ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ಥ -ಬದುಕು: ಆಧ್ಯಾತ್ಮಿಕ ಆಶೀರ್ವಾದಕ್ಕೆ ಬಾಗಿಲು ತೆರೆಯಿರಿ...

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನೀವು ಪದೇ ಪದೇ ಕಾಯಿಲೆ ಬೀಳುತ್ತಿದ್ದೀರಾ? ಈ ಭೂಮಿಯ ಮೇಲೆ ದೈವಿಕ ಬದುಕು ಸಾಗಿಸುವ ನಿಮ್ಮ ಆತ್ಮದ ಆಶಯ ಈಡೇರಿದೆಯೇ? ಯೋಚಿಸಿ...ಮತ್ತೊಮ್ಮೆ ಯೋಚಿಸಿ.

ಈ ಮಧ್ಯೆ, ನಾನು ನನ್ನ ಆತ್ಮದ ನಾಲ್ಕು ಆಶಯ ಹಂಚಿಕೊಳ್ಳುತ್ತೇನೆ. ಅದೇ ಸ್ಫೂರ್ತಿ, ಶಕ್ತಿಯೊಂದಿಗೆ ನಾನು ಜೀವನ ಸಾಗಿಸುತ್ತಿರುವೆ. ಅದು ನಿಮ್ಮ ಆತ್ಮದ ಆಶಯವೂ ಆಗಿದ್ದಲ್ಲಿ ಅದನ್ನು ಅನುಸರಿಸಬಹುದು.

*ಅದು ಚಿಕ್ಕ, ಪುಟ್ಟದ್ದೇ ಆಗಿರಬಹುದು, ನಿಮಗೆ ಮಾಡಬೇಕು ಅನ್ನಿಸಿದ ಒಳ್ಳೆಯ ಕೆಲಸಗಳನ್ನು ಮುಜುಗರಪಟ್ಟುಕೊಳ್ಳದೇ ಮಾಡಿ. ಬೇರೆಯವರ ಮಾತನ್ನು ಗಮನವಿಟ್ಟು ಆಲಿಸುವುದು. ನಿಮ್ಮನ್ನು ಸುರಕ್ಷಿತವಾಗಿ ಊರು ತಲುಪಿಸಿದ ಚಾಲಕನಿಗೆ ಧನ್ಯವಾದ ಹೇಳುವುದು ಇತ್ಯಾದಿ.ಇತ್ತೀಚೆಗೆ ತರಕಾರಿ ಮಾರುವವಳೊಬ್ಬಳು ನಮ್ಮಬಳಿಬಂದು ಪ್ಲಾಸ್ಟಿಕ್ ಚೀಲ ಕೇಳಿದಳು. ಬೇರೆ ಯಾರಿಗೋಬಟಾಣಿ ಹಾಕಿಕೊಡಲು ಆಕೆ ಚೀಲ ಕೇಳಿದ್ದಳು. ನಾವಿಲ್ಲಿ ಪ್ಲಾಸ್ಟಿಕ್ ಚೀಲ ಮಾರುವುದಿಲ್ಲ ಎಂದು ನಮ್ಮ ಸಹಾಯಕ ಆನಂದ ಒರಟಾಗಿ ಉತ್ತರಿಸಿದ. ರಪ್ಪನೆ ಬಾಗಿಲು ಮುಚ್ಚಿದ. ಯಾರಿಗೆ ಆಕೆ ಬಟಾಣಿ ಮಾರುತ್ತಾಳೋ ಅವರ ಬಳಿಯೇ ಕೊಳ್ಳಬಹುದಲ್ಲ ಎಂಬುದು ಆತನ ತರ್ಕ. ಈ ತರ್ಕ ಸರಿಯಾಗಿಯೇ ಇದೆ. ಆದರೆ, ಅದರಲ್ಲಿ ಒಳ್ಳೆತನವಿದೆಯೇ?

ನಾನು ಬಾಗಿಲು ತೆಗೆದು ತಣ್ಣಗೆ ಆಕೆಗೆ ಮೂರು ಪ್ಲಾಸ್ಟಿಕ್ ಚೀಲ ನೀಡಿದೆ. ಅದರ ಸೈಜ್ ಸರಿಯಾಗಿದೆಯೇ ಎಂದು ಕೇಳಿದೆ. ಆಕೆ, ಮುಖದ ತುಂಬ ನಗು ತುಂಬಿಕೊಂಡು ತಲೆ ಅಲ್ಲಾಡಿಸಿದಳು.

ನಿಮ್ಮ ಜೀವನವನ್ನು ಆವರಿಸಿಕೊಂಡಿರುವ ಮೇಲ್ಮಟ್ಟದ ಸಂಗತಿಗಳ ಬದಲಾಗಿ ಇಂತಹ ಚಿಕ್ಕ, ಪುಟ್ಟ ಸಂಗತಿಗಳಿಗೆ ಆದ್ಯತೆ ನೀಡಿ. ನಮ್ಮ ಮನದ, ಆತ್ಮದ ಬಾಗಿಲು ಮುಚ್ಚಿಕೊಂಡು ಆಧ್ಯಾತ್ಮಿಕ ಸಂತೋಷ ಕಳೆದುಕೊಳ್ಳುವುದೇಕೆ?

*ಜೀವನವನ್ನು ಸರಳಗೊಳಿಸಿಕೊಳ್ಳಿ. ಇದರಿಂದ ಒಳಗಿನ ಹಾಗೂ ಹೊರಗಿನ ಆರೋಗ್ಯ ಒಂದೇ ರೀತಿ ಆಗುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮತೋಲನದಲ್ಲಿ ಇರುತ್ತದೆ. ಆ ಮಹತ್ವಾಕಾಂಕ್ಷೆಗಳನ್ನೆಲ್ಲ ಚಿವುಟಿ ಹಾಕಿ. ನಿಮ್ಮ ಬದುಕನ್ನು ಅಗತ್ಯದ ಎತ್ತರಕ್ಕೆ ಏರಿಸಿಕೊಳ್ಳಿ. ಬಯಕೆಯ ಮಟ್ಟಕ್ಕೆ ತಗ್ಗಿಸಬೇಡಿ. ಅನಗತ್ಯ ವಸ್ತು, ವಸ್ತ್ರ, ಸಾಮಗ್ರಿ ನಮ್ಮ ಆತ್ಮವನ್ನು ಭಾರವಾಗಿಸುತ್ತದೆ. ಅದನ್ನು ನಿರ್ವಹಿಸುವ, ದುರಸ್ತಿ ಮಾಡುವ, ಮೇಲ್ಮಟ್ಟಕ್ಕೆ ಏರಿಸುವ, ಅತ್ಯಾಧುನಿಕ ತಂತ್ರಜ್ಞಾನದ ಸಾಮಗ್ರಿಯನ್ನು ಕೊಳ್ಳುವ ಭರದಲ್ಲಿ ಆತ್ಮ ತನ್ನ ಲಘುತ್ವ ಕಳೆದುಕೊಳ್ಳುತ್ತದೆ. ಅದು ಭಾರವಾಗುತ್ತ ಹೋಗುತ್ತದೆ.
ಆ ಸಾಂದ್ರತೆ ಆತ್ಮದ ಉಸಿರು ಕಟ್ಟಿಸುತ್ತದೆ.
ಅಹಂಕಾರ ತೊರೆದ ಸರಳ ಬದುಕಿನಲ್ಲಿ ಸಂತಸದ ಹೊನಲು ಇರುತ್ತದೆ.

*ಊಟ, ತಿಂಡಿ ಮಾಡುವಾಗ ಎಚ್ಚರಿಕೆಯಿಂದ ತಿನ್ನಿ. ಬಾಯಿ ರುಚಿಗಾಗಿ ಸಿಕ್ಕಿದ್ದನ್ನೆಲ್ಲ ತಿನ್ನಬೇಡಿ. ಸಂತಸದಿಂದ ವ್ಯಾಯಾಮ ಮಾಡಿ. ನೆಮ್ಮದಿಯಿಂದ ನಿದ್ರೆ ಮಾಡಿ. ನಾನು ಅತಿ ಕೊಬ್ಬಿನ ಆಹಾರ ಸೇವಿಸಿದಲ್ಲಿ ರಾತ್ರಿಯೆಲ್ಲ ಬಲಗಾಲು ನೋಯುತ್ತಿರುತ್ತದೆ. ಬೆಳಿಗ್ಗೆ ಏಳುವಾಗ ಆಲಸ್ಯತನ ಬಂದಿರುತ್ತದೆ.
ಕೆಲಸದಾಕೆಗೆ ಹಿಂದಿನ ರಾತ್ರಿ ಉಳಿದ ಆಹಾರ ಪದಾರ್ಥ ನೀಡುವ ಬದಲು, ಊಟಕ್ಕಿಂತ ಮುಂಚೆಯೇ ಆಕೆಗಾಗಿ ಸ್ವಲ್ಪ ಆಹಾರ ಎತ್ತಿಡಿ.

...ಈ ಕಥೆ ಓದಿ.
ಹಿಂದೊಮ್ಮೆ ಬಡ ವೃದ್ಧ ಮಹಿಯೊಬ್ಬಳು ಸರಳವಾದ ಗುಡಿಸಿಲಿನಲ್ಲಿ ವಾಸವಾಗಿದ್ದಳು. ದಯಾಳುವಾಗಿದ್ದ ನೆರಮನೆಯಾತ ಆಕೆಗೆ ಮಾವಿನ ಹಣ್ಣೊಂದನ್ನು ನೀಡಿದ. ಆ ಮಹಿಳೆ ಅರ್ಧ ಮಾವಿನ ಹಣ್ಣನ್ನು ಮಾತ್ರ ತಿಂದಳು. ಉಳಿದರ್ಧ ಹಣ್ಣನ್ನು ಮಾರನೇ ದಿನಕ್ಕಾಗಿ ಎತ್ತಿಟ್ಟುಕೊಂಡಳು.

ರಾತ್ರಿಯಾಗಿ ಕತ್ತಲು ಆವರಿಸಿದಂತೆ ನಡುಗುತ್ತಿದ್ದ ವೃದ್ಧನೊಬ್ಬ ಆಹಾರ ಮತ್ತು ಆಶ್ರಯ ಹುಡುಕಿಕೊಂಡು ಆಕೆಯ ಬಾಗಿಲಿಗೆ ಬಂದ. ಅತ್ಯಂತ ಮೃದುವಾದ ಸ್ವರದಲ್ಲಿ ಆಕೆ ಹೇಳಿದಳು. ನನ್ನ ಬಳಿ ಮೈ ಕಾಯಿಸಿಕೊಳ್ಳಲು ಬೆಂಕಿಯೂ ಇಲ್ಲ. ಹೊದ್ದುಕೊಳ್ಳಲು ಚಾದರವೂ ಇಲ್ಲ. ತಿನ್ನಲು ಈ ಅರ್ಧ ಮಾವಿನಹಣ್ಣು ಮಾತ್ರ ಇದೆ.

ಆಕೆಯ ಆತಿಥ್ಯ ಸ್ವೀಕರಿಸಿದಾತ ಸಾಕ್ಷಾತ್ ಶಿವನಾಗಿದ್ದ. ಆಕೆಯ ಅಂತಚಕ್ಷು ಬೆಳಕಿನಿಂದ ತುಂಬಿಹೋಯಿತು. ಆಕೆ ಆರೋಗ್ಯಕರವಾಗಿ ನಳನಳಿಸತೊಡಗಿದಳು.

ಬೇರೆಯವರಿಗೆ ಎಲ್ಲವನ್ನೂ ಕೈಯೆತ್ತಿ ಕೊಡುವ ವ್ಯಕ್ತಿಯ ಆತ್ಮ ಯಾವಾಗಲೂ ವಿಶ್ರಾಂತ ಸ್ಥಿತಿಯಲ್ಲಿರುತ್ತದೆ. ಕೊಡುವುದರಲ್ಲಿನ ಸಂತಸ ವಿದ್ಯುತ್‌ನಂತೆ ನಮ್ಮ ಮೈಯಲ್ಲಿ ಹರಿದಾಡಿ ಸ್ವಾರ್ಥ ಹುಟ್ಟುಹಾಕಿದ ನೋವುಗಳನ್ನು ಮಾಯವಾಗಿಸುತ್ತದೆ.

* ನಿಮ್ಮ ಆಲೋಚನೆಗಳನ್ನು ಶುದ್ಧೀಕರಿಸಿಕೊಳ್ಳಿ. ಕಹಿ ಭಾವ, ಸಿಟ್ಟು, ದ್ವೇಷ ಯಾವುದೇ ಇರಲಿ ಅದನ್ನು ತೊಡೆದುಹಾಕಿ. ಇಲ್ಲದಿದ್ದಲ್ಲಿ ನಿಮ್ಮ ತಲೆಯಲ್ಲಿ ಅದು ಸಣ್ಣ ರಾಕ್ಷಸರಂತೆ ಕುಣಿಯುತ್ತ ಇರುತ್ತವೆ. ಆ ಋಣಾತ್ಮಕ ಕಂಪನಗಳು ನಿಮ್ಮೊಳಗೆ ಭಯಂಕರ ಬಿರುಗಾಳಿಯನ್ನು ಹುಟ್ಟುಹಾಕುತ್ತವೆ. ತಲೆನೋವು, ಅಜೀರ್ಣವಾಗಿ ರೂಪಾಂತರ ಹೊಂದುತ್ತದೆ.

ನಮ್ಮ ತಲೆಯೊಳಗಿನ ಋಣಾತ್ಮಕ ಭಾವ ನರ್ತಿಸುತ್ತಿರುವ ಕಪ್ಪು ಕೇಂದ್ರದಂತೆ ಇರುತ್ತದೆ ಎಂದು ಪುದಚೇರಿಯ ಅರಬಿಂದೊ ಆಶ್ರಮದ ಅಮ್ಮ ಹೇಳುತ್ತಾರೆ. ಕೂದಲಿನಿಂದ ಹೇನು ತೆಗೆದು ಒಗೆದಂತೆ ಅರಬಿಂದೊ ವ್ಯಕ್ತಿಯೊಬ್ಬನ ತಲೆಯಿಂದ ಆ ಋಣಾತ್ಮಕ ಭಾವವನ್ನು ತೆಗೆದು ಒಗೆದಿದ್ದರಂತೆ. ಕ್ಷಣಾರ್ಧದಲ್ಲಿ ಆ ವ್ಯಕ್ತಿ ಪ್ರಶಾಂತವಾದ ಮನಸ್ಥಿತಿ ತಲುಪಿದನಂತೆ.

ಅರಬಿಂದೊ ಅವರ ವಿಶೇಷ ಶಕ್ತಿ ನನ್ನ ಬಳಿ ಇಲ್ಲ. ಆದರೆ, ಸಿ.ಡಿ.ಯಲ್ಲಿ ಎಕಾರ್ಟ್ ಟೊಲೆಯ (eckhart Tolle’s) ‘ಪವರ್ ಆಫ್ ನೌ’ ಉಪನ್ಯಾಸವನ್ನು ಕೇಳಿದ 30-45 ನಿಮಿಷಗಳ ನಂತರ ಎಲ್ಲ ಗೊಂದಲ, ಕಹಿ ಭಾವನೆ ಮೇಣದಂತೆ  ಕರಗಿ ಹೋಗುತ್ತದೆ. ನನ್ನೊಳಗಿನ ಎಲ್ಲವೂ ಸ್ವಚ್ಛಗೊಂಡಂತೆ, ಎಲ್ಲದರೊಂದಿಗೆ ಸೌಹಾರ್ದ ಸಾಧಿಸಿದಂತೆ ಅನ್ನಿಸುತ್ತದೆ. ನಾನು ಹಳ, ಹಳಿಸುತ್ತಿದ್ದ ವಿಚಾರ ಅರಬಿಂದೊ ತೆಗೆದು ಹಾಕಿದ ಕಪ್ಪು ಚುಕ್ಕೆಯಷ್ಟು ಸಣ್ಣದಾಗಿ ಭಾಸವಾಗುತ್ತದೆ.

ಶ್ರೇಷ್ಠ ಆಧ್ಯಾತ್ಮಿಕ ಗುರುಗಳ ಬೋಧನೆಯನ್ನು ಅರ್ಥ ಮಾಡಿಕೊಳ್ಳಿ, ಅವರ ಉಪನ್ಯಾಸ ಕೇಳಿ. ಅವರ ಶಬ್ದಗಳು ನಮ್ಮ ಮನದ ಕಿಂಡಿಯನ್ನು ಸ್ವಚ್ಛಗೊಳಿಸುತ್ತವೆ. ಬೆಳಕು ಒಳಗೆ ಬರುವಂತೆ ಮಾಡುತ್ತವೆ. ಒಳಗಿನ ಎಲ್ಲ ಅಡೆತಡೆಗಳನ್ನು ಮುರಿದು ಹಾಕುತ್ತವೆ. ನಮ್ಮ ಅಸ್ವಸ್ಥತೆ ನಿವಾರಣೆಯಾಗುತ್ತವೆ.

ಗಾಳಿಯಲ್ಲಿನ ಗರಿ ಅಡೆ, ತಡೆ ನಿವಾರಿಸಿಕೊಂಡು ತೇಲಾಡುವಂತೆ ನಾವು ಸಹ ಅಡೆ, ತಡೆಗಳನ್ನು ಎದುರಿಸುತ್ತೇವೆ. ಎಲ್ಲ ದೈಹಿಕ, ಮಾನಸಿಕ ನೋವಿನಿಂದ ಬಿಡುಗಡೆ ಪಡೆಯುತ್ತೇವೆ. ಸ್ವಾಮಿ ಪರಮಾನಂದರು ಇದನ್ನೆಲ್ಲ ಒಂದೇ ವಾಕ್ಯದಲ್ಲಿ ವಿವರಿಸುತ್ತಾರೆ. ಒಬ್ಬರ ಮನಸ್ಸು ಯಾವಾಗ ಶುದ್ಧವಾಗಿರುತ್ತದೆ? ಯಾವಾಗ ಅದು ಸರಳವಾಗಿರುತ್ತದೆಯೋ ಸತ್ಯವನ್ನು ಬಿಟ್ಟು ಏನನ್ನೂ ಹಿಡಿದುಕೊಂಡಿರುವುದಿಲ್ಲವೋ ಆಗ ಪರಿಶುದ್ಧವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT