ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಶಕ್ತಿ ಹೀರಿ ಹಾರಾಟ!

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ಎರಡೂವರೆ ವರ್ಷದ ಹಿಂದೆ ಈ ವಿಶೇಷ ವಿಮಾನ ರೆಕ್ಕೆ ಅಗಲಿಸಿ ಮೊದಲ ಹಾರಾಟ ಆರಂಭಿಸಿತು. ನಂತರ 2011ರ ಮೇ 13ರಂದು ಅದರ ಅಂತರರಾಷ್ಟ್ರೀಯ ಹಾರಾಟವೂ ಯಶಸ್ವಿಯಾಯಿತು.

ಈ ವಿಮಾನದ ವೈಶಿಷ್ಟ್ಯವೇನೆಂದರೆ ಇದಕ್ಕೆ ಸಾಮಾನ್ಯ ವಿಮಾನಗಳಂತೆ ದುಬಾರಿ ಇಂಧನ ಬೇಕಿಲ್ಲ. ಇನ್ನೊಂದು ಅರ್ಥದಲ್ಲಿ ಏರ್ ಟ್ರಾಫಿಕ್ ಫ್ಯೂಯೆಲ್(ಎಟಿಎಫ್) ಅಗತ್ಯವೇ ಇಲ್ಲ. ಸೂರ್ಯ ಉರಿ ಬಿಸಿಲು ಬೀರುತ್ತಿದ್ದರೆ ಅಷ್ಟೇ ಸಾಕು.

ಮನುಷ್ಯ ಹಕ್ಕಿಯಂತೆ ಹಾರಾಡಬೇಕು ಎಂಬ ಕನಸನ್ನು ಕಳೆದ ಶತಮಾನದ ಆರಂಭದಲ್ಲಿ ನನಸಾಗಿಸಿದವರು ಇಬ್ಬರು ರೈಟ್ ಸೋದರರು. ಈಗ ಯಾವ ಸಾಂಪ್ರದಾಯಿಕ ಇಂಧನವೂ ಇಲ್ಲದೆ, ಕೇವಲ ಸೌರಶಕ್ತಿಯಿಂದ ಸತತ ಒಂದು ದಿನಕ್ಕೂ ಅಧಿಕ ಸಮಯ ಹಾರಾಟ ನಡೆಸಬಲ್ಲ ವಿಮಾನವನ್ನು ಅಭಿವೃದ್ಧಿ ಪಡಿಸಿರುವವರೂ ಇಬ್ಬರೇ! ಅವರೇ ಬರ್ಟಂಡ್ ಪಿಕಾರ್ಡ್ ಮತ್ತು ಆಂಡ್ರೆ ಬೋರ್ಷ್‌ಬರ್ಗ್.ಸಾಹಸ ಪ್ರಿಯ- ಸಂಶೋಧಕ ಜೋಡಿಯಲ್ಲಿ ಪಿಕಾರ್ಡ್ ಮನಶಾಸ್ತ್ರಜ್ಞ, ವೈಮಾನಿಕ ಕ್ಷೇತ್ರದ ಪ್ರವೀಣ. ಈತ 1930ರಲ್ಲಿ ಬಲೂನ್ ಅಳವಡಿಸಿದ ವಿಮಾನದಲ್ಲಿ ಇಡೀ ಭೂಮಿಯನ್ನು ಸುತ್ತಿ ಬಂದ ಮೊದಲಿಗ ಆಗಸ್ಟೆ ಪಿಕಾರ್ಡ್‌ನ  ಮೊಮ್ಮಗ. ಪಿಕಾರ್ಡ್ ಈ ಸೌರಶಕ್ತಿ ಚಾಲಿತ ವಿಮಾನದ ಮುಖ್ಯ ಸಂಶೋಧಕ, ಪ್ರೇರಕ ಶಕ್ತಿ ಮತ್ತು ಇದಕ್ಕೆ ಸಂಬಂಧಿಸಿದ `ಸೋಲಾರ್ ಇಂಪಲ್ಸ್~ ಸಂಸ್ಥೆಯ ಮುಖ್ಯಸ್ಥ.

ಆಂಡ್ರೆ, ಮೂಲತಃ ಎಂಜಿನಿಯರ್. ಮ್ಯಾನೇಜ್‌ಮೆಂಟ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಯುದ್ಧ ವಿಮಾನದ ಪೈಲಟ್ ಮತ್ತು ವೃತ್ತಿಪರ ವಿಮಾನ ಚಾಲಕ. ಹೆಲಿಕಾಪ್ಟರ್ ಚಾಲನೆಯೂ ಇವರಿಗೆ ಗೊತ್ತು. ಇವರು  ಸೋಲಾರ್ ಇಂಪಲ್ಸ್ ಸಂಸ್ಥೆಯ ಸಿಇಒ.

ಯಾಂತ್ರೀಕೃತ ವಾಹನಗಳ ಬಳಕೆ ಆರಂಭವಾದಾಗಿನಿಂದಲೂ ಸಾಂಪ್ರದಾಯಿಕ ಇಂಧನ ಮೂಲದ ಬಳಕೆ ನಡೆದಿದೆ. ಈ ಇಂಧನ ಮುಂದಿನ ಕೆಲ ವರ್ಷಗಳಲ್ಲಿ ಖಾಲಿಯಾಗಲಿದೆ. ಆಗ ಕಾರು, ಮೋಟಾರ್ ಬೈಕ್‌ಗಳಿಗೆ ವಿದ್ಯುತ್ತನ್ನೇ ಶಕ್ತಿಯಾಗಿ ಬಳಸಿಕೊಳ್ಳಬಹುದು. ಆದರೆ, ವಿಮಾನ ಹಾರಾಟಕ್ಕೆ ಬದಲಿ ಇಂಧನದ ಶೋಧ ಆಗಬೇಕು ಎಂಬ ಆಲೋಚನೆ ತಲೆಹೊಕ್ಕ ನಂತರ ಈ ಇಬ್ಬರೂ ಸಂಶೋಧಕ ಜೋಡಿ ಚಿಂತಿಸಲಾರಂಭಿಸಿದ್ದೇ `ಸೌರಶಕ್ತಿ~ ಚಾಲಿತ ವಿಮಾನದ ಬಗ್ಗೆ.ಇವರ ಸಂಶೋಧನೆ ಒಂದು ಹಂತಕ್ಕೆ ಬಂದು ಸೌರಶಕ್ತಿಯನ್ನೇ ಇಂಧನವಾಗಿ ಪರಿವರ್ತಿಸಿಕೊಂಡು ಗಂಟೆಗಳ ಕಾಲ ಗಗನದಲ್ಲಿ ಹಾರಾಟ ನಡೆಸಬಲ್ಲ `ಸೋಲಾರ್ ಇಂಪಲ್ಸ್ ಏರ್‌ಕ್ರಾಫ್ಟ್~ ಸಿದ್ಧವಾಗಿದ್ದು, ಅದರ ಮೊದಲ ಹಾರಾಟ ನಡೆದಿದ್ದು 2009ರಲ್ಲಿ. ಆಗಿನ ಪ್ರಾಯೋಗಿಕ ಹಾರಾಟವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ ಈ ಸಾಹಸಿ ಜೋಡಿ ವಿಮಾನದಲ್ಲಿದ್ದ ಅರೆಕೊರೆಗಳನ್ನು ಸರಿಪಡಿಸಿ ತಮ್ಮ ಕನಸಿನ ವಿಮಾನದ ರೆಕ್ಕೆಗಳನ್ನು ಇನ್ನಷ್ಟು ಅಗಲಿಸಿ ಸೌರಶಕ್ತಿ ಚಾಲಿತ ವಿಮಾನದ ಮೊದಲ ಅಂತರರಾಷ್ಟ್ರೀಯ ಪ್ರಯಾಣವನ್ನು ನಡೆಸಿದ್ದು ಕಳೆದ ಮೇ 13ರಂದು.

ಬೆಳಿಗ್ಗೆ 8.40ಕ್ಕೆ ಸ್ವಿಟ್ಜರ್‌ಲೆಂಡ್‌ನ ಪಿಯೆರ್ನ್ ಏರ್‌ಫೀಲ್ಡ್ ವಿಮಾನ ನಿಲ್ದಾಣದಿಂದ ಆಕಾಶಕ್ಕೆ ಜಿಗಿದ `ಸೋಲಾರ್ ಇಂಪಲ್ಸ್ ಏರ್‌ಕ್ರಾಫ್ಟ್~ ಫ್ರಾನ್ಸ್‌ನ ಲುಕ್ಸೆಂಬರ್ಗ್‌ವರೆಗೂ ಹಾರಿ 12 ಗಂಟೆಗಳ ಸತತ ಹಾರಾಟದ ನಂತರ  ಬ್ರುಸೆಲ್ಸ್‌ನಲ್ಲಿ ಇಳಿಯಿತು.

ಆದರೆ, ಈ ವಿಮಾನ ಸೂರ್ಯ ಬೆಳುಗುತ್ತಿದ್ದಾಗಷ್ಟೇ ಅಂದರೆ ಬೆಳಿಗ್ಗೆ 7 ಅಥವಾ 8ರಿಂದ ಸಂಜೆ 4-5 ಗಂಟೆವರೆಗಷ್ಟೇ ಹಾರಾಟ ನಡೆಸಬಲ್ಲದು. ಸೂರ್ಯ ಕಣ್ಮರೆ ಆಗುತ್ತಿದ್ದಂತೆ ಎಲ್ಲಿ ಹಾರಾಡುತ್ತಿತ್ತೊ ಅಲ್ಲಿಯೇ ಸಮೀಪದಲ್ಲಿ ನೆಲಕ್ಕಿಳಿಯಬೇಕು. ಇದಕ್ಕೆ ಬದಲಾಗಿ ಹಗಲಿನಲ್ಲಿ ಸಾಧ್ಯವಾದಷ್ಟೂ ಸೂರ್ಯನ ಶಾಖವನ್ನು ಹೆಚ್ಚಾಗಿ ಹೀರಿಕೊಂಡು ಶಕ್ತಿಯಾಗಿ ಪರಿವರ್ತಿಸಿ ರೆಕ್ಕೆಗಳಲ್ಲಿ ಸಂಗ್ರಹಿಸಿಟ್ಟುಕೊಂಡರೆ ಸೂರ್ಯಾಸ್ತದ ನಂತರವೂ ಪ್ರಯಾಣ ಮುಂದುವರಿಸಬಹುದಲ್ಲಾ. ಈ ಆಲೋಚನೆಯೊಂದಿಗೇ ಸೋಲಾರ್ ಇಂಪಲ್ಸ್ ಏರ್‌ಕ್ರಾಫ್ಟ್ ಸಾಮರ್ಥ್ಯ ವೃದ್ಧಿಗೆ ಮುಂದಾಯಿತು ಈ ಸಂಶೋಧಕ ಜೋಡಿ. ನಂತರದಲ್ಲಿ ಈ ವಿಮಾನದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಾಯಿತು. ಮೊದಲಿನಿಂದ ಆರಂಭಿಸಿ ಸತತ 7 ವರ್ಷಗಳ ಪರಿಶ್ರಮದ ಫಲವಾಗಿ ಕಡೆಗೂ ಸಿದ್ಧಗೊಂಡಿತು 63.40 ಮೀಟರ್‌ನಷ್ಟು ಉದ್ದದ ರೆಕ್ಕೆಗಳನ್ನುಳ್ಳ ಏರ್‌ಬಸ್ ಎ340.

ಹಲವು ಬಗೆಯ ಪ್ರಯೋಗ, ವಿನ್ಯಾಸಗಳ ಬದಲಾವಣೆ, ಪ್ರಾಯೋಗಿಕ ಹಾರಾಟದ ನಂತರ ರೂಪಿತಗೊಂಡ ಒಬ್ಬ ವ್ಯಕ್ತಿ ಮಾತ್ರ ಪ್ರಯಾಣಿಸಬಹುದಾದ ಈ ಹೊಸ ಸೌರಶಕ್ತಿ ಚಾಲಿತ ವಿಮಾನ ಕಳೆದ ಜುಲೈನಲ್ಲಿ ವಿಶೇಷ ಸಾಧನೆಯನ್ನೇ ಮಾಡಿ ತೋರಿಸಿತು.ಸತತ 26 ಗಂಟೆ, 10 ನಿಮಿಷ, 10 ಸೆಕೆಂಡುಗಳ ಕಾಲ ಹಗಲು-ರಾತ್ರಿ ಹಾರಾಟ ನಡೆಸಿ ಸೌರಶಕ್ತಿ ಆಧಾರಿತ ವಿಮಾನದ ಪ್ರಯೋಗವನ್ನು ಮಹತ್ವದ ಘಟ್ಟಕ್ಕೆ ತಂದು ನಿಲ್ಲಿಸಿತು. ಆ ಮೂಲಕ ಮೂರು ವಿಶ್ವ ದಾಖಲೆಗಳನ್ನೂ ನಿರ್ಮಿಸಿತು.

ನಿಗಿನಿಗಿ ಕೆಂಡದಂತೆ ಹಗಲಿನಲ್ಲಿ ಉರಿಯುವ ಸೂರ್ಯನ ಶಕ್ತಿಯನ್ನು ಹೀರಿಕೊಳ್ಳುತ್ತಲೇ ಇಂಧನ ಸಂಗ್ರಹದ ಒಡಲು ತುಂಬಿಕೊಳ್ಳುವ ಈ ಸೋಲಾರ್ ಇಂಪಲ್ಸ್ ವಿಮಾನ, ಅದೇ ಇಂಧನವನ್ನು ಬಳಸಿಕೊಂಡು ರಾತ್ರಿ ವೇಳೆಯೂ ಸಂಚರಿಸಿದ್ದು ವೈಮಾನಿಕ ಕ್ಷೇತ್ರಕ್ಕೆ `ಪರ್ಯಾಯ ಶಕ್ತಿ~ಯ ಪರಿಚಯ ಮಾಡಿಕೊಟ್ಟಿತು.

ಆದರೆ, ಈ ವಿಮಾನವಿನ್ನೂ ಪ್ರಾಯೋಗಿಕ ಹಂತದಲ್ಲಿದೆ. ವಾಣಿಜ್ಯ ಹಾಗೂ ನಾಗರಿಕ ವಿಮಾನ ಯಾನ ಕ್ಷೇತ್ರದಲ್ಲಿ ಬಳಸಬೇಕಾದರೆ ಇನ್ನೂ ಸಾಕಷ್ಟು ಅಭಿವೃದ್ಧಿ ಪಡಿಸಬೇಕಿದೆ. ಯಂತ್ರದ ಸಾಮರ್ಥ್ಯ, ಅದಕ್ಕೆ ತಕ್ಕಂತೆ ಆಸನಗಳ ಸಂಖ್ಯೆ ಹೆಚ್ಚಿಸಬೇಕಿದೆ. ನಂತರದಲ್ಲಿಯಷ್ಟೇ ಸಾಮಾನ್ಯ ಬಳಕೆಗೆ ಇದು ಲಭ್ಯವಾಗಲಿದೆ ಎನ್ನುತ್ತಾರೆ ಸಂಶೋಧಕ ಜೋಡಿ. 

ಶಕ್ತಿ-ಸಾಮರ್ಥ್ಯ

ಈ ಸೌರಶಕ್ತಿ ವಿಮಾನದ ರೆಕ್ಕೆಗಳ ಅಗಲವೇ 63.40 ಮೀಟರ್ ಇದೆ. ಅಂದರೆ ಒಂದು ದೊಡ್ಡ ಏರ್‌ಬಸ್ ವಿಮಾನದ ರೆಕ್ಕೆಗಳಷ್ಟೇ ಅಗಲವಾಗಿದೆ. ಈ ವಿಮಾನ ಒಟ್ಟಾರೆಯಾಗಿ 21.85 ಮೀಟರ್ ಉದ್ದವಿದೆ. ಎತ್ತರ 6.40 ಮೀಟರ್. ತೂಕ 1600 ಕೆ.ಜಿ. ಮಾತ್ರ. ಅಂದರೆ ಒಂದು ಚಿಕ್ಕ ಕಾರಿನ ತೂಕಕ್ಕೆ ಸಮ. ಎಂಜಿನ್ ಸಾಮರ್ಥ್ಯವಂತೂ ಬಹಳ ಕಡಿಮೆಯೆ. 10 ಅಶ್ವಶಕ್ತಿಯ(ಎಚ್‌ಪಿ) ನಾಲ್ಕು ಎಂಜಿನ್‌ಗಳನ್ನು ಒಳಗೊಂಡಿದೆ. 11628 ಸೋಲಾರ್ ಸೆಲ್ಸ್‌ಗಳನ್ನು ರೆಕ್ಕೆ-ಪುಕ್ಕಗಳಲ್ಲಿ ಹೊದ್ದುಕೊಂಡಿದೆ. ಇದರ ಟೇಕಾಫ್ ಸ್ಪೀಡ್ 35 ಕಿ.ಮೀ. ಗರಿಷ್ಠ 27900 ಅಡಿ ಎತ್ತರದಲ್ಲಿ ಹಾರಾಟ. ಹಾರಾಟದ ವೇಗ ಗಂಟೆಗೆ 70 ಕಿ.ಮೀ. ಮಾತ್ರ.

ಹಗಲಿನಲ್ಲಷ್ಟೇ ಸಂಗ್ರಹವಾಗುವ ಇಂಧನ ಶಕ್ತಿಯನ್ನು ವಿಮಾನ ಹಾರಾಟದ ವೇಳೆ ಬಹಳ ಮಿತವಾಗಿ ಬಳಸಿಕೊಳ್ಳಬೇಕಾಗಿದೆ. ಹಾಗಾಗಿ ವಿಮಾನವನ್ನು ಸಾಧ್ಯವಾದಷ್ಟೂ ಹಗುರವಾಗಿಸಬೇಕು. ಇದಕ್ಕಾಗಿಯೇ ಕಾರ್ಬನ್ ಫೈಬರ್ ಬಳಸಿ ವಿಮಾನದ ಕೆಲವು ಭಾಗಗಳನ್ನು ನಿರ್ಮಿಸಲಾಗಿದೆ. ಪ್ರೊಪಲ್ಷನ್ ಚೈನ್, ಫ್ಲೈಟ್ ಇನ್‌ಸ್ಟ್ರುಮೆಂಟೇಷನ್ ಮತ್ತಿತರ ವಿಭಾಗಗಳೆಲ್ಲವನ್ನೂ ಕಾರ್ಬನ್ ಫೈಬರ್‌ನಿಂದಲೇ ನಿರ್ಮಿಸಲಾಗಿದೆ.

ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲಿದ್ದಾಗ ವಿಮಾನ ರೆಕ್ಕೆಗಳ ಮೇಲೆ ಅಂಟಿಸಲಾಗಿರುವ ಸೂಲಾರ್ ಸೆಲ್ಸ್ ಗರಿಷ್ಠ 1000 ವಾಟ್‌ವರೆಗೂ ಶಕ್ತಿ ಹೀರಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ವಿಮಾನದ ರೆಕ್ಕೆಗಳ ತೂಕ ಹೆಚ್ಚದಂತೆ ಮಾಡಲು ಮೇಲ್ಭಾಗದಲ್ಲಿ ಸೂಲಾರ್ ಸೆಲ್ಸ್ ಮುಚ್ಚಲಾಗಿದ್ದರೆ, ರೆಕ್ಕೆಯ ಕೆಳಭಾಗ ಬಲು ಹಗುರವಾದ ಫ್ಲೇಕ್ಸಿಬಲ್ ಫಿಲಂ ಅಳವಡಿಸಲಾಗಿದೆ. ಇವೆರಡರ ಮಧ್ಯೆ 120 ಕಾರ್ಬನ್ ಫೈಬರ್         ರಿಬ್ಸ್‌ಗಳನ್ನು 50 ಸೆಂ.ಮೀ. ಅಂತರವಿಟ್ಟು ಜೋಡಿಸಲಾಗಿದೆ. ರೆಕ್ಕೆಗಳ ಎರಡೂ ಬದಿ ತಲಾ ಎರಡು ಯಂತ್ರ ಮತ್ತು ಪಾಲಿಮರ್ ಲಿಥಿಯಮ್ ಬ್ಯಾಟರಿ ಜೋಡಿಸಲಾಗಿದೆ. ಇವು ರೆಕ್ಕೆಗಳ ಮೇಲಿನ ಸೋಲಾರ್ ಸೆಲ್‌ಗಳು ಹೀರಿಕೊಂಡ ಸೂರ್ಯನ ಶಾಖವನ್ನು ಶಕ್ತಿಯಾಗಿ ಪರಿವರ್ತಿಸಿ ಸಂಗ್ರಹಿಸಿಟ್ಟುಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT