ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತರೂ ಸೆಮಿಫೈನಲ್‌ಗೆ ಭಾರತ

ಸ್ಯಾಫ್‌ ಕಪ್‌ ಫುಟ್‌ಬಾಲ್‌: ಚೆಟ್ರಿ ಪಡೆಗೆ ವರವಾದ ಬಾಂಗ್ಲಾ ತಂಡದ ಸೋಲು
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ/ಐಎಎನ್‌ಎಸ್‌): ಮಹತ್ವದ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡರೂ ‘ಅದೃಷ್ಟ’ ಕೈ ಬಿಡಲಿಲ್ಲ. ಇದರಿಂದ ಸುನಿಲ್‌ ಚೆಟ್ರಿ ಪಡೆ ಸ್ಯಾಫ್‌ ಕಪ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿತು.

ಫುಟ್‌ಬಾಲ್‌ ಪ್ರಿಯರಿಂದ ಕಿಕ್ಕಿರಿದು ತುಂಬಿದ್ದ ದಶರಥ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ನೇಪಾಳ 2–1 ಗೋಲುಗಳಿಂದ ಭಾರತವನ್ನು ಮಣಿಸಿತು. ಆದರೆ, ಪಾಕಿಸ್ತಾನ ತಂಡದ ಎದುರು 1–2 ಗೋಲುಗಳಿಂದ ಬಾಂಗ್ಲಾದೇಶ ಸೋಲು ಕಂಡಿದ್ದು, ಭಾರತಕ್ಕೆ ವರದಾನವಾಗಿ ಪರಿಣಮಿಸಿತು. ಒಂದು ವೇಳೆ ಬಾಂಗ್ಲಾ ಎರಡು ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಭಾರತ ಟೂರ್ನಿಯಿಂದ ಹೊರ ಬೀಳುತ್ತಿತ್ತು.

ಈಗ ಪಾಕ್‌ ಗೆಲುವು ಸಾಧಿಸಿದ್ದರಿಂದ ಚೆಟ್ರಿ ಪಡೆ ನಿರಾಳವಾಗಿದೆ. ಲೀಗ್‌ ಪಂದ್ಯದಲ್ಲಿ ಪಾಕ್‌ ಎದುರು ಭಾರತ 1–0 ಗೋಲಿನಿಂದ ಗೆಲುವು ಸಾಧಿಸಿತ್ತು. ಆದ್ದರಿಂದ ಸೆಮಿಫೈನಲ್‌ ಪ್ರವೇಶಿಸುವ ಅವಕಾಶ ಭಾರತದ ಪಾಳೆಯದ್ದಾಯಿತು. ಈ ಪಂದ್ಯಕ್ಕೆ ಟಿಕೆಟ್‌ ಮಾರಾಟ ಆರಂಭವಾಗಿ ಕೇವಲ 90 ನಿಮಿಷದಲ್ಲಿ ಟಿಕೆಟ್‌ ’ಸೋಲ್ಡ್‌ ಔಟ್‌’ ಆಗಿದ್ದವು. ಇದು ಈ ಪಂದ್ಯದ ರೋಚಕತೆಗೆ ಸಾಕ್ಷಿಯಾಗಿದೆ.

‘ಎ’ ಗುಂಪಿನ ಕೊನೆಯ ಲೀಗ್‌ ಪಂದ್ಯ  ಇದಾಗಿತ್ತು. ನೇಪಾಳ ದ್ವಿತೀಯಾರ್ಧದಲ್ಲಿ ಪಾರಮ್ಯ ಮೆರೆಯಿತು. ಆದರೆ, ಹೆಚ್ಚುವರಿ ಅವಧಿಯಲ್ಲಿ ಸೈಯದ್‌ ರಹೀಮ್‌ ನಬಿ (90+2) ಗಳಿಸಿದ ಗೋಲು ಭಾರತದ ನಾಲ್ಕರ ಘಟ್ಟದ ಆಸೆಗೆ ಜೀವ ತುಂಬಿತು.

ಮೂರು ಪಂದ್ಯಗಳನ್ನು ಆಡಿರುವ ನೇಪಾಳ ಎರಡದಲ್ಲಿ ಗೆಲುವು ಸಾಧಿಸಿ 7  ಪಾಯಿಂಟ್‌ಗಳಿಂದ ಅಗ್ರಸ್ಥಾನದಲ್ಲಿದೆ. ನಾಲ್ಕು ಪಾಯಿಂಟ್‌ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನವೂ ಇಷ್ಟೇ ಪಾಯಿಂಟ್‌ ಹೊಂದಿದೆ. ಆದರೆ, ಲೀಗ್‌ ಪಂದ್ಯದಲ್ಲಿ ಪಾಕ್‌ ತಂಡವನ್ನು ಸೋಲಿಸಿದ್ದ ಕಾರಣ ಭಾರತದ ಸೆಮಿಫೈನಲ್‌ ಪ್ರವೇಶದ ಹಾದಿ ಸುಗಮವಾಯಿತು. ಲೀಗ್‌ ಹಂತದಲ್ಲಿ ಭಾರತ ಒಂದೂ ಗೋಲು ಗಳಿಸಿರ­ಲಿಲ್ಲ. ಆದರೆ ಪಾಕ್‌ ಆಟಗಾರರೇ ಭಾರತಕ್ಕೆ ‘ಉಡು­ಗೊರೆ’ ಗೋಲು ನೀಡಿದ್ದರು. ಇದರಿಂದ ಪಾಕ್‌ ತಾನೇ  ಮಾಡಿದ ತಪ್ಪಿಗೆ ಕೈ ಕೈ ಹಿಸುಕಿಕೊಳ್ಳುವಂತೆ ಆಯಿತು.

ನೇಪಾಳ ತಂಡದ ಅನಿಲ್‌ ಗುರಾಂಗ್‌ 70ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಆರ್. ಜಮುನಾ 81ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತವನ್ನು ಒತ್ತಡಕ್ಕೆ ಸಿಲುಕಿಸಿತು.

ಫಿಫಾ ದಾಖಲೆಗಳ ಪ್ರಕಾರ ಭಾರತ ತಂಡದ ಎದುರು ನೇಪಾಳ ಪಡೆದ ಎರಡನೇ ಗೆಲುವು ಇದಾಗಿದೆ. ಒಟ್ಟು 12 ಸಲ ಉಭಯ ತಂಡಗಳು ಮುಖಾಮುಖಿಯಾಗಿದ್ದವು. 1993ರಲ್ಲಿ ಢಾಕಾದಲ್ಲಿ ನಡೆದ ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ನೇಪಾಳ ಹೆಚ್ಚುವರಿ ಸಮಯದಲ್ಲಿ ಗೋಲು ಗಳಿಸಿ ಜಯ ಸಾಧಿಸಿತ್ತು.

ಸೆಮಿಫೈನಲ್‌ನಲ್ಲಿ ಭಾರತ ‘ಬಿ’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡದ ಎದುರು ಹೋರಾಟ ನಡೆಸಲಿದೆ. ಶುಕ್ರವಾರ ಮಾಲ್ಡೀವ್ಸ್‌ ಮತ್ತು ಆಫ್ಘಾನಿಸ್ತಾನ ತಂಡಗಳು ಹೋರಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡದ ಎದುರು ಭಾರತ ಪಂದ್ಯವನ್ನಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT