ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವಕ್ಕೆ ಇಂದು ಚಾಲನೆ

Last Updated 26 ಜನವರಿ 2011, 18:30 IST
ಅಕ್ಷರ ಗಾತ್ರ

ಹಂಪಿ: ವಿಜಯನಗರದ ಆಳರಸರ ರಾಜಧಾನಿಯಾಗಿ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ದ್ಯೋತಕವಾಗಿ ಹೊರಹೊಮ್ಮಿದ್ದ ಇತಿಹಾಸ ಪ್ರಸಿದ್ಧ ಹಂಪಿ ಇದೀಗ ಮತ್ತೊಮ್ಮೆ ಅದೇ ವೈಭವಕ್ಕೆ ಸಿದ್ಧಗೊಂಡಿದೆ. ಗುರುವಾರದಿಂದ ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವವು ಲಕ್ಷಾಂತರ ಕಲಾ ಪ್ರೇಮಿಗಳನ್ನು ಆಕರ್ಷಿಸಲಿದೆ.

ಬಳ್ಳಾರಿ, ಹೊಸಪೇಟೆ ಮತ್ತು ಗಂಗಾವತಿಯಿಂದ ಹಂಪಿಗೆ ಸಂಪರ್ಕ ಕಲ್ಪಿಸುವ ಪ್ರತಿ ರಸ್ತೆಗಳೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಇಲ್ಲಿನ ಬೆಟ್ಟಗಳ ಮೇಲಿನ ಪ್ರತಿ ಕಲ್ಲೂ ರಮ್ಯವಾಗಿ ಕಾಣುತ್ತ, ನೋಡುಗರನ್ನು ಬೆರಗುಗೊಳಿಸುವಂತಹ ನಯನಮನೋಹರ ವಾತಾವರಣವೂ, ವೈಭವವೂ ಸೃಷ್ಟಿಯಾಗಿದೆ.

ಅಗಲಿದವರ ಸ್ಮರಣೆ: ಇತ್ತೀಚೆಗಷ್ಟೇ ಅಗಲಿದ ಸಾಧಕರನ್ನು ಸ್ಮರಿಸಿಕೊಳ್ಳುವ ಮಹತ್ವದ ಕೆಲಸ ಈ ಉತ್ಸವದಲ್ಲಿ ಆಗಲಿದ್ದು, ಮೂರು ದಿನಗಳ ಹಿಂದಷ್ಟೇ ಪುಣೆಯಲ್ಲಿ ನಿಧನರಾದ ಭಾರತರತ್ನ ’ಪಂಡಿತ್ ಭೀಮಸೇನ ಜೋಷಿ’, ಕಳೆದ ವರ್ಷ ಲಿಂಗೈಕ್ಯರಾದ ಅಂಧ- ಅನಾಥರ ಕಣ್ಮಣಿ ’ಪಂಡಿತ್ ಪುಟ್ಟರಾಜ ಕವಿ ಗವಾಯಿ’, ವರನಟ ’ಡಾ.ರಾಜಕುಮಾರ್’, ’ಸಾಸಹಸಿಂಹ ವಿಷ್ಣುವರ್ಧನ್’ ಅವರ ಹೆಸರಿನ ನಾಲ್ಕು ವೇದಿಕೆಗಳು ಕಲೆಯ ಅನಾವರಣಕ್ಕೆ ಸನ್ನದ್ಧವಾಗಿವೆ.

ಶಿಲ್ಪಕಲೆಯ ವೈಭವವೇ ಮೈತಾಳಿದಂತಿರುವ ’ಶ್ರೀಕೃಷ್ಣದೇವರಾಯ’ ಮುಖ್ಯವೇದಿಕೆ ರಮಣೀಯವಾಗಿ ಸಿಂಗಾರಗೊಂಡಿದ್ದು, ಪ್ರೇಕ್ಷಕರನ್ನು ಭಾವನಾ ಲೋಕಕ್ಕೆ ಕರೆದೊಯ್ಯಲಿದೆ. ’ಗಂಡುಗಲಿ ಕುಮಾರರಾಮ’ ನಾಮಾಂಕಿತ ಮತ್ತೊಂದು ವೇದಿಕೆಯೂ ಜನಪದ ಲೋಕಕ್ಕೆ ಕೊಂಡೊಯ್ಯಲು ಅಣಿಯಾಗಿದೆ.

ವಿರೂಪಾಕ್ಷೇಶ್ವರ ದೇವಸ್ಥಾನದೆದುರು ಪ್ರತಿ ವರ್ಷವೂ ಇರುತ್ತಿದ್ದ ಕನಕ ಪುರಂದರರ ಹೆಸರಿನ ವೇದಿಕೆಗೆ, ಪಂಡಿತ್ ಭೀಮಸೇನ ಜೋಷಿ ಅವರ ಹೆಸರು ಇರಿಸಿ, ಅಗಲಿದ ಚೇತನವನ್ನು ಗೌರವಿಸಲಾಗುತ್ತಿದೆ.

ರಸದೌತಣ: ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿಯರೂ, ಅದ್ಭುತ ನೃತ್ಯಪಟುಗಳೂ ಆದ ಶೋಭನಾ ಹಾಗೂ ಶ್ರೇಯಾ ಅವರು ಈ ಬಾರಿಯ ಉತ್ಸವಕ್ಕೆ ಕಳೆಕಟ್ಟಲಿದ್ದು, ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಅವರ ರಂಗಗೀತೆಗಳು ಕೇಳುಗರ ಗುಂಗು ಹಿಡಿಸಲಿವೆ.

ರಷ್ಯ, ಜರ್ಮನಿ, ದಕ್ಷಿಣ ಆಫ್ರಿಕ, ಶ್ರೀಲಂಕಾ, ಮಂಗೋಲಿಯಾ, ರಾವ್ಡಾಗಳಿಂದ ಬರುವ ಕಲಾವಿದರ ಪಡೆಯೂ ಈ ಉತ್ಸವಕ್ಕೆ ಮೆರುಗು ನೀಡಲಿದ್ದು, ಹಂಪಿಯಲ್ಲಿ ಕಲೆಯ ರಸದೌತಣವೇ ಕಾದಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಖ್ಯಾತ ಕಲಾವಿದರ ದಂಡು ಹಂಪಿಯಲ್ಲಿ ಬೀಡುಬಿಡಲಿದ್ದು, ಸ್ಥಳೀಯ ಕಲಾವಿದರಿಗೂ ಪ್ರಾಮುಖ್ಯ ನೀಡಲಾಗಿದೆ. ರಾಜ್ಯದ ಸುಮಾರು 3000ಕ್ಕೂ ಅಧಿಕ ಸಂಖ್ಯೆಯ ಕಲಾವಿದರಿಗೆ ವೇದಿಕೆ ಒದಗಿಸಲಾಗಿದ್ದು, ಹಂಪಿ ಇರುವ ಬಳ್ಳಾರಿ ಜಿಲ್ಲೆಯ ನೂರಾರು ಕಲಾವಿದರ ಕಲೆ ಹೊರಗಿನ ಪ್ರೇಕ್ಷಕರೆದುರು ಪ್ರದರ್ಶನಗೊಳ್ಳಲಿದೆ.

ಸುಗಮ ಸಂಗೀತ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಸರ ಪದ, ವಚನ ಗಾಯನ, ಸಮೂಹ ನೃತ್ಯ, ಬಯಲಾಟ, ಚಿತ್ರಕಲೆ, ಛಾಯಾಚಿತ್ರಕಲೆ, ಕವನ ವಾಚನ, ತೊಗಲುಗೊಂಬೆ, ನಾಟಕ, ಯಕ್ಷಗಾನ, ಜನಪದ ನೃತ್ಯ ಹೀಗೆ ಕಲೆಯ ಎಲ್ಲ ಪ್ರಕಾರಗಳೂ ಮುಂದಿನ ಮೂರು ದಿನಗಳ ಕಾಲ ಹಂಪಿಯಲ್ಲಿ ಅನುರಣಿಸಲಿವೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಸಂಜೆ 5ಕ್ಕೆ ಉತ್ಸವಕ್ಕೆ ಚಾಲನೆ ನೀಡಲಿದ್ದು, ಹಂಪಿಯಲ್ಲಿ ಇತಿಹಾಸದ ಗತವೈಭವ ಮರುಕಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT