ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಿನ ಕ್ರಮ

Last Updated 6 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತನ್ನ ದಾರಿಗೆ ಅಡ್ಡಬಂದವರನ್ನು ಸಹಿಸುವುದಿಲ್ಲ ಎನ್ನುವ ಸಂದೇಶವನ್ನು ಕಳೆದ ಹತ್ತುವರ್ಷಗಳ ಅವಧಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಹಲವಾರು ಬಾರಿ ನೀಡಿದ್ದಾರೆ. ಈ ವಿಷಯದಲ್ಲಿ ತಮ್ಮ ಪಕ್ಷದ ನಾಯಕರನ್ನೂ ಅವರು ಬಿಟ್ಟಿಲ್ಲ. ಈಗ ಮೋದಿ ಅವರ ಪ್ರತೀಕಾರದ ಕ್ರಮಕ್ಕೆ ಬಲಿಯಾಗಿರುವವರು ಐಪಿಎಸ್ ಅಧಿಕಾರಿ ಸಂಜೀವ್ ಭಟ್.

2002ರ ಫೆಬ್ರುವರಿಯಲ್ಲಿ ಕೋಮುಗಲಭೆ ನಡೆಯುತ್ತಿದ್ದಾಗ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ `ಕೋಪವನ್ನು ಕಾರಿಕೊಳ್ಳಲು ಹಿಂದೂಗಳಿಗೆ ಅವಕಾಶ ಕೊಡಿ, ಮುಸ್ಲಿಮರು ಪಾಠ ಕಲಿಯಲಿ~ ಎಂದು ಸೂಚನೆ ನೀಡಿದ್ದರಂತೆ.

ಹೀಗೆಂದು  ಜಾಕಿಯಾ ಜಾಫ್ರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಸಂಜೀವ್ ಭಟ್ ತಿಳಿಸಿದ್ದಾರೆ. ಮೋದಿ ಅವರ ಸಹೋದ್ಯೋಗಿಯಾಗಿದ್ದ ಹರೇನ್ ಪಾಂಡ್ಯ ಹತ್ಯೆಯಲ್ಲಿ ಕೆಲವು ಬಿಜೆಪಿ ಪದಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತಮಗೆ ಲಭ್ಯವಾಗಿರುವ `ಮಹತ್ವದ ದಾಖಲೆಗಳ ಪುರಾವೆ~ಗಳನ್ನು ಕೂಡಾ ಸಂಜೀವ್ ಭಟ್ ನ್ಯಾಯಾಲಯಕ್ಕೆ ನೀಡಿದ್ದಾರೆ. ಅವರ ವಿರುದ್ಧ ನರೇಂದ್ರ ಮೋದಿ ಸರ್ಕಾರ ಸಿಡಿದೇಳಲು ಇಷ್ಟು ಸಾಕಾಗಿತ್ತು.

ಸುಳ್ಳು ಪ್ರಮಾಣಪತ್ರಕ್ಕೆ ಬಲತ್ಕಾರದಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ವಾಹನ ಚಾಲಕ ನೀಡಿರುವ ದೂರಿನ ಮೇರೆಗೆ ಭಟ್ ಅವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಬಳಸಲಾಗಿರುವ ಭಾರತೀಯ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳು (ಸೆಕ್ಷನ್ 195) ಅಪರಾಧಿಗೆ ಮರಣದಂಡನೆಯ ಶಿಕ್ಷೆ ನೀಡುವಷ್ಟು ಕಠೋರವಾಗಿವೆ. ಇದು ತಮ್ಮ ವಿರುದ್ದ ದನಿ ಎತ್ತುವವರಿಗೆ ನರೇಂದ್ರಮೋದಿ  ನೀಡಿರುವ ಎಚ್ಚರಿಕೆಯಲ್ಲದೇ ಮತ್ತೇನಲ್ಲ.

ನರೇಂದ್ರ ಮೋದಿ ತಾವು ಸಹಿಸದ ಅಧಿಕಾರಿಗಳ ಮೇಲೆ ಎರಗಿರುವುದು ಇದೇನು ಮೊದಲ ಸಲವಲ್ಲ. ಗುಜರಾತ್ ಗಲಭೆಯ ಸಮಯದಲ್ಲಿ ಗುಪ್ತಚರ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಅವರೂ ಸರ್ಕಾರದಿಂದ ಕಿರುಕುಳ ಅನುಭವಿಸಿದ್ದರು.
 
ಗುಜರಾತ್ ಗಲಭೆ ಸಂದರ್ಭದಲ್ಲಿನ ಮಹತ್ವದ ದೂರವಾಣಿ ಕರೆಗಳ ದಾಖಲೆಗಳನ್ನು ಬಹಿರಂಗಗೊಳಿಸಿದ ಐಪಿಎಸ್ ಅಧಿಕಾರಿ ರಾಹುಲ್ ಶರ್ಮಾ ಅವರು ವಿರುದ್ಧ ಪೊಲೀಸರು ಈಗಾಗಲೇ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರಿಂದಾಗಿ ಧೈರ್ಯದಿಂದ ಕರ್ತವ್ಯ ನಿರ್ವಹಿಸಿ ಜನರಿಗೆ ರಕ್ಷಣೆ ನೀಡಬೇಕಾಗಿರುವ ಪೊಲೀಸ್ ಇಲಾಖೆಯೇ ಗುಜರಾತ್‌ನಲ್ಲಿ ಸರ್ಕಾರದ ಭೀತಿಯಿಂದ ನಡುಗುತ್ತಿದೆ.

ಭಿನ್ನಮತದ ಬಗ್ಗೆ ತಿರಸ್ಕಾರ ಮತ್ತು ವಿರೋಧಿಗಳ ಬಗ್ಗೆ ಅಸಹನೆ ಹೊಂದಿರುವವರು ಉತ್ತಮ ನಾಯಕರಾಗಲು ಸಾಧ್ಯ ಇಲ್ಲ. ನರೇಂದ್ರ ಮೋದಿಯವರಲ್ಲಿ ಈ ಗುಣಗಳಿಲ್ಲ.

ತಮ್ಮ ಪಕ್ಷದ ಹಿರಿಯ ನಾಯಕರನ್ನೇ ಅವರು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ, ಸಂಪುಟದ ಸಹೋದ್ಯೋಗಿಗಳಿಗೆ ಯಾವ ಸ್ವಾತಂತ್ರ್ಯವನ್ನೂ ನೀಡಿಲ್ಲ. ಅವರದ್ದು ಸರ್ವಾಧಿಕಾರಿ ಧೋರಣೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನಾಯಕತ್ವಕ್ಕೆ ಅವಕಾಶ ಇಲ್ಲ.

ಪ್ರಧಾನಮಂತ್ರಿಯಾಗುವ ಮಹತ್ವಾಕಾಂಕ್ಷೆ ಹೊಂದಿರುವ ನರೇಂದ್ರ ಮೋದಿ ಅವರು ತಮ್ಮ ನಡವಳಿಕೆಯನ್ನು ತಿದ್ದಿಕೊಂಡರೆ ಅವರಿಗೇ ಕ್ಷೇಮ. ಸೇಡಿನ ರಾಜಕಾರಣದಲ್ಲಿ ತೊಡಗಿರುವವರನ್ನು ದೇಶದ ಮತದಾರರು ಎಂದೂ ಸಹಿಸಿಲ್ಲ ಎನ್ನುವುದು ಮೋದಿ ಅವರಿಗೆ ನೆನಪಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT