ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಕ್ಕಾಗಿ ಜಾತಿ; ಮೀಸಲಾತಿಯ ವಿಕೃತಿ

ಚರ್ಚೆ
Last Updated 24 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಜಾತಿ ಎಂಬುದು ಮನು­ಷ್ಯನ ಹುಟ್ಟಿನೊಂದಿಗೇ ಜೋಡಿಸಿ­ಕೊಂಡಿ­ರುವಂಥಾದ್ದು. ಜಾತಿ ಥಟ್ಟನೆ ಸೃಷ್ಟಿಯಾ­ದ­ದ್ದಲ್ಲ; ಕುಟುಂಬಗಳೇ ಬೆಳೆಬೆಳೆದು ಜಾತಿಗಳಾ­ದದ್ದು. ಜಾತಿ ಒಂದು ‘ನಿರ್ಮಿತ ವ್ಯವಸ್ಥೆ’ ಅಲ್ಲ; ಅದು ಮಾನವ ಜೀವನ ರೀತಿಯಲ್ಲಿ ತಂತಾನೇ ಉಂಟಾದದ್ದು.ನಮ್ಮ ಸಾಮಾಜಿಕ ಬದುಕಿನಲ್ಲಿ ಜಾತಿ ಎಂಬುದು ಅಂತರ್ಗತವಾಗಿದ್ದು, ಎಲ್ಲಿಯೂ ಎದ್ದು ಕಾಣಿಸುವಂಥದ್ದಲ್ಲ.

ಕೆಲವು ವ್ಯಕ್ತಿಗಳ ಜಾತಿ, ಧರ್ಮ ಅಥವಾ ಮತವನ್ನು ಅವರ ವಿಶಿಷ್ಟವಾದ ಉಡುಪು, ಮೈಮೇಲಿನ ಯಾವುದೋ ಲಾಂಛನದ ಮೂಲಕ ಗುರುತಿಸಬಹುದಾದರೂ ಅದಕ್ಕೆ ಸಾಮಾಜಿಕ ಮೌಲ್ಯವಾಗಲಿ, ಮಹತ್ವವಾಗಲಿ ಇರುವುದಿಲ್ಲ.

ವಾಸ್ತವದಲ್ಲಿ, ಒಬ್ಬ ವ್ಯಕ್ತಿಯ ಜಾತಿ ಅಥವಾ ಮತವನ್ನು ಕಂಡುಕೊಳ್ಳಬೇಕಾದ ಅಗತ್ಯ ಯಾರಿಗೂ ಇಲ್ಲ. ತಾವು ಇಂಥ ಜಾತಿಯವರು, ಮತದವರು ಎಂದು ಗುರುತಿಸಿಕೊಳ್ಳಬೇಕಾದ ಅಗತ್ಯ ಕೂಡ ಯಾರಿಗೂ ಇರುವುದಿಲ್ಲ. ಆದ್ದರಿಂದ ತಾನು ಇಂಥ ಜಾತಿ ಅಥವಾ ಮತದವನು ಎಂದು ತೋರಿಸಿಕೊಳ್ಳುವ ಬಗೆಯ ಲಾಂಛನ, ಉಡುಪು ಧರಿಸದಿರುವುದು ಸಾಮಾಜಿಕವಾಗಿ ಹಿತಕರ ಎಂದು ಪ್ರಜ್ಞಾವಂತರು ಭಾವಿಸಿದರೆ ತಪ್ಪಲ್ಲ.

ಕೆಲವು ಸಾವಿರ ಜಾತಿಗಳಿರುವ ಮತ್ತು ಒಂದು ಸಾವಿರ ಭಾಷಾ ಪ್ರಭೇದಗಳಿರುವ ಈ ದೇಶದಲ್ಲಿ ಯಾರು ಯಾವ ಜಾತಿಯವರು ಎಂದು ತಿಳಿದು­ಕೊಳ್ಳುವುದರಲ್ಲಿ ಯಾವ ಸ್ವಾರಸ್ಯವೂ ಇಲ್ಲ. ಈ ಸಾಮಾಜಿಕ ಸಂದರ್ಭದಲ್ಲಿ ‘ಯಾವ ಜಾತಿಯ­ವರು’ ಎಂದು ಕೇಳುವುದು ಒಂದು ಆಲಸಿ ಪ್ರಶ್ನೆ ಅಷ್ಟೆ. ಒಟ್ಟು ಜಾತಿ ಸಂಖ್ಯೆಯನ್ನು ಇಷ್ಟೇ ಎಂದು ಇನ್ನೂ ಸರಿಯಾಗಿ ನಿರ್ಧರಿಸಲಾಗಿಲ್ಲ! ಮಂಡಲ್ ಆಯೋಗ 3000 ಜಾತಿಗಳನ್ನು ಹಿಂದುಳಿದ ಜಾತಿಗಳೆಂದು ಗುರುತಿಸಿ, ಇದು ದೇಶದ ಜನ­ಸಂಖ್ಯೆಯ ಶೇ 52ರಷ್ಟು ಎಂದು ಹೇಳಿದೆ.

ಆದರೆ ಇದು ಶೇ 32ರಷ್ಟು ಎನ್ನುವುದು ರಾಷ್ಟ್ರೀಯ ಸಮೀಕ್ಷೆಯೊಂದರ ಪ್ರತಿಪಾದನೆ. ಕೆಲವು ಜಾತಿಗ­ಳನ್ನು ಜಾತಿಯೋ, ಮತವೋ, ಧರ್ಮವೋ, ಪಂಥವೋ ಎಂದು ತೀರ್ಮಾನಿಸಲು ಕೂಡ ಕಷ್ಟ­ವಾಗುತ್ತದೆ! ದೇಶದಾದ್ಯಂತ ದಲಿತ ಜಾತಿ, ಉಪಜಾತಿಗಳ ಸಂಖ್ಯೆಯಂತೂ ಕೆಲವು ಸಾವಿರವೇ ಇರಬಹುದು.

ಪ್ರಜೆಗಳನ್ನು ಅವರ ವರಮಾನದ ಆಧಾರದಲ್ಲಿ ಗುರುತಿಸಲಾಗದ ಬ್ರಿಟಿಷರು ಜಾತಿಯ ಆಧಾರ­ದಲ್ಲಿ ‘ಮುಂದುವರಿದವರು’ ಮತ್ತು ‘ಹಿಂದುಳಿದ­ವರು’ ಎಂದು ಗುರುತಿಸಿದರು. ಮುಖ್ಯವಾಗಿ, ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಎಷ್ಟು ಶುಲ್ಕ ತುಂಬಬೇಕೆಂದು ನಿರ್ಧರಿಸಲು ಈ ವರ್ಗೀ­ಕರಣ ಅವರಿಗೆ ಬೇಕಾಯಿತು. ಇದರ ಹೊರತಾಗಿ ಬೇರೆ ಯಾವುದಕ್ಕೂ ಈ ವರ್ಗೀಕರಣ ಬಳಕೆ­ಯಾ­ದಂತೆ ತೋರುವುದಿಲ್ಲ. ಉಳ್ಳವರು ಹೆಚ್ಚು ಶುಲ್ಕ ತುಂಬುತ್ತಿದ್ದರು, ಉಚ್ಚ ಶಿಕ್ಷಣ ಪಡೆಯುತ್ತಿದ್ದರು, ಉಚ್ಚ ಉದ್ಯೋಗಗಳಿಗೆ ಆಯ್ಕೆಯಾಗುತ್ತಿದ್ದರು.


ಜಾತಿ ವ್ಯವಸ್ಥೆ ಪುರಾತನ ಕಾಲದಿಂದಲೂ ಇದೆ­ಯಾದರೂ ಆಗ ಅದರ ರೂಪ ಬೇರೆಯಾಗಿತ್ತು. ಬ್ರಿಟಿಷರಿಗೆ ‘ಜಾತಿ’ಯನ್ನು ಕಾಣುವ ಕಣ್ಣು ಇರಲಿಲ್ಲವಾದರೂ ‘ಜಾತಿ’ಗಳನ್ನು ತಮ್ಮ ಆಡಳಿತ ವ್ಯವಸ್ಥೆಯ ಅನುಕೂಲಕ್ಕಾಗಿ, ತಾವೇ ನಿರ್ಮಿಸಿದ  ‘ಫಾರ್ವರ್ಡ್‌– -ಬ್ಯಾಕ್‌ವರ್ಡ್‌’ ಚೌಕಟ್ಟಿನಲ್ಲಿ ಒಟ್ಟಾರೆಯಾಗಿ ಹಾಕಿಕೊಂಡದ್ದಂತೂ ನಿಜ. ಅದನ್ನೇ ಅದೇ ರೀತಿ ಭಾರತ ಸರ್ಕಾರ ಕೂಡ ಮುಂದುವರಿಸಿಕೊಂಡು ಬಂದಿತು. ಹೀಗೆ ಬಹಳ ವರ್ಷಗಳ ನಂತರ ಮಾಡಿಕೊಂಡ ಸುಧಾರಣೆ­ಯಿಂದ ಹುಟ್ಟಿಕೊಂಡ ‘ಮೀಸಲಾತಿ’ಯ ಸ್ವರೂಪ ಸಾಕಷ್ಟು ವಿಕೃತಿಗಳಿಂದ ಕೂಡಿದೆ. ಪ್ರತಿರೋಧಗಳ ದೆಸೆಯಿಂದಾಗಿ ಅದು ವರ್ಷದಿಂದ ವರ್ಷಕ್ಕೆ ಇನ್ನಷ್ಟು ವಿಕಾರವಾಗುತ್ತಾ ನಡೆದಿದೆ.

ಈಗ ವಾಸ್ತವದಲ್ಲಿ, ಮೀಸಲಾತಿಯ ಲಾಭ ಪಡೆದುಕೊಂಡು ಮೇಲೆ ಬಂದವರೇ ಅದೇಕೋ ಹೆಚ್ಚು ಅತೃಪ್ತರಾಗಿರುವಂತಿದೆ. ‘ಮೀಸಲಾತಿ’ ನೀತಿಯಿಂದ ವಂಚಿತರಾದವರು ತಾವಾಗಿ ಮೇಲೆ ಬಂದು, ‘ಬದುಕುವುದು ಹೇಗೆ ಎಂದು ನಮ್ಮನ್ನು ನೋಡಿ ಕಲಿಯಿರಿ’ ಎಂದು ತೋರಿಸಿಕೊಡುತ್ತಿ­ದ್ದಾರೆ. ಯಾರು ಸನ್ಮಾರ್ಗಿಗಳು, ಯಾರು ದುರ್ಮಾರ್ಗಿಗಳು ಎಂಬುದು ಎರಡರಿಂದಲೂ ದೂರ ಉಳಿದವರಿಗೆ ತಿಳಿಯುತ್ತಿಲ್ಲ.


ಸಾಮಾಜಿಕ ಬದುಕಿನ ಸಂದರ್ಭದಲ್ಲಿ ವ್ಯಕ್ತಿಯ ಜಾತಿಯನ್ನು ಗುರುತಿಸಿ ಅದರ ಆಧಾರದಲ್ಲಿ ಆತ­ನನ್ನು ಆದರಿಸುವುದು ಅಥವಾ ಅನಾದರ­ದಿಂದ ಕಾಣುವುದು ತಪ್ಪು. ಇದನ್ನೇ ನಾವು ಮಾನವೀ­ಯ­ತೆಗೆ ಒಗ್ಗದಿರುವ ‘ಜಾತೀಯತೆ’ ಎಂದು ಪರಿಗಣಿ­ಸು­ವುದು. ಈ ಸಾಮಾಜಿಕ ದುರ್ಗುಣ ಈಗೀಗ ಬಹುಮಟ್ಟಿಗೆ ತೊಲಗಿರು­ವುದಾದರೂ ಕೆಲವು ದೇವಸ್ಥಾನ-, ಮಂದಿರಗಳಲ್ಲಿ ಜಾತಿಯ ಆಧಾರ­ದಲ್ಲಿ ‘ಮೇಲು-–ಕೀಳು’ ಎಂದು ಪರಿಗಣಿಸುವುದು ಮತ್ತು ಅದಕ್ಕೆ ಹೊಂದಿ­ಕೊಂ­ಡಂಥ ಆಚಾರ ವಿಚಾರ ಚಾಲ್ತಿಯಲ್ಲಿದೆ. ಶಿಕ್ಷಣ ಮತ್ತು ಮಾನ­ವೀಯ ಜಾಗೃತಿಯಿಂದಾಗಿ ಸಾಮಾ­ಜಿಕ ಕೊಳೆ ತೊಲಗುತ್ತಿದೆ ಎಂದು ಭಾವಿಸ­ಬ­ಹುದು. ಹಾಗಿ­ದ್ದರೂ ಜಾತಿಗಳ ಒಳಗೇ ಇರುವ ಮೇಲು­ಕೀಳು ಭಾವನೆ ಬಹಳ ಬೇಗನೆ ತೊಲಗುವಂಥದ್ದಲ್ಲ.

‘ದಲಿತ’ ಒಂದು ಜಾತಿ ಸೂಚಕ ಶಬ್ದ ಅಲ್ಲ. ಇಂದು ಎಲ್ಲ ದಲಿತರು ಮೀಸಲಾತಿ ಅಗತ್ಯವಿರು­ವಂಥ ಬಡವರಾಗಿ ಉಳಿದಿಲ್ಲ. ಸಾಮಾಜಿಕ ದುರದೃಷ್ಟವೆಂದರೆ, ಹರಿಜನ–-ಗಿರಿಜನ ಎಂಬ ‘ಶೆಡ್ಯೂಲ್ಡ್’ ಸರ್ಕಾರಿ ನಾಮಕರಣ ಪರಿಕರ್ಮ­ದಿಂದ, ಅದಕ್ಕಂಟಿದ ‘ಕೀಳ್ತನದ ಭಾವ ಅಥವಾ ಅರ್ಥ’ವನ್ನು ಪೂರ್ತಿಯಾಗಿ ತೊಡೆಯಲಾಗಿಲ್ಲ.

ಸರ್ಕಾರಿ ನಾಮಕರಣ ಪರಿಕರ್ಮದಲ್ಲಿ ದಲಿತ, ಬ್ರಾಹ್ಮಣ, ಶೂದ್ರ, ಮುಸಲ್ಮಾನ, ಕ್ರೈಸ್ತ, ಲಿಂಗಾಯತ, ಸಿಖ್ಖ ಇತ್ಯಾದಿ ‘ಒಟ್ಟು ವರ್ಗ’ ಸೂಚಕ ಪದಗಳನ್ನು ಕೈಬಿಟ್ಟು ಕೇವಲ ‘ಜಾತಿ ಹೆಸರು’ ಬಳಸಿ, ಮೀಸಲಾತಿಯನ್ನು ವರಮಾನದ ಆಧಾರದಲ್ಲಿ ನೀಡುವ ಮೂಲಕ ರಾಷ್ಟ್ರೀಯ ಭಾವೈಕ್ಯ, ಸಾಮಾಜಿಕ ಮನೋವಿಕಾಸವನ್ನು ಸಾಧಿಸಬಹುದು. ಕೆಲ ದಶಕಗಳ ಬಳಿಕವಾದರೂ ಮೀಸಲಾತಿಯನ್ನು ಕೈಬಿಟ್ಟು, ಭಾರತ ‘ಅತ್ಯಂತ ಶ್ರೇಷ್ಠ ದೇಶ’ ಆಗಬಹುದು.

ಜಾತಿಗಳು ಎಷ್ಟಿದ್ದರೂ ಅವುಗಳ ನಡುವೆ ಸಂಘರ್ಷ ಉಂಟಾಗುವುದಿಲ್ಲ. ಮತ-ಧರ್ಮದ ಆಳ್ವಿಕೆ ಅಥವಾ ಮತ-ಧರ್ಮದ ಕಪಿಮುಷ್ಟಿ­ಯಲ್ಲಿ­ರುವ ಆಡಳಿತದ ದೇಶಗಳಲ್ಲಿ ಮಾರಣಹೋಮದ ಮಹಾಕಲಹಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ. ಅಂಥ ಯಾವುದೇ ಸಂಘರ್ಷ ‘ಅನೇಕತೆಯಲ್ಲಿ ಏಕತೆ’ ಇರುವ, ಅರ್ಥಾತ್ ಆ ಕಾರಣದಿಂದಲೇ ಏಕತೆಯಿದೆ ಎನ್ನಬಹುದಾದ ಭಾರತ ದೇಶದಲ್ಲಿ ಇಲ್ಲ.

ಜಾತಿಗಳೆಂದರೆ ಈ ದೇಶದ ನರ ನಾಡಿಗಳೇ ಆಗಿವೆ. ಅದನ್ನು ಬಿಡಿ ಬಿಡಿಯಾಗಿ ಗುರುತಿಸ­ಬೇಕಾ­ಗಿಯೂ ಇಲ್ಲ, ಅದು ಸಾಧ್ಯವೂ ಅಲ್ಲ ಎನ್ನುವುದು ಇಂಗ್ಲಿಷರ ಕಾಲದಿಂದಲೇ ಸಾಬೀತಾಗಿದೆ.

ಅದ­ರಿಂದ ಯಾರಿಗೂ ಯಾವ ಅಪಾಯವೂ ಇಲ್ಲ. ಈ ವಿಶಿಷ್ಟವಾದ ಸಾಮಾಜಿಕ ಚೌಕಟ್ಟನ್ನು ‘ಜಾತಿ ನಿರ್ಮೂಲನ’ ಎನ್ನುವ ಅಸಹಜ ಕೂಗೆಬ್ಬಿಸಿ ಹೊಸ­ದಾಗಿ ಜೋಡಿಸಬೇಕಾಗಿಲ್ಲ. ಅದು ಅದರದೇ ಆದ ರೀತಿಯಲ್ಲಿ ಜೋಡಿಕೊಂಡೇ ಇದೆ. ‘ಇಡೀ ದೇಶ ಒಂದು’ ಎಂದಾಗಿಕೊಂಡಿರುವುದು ಕೂಡ ಸಾಮಾಜಿಕ ವ್ಯವಸ್ಥೆ ಸಹಜವಾಗಿ ತಂತಾನೇ ಚೆನ್ನಾಗಿರುವುದರಿಂದಲೇ. ಪ್ರಜ್ಞಾವಂತರಿಂದ ಆಗಬೇಕಾದದ್ದು ಮನಸ್ಸುಗಳಿಗೆ ಅಂಟಿರುವ ಮೇಲು-–ಕೀಳು ಭಾವದ ತಾರತಮ್ಯ ಮತ್ತು ನಡೆನುಡಿಯನ್ನು ಹೋಗಲಾಡಿಸುವುದು. 


ಅಸದೃಶವೂ ಅಸಾಮಾನ್ಯವೂ ಮತ್ತು ಅಷ್ಟೇ ಸಿಕ್ಕುಸಿಕ್ಕಾಗಿಯೂ ಅಚ್ಚುಕಟ್ಟಾಗಿರುವ ಈ ಸಾಮಾ­ಜಿಕ ವ್ಯವಸ್ಥೆಯನ್ನು ತಮ್ಮ ಸ್ವಾರ್ಥಕ್ಕಾಗಿ  ಬಿಡಿಸಿ ಬಿಡಿಸಿ ನೋಡುವ ಕೆಲಸವನ್ನು ಮಾಡುತ್ತಿ­ರು­ವುದು ನಮ್ಮ ದೇಶದ ರಾಜಕಾರಣಿಗಳು ಮಾತ್ರ. ಚುನಾವಣೆ ಬಂತೆಂದರೆ ಯಾವ ರಾಜ್ಯದಲ್ಲಿ, ಯಾವ ಜಿಲ್ಲೆ-, ತಾಲ್ಲೂಕಿನಲ್ಲಿ ಯಾವ ಯಾವ ಜಾತಿ, ಸಮುದಾಯದವರು ಎಷ್ಟೆಷ್ಟಿದ್ದಾರೆ, ಅಲ್ಲಿನ ಚುನಾವಣಾ ಅಭ್ಯರ್ಥಿ ಯಾವ ಜಾತಿ­ಯವನು, ಯಾವ ಮತದವನು ಎಂಬ ಲೆಕ್ಕಾ­ಚಾರ ಆರಂಭ.

ಈ ಲೆಕ್ಕಾಚಾರಕ್ಕೆ ಬೆನ್ನೆಲುಬಾಗಿ ಕೆಲಸ ಮಾಡುವುದು ದೃಶ್ಯ ಮತ್ತು ಬರಹ ಮಾಧ್ಯಮಗಳು. ಎಲ್ಲಿಯಾದರೂ ಹೊಡೆ­ದಾಟ ಬಡಿದಾಟ ನಡೆದರೆ ಅದಕ್ಕೆ ಈ ರೀತಿಯ ಗುರುತಿ­ಸು­ವಿಕೆಯೇ ಮುಖ್ಯ ಕಾರಣ. ಪ್ರಜಾತಂತ್ರ­ದಲ್ಲಿ ಈ ಲೆಕ್ಕಾಚಾರ, ಈ ರೀತಿಯ ಗುರುತಿಸುವಿಕೆ­ಯನ್ನು ಈ ದೇಶದಲ್ಲಿ ಮಾಡಬಾರದು. ಇದ­ರಿಂದ ದೇಶದ ಗೌರವಕ್ಕೆ ಕುಂದು. ಇದೇ ಪರಿಪಾಠ­ದಿಂದ ಕೆಲವು ಹುಂಬ ಬುದ್ಧಿವಂತರು, ಸರ್ಕಾರಿ, ಖಾಸಗಿ ಸಂಸ್ಥೆಗಳಿಂದ ದೇಶದ ಚಿಂತಕರು, ಲೇಖಕರು, ವಿಜ್ಞಾನಿಗಳನ್ನು ‘ಇಂಥ ಸಮುದಾಯ­ದ­ವನು’ ಎಂದು ಗುರುತಿಸುವ ಅಸಂಸ್ಕೃತ ಕೆಲಸ ನಡೆಯು­ತ್ತದೆ.

ದಲಿತ ಲೇಖಕ, ಮುಸ್ಲಿಮ್ ಕವಿ, ದಲಿತ ಮುಖ್ಯಮಂತ್ರಿ ಎಂದೆಲ್ಲ ಗುರುತಿಸುವುದು ಎಷ್ಟು ಸರಿ!  ಜಾತಿಗಳನ್ನು ‘ವೋಟ್‌ ಬ್ಯಾಂಕ್‌’ ಆಗಿ ಕಾಣು­ವುದು ನಮ್ಮ ಪ್ರಜಾಪ್ರಭುತ್ವಕ್ಕೆ ಅಂಟಿರುವ ಅತಿದೊಡ್ಡ ದೋಷ. ಚುನಾವಣೆ ದಿನ ಎಲ್ಲರೂ ಸಮಾನರು, ಎಲ್ಲರೂ ಮತದಾರರು. ಹಾಗಿರು­ವಾಗ, ಇಂಥ ಜಾತಿಯ ಮತದಾರ ಎಂದು ಮಾಧ್ಯಮಗಳು ಪಟ್ಟಿ ಮಾಡುವುದು ಎಂಥ ಸಮಾಜಮುಖಿ ಕಾರ್ಯ? ಅದೆಂಥ ರಾಷ್ಟ್ರಸೇವೆ? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT