ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಗಂಗೆಯಲ್ಲಿ ವಿದೇಶಿ ತೊರೆಗಳು!

Last Updated 11 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಅಹಿಂಸೆಯಿಂದಲೇ ಸ್ವಾತಂತ್ರ್ಯವನ್ನು ಗೆದ್ದುಕೊಂಡ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಮಾನವ ಇತಿಹಾಸದ ಮಹತ್ವದ ಘಟನೆ. ವ್ಯಾಪಾರಕ್ಕೆಂದು ಭಾರತ ನೆಲದಲ್ಲಿ ಕಾಲಿಟ್ಟು ನಂತರ ಇಲ್ಲಿಯ ವ್ಯವಸ್ಥೆಯನ್ನೇ ಕೈಗೆತ್ತಿಕೊಂಡ ಬ್ರಿಟಿಷರ ವಿರುದ್ಧ ಹುಟ್ಟಿಕೊಂಡ ಪ್ರತಿರೋಧ ಪಡೆದುಕೊಂಡ ಆಯಾಮಗಳು ಹಲವು ಬಗೆ.

ಸುಮಾರು ಮೂರು ಶತಮಾನಗಳ ಕಾಲ ಭಾರತವನ್ನು ತನ್ನ ವಸಾಹತು ನೆಲೆಯನ್ನಾಗಿಸಿದ್ದ ಬ್ರಿಟಿಷ್ ಪ್ರಭುತ್ವದ ಮೇಲೆ ಭಾರತೀಯರು ಆಂದೋಲನಕ್ಕಿಳಿದರು. ಹೋರಾಟದ ಸಾಗರಕ್ಕೆ ಅಸಂಖ್ಯ ನದಿಗಳು ಸೇರಿಕೊಂಡವು. ಅವುಗಳಲ್ಲಿ ಇಂಗ್ಲೆಂಡ್‌ನ ತೊರೆಗಳೂ ವಿದೇಶಿ ಕಾಲುವೆಗಳೂ ಇದ್ದುದು ವಿಶೇಷ.

ಭಾರತೀಯರಲ್ಲದವರೂ ಭಾರತದ ಬಿಡುಗಡೆಗೆ ಕೈಜೋಡಿಸಿದರು. ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ ಏಳಿಗೆಗೆ ನೀರೆರದರು. ಕೆಲವು ವಿದೇಶಿಯರಂತೂ ಭಾರತವನ್ನು ತಮ್ಮ ಇನ್ನೊಂದು ಮನೆಯನ್ನಾಗಿ ಪರಿಗಣಿಸಿದ್ದೂ ಜರುಗಿತು.

ಭಾರತವನ್ನು ತಮ್ಮ ಹೃದಯಕ್ಕೆ ಹತ್ತಿರವಾಗಿಸಿಕೊಂಡ ಪರದೇಶಿಯರು ಭಾರತದಲ್ಲಿ ಸ್ವಯಂ ಆಡಳಿತ ಬರುವಂತೆ ಮಾಡಲು ಆ ಕಾಲದಲ್ಲಿ ರೂಪುಗೊಂಡ ಅನೇಕ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರಲ್ಲದೆ ಸೆರೆವಾಸವನ್ನೂ ಅನುಭವಿಸಿದರು.

ಭಾರತೀಯ ಸ್ವಾಂತಂತ್ರ್ಯ ಚಳವಳಿಗಾರರಂತೆ ಕಷ್ಟ-ನಷ್ಟಗಳಿಗೆ ಸಿಕ್ಕಿಬಿದ್ದರು.
ಪ್ರತಿಭಾವಂತ ವಿದ್ಯಾರ್ಥಿ ಎನ್ನಿಸಿಕೊಂಡು ಕೆಂಬ್ರಿಡ್ಜ್‌ನಲ್ಲಿ ಅಭ್ಯಾಸವನ್ನು ಮುಗಿಸಿದ ಸಿ.ಎಫ್. ಆ್ಯಂಡ್ರೋಸ್ ಕ್ರೈಸ್ತ ಮಿಷನರಿಯಿಂದ ನೇಮಕವಾಗಿದ್ದು ದೆಹಲಿಯ ಸಂತ ಸ್ಟೀಫನ್ ಕಾಲೇಜಿಗೆ.

ಭಾರತಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಆ್ಯಂಡ್ರೋಸ್ ಅವರಿಗೆ ಭಾರತೀಯರ ಕಷ್ಟ ಕೋಟಲೆಗಳ ಅರಿವಾಯಿತು. ಸ್ವಾತಂತ್ರ್ಯ ಚಳವಳಿಯೂ ಅವರ ಅರಿವಿಗೆ ಬಂತು.

ದಾದಾಬಾಯಿ ನವರೋಜಿ ಮತ್ತಿತರರು ಆರಂಭಿಸಿದ್ದ ಸ್ವರಾಜ್ಯ ಆಂದೋಲನಕ್ಕೆ (1906) ಒತ್ತಾಸೆಯಾಗಿ ನಿಂತ ಆ್ಯಂಡ್ರೋಸ್, ಗೋಪಾಲಕೃಷ್ಣ ಗೋಖಲೆ, ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ ಅವರ ಒಡನಾಟ ಬೆಳೆಸಿಕೊಂಡರಲ್ಲದೆ, ಭಾರತ ಮಾತ್ರವಲ್ಲದೆ ದಕ್ಷಿಣ ಆಪ್ರಿಕಾ, ಫಿಜಿಗಳಲ್ಲಿ ಭಾರತೀಯರು ನಡೆಸುತ್ತಿದ್ದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಭಾರತಾದ್ಯಂತ ಸಂಚರಿಸಿ ಬಡವರ ನೋವಿಗೆ ಪರಿಹಾರ ಹುಡುಕಲು ಮುಂದಾದ ಆ್ಯಂಡ್ರೋಸ್ ಕಾರ್ಮಿಕ ಸಂಘಟನೆಯಲ್ಲೂ ಸಕ್ರಿಯರಾಗಿ ಪಾಲ್ಗೊಂಡರು.

ದೀನಬಂಧು ಎಂದು ಕರೆಸಿಕೊಂಡ ಆ್ಯಂಡ್ರೋಸ್, ಗಾಂಧೀಜಿ ಅವರೊಂದಿಗೆ ಅನೇಕ ಚಳವಳಿಗಳಲ್ಲಿ ಭಾಗವಹಿಸಿದರಲ್ಲದೆ ಐತಿಹಾಸಿಕ `ದುಂಡು ಮೇಜಿನ ಪರಿಷತ್ತಿ~ನಲ್ಲಿ ಬಾಪು ಅವರೊಂದಿಗಿದ್ದು ಭಾರತದ, ಭಾರತೀಯರ ಸಂಕಷ್ಟಗಳಿಗೆ ಸ್ಪಂದಿಸಿದರು.

ಥಿಯೋಸಾಫಿಕಲ್ ತತ್ವಗಳನ್ನು ಪ್ರಚಾರ ಮಾಡಲು ಭಾರತಕ್ಕೆ ಆಗಮಿಸಿದ ಆನಿಬೆಸೆಂಟ್ ಭಾರತೀಯರ ಸ್ಥಿತಿ ಕಂಡು ಮರುಗಿ ಹಲವು ವಿದ್ಯಾಸಂಸ್ಥೆಗಳನ್ನು, ಸಾಮಾಜಿಕ ಸಂಘಟನೆಗಳನ್ನು ಸ್ಥಾಪಿಸಿದರಲ್ಲದೆ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸಿದ ಬ್ರಿಟಿಷ್‌ರ ಪೈಕಿ ಮುಂಚೂಣಿಯಲ್ಲಿ ನಿಂತರು.

ಲಂಡನ್‌ನಲ್ಲಿ ಬ್ರಿಟಿಷ್ ಸಂಸತ್ ಸಮಿತಿಯ ಮುಂದೆ ಎಲ್ಲಾ ಕಾಲಕ್ಕೂ ಭಾರತದ ಸಂವಿಧಾನವನ್ನು ಬ್ರಿಟಿಷ್ ಸರ್ಕಾರ ರಚಿಸಲು ಸಾಧ್ಯವಿಲ್ಲವೆಂದು ಘೋಷಿಸಿದ ದಿಟ್ಟ ಮಹಿಳೆ ಆನಿಬೆಸೆಂಟ್.

ಭಾರತದ ಅಧ್ಯಾತ್ಮ ಶ್ರೀಮಂತಿಕೆಗೆ ಮಾರುಹೋಗಿ ಸ್ವಾಮಿ ವಿವೇಕಾನಂದರ ಅನುಯಾಯಿಯಾಗಿ, ಅವರಿಂದಲೇ ಸಹೋದರಿ ನಿವೇದಿತಾ ಎಂದು ಕರೆಸಿಕೊಂಡ ಮಾರ್ಗರೇಟ್ ನೋಬಲ್ ಭಾರತೀಯರ ಪರವಾಗಿ ದನಿ ಎತ್ತಿದ ಇನ್ನೊಬ್ಬ ಬ್ರಿಟಿಷ್ ಮಹಿಳೆ.

ಕಾಂಗ್ರೆಸ್ ಸಮಾವೇಶಗಳಲ್ಲಿ ಭಾಗವಹಿಸಿ ತಮ್ಮ ಪ್ರಖರ ಮಾತುಗಾರಿಕೆಯಿಂದ ಭಾರತೀಯರಿಗೆ ಸ್ವಾತಂತ್ರ್ಯ ನೀಡಬೇಕೆಂದು ಒತ್ತಾಯಿಸಿದ ಸೋದರಿ ನಿವೇದಿತಾ ಸ್ವಾತಂತ್ರ್ಯದ ಮುಂಚೂಣಿಯಲ್ಲಿದ್ದ ಬಹುತೇಕ ಎಲ್ಲಾ ಮುಂದಾಳುಗಳ ಸಂಪರ್ಕದಲ್ಲಿದ್ದುಕೊಂಡು, ಭಾಷಣ, ಬರವಣಿಗೆ ಮೂಲಕ ಹೋರಾಡಿದರು.

ಇಂಗ್ಲೆಂಡಿನಲ್ಲಿಯೇ ಇಂಡಿಯನ್ ಲೀಗ್ ಸ್ಥಾಪಿಸಿ ಅದರ ಅಧ್ಯಕ್ಷರಾಗಿದ್ದುಕೊಂಡೇ ಭಾರತದ ಸ್ವಾತಂತ್ರ್ಯ ಚಳವಳಿಯ ಬೆಂಬಲಕ್ಕೆ ನಿಂತವರು ಪ್ರಸಿದ್ಧ ಬರಹಗಾರ ಬರ್ಟ್ರಂಡ್ ರಸಲ್. ಇಂಗ್ಲೆಂಡ್‌ನ ರಾಯಲ್ ಸೊಸೈಟಿ ಫೆಲೋ ಆಗಿದ್ದ ರಸಲ್ ಭಾರತ ಪರ ಸಹಾನುಭೂತಿ ಇಟ್ಟುಕೊಂಡು ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬಲವಾಗಿ ಪ್ರತಿಪಾದಿಸಿದರು.

ಭಾರತೀಯ ಕ್ರಾಂತಿಕಾರಿಗಳಿಗೆ ನೆರವಿನ ಹಸ್ತ ನೀಡಿ ಸ್ವಾತಂತ್ರ್ಯ ಆಂದೋಲನಕ್ಕೆ ರಷ್ಯಾದ ಖ್ಯಾತ ಸಾಹಿತಿ ಮಾಕ್ಸಿಂ ಗಾರ್ಕಿ ಬೆಂಬಲ ನೀಡಿದರು. ರಷ್ಯಾ ನೇತಾರ ಲೆನಿನ್ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಉಗ್ರವಾಗಿ ಖಂಡಿಸಿ ಅಮೃತ್ ಬಜಾರ್ ಪತ್ರಿಕೆಗೆ ಲೇಖನ ಬರೆದರಲ್ಲದೆ, ಭಾರತೀಯ ಕ್ರಾಂತಿಕಾರಿ ನಾಯಕರನ್ನು ಜರ್ಮನಿಯಲ್ಲಿ ಸಂಧಿಸಿ, ಅವರಿಗೆ ಅಗತ್ಯ ಸಹಾಯ ನೀಡಿದರು.

ಸುಪ್ರಸಿದ್ಧ ವಿಜ್ಞಾನಿ ಐನ್‌ಸ್ಟೈನ್, ಖ್ಯಾತ ವಿದ್ವಾಂಸ ವಿಲಿಯಂ ಜೋನ್ಸ್, ಆಂಗ್ಲೋ ಇಂಡಿಯನ್ ಮುಖಂಡ ಹೆನ್ರಿ ಹಿಡ್ನೆ, ಭಾರತದಲ್ಲಿ ಆಧುನಿಕ ಮಿಷನರಿಗಳ ಸ್ಥಾಪಕ ವಿಲಿಯಂ ಕ್ಯಾರಿ ಮೊದಲಾದವರು ವ್ಯಕ್ತಿಗತವಾಗಿ ಮತ್ತು ಸಂಘಟನೆಗಳ ಮೂಲಕ ಭಾರತವನ್ನು ಪರದಾಸ್ಯದಿಂದ ಮುಕ್ತಗೊಳಿಸಲು ಕಟಿಬದ್ಧರಾಗಿದ್ದರು.
 
ಬಾಪೂಜಿ ಅವರ ಸತ್ಯಾಗ್ರಹ, ಆಂದೋಲನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಅಡ್ಮಿರಲ್ ಸರ್ ಎಡ್ವರ್ಡ್ ಸಾಲ್ಟೆ ಅವರ ಪುತ್ರಿ ಮಾಡ್ಲೇಲೇನಿ (ಮೀರಾ ಬೆಹನ್) ಮೂರು ಬಾರಿ ಜೈಲುವಾಸವನ್ನು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT