ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ಕಾಮಗಾರಿ ಅಪೂರ್ಣ: ಬೇತರಿ-ಪಾರಾಣೆ ಸಂಪರ್ಕ ಸ್ಥಗಿತ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ವಿರಾಜಪೇಟೆ: ಮುಂಗಾರು ಮಳೆಗೂ ಸಾಕಷ್ಟು ಮುಂಚೆಯೇ ಭೂಮಿಪೂಜೆ ನೆರವೇರಿಸಿ ಸೇತುವೆ ನಿರ್ಮಾಣ ಕಾಮಗಾರಿ  ಅಪೂರ್ಣಗೊಂಡಿರುವುದರಿಂದ ಬೇತರಿ-ಪಾರಾಣೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಬೇತರಿ ಗ್ರಾಮದಿಂದ ಎರಡು ಕಿಲೋಮೀಟರ್ ಅಂತರದಲ್ಲಿ ಪಾರಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣಕ್ಕೆ ಕಾಮಗಾರಿಯನ್ನು ಹಲವು  ತಿಂಗಳ ಹಿಂದೆಯೇ ಆರಂಭಿಸಲಾಗಿತ್ತು. ಸೇತುವೆ ನಿರ್ಮಾಣಕ್ಕಾಗಿ ರಸ್ತೆಯ ಅಕ್ಕ-ಪಕ್ಕದ ಕಾಫಿ ಬೆಳೆಗಾರರು ಜಾಗವನ್ನು ತೆರವು ಮಾಡಿಕೊಟ್ಟಿದ್ದರು. ಜೆಸಿಬಿ ಯಂತ್ರದಿಂದ ಜಾಗವನ್ನು ಸಮತಟ್ಟು ಮಾಡಲಾಯಿತಾದರೂ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ರಸ್ತೆ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ.

ಸೇತುವೆ ಪಕ್ಕದಲ್ಲಿ ಬೇತರಿಯ ಕಾವೇರಿ ಹೊಳೆಯ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿದೆ.ಬೇತರಿಯಿಂದ ಪಾರಾಣೆ ಗ್ರಾಮಕ್ಕೆ ತೆರಳುವವರು ಸುಮಾರು 15 ಕಿಲೋಮೀಟರ್ ಬಳಸು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಇದರಿಂದಾಗಿ ಇಲ್ಲಿನ ಗ್ರಾಮಸ್ಥರು ಪರದಾಡುವಂತಾಗಿದೆ. ರಾತ್ರಿ ವೇಳೆ ಅಥವಾ  ತುರ್ತು ಸಂದರ್ಭದಲ್ಲಿ ಪಾರಾಣೆ ಗ್ರಾಮಕ್ಕೆ ತೆರಳಬೇಕು ಎಂದರೆ ಅನಿವಾರ್ಯವಾಗಿ 15 ಕಿಲೋಮೀಟರ್ ಬಳಸಿಕೊಂಡೇ ಹೋಗಬೇಕಾದ ಅನಿವಾರ್ಯತೆ ಇದೆ.

ಎರಡೂ ಗ್ರಾಮಗಳ ಮಧ್ಯದಲ್ಲಿರುವ ಜನರಿಗೆ ರಸ್ತೆ ಸೌಲಭ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು  ವಾಹನ ಸಂಚಾರ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಈಗಲಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾಮಗಾರಿಯನ್ನು  ಪೂರ್ಣಗೊಳಿಸಿ, ಮುಕ್ತ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT