ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತಾರ ಇನ್ನಷ್ಟು ಹರಿತಗೊಳ್ಳಲಿ

ಮಾಹಿತಿ ಹಕ್ಕು ಎಂಬ ಜನಾಸ್ತ್ರ
Last Updated 24 ಅಕ್ಟೋಬರ್ 2015, 15:39 IST
ಅಕ್ಷರ ಗಾತ್ರ

ಸಾರ್ವಜನಿಕ ಸಂಸ್ಥೆಗಳ ಹೊಣೆಗಾರಿಕೆಯು ಮಾಹಿತಿ ಹಕ್ಕು ಕಾಯ್ದೆಯ ಕೇಂದ್ರ ಬಿಂದು.ಅಭಿವ್ಯಕ್ತಿ ಮತ್ತು ವಾಕ್‌ ಸ್ವಾತಂತ್ರ್ಯದಂತೆ ಮಾಹಿತಿ ಕೇಳುವುದು ಕೂಡ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಈಗ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಸುಪ್ರೀಂಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿ ದಶಕಗಳೇ ಕಳೆದಿವೆ (ಎಸ್.ಪಿ.ಗುಪ್ತ ಪ್ರಕರಣ, 1982; ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಪ್ರಕರಣ, 1995).

ಪ್ರತಿ ಸಂಸ್ಥೆಯ ರಚನೆ, ಕರ್ತವ್ಯ, ಅದರಲ್ಲಿರುವ ಅಧಿಕಾರಿಗಳ ಅಧಿಕಾರ, ಅವರ ಕರ್ತವ್ಯ, ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆ, ಯೋಜನೆಯ ವಿವರ, ಪ್ರಸ್ತಾವಿತ ವೆಚ್ಚ, ಆಗಿರುವ ಖರ್ಚು, ಮಾಡಿರುವ ಬಟವಾಡೆ... ಹೀಗೆ ಎಲ್ಲದರ ಮಾಹಿತಿ ಅರಿಯುವ ಹಕ್ಕು ದೇಶದ ಪ್ರಜೆಗಿದೆ. ವ್ಯಕ್ತಿಗಳ ಖಾಸಗಿ ವಿಚಾರವನ್ನು (ಸಂಬಂಧ, ಅಧಿಕೃತ ಜವಾಬ್ದಾರಿಗೆ ಹೊರತಾದ) ಹೊರತುಪಡಿಸಿ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತಾಗಿ ಯಾರು ಬೇಕಾದರೂ ಮಾಹಿತಿ ಕೇಳಬಹುದು.
ವಿಷಯ ಅಥವಾ ಘಟನೆಗೆ ಸಂಬಂಧವಿರುವವರು ಮಾತ್ರ ಆರ್‌ಟಿಐ ಅರ್ಜಿ ಹಾಕಬೇಕು ಎಂಬ ವಾದವನ್ನು ಕೆಲವರು ಮುಂದಿಡುತ್ತಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಆರ್‌ಟಿಐ ಕಾಯ್ದೆಯ ಸೆಕ್ಷನ್‌ 3ರ ಅಡಿಯಲ್ಲಿ ದೇಶದ ಪ್ರತಿ ಪ್ರಜೆಗೂ ಮಾಹಿತಿ ಕೇಳುವ ಹಕ್ಕು ಇದೆ.

ಜನಸಾಮಾನ್ಯರಿಗೆ, ಪತ್ರಕರ್ತರಿಗೆ, ಸ್ವಯಂಸೇವಾ ಸಂಸ್ಥೆಗಳಿಗೆ (ಎನ್‌ಜಿಒ) ಹಾಗೂ ರಾಜಕೀಯ ಪಕ್ಷಗಳ

ಸಮಾಜಮುಖಿ ಹೋರಾಟಗಳಿಗೆ ಈ ಕಾಯ್ದೆಯು ಬಹು ಉಪಯುಕ್ತ ಸಾಧನವಾಗಿದೆ. ಆದರೆ, ರಾಷ್ಟ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಕಾಯ್ದೆಯ ಅನುಷ್ಠಾನ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಆರ್‌ಟಿಐ ಅಡಿಯಲ್ಲಿ ಮಾಹಿತಿ ಬಹಿರಂಗಗೊಂಡ ನಂತರವೂ ಅವ್ಯವಹಾರ ನಡೆಸಿದವರ ವಿರುದ್ಧ ಏನೂ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಒಟ್ಟು ವ್ಯವಸ್ಥೆ ಸುಸೂತ್ರವಾಗಿ ಕೆಲಸ ಮಾಡುತ್ತಿಲ್ಲ.

ರಾಜ್ಯದಲ್ಲಿ 30 ಸಾವಿರ ಅರ್ಜಿಗಳು ವಿಲೇವಾರಿ ಆಗುವುದಕ್ಕೆ ಬಾಕಿ ಇವೆ. ಮಾಹಿತಿ ಆಯೋಗದ ಆಯುಕ್ತರ  ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ಪೂರ್ಣ ಪ್ರಮಾಣದಲ್ಲಿ ಸದಸ್ಯರಿಲ್ಲದೇ ಆಯೋಗವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವೇ?

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾಹಿತಿ ಆಯೋಗಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ಆಕ್ಷೇಪಾರ್ಹವಾಗಿದೆ. ಐಎಎಸ್‌ ಅಧಿಕಾರಿಯನ್ನು ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ತಕರಾರು ಇಲ್ಲ. ಆದರೆ, ನೇಮಕಗೊಳ್ಳುವ ಅಧಿಕಾರಿ ಅತ್ಯಂತ ಶುದ್ಧ ಹಸ್ತನಾಗಿರಬೇಕು, ಸಚ್ಚಾರಿತ್ರ್ಯ ಹೊಂದಿರಬೇಕು. ಅಧ್ಯಕ್ಷರನ್ನು ರಾಜ್ಯಪಾಲರು ನೇಮಿಸುತ್ತಾರಾದರೂ, ಆ ಹುದ್ದೆಗೆ ಹೆಸರನ್ನು ಶಿಫಾರಸು ಮಾಡುವುದು ಆಯ್ಕೆ ಸಮಿತಿ. ಈ ಸಮಿತಿಯಲ್ಲಿ ಕೊಂಚ ಬದಲಾವಣೆ ತರಬೇಕಾದ  ಅಗತ್ಯವಿದೆ.

ಮುಖ್ಯಮಂತ್ರಿ ನೇತೃತ್ವದ ಮೂವರು ಸದಸ್ಯರ ಸಮಿತಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದವರು ಎರಡನೇ ಸದಸ್ಯರಾಗಿರುತ್ತಾರೆ. ಮೂರನೇ ಸದಸ್ಯರನ್ನಾಗಿ ಸಂಪುಟ ಸಚಿವರೊಬ್ಬರನ್ನು ಮುಖ್ಯಮಂತ್ರಿ ನಾಮನಿರ್ದೇಶನ ಮಾಡುತ್ತಾರೆ (ರಾಷ್ಟ್ರಮಟ್ಟದಲ್ಲಿ ಸಮಿತಿಗೆ ಪ್ರಧಾನಿ ಮುಖ್ಯಸ್ಥರು. ಲೋಕಸಭೆಯ ವಿರೋಧ ಪಕ್ಷದ ನಾಯಕ ಒಬ್ಬ ಸದಸ್ಯರಾಗಿದ್ದು, ಮತ್ತೊಂದು ಸದಸ್ಯ ಸ್ಥಾನಕ್ಕೆ ಸಂಪುಟ ಸಚಿವರೊಬ್ಬರನ್ನು ಪ್ರಧಾನಿ ನಾಮನಿರ್ದೇಶನ ಮಾಡುತ್ತಾರೆ). ಈ ವ್ಯವಸ್ಥೆ ಬದಲಾಗಬೇಕು. ಮುಖ್ಯಮಂತ್ರಿ ಅಥವಾ ಪ್ರಧಾನಿ ನಾಮನಿರ್ದೇಶನ ಮಾಡುವ ಪದ್ಧತಿ ತೆಗೆದುಹಾಕಬೇಕು.

ರಾಜ್ಯ ಮಟ್ಟದಲ್ಲಿ ಮೂರನೇ ಸದಸ್ಯರನ್ನಾಗಿ ಕೇಂದ್ರ ಮಾಹಿತಿ ಆಯೋಗದ ಸದಸ್ಯರು ಅಥವಾ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದ ನಿರ್ದೇಶಕರು ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅವರನ್ನು ನೇಮಿಸಬೇಕು. ರಾಷ್ಟ್ರಮಟ್ಟದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯನ್ನು ನೇಮಿಸಬೇಕು. ಪ್ರಸಕ್ತ  ವ್ಯವಸ್ಥೆಯಲ್ಲಿ ಸ್ವಜನ ಪಕ್ಷಪಾತಕ್ಕೆ ಹೆಚ್ಚು ಅವಕಾಶವಿದೆ. ಈಗಿನ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಇದನ್ನು ಹೇಳುತ್ತಿಲ್ಲ. ಯಾವ ಪಕ್ಷಗಳ ಸರ್ಕಾರ ಇದ್ದರೂ ಅಷ್ಟೇ. ಸಮಿತಿಯಲ್ಲಿ ಸರ್ಕಾರದ ಇಬ್ಬರು ಪ್ರತಿನಿಧಿಗಳಿರುವುದರಿಂದ ತಮಗೆ ಬೇಕಾದವರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೆಲವು ಸಂಸ್ಥೆಗಳು ಕುಂಟು ನೆಪಗಳನ್ನು ಹೇಳಿ ಮಾಹಿತಿ ಕೊಡಲು ನಿರಾಕರಿಸುತ್ತವೆ. ಇದು ಕೂಡ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕೆ ಅಡಚಣೆ ಉಂಟು ಮಾಡುತ್ತದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿ ಕೊಡುವಲ್ಲಿ ವಿಳಂಬ ಮಾಡುವುದಕ್ಕಾಗಿ ಹೊಸ ಹೊಸ ದಾರಿಗಳನ್ನು ಹುಡುಕುವುದರಲ್ಲಿ ನಿಸ್ಸೀಮರು. ಈ ಉದಾಹರಣೆ ನೋಡಿ: ಪ್ರಧಾನಿ ನರೇಂದ್ರ ಮೋದಿ ಅವರ ‘ಗ್ರಾಮ ದತ್ತು’ ಯೋಜನೆಯ ಸಂಬಂಧ ಮಾಹಿತಿ ಕೋರಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದರೆ, ವಿವರ ನೀಡಲು ಇಲಾಖೆ ಎರಡು ತಿಂಗಳು ಸಮಯ ತೆಗೆದುಕೊಂಡಿದ್ದು ವರದಿಯಾಗಿದೆ. ಈ ನಿಧಾನದ್ರೋಹಕ್ಕೆ ಕಾರಣವೇನಿತ್ತು ಗೊತ್ತೇ? ಮಾಹಿತಿ ಅಧಿಕಾರಿ ಎರಡು ತಿಂಗಳ ‘ಅಧ್ಯಯನ’ಕ್ಕಾಗಿ ರಜೆ ಹೋಗಿದ್ದರು.

‘ಬೇಕಿದ್ದರೆ ದಂಡ ಪಾವತಿಸಲು ಸಿದ್ಧ, ಆದರೆ ಮಾಹಿತಿ ಕೊಡುವುದಿಲ್ಲ’ ಎಂಬ ಧೋರಣೆಯೂ ಅಧಿಕಾರಿಗಳಲ್ಲಿದೆ. ನಮ್ಮದೇ ಉದಾಹರಣೆ ನೋಡಿ: 5-6 ವರ್ಷಗಳ ಹಿಂದೆ ಬೆಂಗಳೂರು ಮೆಟ್ರೊ ರೈಲು ನಿಗಮವು ‘ನಮ್ಮ ಮೆಟ್ರೊ’ ಮಾರ್ಗಗಳಿಂದಾಗಿ ಎಷ್ಟು ಉದ್ಯಾನಗಳು, ಆಟದ ಮೈದಾನಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ? ಈ ಮಾರ್ಗಗಳಲ್ಲಿ ಕತ್ತರಿಸಬೇಕಾದ ಮರಗಳ ಸಂಖ್ಯೆ ಎಷ್ಟು? ಎಂಬ ಮಾಹಿತಿ ನೀಡಲು ವಿವಿಧ ಕಾರಣಗಳ ನೆಪವೊಡ್ಡಿ ನಿರಾಕರಿಸಿತು. ಇಷ್ಟೇ ಅಲ್ಲ ಈ ವಿಷಯ ತಿಳಿಸಲೂ ವಿಳಂಬ ಮಾಡಿತು. ಈ ತಪ್ಪಿಗೆ ರಾಜ್ಯ ಮಾಹಿತಿ ಆಯೋಗವು ಮೆಟ್ರೊ ಅಧಿಕಾರಿಗಳಿಗೆ ₹ 25 ಸಾವಿರ ದಂಡ ವಿಧಿಸಿತ್ತು. ಇಂತಹ ವರ್ತನೆಗಳನ್ನು ತಪ್ಪಿಸಬೇಕಾದರೆ ದಂಡದ ಮೊತ್ತವನ್ನು ಗರಿಷ್ಠ ಪ್ರಮಾಣದಲ್ಲಿ ಏರಿಸಬೇಕು.

ಆರ್‌ಟಿಐ ಮೂಲಕ ಮಾಹಿತಿ ಪಡೆದುಕೊಂಡು ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಬೆದರಿಸಲಾಗುತ್ತಿದೆ ಎಂಬುದು

ಸಾಮಾನ್ಯವಾಗಿ ಕೇಳಿ ಬರುತ್ತಿರುವ ಆರೋಪ. ಆದರೆ ಪ್ರಾಮಾಣಿಕ ಅಧಿಕಾರಿಗಳು, ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು ಯಾವುದೇ ಬೆದರಿಕೆಗೆ ಜಗ್ಗಬೇಕಾಗಿಲ್ಲ. ಒಂದು ವೇಳೆ ಬೆದರಿಕೆ ಹಾಕಲಾಗುತ್ತಿದೆ ಎಂದರೆ, ಯಾರಿಗೆ? ವಾಮಮಾರ್ಗದಲ್ಲಿ ಸರ್ಕಾರಿ ಸವಲತ್ತು ಪಡೆದುಕೊಂಡವರಿಗೆ, ಸರ್ಕಾರಿ ಹಣದಲ್ಲಿ ಅವ್ಯವಹಾರ ಮಾಡಿದವರಿಗೆ ಅಲ್ಲವೇ? ಬೆದರಿಕೆಯಿಂದ ರಕ್ಷಣೆ ಪಡೆಯುವ ಅವಕಾಶವನ್ನು ಕಾನೂನು ಎಲ್ಲರಿಗೂ ನೀಡಿದೆ. ಬೆದರಿಕೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಅಥವಾ ರಾಜಕಾರಣಿಗಳು ಪೊಲೀಸರಿಗೆ ದೂರು ನೀಡಲಿ.  ನಿಜ ಹೇಳಬೇಕೆಂದರೆ, ಕಾನೂನಿನಿಂದಾಗಿ ತೊಂದರೆಗೆ ಒಳಗಾಗುತ್ತಿರುವವರು ಆರ್‌ಟಿಐ ಕಾರ್ಯಕರ್ತರು ಮತ್ತು ಸರ್ಕಾರದ ಮಟ್ಟದಲ್ಲಿ ಮಾಹಿತಿ ಕೊಟ್ಟವರು. ಇವರಿಗೆ ರಕ್ಷಣೆ ಕೊಡುವ ಕೆಲಸ ಆಗಬೇಕಾಗಿದೆ.

ಸುದೀರ್ಘ ಅವಧಿಯಲ್ಲಿ ನಡೆದಿರುವ ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ (ಉದಾಹರಣೆಗೆ 10 ವರ್ಷಗಳ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ) ನೀಡುವಂತೆ ಕೇಳುವ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಅತ್ಯಂತ ಖಂಡನೀಯ. ‘ದೀರ್ಘ ಅವಧಿಯ ಮಾಹಿತಿ ಸಂಗ್ರಹಕ್ಕೆ ತುಂಬಾ ಸಮಯ ಹಿಡಿಯುತ್ತದೆ. ನಿಗದಿತ ಸಮಯದಲ್ಲಿ ಪ್ರತಿಕ್ರಿಯಿಸಲು ಆಗುವುದಿಲ್ಲ. ಒಂದು ಅರ್ಜಿಯಿಂದಾಗಿ ಇತರ ಅರ್ಜಿಗಳಿಗೆ ತೊಂದರೆಯಾಗುತ್ತದೆ’ ಎಂದು ಮಾಹಿತಿ ಅಧಿಕಾರಿಗಳು ಸಬೂಬು ನೀಡುತ್ತಾರೆ. ಇದನ್ನು ತಪ್ಪಿಸಲು ಹೆಚ್ಚು ಮಾಹಿತಿ ಅಧಿಕಾರಿಗಳನ್ನು ನೇಮಿಸಬೇಕು. ಅಧಿಕಾರಿಗಳು ಹೊಣೆಯರಿತು ಹೆಚ್ಚು ಅವಧಿ ಕೆಲಸ ಮಾಡಬೇಕು. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಹೆಚ್ಚಿನ ಜವಾಬ್ದಾರಿ ಹೊರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತಷ್ಟು  ಮುತುವರ್ಜಿಯಿಂದ ಕೆಲಸ ಮಾಡಬೇಕು. ಸಚಿವರಿಗೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಮಾತ್ರ ಈ ಕೆಲಸ ಸಾಧ್ಯ.

ರಾಜಕೀಯ ಪಕ್ಷಗಳು ಕೂಡ ಇದಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಅಗತ್ಯವಿದೆ. ವಿಪರ್ಯಾಸ ಎಂದರೆ, ಮಾಹಿತಿಗಳನ್ನು ಬಹಿರಂಗಪಡಿಸಲು ಯಾವುದೇ ರಾಜಕೀಯ ಪಕ್ಷಗಳಿಗೆ, ಸರ್ಕಾರಗಳಿಗೆ ಇಷ್ಟವಿರುವುದಿಲ್ಲ. ಆರ್‌ಟಿಐ ಅಡಿಯಲ್ಲಿ ಅರ್ಜಿಗಳು ಬರಬಾರದು ಎಂದೇ ಅವು ನಿರೀಕ್ಷಿಸುತ್ತವೆ.

ಮಾಹಿತಿ ಆಯೋಗವೇ ಮಾಹಿತಿ ನೀಡುತ್ತಿಲ್ಲ!
ಮಾಹಿತಿ ಆಯುಕ್ತರ ನೇಮಕಾತಿ ಇದೀಗ ರಾಜಕೀಯ ಕರಣಗೊಂಡಿದೆ. ನೇಮಕ ಪ್ರಕ್ರಿಯೆಯನ್ನು ರಾಜಕೀಯದಿಂದ ಮುಕ್ತಗೊಳಿಸಿದಾಗ ಉತ್ತಮ ತೀರ್ಪು ನಿರೀಕ್ಷಿಸಲು ಸಾಧ್ಯ. ಲೋಕೋಪಯೋಗಿ ಇಲಾಖೆಯಂತಹ ‘ಉತ್ತಮ ಕಮಾಯಿ’ ಬರುವ ಇಲಾಖೆಗಳಲ್ಲಿ ನಾವು ಮಾಹಿತಿ ಕೇಳಿದಾಗ ಇಲಾಖೆಯ ಅಧಿಕಾರಿಗಳು ಉತ್ತರಿಸುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಮಾಹಿತಿ ಆಯುಕ್ತರು ವಿಧಿಸುವ ದಂಡವನ್ನು ನೀಡಲು ತಯಾರಾಗುತ್ತಾರೆ. ಏಕೆಂದರೆ, ಆ ದಂಡದ ಹಣ ಅವರ ಒಂದು ದಿನದ ಗಿಂಬಳ ಅಷ್ಟೇ! ಇಂತಹ ಘಟನೆಗಳು ಮಾಹಿತಿ ಹಕ್ಕು ಕಾಯ್ದೆಯ ಸ್ಫೂರ್ತಿಗೇ ಕೊಡಲಿ ಏಟು ನೀಡುತ್ತವೆ.

ವಿವಿಧ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಆದೇಶಿಸುವ ರಾಜ್ಯ ಮಾಹಿತಿ ಆಯೋಗವೇ ಇನ್ನೂ ತನ್ನ 10 ವರ್ಷಗಳ ಲೆಕ್ಕಪರಿಶೋಧನಾ ವರದಿಯ ಮಾಹಿತಿ ನೀಡಿಲ್ಲ! ಈ ಬಗ್ಗೆ ಮಾಹಿತಿಗಾಗಿ ಅರ್ಜಿ ಹಾಕಿ ಹಲವು ವರ್ಷಗಳಾದವು. ಇಲ್ಲಿಯವರೆಗೆ ದಂಡದ ರೂಪದಲ್ಲಿ ಬಂದ ಹಣವೆಷ್ಟು ಎಂಬ ಮುಖ್ಯ ಪ್ರಶ್ನೆಗೆ ಆಯೋಗವು ಉತ್ತರಿಸುವ ಗೊಡವೆಗೇ ಹೋಗಿಲ್ಲ. ಮಾಹಿತಿ ಹಕ್ಕಿನ ಕಾಯ್ದೆಯನ್ನು ಬಲಪಡಿಸುವ ಕಾರ್ಯ ಆಯೋಗದಿಂದಲೇ ಶುರುವಾಗಬೇಕಿದೆ.

ಮೋಹನ ಬಿ. ಮಾಳಿಗೇರ
ಮಾಹಿತಿ ಹಕ್ಕು ಕಾರ್ಯಕರ್ತ, ಹುಬ್ಬಳ್ಳಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT