ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ವಂಚಿತ ಚಿಕ್ಕರ್ದೆ ದಲಿತ ಕಾಲೊನಿ

Last Updated 12 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕರ್ದೆ ಗ್ರಾಮದ ದಲಿತ ಕಾಲೋನಿಯ ಜನರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಚಿಕ್ಕರ್ದೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 7 ಕುಟುಂಬಗಳು ವಾಸವಿದ್ದು ಇದರಲ್ಲಿ 4 ಕುಟುಂಬಗಳು ವಾಸಿಸುತ್ತಿರುವ ಸ್ಥಳಕ್ಕೆ ತೆರಳಲು ರಸ್ತೆಯೇ ಇಲ್ಲದಂತಾಗಿದೆ. 35ಕ್ಕೂ ಅಧಿಕ ಮಂದಿ ನೆಲೆಸಿರುವ ಇಲ್ಲಿಗೆ ಗ್ರಾಮ ಪಂಚಾಯಿತಿಯಿಂದ ಇದುವರೆಗೂ ಯಾವುದೇ ಸವಲತ್ತು ಲಭ್ಯವಾಗಿಲ್ಲ ಎಂದು ಕಾಲೋನಿ ನಿವಾಸಿಗಳು ದೂರುತ್ತಾರೆ.

ಜಂಬೂರು ಗ್ರಾಮದಿಂದ ಚಿಕ್ಕರ್ದೆಗೆ ತೆರಳುವ ರಸ್ತೆಗೆ ಸುಮಾರು 200 ಮೀಟರ್‌ಗಳಷ್ಟು ದೂರ ಜಲ್ಲಿಕಲ್ಲಿನ ರಸ್ತೆ ಮಾಡಿ 12 ವರ್ಷಗಳೇ ಕಳೆದಿದ್ದರೂ ಇದುವರೆಗೂ ಡಾಂಬರ್ ಹಾಕಿಲ್ಲ.

ಇಲ್ಲಿಂದ ಮುಂದಕ್ಕೆ ಸುಮಾರು 100 ಮೀ ದೂರದಲ್ಲಿ 7 ಕುಟುಂಬಗಳು ನೆಲೆಸಿದ್ದು, ಈ ಸ್ಥಳಕ್ಕೆ ತೆರಳಲು ಕಾಲುದಾರಿಯೊಂದನ್ನು ಹೊರತುಪಡಿಸಿದರೆ ಸಮರ್ಪಕ ರಸ್ತೆಯಿಲ್ಲ. ಅಕ್ಕಪಕ್ಕದವರು ರಸ್ತೆಗೆ ಜಾಗ ಬಿಟ್ಟುಕೊಡುವುದಾಗಿ ಹೇಳಿದರೂ ಸಹ ಸಂಬಂಧಿಸಿದ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಜನಪ್ರತಿನಿಧಿಗಳು ಸೌಲಭ್ಯ ಕಲ್ಪಿಸುವಲ್ಲಿ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥ ನಾಗರಾಜ್ ದೂರಿದ್ದಾರೆ.
ಚಿಕ್ಕರ್ದೆ ಗ್ರಾಮದಲ್ಲಿ ಕೇಶವ  ಹಾಗೂ ಸರಸು ದಂಪತಿ ಕಳೆದ 10 ವರ್ಷಗಳಿಂದ ಮುರಕಲು ಮನೆಯಲ್ಲೇ ಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಹಾಗೂ 3 ಮಂದಿ ಮಕ್ಕಳೊಂದಿಗೆ ವಾಸಿಸುತ್ತಿರುವ ಇವರು ತಮಗೊಂದು ಮನೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲ.

ನಮ್ಮ ಕಾಲೋನಿಗೆ ರಾಜಕೀಯದವರು ವೋಟು ಕೇಳೋಕೆ ಮಾತ್ರ ಬರ‌್ತಾರೆ. ಆಮೇಲೆ ತಿರುಗಿಯೂ ನೋಡಲ್ಲ ಎಂದು ನಾಗರಾಜ್ ದೂರಿದರೆ, 40 ವರ್ಷಗಳಿಂದ ಓಟು ಹಾಕುತ್ತ ಬಂದರೂ ನಮ್ಮ ಪರಿಸ್ಥಿತಿಯೇನೂ ಸುಧಾರಿಸಿಲ್ಲ ಎಂದು ವೃದ್ಧೆ ಪೊನ್ನಮ್ಮ ಹೇಳುತ್ತಾರೆ.

ಒಟ್ಟಾರೆ ಚಿಕ್ಕರ್ದೆ ಗ್ರಾಮದಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಸಲು ಸಂಬಂಧಿಸಿದವರು ಮುಂದಾಗಬೇಕಿದೆ. ಶೇ 25ರ ಅನುದಾನದಲ್ಲಾದರೂ ಇಲ್ಲಿಯ ಪರಿಶಿಷ್ಟ ಜಾತಿ ಕುಟುಂಬಕ್ಕೆ ಸೌಲಭ್ಯ ಕಲ್ಪಿಸಿದರೆ ಇವರ ಬವಣೆಯ ಬದುಕು ಸುಧಾರಿಸುತ್ತದೆ.

ಕಾಂಗ್ರೆಸ್ ಎಚ್ಚರಿಕೆ
ಚಿಕ್ಕರ್ದೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಕೇಶವರಿಗೆ ಮನೆ ನಿರ್ಮಿಸಿಕೊಡಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಮುಂದಾಗಬೇಕು.

ತಪ್ಪಿದಲ್ಲಿ ಮುಂದಿನ 20 ದಿನಗಳ ನಂತರ ಕಾಲೋನಿ ನಿವಾಸಿಗಳ ಸಹಕಾರದೊಂದಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಧರಣಿ ನಡೆಸುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಹೇಳಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಸಚಿವರು ಈ ಕಾಲೋನಿಯ ನಿವಾಸಿಗಳ ಬಗ್ಗೆ ಕೂಡಲೇ ಗಮನ ಹರಿಸದಿದ್ದರೆ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುತ್ತದೆ ಎಂದು ಚಿಕ್ಕರ್ದೆ ಗ್ರಾಮಕ್ಕೆ ಗುರುವಾರ ತೆರಳಿ ಅಲ್ಲಿಯ ನಿವಾಸಿಗಳನ್ನು ಭೇಟಿ ಮಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್, ವಕ್ತಾರ ಬಿ.ಬಿ.ಸತೀಶ್, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯಧ್ಯಕ್ಷ ಕೆ.ಎ.ಯಾಕೂಬ್ ಎಚ್ಚರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT