ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರದಿಂದ ಬಜೆಟ್ ಅಧಿವೇಶನ

Last Updated 18 ಫೆಬ್ರುವರಿ 2011, 17:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಬಹುಚರ್ಚಿತ ಆಹಾರ ಭದ್ರತೆ ಮಸೂದೆ ಮತ್ತು ಲೋಕಪಾಲ ಮಸೂದೆ ಮಂಡನೆಯಾಗುವ ಸಾಧ್ಯತೆ ಇಲ್ಲ.

ಮೂರು ತಿಂಗಳ ಕಾಲ ನಡೆಯುವ ಈ ದೀರ್ಘಾವಧಿಯ ಅಧಿವೇಶನದಲ್ಲಿ ಸುಮಾರು 32 ಸುಧಾರಣಾ ಕ್ರಮಗಳು ಮಂಡನೆಯಾಗಲಿವೆ. ಆದರೆ ಈ ಪಟ್ಟಿಯಲ್ಲಿ ಮೇಲಿನ ಎರಡು ಮಸೂದೆಗಳು ಇರುವುದಿಲ್ಲ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಬನ್ಸಾಲ್ ಅವರು ಸುದ್ದಿಗಾರರಿಗೆ ತಿಳಿಸಿದಂತೆ, ಆಹಾರ ಭದ್ರತೆ ಮತ್ತು ಲೋಕಪಾಲ ಮಸೂದೆಗಳು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿಲ್ಲ. ಅಧಿವೇಶನದಲ್ಲಿ ಮಂಡನೆಯಾಗುವ ವಿಷಯಗಳಲ್ಲಿ ವಿವಾದಾತ್ಮಕ ಕೋಮು ಹಿಂಸಾ ಮಸೂದೆ, ಪತ್ರಿಕೆಗಳು ಮತ್ತು ಪುಸ್ತಕಗಳ ನೋಂದಣಿ ಹಾಗೂ ಪ್ರಕಟಣೆಯ ಮಸೂದೆ, ಭೂಸ್ವಾಧೀನ ತಿದ್ದುಪಡಿ ಮಸೂದೆ, ಸಮಾನ ಅವಕಾಶ ಮಸೂದೆ (ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತ), ಮಹಿಳೆಯರನ್ನು ಅಸಭ್ಯವಾಗಿ ಬಿಂಬಿಸುವುದನ್ನು ನಿಷೇಧಿಸುವ (ತಿದ್ದುಪಡಿ) ಮಸೂದೆ, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಮಸೂದೆ ಸೇರಿವೆ.

ಇದಲ್ಲದೆ, ಈಗಾಗಲೇ ರಾಜ್ಯಸಭೆ ಅಂಗೀಕರಿಸಿರುವ ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗಲಿದೆ. ಆರ್ಥಿಕ ಮಸೂದೆಗಳಲ್ಲಿ ಬಹು ಸಮಯದಿಂದ ಮಂಡನೆಗಾಗಿ ಕಾದಿರುವ ಸರಕುಗಳು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಅವಕಾಶ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಹಾಗೂ ಕಂಪೆನಿಗಳ (ತಿದ್ದುಪಡಿ) ಮಸೂದೆ 2009 ಮತ್ತು ಲೆಕ್ಕ ಪರಿಶೋಧಕರ (ತಿದ್ದುಪಡಿ) ಮಸೂದೆ 2010 ಸೇರಿದಂತೆ ಇತರ ಮಹತ್ವಪೂರ್ಣ ಆರ್ಥಿಕ ಶಾಸನಗಳನ್ನು ಸಹ ಸರ್ಕಾರ ಸಂಸತ್ತಿನಲ್ಲಿ ಕೈಗೆತ್ತಿಕೊಳ್ಳಲಿದೆ. ಆದರೆ ಹೊಸ ರಾಜ್ಯ ರಚನೆಗೆ ಅವಕಾಶ ಮಾಡಿಕೊಡುವ ಯಾವುದೇ ಮಸೂದೆಯನ್ನು ಈಗ ಸಂಸತ್ತಿನಲ್ಲಿ ಮಂಡಿಸುವ ಯೋಜನೆ ಸರ್ಕಾರಕ್ಕಿಲ್ಲದ ಕಾರಣ, ಪ್ರಸಕ್ತ ಅಧಿವೇಶನದ ಆರಂಭ ದಿನವೇ ತೆಲಂಗಾಣ ವಿವಾದ ಬಿಸಿ ಪ್ರತಿಭಟನೆಗೆ ಅನುವು ಮಾಡುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT