ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಾ ಸೂಪರ್ ಚಾಂಪಿಯನ್

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಒಯೆನ್ಸ್, ಡೆನ್ಮಾರ್ಕ್ (ಪಿಟಿಐ): ಲಂಡನ್   ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದ್ದ ಬ್ಯಾಡ್ಮಿಂಟನ್ `ತಾರೆ~ ಸೈನಾ ನೆಹ್ವಾಲ್ ಡೆನ್ಮಾರ್ಕ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದರು.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದಲ್ಲಿ ನಾಲ್ಕನೇ ರ‌್ಯಾಂಕ್ ಹೊಂದಿರುವಸೈನಾ 21-17, 21-8ರಲ್ಲಿ ಸ್ಥಳೀಯ ಆಟಗಾರ್ತಿ ಜೂಲಿಯನ್ ಶೆಂಕ್ ಅವರನ್ನು ಮಣಿಸಿದರು. ಈ ಪಂದ್ಯ 35 ನಿಮಿಷಗಳ ಕಾಲ ನಡೆಯಿತು.

ವಿಶ್ವರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಚೀನಾದ ಯಿಹಾನ್ ವಾಂಗ್ ಎದುರು ಸೈನಾ ಸೆಮಿಫೈನಲ್‌ನಲ್ಲಿ ಗೆಲುವು ಪಡೆದಿದ್ದರು. ಈ ಸಲದ ಒಲಿಂಪಿಕ್ಸ್‌ನಲ್ಲಿ ಗಾಯಗೊಂಡಿದ್ದ ವಾಂಗ್ ಈ ಟೂರ್ನಿಯಲ್ಲೂ ಗಾಯದ ಕಾರಣದಿಂದ ಹಿಂದೆ ಸರಿದರು. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ನಂತರ ಹೈದರಾಬಾದ್‌ನ ಆಟಗಾರ್ತಿ ಆಡಿದ ಮೊದಲ ಟೂರ್ನಿ ಇದು. ಇಲ್ಲಿ ಚಾಂಪಿಯನ್ ಆಗುವ ಮೂಲಕ ಭಾರತದ ಕ್ರೀಡಾ ಪ್ರೇಮಿಗಳ ಸಂಭ್ರಮವನ್ನು ಅವರು ಇನ್ನಷ್ಟು ಹೆಚ್ಚಿಸಿದರು.

ಮೊದಲ ಗೇಮ್‌ನ ಆರಂಭದಲ್ಲಿ ಚುರುಕಾಗಿ ಆಡಿದ ಸೈನಾ ಪಂದ್ಯ ಆರಂಭವಾದ ಮೊದಲ ಮೂರು ನಿಮಿಷಗಳಲ್ಲೇ 8-2ರಲ್ಲಿ ಮುನ್ನಡೆ ಸಾಧಿಸಿದ್ದರು. ಇದರಲ್ಲಿ ಐದು ಅತ್ಯುತ್ತಮ ಸ್ಮಾಷ್‌ಗಳು ಸೇರಿದ್ದವು. ಆದರೆ, ಆರನೇ ಶ್ರೇಯಾಂಕ ಹೊಂದಿರುವ ಶೆಂಕ್ ತಿರುಗೇಟು ನೀಡಿ 9-9ರಲ್ಲಿ ಸಮಬಲ ಸಾಧಿಸಿದರು. ಸಾಕಷ್ಟು ಪೈಪೋಟಿ ಕಂಡು ಬಂದ ಮೊದಲ ಗೇಮ್ 19 ನಿಮಿಷ ನಡೆಯಿತು.

ಎರಡನೇ ಗೇಮ್‌ನಲ್ಲಿ ಸೈನಾ 20-8ರಲ್ಲಿ ಮುನ್ನಡೆಯಲ್ಲಿದ್ದಾಗ ಶೆಂಕ್ ಮೊಗದಲ್ಲಿ ನಿರಾಸೆಯ ಕಾರ್ಮೋಡ ಆವರಿಸಿತ್ತು. 

ವಿದೇಶದಲ್ಲೂ ಅಭಿಮಾನಿಗಳ ದಂಡು: ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ನಂತರ ಭಾರತದ ಆಟಗಾರ್ತಿಗೆ ವಿದೇಶದಲ್ಲೂ ಲೆಕ್ಕವಿಲ್ಲದಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯವೇ ಇದಕ್ಕೆ ಸಾಕ್ಷಿ.

`ಭಾರತದ ಅಭಿಮಾನಿಗಳು ನನಗೆ ಬೆಂಬಲ ವ್ಯಕ್ತಪಡಿಸುವುದು ಸಹಜ. ಆದರೆ, ಡೆನ್ಮಾರ್ಕ್‌ನ ಅಭಿಮಾನಿಗಳು ನಾನು ಪಾಯಿಂಟ್ ಗಳಿಸಿದಾಗಲೆಲ್ಲ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು. ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುತ್ತೇನೆ ಎಂದು ಖಂಡಿತವಾಗಿಯೂ ನಿರೀಕ್ಷೆ ಮಾಡಿರಲಿಲ್ಲ~ ಎಂದು ಸೈನಾ ನುಡಿದರು.

`ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ತುಂಬಾ ಖುಷಿಯಾಗಿದ್ದೇನೆ. ಆದರೆ, ಬಲಗಾಲಿನ ಮಂಡಿ ನೋವು ಕಾಡುತ್ತಿದೆ. ಈ ಪ್ರಶಸ್ತಿ ಎಲ್ಲಾ ನೋವನ್ನು ಮರೆಸಿತು. ಮತ್ತೆ ಇಂತಹ ಸಾಧನೆ ಮಾಡಲು ಶಕ್ತಿ ನೀಡಿದ್ದಕ್ಕೆ ದೇವರಿಗೆ ಧನ್ಯವಾದ~ ಸೈನಾ ಪಂದ್ಯದ ನಂತರ ಖುಷಿ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT