ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದೆ, ನಾಕೋಡ್ ಸೇರಿ 50 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನಿ ಡಾ. ಹರೀಶ್ ಹಂದೆ, ಸಂಶೋಧಕ ಡಾ. ಶಾಂತಿನಾಥ ದಿಬ್ಬದ, ಹಿಂದೂಸ್ತಾನಿ ಸಂಗೀತಗಾರ ಬಾಲಚಂದ್ರ ನಾಕೋಡ ಸೇರಿದಂತೆ 50 ಮಂದಿ ಗಣ್ಯರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ಡೆಕ್ಕನ್ ಹೆರಾಲ್ಡ್-ಸುಧಾ ಪತ್ರಿಕೆ ಸಂಪಾದಕರಾದ ಕೆ.ಎನ್.ತಿಲಕ್‌ಕುಮಾರ್, ಸಾಹಿತಿಗಳಾದ ಡಾ. ಪುರುಷೋತ್ತಮ ಬಿಳಿಮಲೆ, ಅರವಿಂದ ಮಾಲಗತ್ತಿ, ಯಕ್ಷಗಾನ ಕಲಾವಿದರಾದ ವಿಠೋಬ ಹಮ್ಮಣ್ಣ ನಾಯಕ ಮತ್ತು ಕುಂಜಾಲು ರಾಮಕೃಷ್ಣ ನಾಯಕ ಅವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯು ಲಕ್ಷ ರೂಪಾಯಿ ನಗದು ಹಾಗೂ 20ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನ.1ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

50-50: ಕಳೆದ ಬಾರಿ ಪ್ರಶಸ್ತಿ ಪುರಸ್ಕೃತರ ಸಂಖ್ಯೆ 80ರಿಂದ 182ಕ್ಕೆ ಏರಿತ್ತು. ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಗೊಂಡ ಮೇಲೆಯೂ ಪಟ್ಟಿ ಬೆಳೆಯುತ್ತಲೇ ಹೋಗಿತ್ತು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಸಂಖ್ಯೆ 50ರ ಗಡಿ ದಾಟುವುದಿಲ್ಲ ಎಂದು ಹೇಳಿದ್ದ ಸದಾನಂದಗೌಡ, ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಆದರೆ, ಕ್ರೀಡಾ ಕ್ಷೇತ್ರ ಮತ್ತು ಅಂಗವಿಕಲರನ್ನು ಹೊರತುಪಡಿಸಿ ಬೇರೆ ವಿಭಾಗಗಳಲ್ಲಿ 50 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ಪ್ರಶಸ್ತಿ ನೀಡುವುದಿಲ್ಲ ಎಂಬ ಮಾತನ್ನು ಮಾತ್ರ ಅವರು ಮೀರಿದ್ದಾರೆ.


ಮೂವರು ಪ್ರಶಸ್ತಿ ಪುರಸ್ಕೃತರು 50ರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರು. `ಮುಖ್ಯಮಂತ್ರಿಗಳು ಆ ರೀತಿ ಹೇಳಿದ್ದು ನಿಜ. ಆದರೆ ಅರ್ಹತೆ ಹಾಗೂ ಅನುಭವಗಳ ಆಧಾರದ ಮೇಲೆ ವಯೋಮಾನದಲ್ಲಿ  ಕೆಲವೇ ಕೆಲವರಿಗೆ ಮಾತ್ರ ಸ್ವಲ್ಪ ಸಡಿಲಿಕೆ ಮಾಡಲಾಗಿದೆ~ ಎಂದು ಕಾರಜೋಳ ಪತ್ರಕರ್ತರ ಪ್ರಶ್ನೆಗೆ ಸಮಜಾಯಿಷಿ ನೀಡಿದರು.

ಮಹಿಳೆಯರ ಸಂಖ್ಯೆ ಕಡಿಮೆ: ಈ ಬಾರಿಯ ಪ್ರಶಸ್ತಿ ಪಟ್ಟಿ ಗಮನಿಸಿದರೆ ಮಹಿಳೆಯರ ಸಂಖ್ಯೆ ಕಮ್ಮಿಯಾಗಿದೆ. 50 ಮಂದಿ ಪುರಸ್ಕೃತರ ಪೈಕಿ ಐವರು ಮಾತ್ರ ಮಹಿಳೆಯರು. ಸಾಹಿತ್ಯ, ರಂಗಭೂಮಿ, ಜಾನಪದ, ನೃತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಇವರು ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಈ ಸಂಖ್ಯೆಯು ಕಡಿಮೆ ಏನಲ್ಲ ಎಂಬ ಸ್ಪಷ್ಟನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರಿಂದ ಬಂತು.

ನಾಲ್ಕು ಸಾವಿರ ಅರ್ಜಿ: ಪ್ರಶಸ್ತಿ ಬಯಸಿ ಈ ಬಾರಿ ಅರ್ಜಿ ಸಲ್ಲಿಸಿದ್ದವರ ಸಂಖ್ಯೆ  ನಾಲ್ಕು ಸಾವಿರಕ್ಕೂ ಅಧಿಕ ಎಂದು ಕಾರಜೋಳ ವಿವರಿಸಿದರು. `ಪ್ರಶಸ್ತಿ ಆಕಾಂಕ್ಷಿಗಳು ತಮ್ಮ ಅನುಭವ, ತಾವು ಪಡೆದ ಇತರ ಪ್ರಶಸ್ತಿ ವಿವರ, ತಮಗೆ ಬಂದ ಬಹುಮಾನಗಳು ಸೇರಿದಂತೆ ಬೃಹತ್ ದಾಖಲೆಗಳನ್ನೇ ಅರ್ಜಿಯ ಜೊತೆ ಸಲ್ಲಿಸಿದ್ದರು. ಒಬ್ಬರ ಅರ್ಜಿಯಂತೂ (ಹೆಸರು ಬಹಿರಂಗಪಡಿಸಲು ಅವರು ಒಪ್ಪಲಿಲ್ಲ) 1,500ಕ್ಕೂ ಅಧಿಕ ಪುಟಗಳನ್ನು ಒಳಗೊಂಡಿತ್ತು~ ಎಂದು ವಿವರಿಸಿದರು. `ಈ ಬಾರಿಯ ಪ್ರಶಸ್ತಿ ಪುರಸ್ಕೃತರ ಪೈಕಿ ಕೆಲವು ಮಂದಿ ಅರ್ಜಿ ಸಲ್ಲಿಸಿರಲಿಲ್ಲ. ಬದಲಿಗೆ ಅವರ ಅರ್ಹತೆ, ಅನುಭವ, ಸೇವೆ ಇತ್ಯಾದಿಗಳನ್ನು ಪರಿಗಣಿಸಿ ಪ್ರಶಸ್ತಿಗೆ ಸರ್ಕಾರವೇ ಆಯ್ಕೆ ಮಾಡಿದೆ~ ಎಂದು ತಿಳಿಸಿದರು.



ರಾಜಕೀಯ ಕ್ಷೇತ್ರಕ್ಕೆ ಪ್ರಶಸ್ತಿ ಯಾಕೆ ನೀಡುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಕಾರಜೋಳ, `ಈ ಕ್ಷೇತ್ರಕ್ಕೂ ಪ್ರಶಸ್ತಿ ಮೀಸಲಿರಿಸಿದ್ದರೆ ಬೇರೆ ಯಾವ ಕ್ಷೇತ್ರಕ್ಕೂ ಪ್ರಶಸ್ತಿ ಸಿಗುತ್ತಿರಲಿಲ್ಲ. ಪ್ರಶಸ್ತಿ ಪಟ್ಟಿಯ ತುಂಬ ಅವರದ್ದೇ ಹೆಸರು ಇರುತ್ತಿತ್ತು~ ಎಂದು ಚಟಾಕಿ ಹಾರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT