ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ, ಜಾತಿ ರಾಜಕೀಯ ಸಲ್ಲ: ಧರ್ಮೇಗೌಡ

Last Updated 24 ಅಕ್ಟೋಬರ್ 2011, 9:30 IST
ಅಕ್ಷರ ಗಾತ್ರ

ಹೊಸದುರ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಜಾತಿ ಒಂದಾಗಬಾರದು ವ್ಯಕ್ತಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಸರ್ಪಒಕ್ಕಲಿಗ ಸಮಾಜದ ಮುಖಂಡ ಹಾಗೂ ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಹೇಳಿದರು.

ಇಲ್ಲಿನ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಸರ್ಪಒಕ್ಕಲಿಗರ ಸಂಘದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸರ್ಪಒಕ್ಕಲಿಗರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಜನತೆ ತಮ್ಮ ಅಭ್ಯುದಯಕ್ಕೆ ದುಡಿಯುವ, ಭಾವನೆಗಳನ್ನು  ಅರ್ಥೈಸಿಕೊಂಡು ಕೆಲಸ ಮಾಡುವ ವ್ಯಕ್ತಿಗಳನ್ನು ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕು. ಹಣ ಅಥವಾ ಜಾತಿ ಮುಂದಿಟ್ಟುಕೊಂಡು ರಾಜಕೀಯ  ಮಾಡುವವರನ್ನು ದೂರ ಇಡಬೇಕು ಎಂದರು.

ಸರ್ಪಒಕ್ಕಲಿಗರು ಅಲ್ಪಸಂಖ್ಯಾತರು. ಸಂಘಟನೆಯ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕು. ಶೈಕ್ಷಣಿಕವಾಗಿ ಪ್ರಗತಿ  ಸಾಧಿಸುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಇದರ ಜತೆಗೆ ಪರಸ್ಪರ ದ್ವೇಷ ಅಸೂಯೆ ಬಿಟ್ಟು ಸಮಾಜವನ್ನು ಕಟ್ಟುವಕೆಲಸ ಮಾಡಬೇಕು ಎಂದರು.

ತುಮಕೂರಿನಲ್ಲಿ ಸರ್ಪಒಕ್ಕಲಿಗರ ಸಂಘ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿಲಯಕ್ಕೆ ರೂ. 5 ಲಕ್ಷ ದೇಣಿಗೆ ನೀಡುವುದರ ಜತೆಗೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಕುಮಾರ್ ಮಾತನಾಡಿ, ಸರ್ಪಒಕ್ಕಲಿಗ ಸಮುದಾಯ ರಾಜಕೀಯ ಶಕ್ತಿ  ಇಲ್ಲದೆ ಸೊರಗಿಹೋಗುತ್ತಿದೆ. ಜನಾಂಗದ ಯುವಕರು ಇತರೆ ಸಮುದಾಯದೊಂದಿಗೆ ಬೆರೆತು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಮಾಜವನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕು ಎಂದರು.

ಸಮಾಜವನ್ನು ಶೈಕ್ಷಣಿಕವಾಗಿ ಮುಂದುವರಿಸುವ ನಿಟ್ಟಿನಲ್ಲಿ ಹಲವಾರು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾಬಂದಿದೆ. ತುಮಕೂರಿನಲ್ಲಿ ಸರ್ಪಒಕ್ಕಲಿಗರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಸಂಘದಿಂದ ನಿವೇಶನ ಖರೀದಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಮಾಜದ ಸಮಸ್ತರೂ ನೆರವು ನೀಡಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬಾಳಿಗೊಂದುಗುರಿ ಕಾಲೇಜು ಪ್ರಾಂಶುಪಾಲ ಪಿ.ಎಲ್. ಲೋಕೇಶ್ವರ್ ಅಲ್ಪಸಂಖ್ಯಾತ ಸರ್ಪಒಕ್ಕಲಿಗ ಜನಾಂಗದ ಸ್ಥಿತಿ ಶೋಚನೀಯವಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡೂ ಇಲ್ಲ ಕೇಳಿಯೂ  ಇಲ್ಲ. ಜನಾಂಗ ಗುರುಪೀಠ ಕಟ್ಟಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವುದು ಅಗತ್ಯ ಎಂದರು.

ತುಮಕೂರು ಜಿಲ್ಲೆ  ಮಾಯಸಂದ್ರದ ಆದಿಚುಂಚನಗಿರಿ ಶಾಖಾಮಠದ ಶಿವಕುಮಾರನಾಥ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸರ್ಪಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಡಾ.ಎಸ್.ಜಿ. ಪರಮೇಶ್ವರ್ ಸಮಾವೇಶ ಉದ್ಘಾಟಿಸಿದರು. ಹೊಳಲ್ಕರೆ ಶಾಸಕ ಎಂ. ಚಂದ್ರಪ್ಪ, ಮಾಜಿ ಶಾಸಕರಾದ  ಬಿ.ಜಿ. ಗೋವಿಂದಪ್ಪ, ಇಲ್ಕಲ್ ವಿಜಯಕುಮಾರ್, ಟಿ.ಎಚ್. ಬಸವರಾಜಪ್ಪ ಮಾತನಾಡಿದರು.

ಜಿಲ್ಲಾ ಸಂಘದ ಅಧ್ಯಕ್ಷ ಪಿ. ರಂಗದಾಸ್ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ಜಿ.ಪಂ. ಸದಸ್ಯೆ ಜಾನಕಮ್ಮ, ಕಡೂರು ತಾ.ಪಂ. ಸದಸ್ಯ ಶಶಿಕುಮಾರ್, ತಾ.ಪಂ. ಮಾಜಿ ಸದಸ್ಯ ನರಸಪ್ಪ, ಸಮಾಜದ ಮುಖಂಡರಾದ ನಿವೃತ್ತ ಶಿಕ್ಷಕ ಸಿದ್ದಪ್ಪ, ವಕೀಲ ಜಿ. ಗೋವಿಂದರಾಜು, ಲಕ್ಷ್ಮಣಪ್ಪ, ಎನ್.ಆರ್. ಜಯರಾಂ, ಜಿ. ಪ್ರಹ್ಲಾದ್, ಕುಂಚಿಟಿಗ ಸಮಾಜದ ಮುಖಂಡ  ಆರ್. ತಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ಖಜಾಂಚಿ ಆನಂದ್ ಸ್ವಾಗತಿಸಿದರು. ಉಪನ್ಯಾಸಕ ಪ್ರಕಾಶ್ ಕಾರ್ಯಕ್ರಮ  ನಿರೂಪಿಸಿದರು.
ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT