ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಹೆಸರು ಬಹಿರಂಗಕ್ಕೆ ಒತ್ತಾಯ

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಸ್ವಿಸ್ ಬ್ಯಾಂಕುಗಳಲ್ಲಿ ಕಪು ಹಣ ಇರಿಸಿರುವ ಭಾರತೀಯರ ಹೆಸರುಗಳನ್ನು ಬಹಿರಂಗ ಮಾಡುವಂತೆ ಬಿಜೆಪಿ ಮಂಗಳವಾರ ಒತ್ತಾಯಿಸಿದೆ.

ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರಿಗೆ ಸೇರಿದ 21 ಲಕ್ಷ ಸಾವಿರ ಕೋಟಿ ರೂಪಾಯಿ ಕಪ್ಪು ಹಣ ಇರಬಹುದೆಂಬ ಅಂದಾಜಿದೆ. ಈ ಸಂಬಂಧ ವಿಕಿಲೀಕ್ಸ್ ಕೂಡ ವರದಿ ಪ್ರಕಟಿಸಿದೆ. ಹೀಗಾಗಿ ವಾಸ್ತವವನ್ನು ಮುಚ್ಚಿಡುವ ಬದಲು ಹಣ ಇಟ್ಟವರ ಹೆಸರನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಬೇಕು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಆಗ್ರಹಿಸಿದರು.

ಬಿಜೆಪಿ ನಾಯಕರ ಹೆಸರೂ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯೇ ಎಂದು ಸುದ್ದಿಗಾರರು ಕೇಳಿದಾಗ, ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಿ ಎಂದರು.

ಬೋಫೋರ್ಸ್‌ ಲಂಚ ಹಗರಣದಲ್ಲಿ ಸಿಲುಕಿರುವ ಮೂವರು ಆರೋಪಿಗಳ ಸ್ವಿಸ್ ಬ್ಯಾಂಕ್ ಖಾತೆ ಸಂಖ್ಯೆ ತಮ್ಮ ಬಳಿ ಇದೆ ಎಂದ ಗಡ್ಕರಿ, ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಖಾತೆಗೆ ಹಣ ವರ್ಗಾವಣೆಯಾಗಿದ್ದು ಸೇರಿದಂತೆ ಹಲವು ಸಂಗತಿಗಳು ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ತೀರ್ಪಿನ ನಂತರ ಹೊರಬೀಳುತ್ತಿವೆ ಎಂದರು.

ಆರ್ಥಿಕತೆ ಹಳಿ ತಪ್ಪಿರುವುದಕ್ಕೆ ಪ್ರಧಾನಿ ಸಿಂಗ್ ಅವರ ತಪ್ಪು ನೀತಿಗಳೇ ಕಾರಣ. ಸಿಕ್ಕಾಪಟ್ಟೆ ಏರಿರುವ  ಅಗತ್ಯ ವಸ್ತುಗಳ ಬೆಲೆಗೆ ಕಡಿವಾಣ ಹಾಕಲು ಸರ್ಕಾರ ವಿಫಲವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಪದೇಪದೇ ಹೆಚ್ಚುತ್ತಿರುವುದರಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳುವ ಜತೆಗೆ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದರು.

2 ಜಿ, ಕಾಮನ್‌ವೆಲ್ತ್ ಮತ್ತು ಆದರ್ಶ ಸೊಸೈಟಿ ಹಗರಣಗಳು ಆಡಳಿತಾರೂಢ ಪಕ್ಷಗಳ ಪ್ರಮುಖರು ಹಾಗೂ ಅವರ ಹಿಂಬಾಲಕರ ಅಪವಿತ್ರ ಮೈತ್ರಿಗೆ ಕನ್ನಡಿ ಹಿಡಿದಿವೆ ಎಂದು ಬಿಜೆಪಿ ಅಧ್ಯಕ್ಷರು ಟೀಕಿಸಿದರು.

ಕೇಂದ್ರ ಜಾಗೃತ ಆಯುಕ್ತರಾಗಿ ಥಾಮಸ್ ಅವರ ನೇಮಕಕ್ಕೆ ಸುಷ್ಮಾ ಸ್ವರಾಜ್ ವಿರೋಧ ವ್ಯಕ್ತಪಡಿಸಿದ್ದರು. ಈ ಜವಾಬ್ದಾರಿಯುತ ಸ್ಥಾನಕ್ಕೆ ನೇಮಕ ಮಾಡುವ ಮುನ್ನ ಸುಷ್ಮಾ ಏಕೆ ಭಿನ್ನಾಭಿಪ್ರಾಯ ಎತ್ತಿದ್ದಾರೆಂಬ ಬಗ್ಗೆ ಸರ್ಕಾರ ಯೋಚಿಸಬೇಕಿತ್ತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT