ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್ ಬ್ಯಾಂಕ್‌ನಲ್ಲಿ ಸಾವಿರ ಶತಕೋಟಿ ಡಾಲರ್ ಹಣ

Last Updated 7 ಜೂನ್ 2011, 5:30 IST
ಅಕ್ಷರ ಗಾತ್ರ

ಶಿವಮೊಗ್ಗ: ಸ್ವಿಟ್ಜರ್ಲೆಂಡ್ ದೇಶದ ಬ್ಯಾಂಕ್‌ಗಳಲ್ಲಿ ಭಾರತದ ಸರಿಸುಮಾರು 1,456 ಶತಕೋಟಿ ಡಾಲರ್ ಕಪ್ಪುಹಣವನ್ನು ಇಡಲಾಗಿದೆ ಎಂದು ಪರಿಸರವಾದಿ ಪ್ರೊ.ಬಿ.ಎಂ. ಕುಮಾರಸ್ವಾಮಿ ತಿಳಿಸಿದರು.

ಬಿಜೆಪಿ, ಬಾಬಾ ರಾಮ್‌ದೇವ್ ಹೋರಾಟಕ್ಕೆ ಅಡ್ಡಿಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಗೋಪಿವೃತ್ತದಲ್ಲಿ ಹಮ್ಮಿಕೊಂಡಿರುವ 24 ಗಂಟೆಗಳ ನಿರಶನದಲ್ಲಿ ಸೋಮವಾರ ಪಾಲ್ಗೊಂಡು ಅವರು ಈ ಮಾಹಿತಿ ನೀಡಿದರು.


2006ರಲ್ಲಿ ಆ ದೇಶದ ಸ್ವಿಸ್ ಬ್ಯಾಂಕ್ ಅಸೋಸಿಯೇಷನ್ ಸಂಘಟನೆ ಬಿಡುಗಡೆ ಮಾಡಿದ ಅಂಕಿ-ಅಂಶಗಳಲ್ಲಿ ಇದು ಬೆಳಕಿಗೆ ಬಂದಿದೆ. ವಿಶ್ವದಲ್ಲಿ ಸ್ವಿಜರ್‌ಲೆಂಡ್ ಸೇರಿದಂತೆ ಸುಮಾರು 70 ದೇಶಗಳಲ್ಲಿ ಕಪ್ಪುಹಣವನ್ನು ಸಂಗ್ರಹಿಸಿಡುವ ಕೆಲಸವನ್ನು ಕೆಲವು ಬ್ಯಾಂಕ್‌ಗಳು ಮಾಡುತ್ತಿವೆ. ಈ ರೀತಿ ಕಪ್ಪುಹಣದಿಂದಲೇ ಕೆಲ ದೇಶಗಳ ಆರ್ಥಿಕತೆ ಅಲವಂಬಿತವಾಗಿದೆ ಎಂದರು.

  ಸ್ವಿಟ್ಜರ್ಲೆಂಡ್ ದೇಶದ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚು ಕಪ್ಪುಹಣ ಇಟ್ಟಿರುವ ಮೊದಲ 5 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಭಾರತ ಪ್ರಥಮ ಸ್ಥಾನ ಪಡೆದಿದೆ. ಒಟ್ಟು 1,456 ಶತಕೋಟಿ ಡಾಲರ್ ಕಪ್ಪುಹಣವನ್ನು ಭಾರತ ದೇಶದ ಜನ ಅಲ್ಲಿಟ್ಟಿದ್ದಾರೆ. ಎರಡನೇ ಸ್ಥಾನದಲ್ಲಿ ರಷ್ಯಾ ದೇಶವಿದ್ದು, ಅದು 470 ಸಾವಿರ ಶತಕೋಟಿ ಡಾಲರ್ ಕಪ್ಪುಹಣ ಇಟ್ಟಿದೆ ಎಂದು ಮಾಹಿತಿ ನೀಡಿದರು.

ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪುಹಣವು ಉಗ್ರಗಾಮಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆಂಬ ಅಂಶ ಬಹಿರಂಗವಾಗುತ್ತಿದ್ದಂತೆ ಆ ದೇಶಗಳು ಕಪ್ಪುಹಣವನ್ನು ತಮ್ಮ ದೇಶಕ್ಕೆ ಹಿಂದಕ್ಕೆ ತರಲು ಕ್ರಮ ಕೈಗೊಂಡಿವೆ. ಈಗಾಗಲೇ ಕೆಲವು ದೇಶಗಳು ಯಶಸ್ವಿಯಾಗಿವೆ. ಆದರೆ, ಭಾರತ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ ಎಂದು ಆರೋಪಿಸಿದರು.

ಯಾವುದೇ ಸರ್ಕಾರ ಜನಪರ ಕೆಲಸಗಳನ್ನು ಮಾಡಲು ಸಾರ್ವಜನಿಕರ ತೆರಿಗೆಯ ಹಣ ಬೇಕಾಗುತ್ತದೆ. ಆದರೆ, ಭಾರತದಲ್ಲಿ ಸಾವಿರಾರು ಕೋಟಿ ರೂ ತೆರಿಗೆ ವಂಚಿಸಿದ ಹಣ ವಿದೇಶಿ ಬ್ಯಾಂಕ್‌ಗಳಲ್ಲಿ ಕೊಳೆಯುತ್ತಿದೆ. ಈ ಹಣವನ್ನು ಹಿಂದಕ್ಕೆ ತರಲು ಯಾವುದೇ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು ವಿಷಾದಿಸಿದರು.

ಬಾಬಾ ರಾಮ್‌ದೇವ್ ಅವರ ಒಂದು ದಿನದ ಉಪವಾಸ ತಡೆದುಕೊಳ್ಳಲು ಸಾಧ್ಯವಾಗದ ಸರ್ಕಾರ ಹೀನಕೃತ್ಯ ನಡೆಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.

 ಕಾಂಗ್ರೆಸ್ ಈ ದೇಶವನ್ನು ಪ್ರೀತಿಸುವುದಿಲ್ಲ. ಈ ಮಣ್ಣಿಗೆ ಅನುಗುಣವಾಗಿ ಕೆಲಸ ಮಾಡಿಲ್ಲ. ಇಷ್ಟು ವರ್ಷ ದೇಶ ಆಳಿದ ಕಾಂಗ್ರೆಸ್ ಇವರೆಡನ್ನು ಅಚ್ಚುಕಟ್ಟಾಗಿ ಮಾಡಿದ್ದರೆ ಇಂದು ಬೇರೆ ಪಕ್ಷವೇ ಬೇಕಾಗಿರಲಿಲ್ಲ ಎಂದರು.

ಇದು ದೇಶಕ್ಕಾಗಿ ಮದುವೆ ಬಿಟ್ಟವರ ಹಾಗೂ ಗಂಡನಿಗಾಗಿ ದೇಶವನ್ನೇ ಬಿಟ್ಟು ಬಂದವರ ಸಂಘರ್ಷ. ಇಲ್ಲಿ ದೇಶಕ್ಕಾಗಿ ಹೋರಾಡುತ್ತಿರುವ ಕಾಳಜಿ ಮುಖ್ಯವೇಹೊರತು, ಗಂಡನಿಗಾಗಿ ದೇಶ ಬಿಟ್ಟವರ ಕಾಳಜಿ ಅಲ್ಲ ಎಂದು ಸೋನಿಯಾ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಅನಂತರಾಮಯ್ಯ, ಸೂಡಾ ಅಧ್ಯಕ್ಷ ಜ್ಞಾನೇಶ್ವರ್, ಪದಾಧಿಕಾರಿಗಳಾದ ಬಿಳಕಿ ಕೃಷ್ಣಮೂರ್ತಿ, ದತ್ತಾತ್ರಿ, ಚನ್ನಬಸಪ್ಪ ಉಪಸ್ಥಿತರಿದ್ದರು.

ನಿಷೇಧಿತ ಪ್ರದೇಶದಲ್ಲೇ ಪ್ರತಿಭಟನೆ
ನಿಷೇಧಿತ ಪ್ರದೇಶ ಗೋಪಿವೃತ್ತದಲ್ಲೇ ಬಿಜೆಪಿ ದೊಡ್ಡ ಪೆಂಡಾಲ್ ಹಾಕಿ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಯಾವುದೇ ಪ್ರತಿಭಟನಾ ಸಭೆ-ಸಮಾರಂಭ ಮಾಡದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಆದರೆ, ಇದೇ ಜಾಗದಲ್ಲೇ ಬಿಜೆಪಿ 24ಗಂಟೆ ನಿರಂತರ ಪ್ರತಿಭಟನೆ ಮಾಡಲು ಜಿಲ್ಲಾಧಿಕಾರಿ ಅವಕಾಶ ಕೊಟ್ಟಿದ್ದು ಏಕೆ ಎಂದು ಹಲವರು ಪ್ರಶ್ನಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT