ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆರೆನಾ ವಿಲಿಯಮ್ಸಗೆ ಸೋಲು

ಆಸ್ಟ್ರೇಲಿಯ ಓಪನ್ ಟೆನಿಸ್: ಸೆಮಿಫೈನಲ್‌ಗೆ ಅಜರೆಂಕಾ, ಫೆಡರರ್‌ಗೆ ಪ್ರಯಾಸದ ಜಯ
Last Updated 23 ಜನವರಿ 2013, 19:59 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ/ಐಎಎನ್‌ಎಸ್): ಮೂರು ವರ್ಷಗಳ ಬಳಿಕ ಆಸ್ಟ್ರೇಲಿಯ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ      ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲಬೇಕೆನ್ನುವ ಅಮೆರಿಕದ ಸೆರೆನಾ ವಿಲಿಯಮ್ಸ ಕನಸು ನುಚ್ಚು ನೂರಾಯಿತು. ಮಾರ್ಗರೇಟ್ ಕೋರ್ಟ್ ಅರೆನಾದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 29ನೇ ಶ್ರೇಯಾಂಕದ ಸ್ಲೊಯೆನಾ ಸ್ಟೆಪನ್ಸ್ ಎದುರು ಸೋಲು ಕಂಡಿದ್ದು ಇದಕ್ಕೆ ಕಾರಣವಾಯಿತು.

ಬುಧವಾರ ನಡೆದ ಎಂಟರ ಘಟ್ಟದ ಹೋರಾಟದಲ್ಲಿ ಅಮೆರಿಕದ ಸ್ಟೆಪನ್ಸ್ 3-6, 7-5, 6-4ರಲ್ಲಿ ಮೂರನೇ ಶ್ರೇಯಾಂಕದ ಸೆರೆನಾಗೆ ಆಘಾತ ನೀಡಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾದರು. ಸೆರೆನಾ ಇದೇ ಟೂರ್ನಿಯಲ್ಲಿ 2010ರಲ್ಲಿ ಕೊನೆಯ ಸಲ ಪ್ರಶಸ್ತಿ ಗೆದ್ದಿದ್ದರು. ಚೊಚ್ಚಲ ಆಸ್ಟ್ರೇಲಿಯ ಓಪನ್ ಟೆನಿಸ್ ಟೂರ್ನಿ ಆಡುತ್ತಿರುವ 19 ವರ್ಷದ ಆಟಗಾರ್ತಿ ಸ್ಟೆಪನ್ಸ್ ನಾಲ್ಕರ  ಘಟ್ಟದ ಹೋರಾಟದಲ್ಲಿ ಅಗ್ರಶ್ರೇಯಾಂಕದ ವಿಕ್ಟೋರಿಯಾ ಅಜರೆಂಕಾ ಎದುರು ಸೆಣಸಲಿದ್ದಾರೆ.

ಸ್ಟೆಪನ್ಸ್ ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ನಾಲ್ಕರ ಘಟ್ಟದವರೆಗೆ ಮುನ್ನಡೆದು ಬಂದಿದ್ದು ಗರಿಷ್ಠ ಸಾಧನೆಯಾಗಿದೆ. ಕಳೆದ ವರ್ಷದ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕನೇ ಸುತ್ತು ತಲುಪಿದ್ದು ಈ ಆಟಗಾರ್ತಿಯ ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿತ್ತು. `ಇದೊಂದು ಅಮೋಘ ಗೆಲುವು. ಈ ಜಯ ನನ್ನ ಉತ್ಸಾಹವನ್ನು ಹೆಚ್ಚಿಸಿದೆ' ಎಂದು  ಸ್ಟೆಪನ್ಸ್ ಪ್ರತಿಕ್ರಿಯಿಸಿದ್ದಾರೆ.

ಸೆರೆನಾ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಿಮ್ಮಡಿಯ ನೋವಿನಿಂದ ಬಳಲಿದ್ದರು. ಇದೇ ಗಾಯ ಅವರನ್ನು ಮತ್ತೆ ಕಾಡಿತು. ಮೂರನೇ ಸೆಟ್‌ನ ಒಂದು ಹಂತದಲ್ಲಿ 4-3ರಲ್ಲಿ ಮುನ್ನಡೆಯಲ್ಲಿದ್ದರೂ, ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದ ಸೆರೆನಾಗೆ ಈ ಅನಿರೀಕ್ಷಿತ ಸೋಲು ಹೆಚ್ಚು ಘಾಸಿಗೊಳಿಸಿದೆ.

“ಇದೊಂದು ಅತ್ಯಂತ ಕಠಿಣ ಸಂದರ್ಭ” ಎಂದು ಅವರು ನುಡಿದರು. ಸೆರೆನಾ 15 ಸಲ ಗ್ರ್ಯಾನ್ ಸ್ಲ್ಯಾಮ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಆಸ್ಟ್ರೇಲಿಯ ಓಪನ್‌ನಲ್ಲಿಯೇ ಐದು ಸಲ ಚಾಂಪಿಯನ್ ಆಗಿದ್ದರು. ` ಸ್ಟೆಪನ್ಸ್ ಪ್ರತಿಭಾನ್ವಿತ ಆಟಗಾರ್ತಿ.

ಹಲವು ವರ್ಷಗಳಿಂದ ಆಕೆ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದಾಳೆ. ಆಕೆಗೆ ಅತ್ಯುತ್ತಮ ಭವಿಷ್ಯವಿದೆ' ಎಂದು ಸೆರೆನಾ ಹೇಳಿದರು.ಇನ್ನೊಂದು ನಾಲ್ಕರ ಘಟ್ಟದ ಹೋರಾಟದಲ್ಲಿ ರಷ್ಯಾದ ಮರಿಯಾ ಶರ್ಪೋವಾ ಹಾಗೂ ಚೀನಾದ ಲೀ ನಾ ಮುಖಾಮುಖಿಯಾಗಲಿದ್ದಾರೆ.

ನಾಲ್ಕರ ಘಟ್ಟಕ್ಕೆ ಅಜಂರೆಂಕಾ
ಹಾಲಿ ಚಾಂಪಿಯನ್ ಬೆಲಾರಸ್‌ನ ವಿಕ್ಟೋರಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 7-5, 6-1ರಲ್ಲಿ ರಷ್ಯಾದ ಸ್ವಾಟ್ಲೆನಾ ಕುಜ್ನೆತೊವಾ ಅವರನ್ನು ಪರಾಭವಗೊಳಿಸಿ ಸೆಮಿಫೈನಲ್ ತಲುಪಿದರು.

ಫೆಡರರ್‌ಗೆ ಪ್ರಯಾಸದ ಜಯ
ಮೂರು ಗಂಟೆ 24 ನಿಮಿಷ ಬೆವರು ಸುರಿಸಿದ ಎರಡನೇ ಶ್ರೇಯಾಂಕದ ರೋಜರ್ ಫೆಡರರ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರಯಾಸದ ಗೆಲುವು ಸಾಧಿಸಿದರು. ರಾಡ್ ಲಾವೆರ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 7-6, 4-6, 7-6, 3-6, 6-3ರಲ್ಲಿ ಫ್ರಾನ್ಸ್‌ನ ವಿಲ್‌ಫ್ರಡ್ ಸೊಂಗಾ ಅವರನ್ನು ಮಣಿಸಿದರು.

ಇನ್ನೊಂದು ಎಂಟರ ಘಟ್ಟದ ಪೈಪೋಟಿಯಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ 6-4, 6-1, 6-2ರಲ್ಲಿ ಶ್ರೇಯಾಂಕ ರಹಿತ ಆಟಗಾರ ಫ್ರಾನ್ಸ್‌ನ ಜೆರಿಮ್ ಚಾರ್ಡಿ ಅವರನ್ನು ಸೋಲಿಸಿದರು. ಇದಕ್ಕಾಗಿ ಒಂದು ಗಂಟೆ 51 ನಿಮಿಷ ಹೋರಾಟ ನಡೆಸಬೇಕಾಯಿತು. ಸೆಮಿಫೈನಲ್ ಪಂದ್ಯದಲ್ಲಿ ಫೆಡರರ್ ಹಾಗೂ ಮರ‌್ರೆ ಹೋರಾಟ ನಡೆಸಲಿದ್ದಾರೆ.

ಇನ್ನೊಂದು ನಾಲ್ಕರ ಘಟ್ಟದ ಹೋರಾಟದಲ್ಲಿ ಕಳೆದ ವರ್ಷದ ಚಾಂಪಿಯನ್ ನೊವಾಕ್ ಜೊಕೊವಿಚ್ ಹಾಗೂ ಸ್ಪೇನ್‌ನ ಡೇವಿಡ್ ಫೆರರ್ ಸೆಣಸಾಡಲಿದ್ದಾರೆ.

ಮಿಶ್ರ ಡಬಲ್ಸ್
ಟೆನಿಸ್: ಬೋಪಣ್ಣ ಜೋಡಿಗೆ ಸೋಲು

ಮೆಲ್ಬರ್ನ್ (ಪಿಟಿಐ):
ಭಾರತದ ರೋಹನ್ ಬೋಪಣ್ಣ ಹಾಗೂ ಚೀನಾ ತೈಪೆಯ ಸು ವೇಯ್ ಹಿಷಿಯೆ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡಿತು.

ಚೆಕ್ ಗಣರಾಜ್ಯದ ಕ್ವೆಟಾ ಪೆಚಾಕೆ ಪೋಲೆಂಡ್‌ನ ಮಾರ್ಸಿನ್ ಮಾತ್ಕೊವೊಸ್ಕಿ 6-2, 6-3ರಲ್ಲಿ ಬೋಪಣ್ಣ-ಹಿಷಿಯೆ ಎದುರು ಗೆಲುವು ಸಾಧಿಸಿದರು. ಇದಕ್ಕಾಗಿ 56 ನಿಮಿಷ ಹೋರಾಟ ನಡೆಸಿದರು. ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಬೋಪಣ್ಣ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ಅಮೆರಿಕದ ಬಾಬ್ ಬ್ರಯಾನ್ ಹಾಗೂ ಮಹೇಶ್ ಭೂಪತಿ-ರಷ್ಯಾದ ಎಲೆನಾ ವೆಸ್ನಿನಾ ಮಿಶ್ರ ಡಬಲ್ಸ್‌ನಲ್ಲಿ ಈಗಾಗಲೇ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಡಬಲ್ಸ್ ವಿಭಾಗದಲ್ಲೂ ಭಾರತದ ಹೋರಾಟ ಅಂತ್ಯ ಕಂಡಿದೆ. ಸಿಂಗಲ್ಸ್‌ನಲ್ಲಿ ಸೋಮದೇವ್ ದೇವವರ್ಮನ್ ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT