಲದವರು. ಆದರೆ ಈಗ ಹಾಲೆಂಡ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಭಾನುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಅವರು ಸ್ವಿಟ್ಜರ್ಲೆಂಡನ್‌ನ ಸಬ್ರಿನಾ ಜಾಕೆಟ್ ಎದುರು ಗೆದ್ದಿದ್ದರು. ನೆಹ್ವಾಲ್ 21-9, 21-4ರಲ್ಲಿ ಜಯಭೇರಿ ಮೊಳಗಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT