ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿಹುದು ಮನೆಯ ಮಾಳಿಗೆ...

Last Updated 2 ಜೂನ್ 2011, 9:50 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ನೌಕರರ ವಸಾಹತುಗಳನ್ನು ನೋಡಿದರೆ ಸೋರುತಿಹುದು ಮನೆಯ ಮಾಳಿಗೆ ಎನ್ನುವ ಷರೀಫರ ತತ್ವ ಪದವನ್ನು, ಸ್ವಲ್ಪ ಮಳೆಗೆ ಸೋರುತಿಹವು ವಸಾಹತುಗಳು ಎಂದು ಬದಲಾವಣೆ ಮಾಡಬಹುದು.

1970ರ ದಶಕದಲ್ಲಿ ಆಲಮಟ್ಟಿ ಜಲಾಶಯದ ಕಾಮಗಾರಿ ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಗಳು ಪ್ರಾರಂಭವಾದಾಗ ಇಲ್ಲಿ ನೌಕರಿ ಮಾಡುವ ಸಿಬ್ಬಂದಿಗೆ ವಸಾಹತುಗಳನ್ನು ಆಲಮಟ್ಟಿ ಡ್ಯಾಂ ಸೈಟ್‌ನಲ್ಲಿ ನಿರ್ಮಿಸಲಾಯಿತು. ನೌಕರರ ಸಂಖ್ಯೆ ಹೆಚ್ಚಾದಾಗ 1980ರಲ್ಲಿ ಹಾಗೂ 1990ರಲ್ಲಿ ಮತ್ತಷ್ಟು ವಸಾಹತು ಗಳನ್ನು ನಿರ್ಮಿಸಲಾಯಿತು. ಅದಕ್ಕಾಗಿ ನೌಕರರ ಸಂಬಳದಲ್ಲಿ ಬರುವ ಮನೆ ಭತ್ಯೆಯನ್ನು ಮುರಿಯಲಾಗುತ್ತಿದೆ.

ಆದರೆ ಈಗ ಆಕಾಶದಲ್ಲಿ ಮೋಡಗಳು ಜಮಾವಣೆ ಆದಾಗ ಆಲಮಟ್ಟಿಯ ನೌಕರರು ಭಯಪಡುತ್ತಾರೆ. ಮಳೆ ಹನಿ ಬಿದ್ದ ತಕ್ಷಣ ವಸಾಹತುಗಳು ಸೋರಲು ಆರಂಭಿಸುತ್ತವೆ. 30 ವರ್ಷಗಳ ಹಿಂದೆ ಕಟ್ಟಿದ ವಸಾಹತುಗಳು ಶಿಥಿಲಗೊಂಡಿವೆ, ಕೆಲವು ವಸಾಹತುಗಳು ಜಖಂಗೊಂಡಿವೆ. ಹೀಗಾಗಲು ಕಾರಣ ಜಲಾಶಯದ ಅಧಿಕಾರಿಗಳ ಅಸಮರ್ಪಕ ನಿರ್ವಹಣೆ.

ಆಲಮಟ್ಟಿ ಡ್ಯಾಂ ಸೈಟ್‌ನಲ್ಲಿ ಇರುವ ಎಲ್ಲಾ ವಸಾಹತುಗಳು ಸೋರುತ್ತಿದ್ದು, ದುರಸ್ತಿ ಮಾಡಲು ಪ್ರಯತ್ನಗಳು ನಡೆದಿಲ್ಲ. ದುರಸ್ತಿ ಇಲ್ಲದ್ದರಿಂದ ಮನೆಗಳು ಕುಸಿಯುವ ಹಂತಕ್ಕೆ ತಲುಪಿವೆ. ಇದರಿಂದ ವಸಾಹತುವಿನಲ್ಲಿ ವಾಸಿಸುವ ನೌಕರರು ಹಿರಿಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಮೊದಲೆಲ್ಲಾ ಪ್ರತಿವರ್ಷ ಒಡೆದ ಹಂಚುಗಳ ಬದಲಾವಣೆ, ಕುಂಬಿಯ ದುರಸ್ತಿ, ಡಾಂಬರ್ ಶೀಟ್ ಹಾಕಿ ಮನೆ ಸೋರದಂತೆ ತಡೆಗಟ್ಟಲಾಗುತ್ತಿತ್ತು. ಆಗ ದುರಸ್ತಿಗೆ ನಿಗಮದಿಂದ ಹಣ ಬರುತ್ತಿತ್ತು.

ಆದರೆ ಕಳೆದ ಐದು ವರ್ಷಗಳಿಂದ, ವಸಾಹತುಗಳನ್ನು ನಿರ್ವಹಣೆ ಮಾಡುವ ಆಲಮಟ್ಟಿ ಆಣೆಕಟ್ಟು ವಿಭಾಗದ ನಂ-3 ಉಪವಿಭಾಗಕ್ಕೆ  ಕೃಷ್ಣಾ ಭಾಗ್ಯ ಜಲ ನಿಗಮದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಅನೇಕ ಅಧಿಕಾರಿಗಳ ಮನೆಯೇ ಸೋರುತ್ತಿವೆ. ಇನ್ನು ಸಿ ಮತ್ತು ಡಿ ದರ್ಜೆ ನೌಕರರ ಮನೆಗಳ ಪಾಡಂತೂ ಹೇಳತೀರದಾಗಿದೆ.

ಆಲಮಟ್ಟಿ ಜಲಾಶಯದ ಈ ಕ್ಯಾಂಪಿನಲ್ಲಿ ಸುಮಾರು 600ಕ್ಕೂ ಹೆಚ್ಚು ಕೃಷ್ಣಾ ಭಾಗ್ಯ ಜಲ ನಿಗಮದ ನೌಕರರ ವಸಾಹತುಗಳಿದ್ದು, ಸುಮಾರು ಐದಾರು ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಬಹುತೇಕ ವಸಾಹತು ಗಳು ಸ್ವಲ್ಪ ಮಳೆ ಬಂದರೂ ಸಾಕು ಸೋರುತ್ತಿವೆ.

1970ರ ದಶಕದಲ್ಲಿ ನಿರ್ಮಾಣಗೊಂಡ ಮಂಗಳೂರ ಹಂಚಿನ ಛಾವಣಿ ಹೊಂದಿರುವ ಮನೆಗಳು ಇಲ್ಲಿ ಬಹಳಷ್ಟಿದ್ದು,  ಹಂಚುಗಳು ಒಡೆದಿವೆ, ಮನೆಯ ಹಂಚಿನ ಅಡ್ಡಾಗಿರುವ ಕಟಗಿಯ ತೊಲೆ ಬೀಳುತ್ತಿವೆ. ಈ ಮನೆಗಳ ಹಂಚಿನ ಮೇಲಿರುವ ಕುಂಬಿಗಳು ಸಿಮೆಂಟ್ ಇಲ್ಲದೇ ಸೋರುತ್ತಿವೆ.

1990ರ ದಶಕದಲ್ಲಿ ಕಟ್ಟಿದ ಮನೆಗಳು ಸಿಮೆಂಟ್‌ನ ಮೇಲ್ಛಾವಣಿ ಇದ್ದರೂ, ಕಳಪೆ ಕಾಮಗಾರಿಯಿಂದ ಕೂಡಿದ್ದು, ಅವೂ ಸೋರುತ್ತಿವೆ.

ಈ ಕುರಿತು ಜಿ.ಪಂ. ಸದಸ್ಯ ಶಿವಾನಂದ ಅವಟಿ ನೇತೃತ್ವದಲ್ಲಿ ಕೆಲವರು ಜಲಸಂಪನ್ಮೂಲ ಇಲಾಖೆ ಸಚಿವ ಬಸವರಾಜ ಬೊಮ್ಮೋಯಿ ಆಲಮಟ್ಟಿಗೆ ಭೇಟಿ ನೀಡಿದಾಗ, ಅವರಿಗೆ ಇಲ್ಲಿನ ನೌಕರರ ವಸಾಹತುವಿನ ಸಮಸ್ಯೆಯನ್ನು ನಿವೇದಿಸಿಕೊಂಡಿದ್ದರು. ಆಲಮಟ್ಟಿಯ ಕೆ.ಬಿ.ಜೆ.ಎನ್.ಎಲ್. ಮುಖ್ಯ ಎಂಜಿನಿಯರ್‌ಗೆ ಕೂಡಲೇ ಅನುದಾನ ಬಿಡುಗಡೆ ಮಾಡುವುದಾಗಿಯೂ ಸೂಚಿಸಿದ್ದರು.

ಆದರೆ ಸಚಿವರ ಭರವಸೆ ಈಡೇರಿಲ್ಲ ಎಂದು ನಿಗಮದ ನೌಕರರು ಮಾತನಾಡಿಕೊಳ್ಳುತ್ತಿದ್ದಾರೆ. 
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸ್ಥಳೀಯ ಘಟಕದ ಪದಾಧಿಕಾರಿಗಳು ಈ ಕುರಿತು ಚಿಂತೆ ಮಾಡುತ್ತಿಲ್ಲ. ಇತ್ತ ನಿಗಮದ ಹಿರಿಯ ಅಧಿಕಾರಿಗಳಿಗೂ ಹೇಳೋದಕ್ಕೆ ಆಗೋದಿಲ್ಲ, ವಸಾಹತು ಬಿಟ್ಟು ಬೇರೆ ಮನೆ ಮಾಡಲು ಮನೆ ಬಾಡಿಗೆಗೆ ಸಿಗುವುದಿಲ್ಲ. ಹೀಗಾಗಿ ಇಲ್ಲಿಯ ನೌಕರರ ತ್ರಿಶಂಕು ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕೂಡಲೇ  ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ತುರ್ತು ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ.

ರೋಹಿಣಿ ಮಳೆಯ ಅರ್ಭಟಕ್ಕೆ ಕಳೆದ ಎರಡು ದಿನಗಳಿಂದ ಆಲಮಟ್ಟಿಯಲ್ಲಿರುವ ನೌಕರರು ಹಾಗೂ ಅವರ ಕುಟುಂಬದವರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

ಸೋರುವ ಮನೆಗಳ ಜೊತೆ ಸಮರ್ಪಕ ದುರಸ್ತಿ ಇಲ್ಲದೇ 10ಕ್ಕೂ ಹೆಚ್ಚು ವಸಾಹತುಗಳು ಸಂಪೂರ್ಣ ಕುಸಿದಿದ್ದು, ಅಲ್ಲಿ ಯಾರೂ ವಾಸ ಮಾಡದ ಸ್ಥಿತಿ ಉಂಟಾಗಿದೆ.

ಮಳೆಯ ಅವಾಂತರ: ಮಳೆ ಬಂದ ತಕ್ಷಣವೇ ಛಾವಣಿ ಸೋರಲಾರಂಬಿಸುತ್ತದೆ. ಮನೆಯಲ್ಲಿರುವ ಸಾಮಗ್ರಿಗಳು, ಟಿ.ವಿ, ಕಂಪ್ಯೂಟರ್ ಒದ್ದೆಯಾಗುತ್ತವೆ, ರಾತ್ರಿ ಮಲಗಲೂ ಜಾಗ ಇಲ್ಲದ್ದಾಗುತ್ತದೆ. ಆವತ್ತು ರಾತ್ರಿಯೆಲ್ಲಾ ಜಾಗರಣೆ ಮಾಡಬೇಕಾಗುತ್ತಿದೆ.

ಆಲಮಟ್ಟಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯ ಸುಮಾರು 30ಕ್ಕೂ ಹೆಚ್ಚು ಕಚೇರಿಗಳಿದ್ದು, ವ್ಯವಸ್ಥಾಪಕ ನಿರ್ದೇಶಕ ಕಚೇರಿಯೂ ಸೇರಿದಂತೆ ಅನೇಕ ಕಚೇರಿಗಳ ಪರಿಸ್ಥಿತಿಯೂ ವಸಾಹತುವಿನ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಬಹುತೇಕ ಕಚೇರಿಗಳು ಮಳೆಯ ನೀರಿಗೆ ಸೋರುತ್ತಿವೆ. ಅಲ್ಲಿ ಕಚೇರಿಯ ಕಡತಗಳಿಗೆ ಪ್ಲಾಸ್ಟಿಕ್ ಹಾಳೆ ಹಾಸಿ ಮಳೆಯ ನೀರು ತಾಕದಂತೆ ನೋಡಿಕೊಳ್ಳಲಾಗುತ್ತದೆ. 

ತುರ್ತು ಕ್ರಮ ಅಗತ್ಯ: ಮಳೆಗಾಲ ಪ್ರಾರಂಭಕ್ಕೇ ಇಷ್ಟೊಂದು ಆವಾಂತರ ಆಗಿದ್ದು, ಮುಂದಿನ ಮಳೆಗೆ ಇನ್ನೆಷ್ಟು ಅವಾಂತರ ಕಾದಿದೆ ಎಂದು ನಿಗಮದ ನೌಕರರು ತಲೆ ಮೇಲೆ ಕೈಯಿಟ್ಟು ಕುಳಿತಿದ್ದಾರೆ. ಒಡೆದ ಹಂಚುಗಳನ್ನು ಬದಲಿಸಿ, ಸೋರುವ ಭಾಗಕ್ಕೆ ಡಾಂಬರ್‌ನ ತಟ್ಟು ಹಾಕಬೇಕಿದೆ. ನೌಕರರ ಸಂಘವೂ ನೌಕರರ ಸಮಸ್ಯೆ ಬಗೆಹರಿಸಲು ಹೋರಾಟದ ಮೂಲಕ ಪ್ರಯತ್ನ ನಡೆಸಬೇಕಾಗಿದೆ ಎನ್ನುವುದು ಎಲ್ಲ ನೌಕರರ ಅಭಿಪ್ರಾಯ.

ಶಾಸಕ ಬೆಳ್ಳುಬ್ಬಿ ಭರವಸೆ: ಈ ಸಮಸ್ಯೆ ಈಗಷ್ಟೆ ನನಗೆ ತಿಳಿದಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ, ಶೀಘ್ರದಲ್ಲಿಯೇ ವಸಾಹತುಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಸ್.ಕೆ. ಬೆಳ್ಳುಬ್ಬಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT