ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ವರ್ಷ ಸರಿಯಿತು

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮನುಷ್ಯನ ಚರಿತ್ರೆಯಲ್ಲಿ ಒಳ್ಳೆಯದಕ್ಕೆ ನಿದರ್ಶನಗಳು ಹೇಗೆ ತುಂಬಿತುಳುಕಿವೆಯೋ ಹಾಗೆಯೇ ಕೆಡುಕಿಗೂ ಉದಾಹರಣೆಗಳು ಕಿಕ್ಕಿರಿದು ತುಂಬಿವೆ. ಪ್ರತಿಯೊಂದು ಶತಮಾನಕ್ಕೂ ಅದರದೇ ಆದ ನರಮೇಧಗಳ ಅಧ್ಯಾಯಗಳು ಇರುತ್ತವೆ.

ಆದರೆ ನಾಗರಿಕತೆಯ ಉಜ್ವಲ ಷೋಕೇಸ್ ಅನ್ನುವಂತಿದ್ದ ನ್ಯೂಯಾರ್ಕ್ ಮೇಲೆ ನಡೆದ ಆ ಅನಾಗರಿಕ ದಾಳಿ, ಜಗತ್ತನ್ನು ಇನ್ನಿಲ್ಲದಂತೆ ಬೆಚ್ಚಿ ಬೀಳಿಸಿತು. ಇಂದಿಗೆ ಅದು ನಡೆದು ಹತ್ತು ವರ್ಷಗಳು ಉರುಳಿವೆ. ಈ ಹತ್ತು ವರ್ಷಗಳಲ್ಲಿ ಜಗತ್ತಿನ ಹಲವು ನಂಬಿಕೆಗಳೂ ಭರವಸೆಗಳೂ ಉರುಳಿವೆ.

ಮ್ಯಾನ್‌ಹಟ್ಟನ್- ನ್ಯೂಯಾರ್ಕ್ ದಿಗಂತದಲ್ಲಿ, ಇಡೀ ವಿಶ್ವವನ್ನೇ ನಿಯಂತ್ರಿಸಬಲ್ಲ ಅಮೆರಿಕದ ಪ್ರಾಬಲ್ಯ- ಸಾಮರ್ಥ್ಯಗಳನ್ನು ಎತ್ತಿತೋರುವ ಎರಡು ಬೃಹತ್ ಕೋಡುಗಳಂತೆ ಆ ವಿಶ್ವ ವ್ಯಾಪಾರ ಕೇಂದ್ರದ (ವರ್ಲ್ಡ್ ಟ್ರೇಡ್ ಸೆಂಟರ್) ಗಗನಚುಂಬಿ ಅವಳಿ ಗೋಪುರಗಳು ರಾರಾಜಿಸುತ್ತಿದ್ದವು.

2001ರ ಸೆಪ್ಟೆಂಬರ್ 11ರಂದು, ಭಯೋತ್ಪಾದನೆಗೆ ಬರೆದ ಆಧುನಿಕ ಭಾಷ್ಯದಂತೆ ಅದರ ಮೇಲೆ ವಿಮಾನ ದಾಳಿ ನಡೆಯಿತು. ಅಲ್ಲಿಯವರೆಗೆ ಅಮೆರಿಕ ತನ್ನ ಸ್ಪರ್ಧಿಗಳನ್ನು ಮತ್ತು ಶತ್ರುಗಳನ್ನು ತಾನೇ ಆಯ್ಕೆ ಮಾಡಿಕೊಳ್ಳುತ್ತಿತ್ತು. ಆದರೆ ಅಂದು ಆ ದೇಶದ ಕಟ್ಟೆಚ್ಚರದ ಕಠಿಣ ಕ್ರಮಗಳನ್ನು ಅಣಕ ಮಾಡುವಂತೆ ಆ ಬೀಭತ್ಸ ಆಕ್ರಮಣ ನಡೆಯಿತು. ಅದಾದ ನಂತರದ ಈ ಹತ್ತು ವರ್ಷಗಳಲ್ಲಿ ಜಗತ್ತು ಬಹಳ ಬದಲಾಗಿದೆ-ಅಥವಾ ಹಾಗೆ ಹೇಳಲಾಗುತ್ತಿದೆ.

ಯುದ್ಧಗಳಿಂದ ಆಗುವ ಗಾಯಗಳಿಗೆ ದೇಶಪ್ರೇಮದ ಮುಲಾಮು ಸವರಬಹುದು; ಭಯೋತ್ಪಾದನೆಯ ದಾಳಿಗಳಿಂದ ಆಗುವುದಕ್ಕೆ ಏನನ್ನು ಸವರುವುದು? `ಭಯೋತ್ಪಾದನೆಯ ವಿರುದ್ಧ ಸಮರ~ ಸಾರುವುದು- ಇದೇ ನನ್ನ ಉತ್ತರ ಎಂದು ಅಮೆರಿಕ ಹೇಳಿತು. ಆದರೆ ಇದು ಹುಟ್ಟು ಹಾಕಿರುವ ಪ್ರಶ್ನೆಗಳು ಮಾತ್ರ ನೂರಾರು.

ಕಳೆದೊಂದು ದಶಕವನ್ನು `9/11 ದಶಕ~ ಎಂದೇ ಕರೆಯಲಾಗುತ್ತದೆ.  ಆದರೆ ಈ ಅವಧಿಯಲ್ಲಿ ಭಯೋತ್ಪಾದನೆಗೆ ಹತ್ತುಹಲವು ಹೊಸ ಮುಖಗಳು, ಹೊಸ ಭುಜಗಳು ಹುಟ್ಟಿವೆ. ಮುಂಬೈ, ಲಂಡನ್, ನಾರ್ವೆ- ಮುಂತಾಗಿ ಹೊಸ ಬಲಿಸ್ಥಳಗಳ ಹುಡುಕಾಟ ಹೆಚ್ಚಿದೆ.

ಒಸಾಮ ಬಿನ್ ಲಾಡೆನ್ ಕಥೆ ಮುಗಿದಿದೆ, ಭಯೋತ್ಪಾದನೆಯ ಕೊನೆಯ ಅಧ್ಯಾಯ ಅದೇ ಎಂಬ ಹೇಳಿಕೆ ಕೇಳುತ್ತಿದೆ. ಆದರೆ ಅದನ್ನು ತಮಾಷೆ ಮಾಡುವ ರಕ್ತಬೀಜಾಸುರರ ಗಹಗಹಿಸುವಿಕೆಯೂ ಅಪ್ಪಳಿಸುತ್ತಿದೆ. ಬಲಾಢ್ಯ ದೇಶಗಳಲ್ಲಂತೂ ಭಯೋತ್ಪಾದನೆ ಕುರಿತ ಬೇಹುಮಾಹಿತಿ ಸಂಗ್ರಹಿಸುತ್ತಿದ್ದ `ಗುಪ್ತಚರ ಇಲಾಖೆ~ಗಳೆಲ್ಲ, ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಸದ್ದಿಲ್ಲದೆ ಕೊಲ್ಲುವ `ಗುಪ್ತಹರ ಇಲಾಖೆ~ಗಳಾಗಿ ಪರಿವರ್ತನೆಯಾಗಿವೆ.

ವಿನಾಶಕಾರಿ ರಾಜಕೀಯ, ಧಾರ್ಮಿಕ ಲೆಕ್ಕಾಚಾರಗಳು ಇರುವ ದೇಶಗಳಲ್ಲಂತೂ ಭಯೋತ್ಪಾದನೆಗೆ ಹೊಸ ಆಡುಂಬೊಲಗಳು ಹುಟ್ಟುತ್ತಿವೆ. ಸ್ವಾತಂತ್ರ್ಯಕ್ಕೂ ಭಯೋತ್ಪಾದನೆ, ವಿಮೋಚನೆಗೂ ಭಯೋತ್ಪಾದನೆ, ಅಭಿವೃದ್ಧಿಗೂ ಭಯೋತ್ಪಾದನೆ!

ಇತಿಹಾಸದುದ್ದಕ್ಕೂ ಯುದ್ಧವನ್ನು ಯುದ್ಧದಿಂದ ಎದುರಿಸಲಾಗಿದೆ. ಆದರೀಗ ಭಯೋತ್ಪಾದನೆಯನ್ನೂ ಯುದ್ಧದಿಂದಲೇ ಎದುರಿಸಲಾಗುತ್ತಿದೆ. ಹತ್ತಾರು ದೇಶಗಳ ಹಳೆಯ ರಣರಂಗಗಳಲ್ಲಿ ಹೊಸ ರಕ್ತ ಸುರಿಯುವುದು ಇರಲಿ, ಹೊಸ ಕನ್ನೆನೆಲಗಳಲ್ಲಿ ಭಯೋತ್ಪಾದನೆಯ ಬೀಜಗಳನ್ನು ಅಥವಾ ಅದರ ವಿರೋಧಿ ಸಮರದ ಬೀಜಗಳನ್ನು ಬಿತ್ತಲಾಗಿದೆ. 

ಯುದ್ಧವೋ ಭಯೋತ್ಪಾದನೆಯೋ ಹೆಸರಿನಲ್ಲೇನಿದೆ, `ಮುಗಿಲುದ್ದ ಹಿಂಸಾರತಿಯ ಕೆಸರು ಚಿಮ್ಮಿ ಹೊಲೆಯಾಗಿದೆ ನೆಲದೆದೆ...~

ಈ ಹತ್ತು ವರ್ಷಗಳಲ್ಲಿ ಸಾರ್ವಜನಿಕ ನಂಬಿಕೆ, ಸರ್ಕಾರದಲ್ಲಿ ನಂಬಿಕೆ ಮುಂತಾದುವೂ ಉರುಳಿ ನೆಲಕಚ್ಚಿವೆ. ಅಮೆರಿಕದ 9/11 ದಾಳಿ ಕುರಿತ `ಸಾರ್ವಜನಿಕ ಮಿಥ್ಯೆಗಳ ಸೃಷ್ಟಿ~ಯ ಕಥೆಯಂತೂ ಹೇಳುವುದೇ ಬೇಡ. ಅದರ ಪರವಾಗಿ ಮತ್ತು ವಿರೋಧವಾಗಿ ಮಂಡಿತವಾದ ಸಿದ್ಧಾಂತಗಳು, ಪ್ರಕಟವಾದ ಲೇಖನಗಳು ಮತ್ತು ಪುಸ್ತಕಗಳಿಗೆ ಲೆಕ್ಕವಿಲ್ಲ.

ಸಮಕಾಲೀನವಾಗಿ ಯಾವ ಘಟನೆಗೂ ಏಳದಿದ್ದ ವಾದವಿವಾದವಾಗ್ವಾದ ಇದಕ್ಕೆ ಹುಟ್ಟಿದೆ. ಅಮೆರಿಕ ಮತ್ತು ಇತರ ದೇಶಗಳಲ್ಲಿ `9/11 ಸತ್ಯ ಶೋಧನೆ~ಗೆಂದೇ ಹುಟ್ಟಿಕೊಂಡ ಹತ್ತಾರು ಸಂಘಟನೆಗಳ ವಿಚಾರವೇ ಬೇರೆ. ಹಲವಾರು ಸಮಾಜಶಾಸ್ತ್ರಜ್ಞರು, ವಿಜ್ಞಾನಿಗಳು, ವಿಮಾನಚಾಲಕರು, ರಾಜಕೀಯ ಸಿದ್ಧಾಂತಿಗಳು ಅಸಲು ಈ ಘಟನೆಯ ಉದ್ದೇಶವನ್ನೇ ಪ್ರಶ್ನಿಸಿದ್ದಾರೆ.

ನಿಜಕ್ಕೂ ದಾಳಿ ಮಾಡಿದ್ದು ಯಾರು ಮತ್ತು ಯಾಕೆ ಎಂಬ ಬಗ್ಗೆ ಹೊಸ ಹೊಸ ವಿವಾದ ಹುಟ್ಟುತ್ತಿದೆ. ವಿಶ್ವವ್ಯಾಪಾರ ಕೇಂದ್ರದ ಮೇಲಿನ ದಾಳಿಯಲ್ಲಿ ಸತ್ತ ಸಾವಿರಾರು ಜನರಲ್ಲಿ ಏಕೆ ಯೆಹೂದಿಗಳಿಲ್ಲ? ಅದರ ಜೊತೆಗೆ ಪೆಂಟಗಾನ್ ಮೇಲೂ ದಾಳಿ ನಡೆದಾಗ ಅಲ್ಲಿರುವ ಎಂಬತ್ತೂ ಚಿಲ್ಲರೆ ಕ್ಯಾಮೆರಾಗಳು ಹಿಡಿದಿರುವ ಚಿತ್ರಗಳಲ್ಲಿ ಏಕೆ ಒಂದೂ ಹೊರಬಂದಿಲ್ಲ? - ಇತ್ಯಾದಿ ಪ್ರಶ್ನೆಗಳಿಗಂತೂ ಇತಿಮಿತಿಯಿಲ್ಲ.

ದಾಳಿಯಲ್ಲಿ ಮೃತರಾದವರ ಕುಟುಂಬದವರು ಎತ್ತಿದ ಅನೇಕ ಸಂದೇಹಗಳಿಗೆ ಉತ್ತರ ಸಿಕ್ಕಿಲ್ಲ. ಇವೆಲ್ಲವನ್ನೂ ಕುರಿತು ಏಕೆ ಮಾಧ್ಯಮಗಳು ಬರೆಯುತ್ತಿಲ್ಲ ಎಂದು ಉಗಿಯುವವರಿಗೂ ಲೆಕ್ಕವಿಲ್ಲ! ಅಮೆರಿಕದಲ್ಲಿ ಇದರ ಬಗ್ಗೆ ಮಾತನಾಡುವ ರೀತಿಯ ಮೇಲೆ ದೇಶಪ್ರೇಮ ಅಥವಾ ದೇಶದ್ರೋಹ ನಿರ್ಧಾರವಾಗುತ್ತದಂತೆ.

ವಿಶ್ವ ವ್ಯಾಪಾರ ಕೇಂದ್ರ ನಿರ್ಮಾಣವಾದ ನಿಮಿಷದಿಂದಲೂ ಪ್ರವಾಸಿಗಳಿಗೆ ಅತ್ಯಂತ ಆಕರ್ಷಣೆಯ ಕೇಂದ್ರ. ಅದು ಉರುಳಿದ ಮೇಲೆ ಅವಶೇಷಗಳನ್ನು ತೆಗೆದು `ಗ್ರೌಂಡ್ ಜೀರೋ~ ಎಂದು ಹೆಸರಿಟ್ಟ ಮೇಲೂ ಅದು ಪ್ರವಾಸಿಗಳಿಗೆ ಆಸಕ್ತಿಯ ಸ್ಥಳ.

ವಿಶ್ವ ವ್ಯಾಪಾರ ಕೇಂದ್ರ ಇದ್ದಾಗ ನಾನು ಕೊಟ್ಟ ಮೊದಲ ಭೇಟಿಯಲ್ಲಿ ಕಂಡದ್ದು ಬಿಜಿನೆಸ್‌ನಿಂದ ಜಗತ್ತನ್ನೇ ಆಳುವ ಅಹಮಿಕೆ. ಅದು ಉರುಳಿದ ನಂತರ ಕೊಟ್ಟ ಭೇಟಿಯಲ್ಲಿ ಕಂಡದ್ದು ವಿಷಾದ ತುಂಬಿದ ಬಿಕ್ಕಳಿಕೆ. ಈಗ ಆ ಶೂನ್ಯ ಭೂಮಿಯ ಶ್ರದ್ಧಾಂಜಲಿ ಕೇಂದ್ರವೂ ಸೇರಿಕೊಂಡು ಉರುಳಿದ್ದನ್ನು ಮತ್ತೆ ಕಟ್ಟುವ ಕ್ರಿಯೆ ನಡೆದಿದೆ. ಹೊಸ ಗೋಪುರಗಳಿರುವ ಅದಕ್ಕೆ `1ವರ್ಲ್ಡ್ ಟ್ರೇಡ್ ಸೆಂಟರ್~ ಎಂದೇ ಹೆಸರು ಕೊಡಲಾಗಿದೆ. ಅದು ಮತ್ತೆ ಜಗತ್ತಿನ ಆಕರ್ಷಣೆಯಾಗಲಿದೆ ಎಂಬ ನಂಬಿಕೆಯಿದೆ.

ಒಟ್ಟು ನೂರಾನಾಲ್ಕು ಮಹಡಿಗಳ ಆ ಬೃಹತ್ ಕಟ್ಟಡದ ಎಂಬತ್ತು ಅಂತಸ್ತುಗಳು ಪೂರ್ಣವಾಗಿವೆ. 541 ಮೀಟರ್‌ಗಳ ಎತ್ತರದ ಆ ಮಹಾಕಟ್ಟಡಕ್ಕೆ ಮತ್ತೆ ಖ್ಯಾತ ಕಂಪೆನಿಗಳು ಬಂದು ನೆಲೆಸುತ್ತವೆ ಎಂಬ ನಿರೀಕ್ಷೆಯಿದೆ.

ಹದಿನಾರು ಎಕರೆಗಳ ಆ ಕೇಂದ್ರದಲ್ಲಿ ಈಗ ನಿರ್ಮಿಸುತ್ತಿರುವ ಉತ್ತರ ಮತ್ತು ದಕ್ಷಿಣ ಟವರ್‌ಗಳಿಗೆ ಸೆ. 12 ರಿಂದ ಜನರಿಗೆ ಪ್ರವೇಶವಿದೆ. ಇನ್ನೂ ಇನ್ನೆರಡು ಟವರ್‌ಗಳು ನಿರ್ಮಾಣವಾಗುತ್ತಿವೆ. ಎಲ್ಲ ಪೂರ್ತಿಯಾಗಿ ವಿಶ್ವ ವ್ಯಾಪಾರ ಕೇಂದ್ರ ಮತ್ತೆ ಉತ್ಸಾಹದಿಂದ ಭೋರ್ಗರೆಯಲು ಇನ್ನೆರಡು ವರ್ಷ ಬೇಕು.

ಉರುಳಿದ `ವಿಶ್ವ ವ್ಯಾಪಾರ ಕೇಂದ್ರ~ದ ಪುನರ್ ನಿರ್ಮಾಣದ ಸುತ್ತ ಅದೆಷ್ಟು ವಿವಾದಗಳ ಹುತ್ತ ಹಬ್ಬಿತೆಂದರೆ ಇದೇನು ಅಮೆರಿಕವೇ ಎಂಬ ಅನುಮಾನ ಹುಟ್ಟಿತು.

ಸ್ಥಳೀಯಾಡಳಿತ ಸೇರಿ ಹಲವಾರು ಸಂಸ್ಥೆಗಳು ಕಲಹಕ್ಕೆ ಇಳಿದವು. ಅದರ ವಿಚಾರದಲ್ಲಿ ಎದ್ದ ಗೊಂದಲ, ಜಗಳ, ದ್ವಂದ್ವ, ದುರಾಸೆ ಎಲ್ಲವೂ ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಯಿತು.

ಬಿದ್ದದ್ದನ್ನು ಮರೆತು ಮುಂದಿನದನ್ನು ಸೃಷ್ಟಿಸುವ ಅದ್ಭುತ ಅವಕಾಶವನ್ನು ಅಮೆರಿಕ ಮತ್ತು ನ್ಯೂಯಾರ್ಕ್ ಕಳೆದುಕೊಂಡಿತು ಎಂದು ಅನೇಕರು ಹಳಹಳಿಸಿದರು. ನಿರ್ಮಾಣದಲ್ಲಿ ಬಹುದೂರ ಸಾಗಿರುವ ದುಬೈ, ಸಿಂಗಪುರ, ಕೌಲಾಲಂಪುರಗಳು ನ್ಯೂಯಾರ್ಕನ್ನು ನೋಡಿ ಗೇಲಿ ಮಾಡಿದವು.

ಏನಾದರೂ ಹೇಳಿ, ಉರುಳಿದ್ದನ್ನು ಮತ್ತೆ ನಿಲ್ಲಿಸುವುದು ಅಷ್ಟು ಸುಲಭವಲ್ಲ. ಅಮೆರಿಕ ಕಳೆದುಕೊಂಡದ್ದು ಬರಿ ಕಟ್ಟಡವನ್ನಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT