ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋದಾಹರಣ ಕಥಕ್ ಪ್ರದರ್ಶನ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಸಂಗೀತ, ನೃತ್ಯ ಶಾಸ್ತ್ರ ಮತ್ತು ಪ್ರಯೋಗಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗೆಗೆ ಅಂತರ್ರಾಷ್ಟ್ರೀಯ ಸಂಗೀತ ಸಮ್ಮೇಳನ, ಸಂಗೀತೋತ್ಸವವನ್ನು ಇಂದಿರಾನಗರ ಸಂಗೀತ ಸಭೆ ಪುರಂದರ ಭವನದಲ್ಲಿ ಏರ್ಪಡಿಸಿದೆ.

ಬುಧವಾರದ ವರೆಗೂ ನಡೆಯುವ ಈ ಉತ್ಸವದಲ್ಲಿ ಖ್ಯಾತ ಕಲಾವಿದರು ಹಾಗೂ ವಿದ್ವಾಂಸರು ತಮ್ಮ ವಿಚಾರಗಳನ್ನು ಬೆಳಗಿನ ಅಧಿವೇಶನಗಳಲ್ಲಿ ಮಂಡಿಸುತ್ತಿದ್ದಾರೆ. ಸಂಜೆ ಶ್ರೇಷ್ಠ ಕಲಾವಿದರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳಿವೆ.

ಸಭೆಯು ಪ್ರತಿ ವರ್ಷವೂ ಕೊಡಮಾಡುವ ಪುರಂದರ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಪಿಟೀಲು ವಾದಕ ಲಾಲ್‌ಗುಡಿ ಜಯರಾಮನ್ ಅವರಿಗೆ ಶನಿವಾರ ನೀಡಿ ಗೌರವಿಸಲಾಯಿತು.

ಇಲ್ಲಿ ನೃತ್ಯ ಪ್ರದರ್ಶನ ನೀಡಿದ ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಕ್ರಿಯಾಶೀಲ ಕಾರ್ಯದರ್ಶಿಯಾಗಿರುವ ಡಾ. ಜಯಂತ್ ಕಸ್ತೂರ್ ಒಬ್ಬ ಉತ್ತಮ ಪಳಗಿದ ಕಥಕ್ ಕಲಾವಿದರೂ ಹೌದು. ಅವರ ಆಡಳಿತ ನಿರ್ವಹಣೆಯ ಚಾಕಚಕ್ಯತೆಯನ್ನು ಅವರ ನೃತ್ಯ ಪ್ರದರ್ಶನದಲ್ಲೂ ಕಾಣಬಹುದಿತ್ತು. ಭಾನುವಾರ ಸಂಜೆ ಅವರ ಕಥಕ್ ಪ್ರದರ್ಶನ ಸಾಮಾನ್ಯ ಪ್ರದರ್ಶನಕ್ಕಿಂತ ಭಿನ್ನವಾಗಿ ಮೈತಳೆಯಿತು. ಅದು ಮಾಮೂಲಿನ ಕಥಕ್ ನೃತ್ಯ ನಿರೂಪಣೆಗಿಂತಲೂ ಮಿಗಿಲಾಗಿ ಸೋದಾಹರಣ ಭಾಷಣದಂತಾಯಿತೆಂದರೆ ಉತ್ಪ್ರೇಕ್ಷೆಯಲ್ಲ. ಅದೊಂದು ಹೊಸ ಹಾಗೂ ರಸಾನಂದದ ಅನುಭವವನ್ನು ನೀಡಿದ್ದೂ ಸಹಜ, ಸತ್ಯ.

ಡಾ. ಜಯಂತ್ ಅವರು ಪೂರ್ವ ಯೋಜನೆಯೊಂದಿಗೆ ವೇದಿಕೆಗೆ ಬರಲಿಲ್ಲ. ಅವರ ಮನೋಧರ್ಮಕ್ಕೆ ತೋಚಿದಂತೆ ಕಥಕ್ ನೃತ್ಯದ ಸೂಕ್ಷ್ಮತೆಗಳನ್ನು ರಭಸವಾಗಿಯೂ ನಯವಾಗಿಯೂ, ತಾಂಡವ ಮತ್ತು ಲಾಸ್ಯಗಳ ಸರಸ ಮೇಳದೊಂದಿಗೆ ತೆರೆದಿಡುತ್ತಾ ಹೋದರು. ಸ್ವಲ್ಪ ನಾಟಕೀಯತೆ ಇತ್ತಾದರೂ ಅದು ಸಾಭಾಸವಾಗಲಿಲ್ಲ. ಸದ್ಯ ಸ್ಫೂರ್ತಿಯೊಂದಿಗೆ ಗಣೇಶನನ್ನು (ಪ್ರಥಮ ಸುಮಿರತ) ವಂದಿಸಿ ಕಥಕ್‌ನ ತಾಂತ್ರಿಕತೆಯ ಸೊಬಗನ್ನು ಮೆಟ್ಟಿಲು ಮೆಟ್ಟಿಲಾಗಿ ಪರಿಚಯಿಸಿದರು. ಆದರೂ ಆ ತಾಂತ್ರಿಕತೆಯ ತಿರುಳನ್ನು ರಸಿಕರು ಆಸ್ವಾದಿಸುವಂತೆ ಮಾಡಿದ್ದು ಅಭಿನಂದನೀಯ. ತೀನ್ ತಾಳವನ್ನು ಅವರು ವ್ಯಾಖ್ಯಾನಿಸಿದ ಪರಿ ನಿಜಕ್ಕೂ ಅಸಾಮಾನ್ಯ. ಅವರ ಪಢಂತ್ (ಬೋಲ್‌ಗಳನ್ನು ಪಠಿಸುವುದು) ಹಾಗೂ ಹಾಡುಗಾರಿಕೆ ಇಷ್ಟವಾಯಿತು.  

ಅವರ ತತ್ಕಾರ್, ಉಠಾನ್, ಉಪಜ್, ಜೈಪುರ ಘರಾಣೆಯ ವಿಶಿಷ್ಟ ಜೂಟ್‌ಗಳು, ಚಕ್ಕರ್, ಥಾಟ್, ಚಾಲ್ ಥಾಟ್, ಫರನ್ ಮುಂತಾದ ಅಂಶಗಳು ರೋಚಕವಾಗಿತ್ತು, ಲಯ ವೈವಿಧ್ಯ ಕಲಾವಿದರ ಅಂಗ ಸೌಷ್ಠವವನ್ನು ತೋರಿತು. ಅವರ ಬಂದೆ ಔರ್ ಖುಲಾ ಹಾಥ್ ಥಾಟ್‌ಗಳು ಕಲಾತ್ಮಕವಾಗಿಯೂ ಇದ್ದವು. ತತ್ಕಾರ್‌ನಲ್ಲಿ ಅವರ ಪಾದಗಳು ಉಲಿದವು. ಬಿಗಿಯಾದ ಲಯದಲ್ಲಿ ಅವರ ಕಲಾಯಿ (ಅಂಗೈಗಳು), ಅಂಗಗಳು ಮತ್ತು ಕೈ ಕಾಲುಗಳು ಸುಗಮವಾಗಿ ಚಲಿಸಿ ಕಲಾವಿದರ ಸಾಧನೆ ಮತ್ತು ಪರಿಣತಿಗಳ ಭವ್ಯತೆ ಪ್ರಕಟಗೊಂಡಿತು. ಪದೇ ಪದೇ ತಮ್ಮ ಗುರುಗಳಾದ ಪಂ. ದುರ್ಗಾಲಾಲ್ ಮತ್ತು ಹಿರಿಯ ಕಥಕ್ ಗುರು ಪಂ. ಸುಂದರ್‌ಪ್ರಸಾದ್ ಅವರನ್ನು ನೆನೆಯುತ್ತಾ ಮುನ್ನಡೆದರು. ತಮ್ಮ ನಿರೂಪಣೆಗಳಿಗೆ ಅವರು ನೀಡಿದ ವಿವರಣೆಗಳು ಉಪಯುಕ್ತವಾಗಿದ್ದವು.

ಅಮ್ಜದ್ ಅಲಿ (ಗಾಯನ), ಕಮಲ್ ಅಹಮದ್ (ಸಾರಂಗಿ) ಮತ್ತು ಯೋಗೇಶ್ (ತಬಲ ಹಾಗೂ ಪಢಂತ್) ಅವರ ಪಕ್ವವಾದ ಸಾಥ್‌ನೊಂದಿಗೆ ಮುಂದುವರೆದು ದ್ರುತ್ ಲಯದಲ್ಲಿ ಗತ್ ನಿಕಾಸನ್ನು ಮಂಡಿಸಿದರು. ಇದರಲ್ಲಿ ಕೆಲವು ಪಾತ್ರಗಳು ಮತ್ತು ಕ್ರಿಯೆಗಳನ್ನು ಸೂಚಿಸುವುದು ವಾಡಿಕೆ. ಘೂಂಘಟ್ (ಸೆರಗು) ಕೀ ಗತ್ ತೋರಿದ ನಂತರ ಸ್ವತಃ ತಾವೇ ರಚಿಸಿರುವ ಗಹನೋಂ ಕಿ ಗತ್‌ನಲ್ಲಿ (ಆಭರಣಗಳು, ಕಾಲುಂಗುರ, ಗೆಜ್ಜೆ, ಸೊಂಟ ಪಟ್ಟಿ, ಬಳೆಗಳು, ಜಡೆ) ಕಲಾಪೂರ್ಣವಾಗಿಯೂ ಹೊಸತನದಿಂದಲೂ ಗಮನ ಸೆಳೆದರು.

ನಾಯಕಿ ತನ್ನ ಸಖಿ ಬಳಿ ಮನದಾಳವನ್ನು ಬಿಚ್ಚಿಡುವ ಸನ್ನಿವೇಶವನ್ನು ಠುಮ್ರಿಯೊಂದರ (ಏ ರೀ ಸಖೀ ಮೊರೆ ಪಿಯ ಘರ ಆಯೆ) ಮೂಲಕ ಹೃದಯಂಗಮವಾಗಿ ಡಾ. ಜಯಂತ್ ಅಭಿನಯಿಸಿದರು. ಅದೂ ಒಂದು ವಿಶಿಷ್ಟ ನಿರೂಪಣೆಯೇ. ಮೊದಲು ಅವರು ಕುಳಿತುಕೊಂಡು ಠುಮ್ರಿಯ ಸಾಹಿತ್ಯವನ್ನು ತಾವೂ ಹಾಡುತ್ತಾ ನಾಯಕಿ ಮತ್ತು ಸಖಿಯರನ್ನು ಪರಿಚಯಿಸಿದರು. ನಂತರ ನೃತ್ಯದಲ್ಲಿ ಅದನ್ನು ವಿಸ್ತರಿಸಿ ಶ್ರೇಷ್ಠತೆಯನ್ನು ಮೆರೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT