ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಗೂಡಿ ಹಳ್ಳ-ತೆನೆಕೂಡಿ ಬಳ್ಳ

Last Updated 29 ಮೇ 2012, 19:30 IST
ಅಕ್ಷರ ಗಾತ್ರ

ಆದಾಯ ತೆರಿಗೆ ಕಾನೂನಿನಲ್ಲಿ ಹಲವಾರು ಉಳಿತಾಯದ ದಾರಿಗಳನ್ನು ಸೂಚಿಸಲಾಗಿದೆ. ತೆರಿಗೆ ಉಳಿಸುವುದು ಎಷ್ಟು ಮುಖ್ಯವೋ, ಉಳಿಸಿದ ಹಣ ಮುಂದೆ ಬೆಳೆದು ನಿಮ್ಮ ಕೈಸೇರುವುದು ಇನ್ನೂ   ಮುಖ್ಯವಾದ ವಿಚಾರ.   ಉಳಿತಾಯದ ವಿಚಾರದಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರ  ವೆಂದರೆ, `ಭದ್ರತೆ~ `ದ್ರವ್ಯತೆ~ ಮತ್ತು ಹೆಚ್ಚಿನ   ವರಮಾನ.

ಈ ಮೂರು ವಿಚಾರಗಳಲ್ಲಿ ಮೊದಲಿಗೆ ಭದ್ರತೆ, ನಂತರ ದ್ರವ್ಯತೆ, ಹಾಗೂ ಕೊನೆಯದಾಗಿ ಹೆಚ್ಚಿನ ವರಮಾನ ಹೀಗೆ ಆದ್ಯತೆ   ನೀಡಬೇಕು. `ತೆರಿಗೆಯಿಂದ    ಉಳಿತಾಯ, ಉಳಿತಾಯದಿಂದ ಸಮೃದ್ಧಿ~ ನಿಮ್ಮ ಜೀವನದ ಶೈಲಿಯಾಗಲಿ.

                                       ---------------------

ಮಧ್ಯಮ ವರ್ಗದ ಜನರು `ದುಡಿದದ್ದೆಲ್ಲಾ ಇನ್‌ಕಮ್ ಟ್ಯಾಕ್ಸ್ ಕೊಟ್ಟೇ ಹೋಯಿತು~ ಎಂದು ಆಗಾಗ ಚಡಪಡಿಸುತ್ತಿರುವುದು ಕೇಳುತ್ತಿರುತ್ತೇವೆ. ಇದೇ ವೇಳೆ ಆದಾಯ ತೆರಿಗೆಯ ವಿಧಿವಿಧಾನಗಳನ್ನು ತಿಳಿದು ಸರಿಯಾದ ಪ್ಲಾನ್ ಮಾಡಿ ಆರಂಭದಿಂದಲೇ ಪ್ಲಾನಿನಂತೆ ನಡೆದುಕೊಂಡಲ್ಲಿ ಕಾನೂನಿನಡಿಯೇ ಕರಬಾಧೆಗಳಿಂದ ಹೊರಬಂದು ನಿಶ್ಚಿಂತೆಯಿಂದ ಜೀವಿಸಬಹುದು. `ಆಪತ್ತಿನಲ್ಲಿ ಸಂಪತ್ತು~ ಕಾಣುವಂತೆ `ತೆರಿಗೆಯಿಂದ ಉಳಿತಾಯ-ಉಳಿತಾಯದಿಂದ ಸಮೃದ್ಧಿ~ ನಿಮ್ಮ ಜೀವನದ ಶೈಲಿಯಾಗಬೇಕು.

ಏಪ್ರಿಲ್ 1ರಿಂದ ಮಾರ್ಚಿ 31ರವರೆಗೆ ಆರ್ಥಿಕ ವರ್ಷವೆಂದು ಪರಿಗಣಿಸಲಾಗಿದೆ. ನಾವು ಈ ಆರ್ಥಿಕ ವರ್ಷದಲ್ಲಿ ಈಗಾಗಲೇ ಎರಡು ತಿಂಗಳು ದಾಟಿದ್ದೇವೆ.`ಏನನ್ನೂ ಮಾಡದೇ ಇರುವುದಕ್ಕಿಂತ ತಡವಾಗಿಯಾದರೂ ಏನನ್ನಾದರೂ ಸಾಧಿಸಬೇಕು~ ಎನ್ನುವ ಆಂಗ್ಲ ನುಡಿಗಟ್ಟನ್ನು ಇಲ್ಲಿ ಸ್ಮರಿಸಬಹುದು. ತೆರಿಗೆ ಕಟ್ಟುವುದನ್ನು ಕಡಿಮೆ ಮಾಡಿಕೊಳ್ಳಲು ಆದಾಯ ತೆರಿಗೆ ಕಾನೂನಿನಲ್ಲಿಯೇ ಹಲವಾರು ಉಳಿತಾಯದ ದಾರಿಗಳನ್ನು ಸೂಚಿಸಲಾಗಿದೆ.

ತೆರಿಗೆ ಉಳಿಸುವುದು ಎಷ್ಟು ಮುಖ್ಯವೋ, ಉಳಿಸಿದ ಹಣ ಮುಂದೆ ಬೆಳೆದು ನಿಮ್ಮ ಕೈಸೇರುವುದು ಅಷ್ಟೇ ಮುಖ್ಯವಾದ ವಿಚಾರ. ಉಳಿತಾಯದ ವಿಚಾರದಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ಭದ್ರತೆ- ದ್ರವ್ಯತೆ ಮತ್ತು ಹೆಚ್ಚಿನ ವರಮಾನ. ಈ ಮೂರೂ ವಿಚಾರಗಳಲ್ಲಿ ಮೊದಲಿಗೆ ಭದ್ರತೆ, ನಂತರ ದ್ರವ್ಯತೆ ಹಾಗೂ ಕೊನೆಯದಾಗಿ ಹೆಚ್ಚಿನ ವರಮಾನ... ಹೀಗೆ ಆದ್ಯತೆ ನೀಡಬೇಕು.

ಆದಾಯ ತೆರಿಗೆ ಸೆಕ್ಷನ್ 80ಸಿ ಆಧಾರದ ಮೇಲೆ ಒಬ್ಬ ವ್ಯಕ್ತಿ ಆರ್ಥಿಕ ವರ್ಷದಲ್ಲಿ ಗರಿಷ್ಠ ರೂ. 1 ಲಕ್ಷ ಉಳಿತಾಯ ಮಾಡಬಹುದು. ಹೀಗೆ ಉಳಿಸಿದ ಹಣವನ್ನು ವರ್ಷದ ಒಟ್ಟಾರೆ ಆದಾಯದಿಂದ ಕಡಿತ ಮಾಡಿ (ಸ್ಟಾಂಡರ್ಡ್ ಡಿಡಕ್ಷನ್ ಪ್ರಮಾಣವನ್ನು ಸಹ ಒಟ್ಟು ಆದಾಯದಿಂದ ಕಳೆದು) ಉಳಿದ ಮೊತ್ತಕ್ಕೆ ಮಾತ್ರವೇ ತೆರಿಗೆ ಸಲ್ಲಿಸಬಹುದಾಗಿದೆ. ಇಲ್ಲಿ ಹಣ ಹೂಡಲು ಹಲವಾರು ದಾರಿಗಳಿದ್ದು ಅವುಗಳಲ್ಲಿಯೂ ಕೆಲವೆಡೆ ಆಕರ್ಷಣೆ, ಮೋಹಕ ಶಕ್ತಿ ಹಾಗೂ ಸೆಳೆತ ನಿಮ್ಮ ಗಮನ ಸೆಳೆದು ದಾರಿ ತಪ್ಪಿಸುವ ಸಾಧ್ಯತೆ ಇದೆ.

ಸೆಕ್ಷನ್ 80ಸಿ ಆಧರಿಸಿ ಹಣ ಹೂಡಲು ಇರುವ ಅವಕಾಶ: 
*  ಜೀವವಿಮಾ ಪ್ರೀಮಿಯಂ
*  ಪಿ.ಎಫ್
*  ಪಿ.ಪಿ.ಎಫ್
*  ಎನ್.ಎಸ್.ಸಿ
*  ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್(ಇಎಂಎಸ್‌ಎಸ್)
*  ಮ್ಯೂಚುವಲ್ ಫಂಡ್ ಯುನಿಟ್ಸ್(ಸೆಕ್ಷನ್ 10 (23ಡಿ) ಆಧಾರದ ಮೇಲೆ)
*  ಮಕ್ಕಳ ಶಿಕ್ಷಣ ಶುಲ್ಕ (ಗರಿಷ್ಠ ಇಬ್ಬರು ಮಕ್ಕಳಿಗೆ-ಟ್ಯೂಶನ್ ಫೀ ಮಾತ್ರ ಇಲ್ಲಿ ಲೆಕ್ಕಕ್ಕೆ ಬರುತ್ತದೆ.. ಇತರೆ ಶುಲ್ಕಗಳಲ್ಲ)
*  ಮನೆಸಾಲದ ಕಂತು
*  5 ವರ್ಷದ ಬ್ಯಾಂಕ್ ಠೇವಣಿ
*  ನೋಟಿಫೈಡ್ ನಬಾರ್ಡ್ ಬಾಂಡುಗಳು
*  ಹಿರಿಯ ನಾಗರಿಕರ ಅಂಚೆ ಕಚೇರಿ ಠೇವಣಿ
*  ಅಂಚೆ ಕಚೇರಿಯಲ್ಲಿ ಐದು ವರ್ಷದ ಠೇವಣಿ


ಸಾಮಾನ್ಯ ಪಿಂಚಣಿ ಬಾರದ ನೌಕರರಿಗೆ ಭವಿಷ್ಯನಿಧಿ(ಪಿ.ಎಫ್) ಸವಲತ್ತು ಇದ್ದೇ ಇರುತ್ತದೆ ಹಾಗೂ ಪಿ.ಎಫ್ ಅನ್ನು ಸಂಬಳದಿಂದ ಕಡ್ಡಾಯವಾಗಿ ಮುರಿಯಲಾಗುತ್ತದೆ.
ಪಿ.ಪಿ.ಎಫ್ ಖಾತೆಯನ್ನು ಅಂಚೆ ಕಚೇರಿ ಹಾಗೂ ಆಯ್ದ ರಾಷ್ಟ್ರೀಕೃತ ಹಾಗೂ ಸ್ಟೇಟ್ ಬ್ಯಾಂಕ್ ಶಾಖೆಗಳಲ್ಲಿ ಖಾತೆ ತೆರೆಯಬಹುದು. ಇದು 15 ವರ್ಷಗಳ ಯೋಜನೆ.

ಇಲ್ಲಿ ವಾರ್ಷಿಕವಾಗಿ ಶೇ 8.5 ಬಡ್ಡಿ ಬರುತ್ತದೆ. ಬಡ್ಡಿ ವರ್ಷಕ್ಕೊಮ್ಮೆ ನಿಮ್ಮ ಖಾತೆಗೇ ಜಮಾ ಆಗುತ್ತದೆ. ಇಲ್ಲಿ ಬಂದಿರುವ ಬಡ್ಡಿಗೂ ಸೆಕ್ಷನ್ 10(2) ಆಧಾರದ ಮೇಲೆ ಆದಾಯ ತೆರಿಗೆ ಸಂಪೂರ್ಣ ವಿನಾಯಿತಿ ಇದೆ.

ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ನಲ್ಲಿ ಕನಿಷ್ಠ ಮೂರು ವರ್ಷ ಹಣ ಹಿಂತೆಯುವಂತಿಲ್ಲ. ಇಲ್ಲಿ ಹೂಡಿದ ಹಣದಲ್ಲಿ ಒಂದು ಅಂಶವನ್ನು ವಿಮಾ ಕಂತು(ಪ್ರೀಮಿಯಂ) ಎಂದು ಮುರಿದುಕೊಳ್ಳುತ್ತಾರೆ. ನಂತರ ಉಳಿದ ಹಣವನ್ನು ಕಂಪೆನಿಯ ಷೇರುಗಳಲ್ಲಿ ತೊಡಗಿಸುತ್ತಾರೆ. ಇಲ್ಲಿ ತೊಡಗಿಸಿದ ಹಣದ ಬೆಳವಣಿಗೆಯು ಷೇರುಪೇಟೆಯಲ್ಲಿನ ಸಂವೇದಿ ಸೂಚ್ಯಂಕದ(ಸೆನ್ಸೆಕ್ಸ್) ಏರಿಳಿತ ಅವಲಂಬಿಸಿರುತ್ತದೆ.ಮ್ಯೂಚುವಲ್ ಫಂಡ್ ಯುನಿಟ್ ಕೂಡಾ ಸಂವೇದಿ ಸೂಚ್ಯಂಕದ ಮೇಲೆಯೇ ಲಾಭ-ನಷ್ಟ ತರುತ್ತವೆ.

ಮಕ್ಕಳ ವಿದ್ಯಾಭ್ಯಾಸಕ್ಕೆಂದು(ಇಬ್ಬರಿಗೆ ಮಾತ್ರ) ಶಿಕ್ಷಣ ಶುಲ್ಕ (ಟ್ಯೂಶನ್ ಫೀ) ಪಾವತಿಸಿದ್ದರೆ ಆ ಮೊತ್ತಕ್ಕೆ ಸೆಕ್ಷನ್ 80ಸಿ ಆಧಾರದ ಮೇಲೆ ತೆರಿಗೆ ಪಾವತಿಯಿಂದ ವಿನಾಯಿತಿ ಪಡೆಯಬಹುದು.ಮನೆಸಾಲದ ಕಂತು ಒಂದು ಹೂಡಿಕೆಯಲ್ಲಿದ್ದಿದ್ದರೂ ಸ್ಥಿರ ಆಸ್ತಿ ಹೊಂದುವುದರಿಂದ ಗೃಹಸಾಲಕ್ಕೆ ಒತ್ತು ಕೊಡಬಹುದು.

5 ವರ್ಷಗಳ ಬ್ಯಾಂಕ್ ಠೇವಣಿ ಸೆಕ್ಷನ್ 80ಸಿ.ಗೆ ಹೇಳಿ ಮಾಡಿಸಿದಂತಿದೆ. ಇದೊಂದು ಭದ್ರವಾದ ಉತ್ತಮ ವರಮಾನ ಬರುವ ಹೂಡಿಕೆ. ಯಾವುದೇ ಷೆಡ್ಯೂಲ್ಡ್ ಬ್ಯಾಂಕ್‌ನಲ್ಲಿ ಠೇವಣಿ ಇರಿಸಬಹುದು. ಬಡ್ಡಿದರ ಒಂದೊಂದು ಬ್ಯಾಂಕಿನಲ್ಲಿ ಒಂದೊಂದು ರೀತಿ ಇದೆ. ಆದರೂ, ಸಾಮಾನ್ಯವಾಗಿ ಶೇ 9ಕ್ಕೂ ಹೆಚ್ಚಿಗೆ ಬಡ್ಡಿ ಪಡೆಯಬಹುದು.

ನೋಟಿಫೈಡ್ ಆಗಿರುವ ನಬಾರ್ಡ್ ಬಾಂಡ್‌ಗಳ ಬಗ್ಗೆ ಹೇಳುವುದಾದರೆ ಭದ್ರತೆ ದೃಷ್ಟಿಯಿಂದ ಬೇರೊಂದು ಮಾತಿಲ್ಲ. ಆದರೆ ಬ್ಯಾಂಕ್ ಠೇವಣಿಯಷ್ಟು ಬಡ್ಡಿ ಬರಲಾರದು.
ಹಿರಿಯ ನಾಗರಿಕರ ಅಂಚೆ ಕಚೇರಿ ಠೇವಣಿ ಇನ್ನೊಂದು ಉತ್ತಮ ಹೂಡಿಕೆ. ಇಲ್ಲಿ ಶೇ 9.3 ಬಡ್ಡಿ ಬರುತ್ತದೆ. ಮೂರು ತಿಂಗಳಿಗೊಮ್ಮೆ ಬಡ್ಡಿ ವಿತರಿಸುತ್ತಾರೆ.

ಆದರೆ ಈ ಠೇವಣಿ ಯೋಜನೆ ಹಿರಿಯ ನಾಗರಿಕರಿಗೆ ಮಾತ್ರ ಮೀಸಲು. 5 ವರ್ಷ ಅವಧಿಯ ಬ್ಯಾಂಕ್ ಠೇವಣಿ ಎಲ್ಲರೂ ಮಾಡಬಹುದಾಗಿದೆ. ಕೊನೆಯದಾಗಿ ಅಂಚೆ ಕಚೇರಿಯ 5 ವರ್ಷ ಅವಧಿಯ ಠೇವಣಿ ವಿಚಾರಕ್ಕೆ ಬಂದರೆ, ಇಲ್ಲಿ ವಾರ್ಷಿಕವಾಗಿ ಶೇ 8.5 ಬಡ್ಡಿ ಬರುತ್ತದೆ. ಆದರೆ ಬ್ಯಾಂಕ್ ಠೇವಣಿಗಳು ಇವುಗಳಿಗಿಂತ ಹೆಚ್ಚು ಬಡ್ಡಿ ತರುತ್ತವೆ.

ಸೆಕ್ಷನ್ 80ಸಿ-ವ್ಯಕ್ತಿಗತ ಆಯ್ಕೆ

ಕೋರಮಂಗಲದ ಲತಾ ನಾರಾಯಣರಾವ್ ಸಾಫ್ಟ್‌ವೇರ್ ಎಂಜಿನಿಯರ್. ಇವರ 80ಸಿ ಆಧಾರಿತ ಹೂಡಿಕೆ ಹೀಗಿದೆ.ಪಿಎಫ್ ರೂ. 60,000. ಎನ್‌ಎಸ್‌ಸಿ ಪ್ರತಿವರ್ಷ ರೂ. 15,000. ಇಎಲ್‌ಎಸ್‌ಎಸ್ ಪ್ರತಿವರ್ಷ ರೂ. 25,000.ಪಿ.ಎಫ್. ಸಂಬಳದಿಂದ ಮುರಿದಿರುತ್ತಾರೆ. ಎನ್‌ಎಸ್‌ಸಿ ಮತ್ತು ಇಎಲ್‌ಎಸ್‌ಎಸ್ ತೆರಿಗೆ ಕಡಿತಕ್ಕೋಸ್ಕರ ಇವರೇ ಆಯ್ದುಕೊಂಡ ಹೂಡಿಕೆಗಳು.

`ನಾನು ಬಹಳ ವರ್ಷಗಳಿಂದ ತೆರಿಗೆ ವಿನಾಯಿತಿಗೋಸ್ಕರ ಎನ್‌ಎಸ್‌ಸಿ ಖರೀದಿಸುತ್ತಿದ್ದು ಈಗಲೂ ತೆಗೆದುಕೊಳ್ಳುತ್ತಿರುವೆ. ಆದರೆ, ಬ್ಯಾಂಕ್ ಠೇವಣಿಯಲ್ಲಿ ಹೆಚ್ಚಿನ ಬಡ್ಡಿ ಬರುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ, ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) ಕುಸಿತದಿಂದಾಗಿ ಇಎಲ್‌ಎಸ್‌ಎಸ್‌ನಲ್ಲಿ ಹೂಡಿದ ರೂ. 75,000ನ  ಈಗಿನ ನೆಟ್ ಅಸೆಟ್ ವ್ಯಾಲ್ಯೂ(ಎನ್‌ಎವಿ) ರೂ. 56,700ಕ್ಕೆ ಬಂದಿದೆ. ಅಂದರೆ, ನಾನು ಕಟ್ಟಿದ ಹಣಕ್ಕಿಂತ ಕಡಿಮೆಯಾಗಿದೆ. ಇದು ಬೇಸರ ತರಿಸಿದೆ~ ಎನ್ನುವ ಲತಾ ಅವರು ಪ್ರಸಕ್ತ ಹಣಕಾಸು ವರ್ಷ ತಮ್ಮ ವಿನಿಯೋಜನೆಯ ರೀತಿ ಬದಲಿಸಬಹುದು.

ಬೆಂಗಳೂರಿನ ಸೋಮಶೇಖರ ಗುಪ್ತ ಚಿಕ್ಕಪೇಟೆಯಲ್ಲಿ ಬಟ್ಟೆ ವ್ಯಾಪಾರಿ. ಇವರು 80ಸಿ ಆಧರಿಸಿ ಪಿಪಿಎಫ್‌ನಲ್ಲಿ ರೂ. 25,000 ಹೂಡಿದ್ದಾರೆ. ಇವರ ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಬ್ಬರಿಗೂ ಪಾವತಿಸಿದ ಸ್ಕೂಲ್ ಫೀನಲ್ಲಿ `ಟ್ಯೂಷನ್ ಫೀ~ಯನ್ನು ಗುಪ್ತ ಅವರ ತೆರಿಗೆ ಲೆಕ್ಕಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.

`ನನಗೆ ಮೊದಲಿನಿಂದಲೂ ಷೇರುಪೇಟೆ ಮ್ಯೂಚುವಲ್ ಫಂಡ್‌ಗಳಲ್ಲಿ ನಂಬಿಕೆ ಇಲ್ಲ. ಈ ವ್ಯವಹಾರದಲ್ಲಿ ಜೂಜಾಟದ ಅನುಭವವಾಗುತ್ತದೆ. ಇದರಿಂದ ದೂರ ಉಳಿದಿದ್ದೇನೆ~ ಎನ್ನುತ್ತಾರೆ ಗುಪ್ತ.

 ತೆರಿಗೆ ಉಳಿಸಲು ಸೆಕ್ಷನ್ 80ಸಿ ಒಂದು ವರದಾನ. ಇದರ ಸದುಪಯೋಗ ಪಡೆಯುವುದನ್ನು ತೆರಿಗೆ ಪಾವತದಾರರು ಮರೆಯಬಾರದು. ಸರಳ, ಸುಲಭ ಹಾಗೂ ಕಂಟಕ ರಹಿತ ಉಳಿತಾಯ ಎಂಬುದು ನಿಮ್ಮ ಜೀವನವನ್ನು ಸಮೃದ್ಧಿಗೊಳಿಸುವುದು.

ಪ್ರತಿ ವರ್ಷ ತೆರಿಗೆ ಪಾವತಿಯಲ್ಲಿ ರೂ. 1 ಲಕ್ಷದವರೆಗೂ ವಿನಾಯಿತಿ ಪಡೆಯಬಹುದಾಗಿರುವುದರಿಂದ ಇಷ್ಟು ಹಣವನ್ನು ತಪ್ಪದೇ ಬ್ಯಾಂಕಿನಲ್ಲಿ ಉಳಿಸುತ್ತಾ ಬಂದಲ್ಲಿ ಇದಕ್ಕೆ ಶೇ 9ರ ಬಡ್ಡಿ ಸೇರಿಕೊಂಡು 10 ವರ್ಷಗಳಲ್ಲಿ ರೂ. 16,85,340 ನಿಮ್ಮ ಕೈ ಸೇರುತ್ತದೆ. ಇದೇ ರೀತಿ ಮುಂದುವರಿಸುತ್ತಾ ಹೋದಲ್ಲಿ ಭವಿಷ್ಯದಲ್ಲಿ ನೀವೂ ಕೋಟ್ಯಧಿಪತಿ ಆಗಬಹುದು.

ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವವರು ತಮ್ಮ ಎಲ್ಲಾ ಆದಾಯ ಮೂಲಗಳ ಮೇಲೂ ತೆರಿಗೆ ಪಾವತಿಸಬೇಕಾಗಿಲ್ಲ. ಈ ಕೆಳಗಿನ ಆದಾಯಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ.

ಸ್ಥಿರ ಆಸ್ತಿಯಿಂದ ಬಾಡಿಗೆ
ಸೆಕ್ಷನ್ 24 (ಎ). ಬರುವ ವರ್ಷದ ಬಾಡಿಗೆಯಲ್ಲಿ ಮನೆ ತೆರಿಗೆ ಕಳೆದು ಉಳಿದ ಹಣದಲ್ಲಿ ಶೇ 30ರಷ್ಟು ಕಡಿತ ಮಾಡಿ ನಂತರ ಉಳಿದ ಮೊತ್ತವನ್ನು ವ್ಯಕ್ತಿಯ ಇತರೆ ಆದಾಯದ ಲೆಕ್ಕಕ್ಕೆ ಸೇರಿಸಿ ತೆರಿಗೆ ಪಾವತಿಸಬೇಕಾಗುತ್ತದೆ. ಇದೇ ವೇಳೆ ಮನೆ ದುರಸ್ತಿ, ಬಾಡಿಗೆ ವಸೂಲಿ ವೆಚ್ಚ, ವಿಮೆ ಹಾಗೂ ಇನ್ನಿತರ ಖರ್ಚುಗಳನ್ನು ಬಾಡಿಗೆ ಹಣದಿಂದ ಕಡಿತ ಮಾಡುವಂತಿಲ್ಲ.

ನೌಕರರಿಗೆ ಉದ್ಯೋಗದಾತರಿಂದ ಬಹಳಷ್ಟು ಸವಲತ್ತುಗಳು ದೊರೆಯುತ್ತವೆ. ಇಂಥ ಸವಲತ್ತುಗಳಲ್ಲಿ ಹಲವಕ್ಕೆ ರಿಯಾಯಿತಿಯನ್ನು ಆದಾಯ ತೆರಿಗೆ ಇಲಾಖೆ ಘೋಷಿಸಿದೆ. ಜೀವನದಲ್ಲಿ ವಿವಿಧ ಕಾರಣಗಳಿಗೆ ಬಹಳಷ್ಟು ಹಣ ವಿನಿಯೋಗಿಸಬೇಕಾಗುತ್ತದೆ. ಉತ್ತಮ ಉದ್ದೇಶಕ್ಕೆ ವ್ಯಯಿಸಿದ ಮೊತ್ತವನ್ನು ಆದಾಯದ ಲೆಕ್ಕದಿಂದ ಈ ಕೆಳಗಿನಂತೆ ಕಡಿತ ಮಾಡಿ ತೆರಿಗೆ ಸಲ್ಲಿಸಬಹುದು.

ಕಾಲಚಕ್ರ ತಿರುಗುತ್ತಿರುತ್ತದೆ. ಪ್ರತಿ ವ್ಯಕ್ತಿ ತನ್ನ ವೃತ್ತಿಯಿಂದ ಒಂದು ದಿನ ನಿವೃತ್ತನಾಗಲೇಬೇಕು. ಆಗ ವೃತ್ತಿ ವೇಳೆ ಕೆಲವು ಲಾಭ (ಟರ್ಮಿನಲ್ ಬೆನಫಿಟ್) ದೊರೆಯುತ್ತವೆ. ಈ ಮೊತ್ತ ದೊಡ್ಡದಾಗಿರುತ್ತವೆ. ಇದರ ಮೇಲೆಯೂ ಆದಾಯ ತೆರಿಗೆ ಬರುತ್ತದೆಯೇ? ಬಂದಲ್ಲಿ ಎಷ್ಟು ಸಲ್ಲಿಸಬೇಕು? ಎನ್ನುವುದನ್ನು ತಿಳಿಯುವ ಕುತೂಹಲ ನಿವೃತ್ತಿಗೆ ಸಮೀಪಿಸುತ್ತಿರುವವರಿಗೆ ಇರುವುದು ಸಹಜ.

`ತೆರಿಗೆ ಶಾಪವಲ್ಲ ವರ~ ಎಂದು ಪರಿವರ್ತಿಸಿಕೊಳ್ಳುವುದು ನಿಮ್ಮ ಕೈಯಲ್ಲಿಯೇ ಇದೆ. 2013ರ ಮಾಚ್ 31ರವರೆಗೂ ಕಾಯದೆ ವಿವಿಧ ಬಗೆಯ ಉಳಿತಾಯಕ್ಕೆ, ವಿನಿಯೋಜನೆಗೆ ತಕ್ಷಣ ಕಾರ್ಯೋ ನ್ಮುಕರಾಗಿರಿ.

`ಹನಿಗೂಡಿ ಹಳ್ಳ-ತೆನೆಕೂಡಿ ಬಳ್ಳ~ ಎಂಬ ಗಾದೆ ಮಾತು ಇಲ್ಲಿ ಸ್ಮರಿಸಬಹುದು. ಇಂದಿನಿಂದಲೇ ಕಡ್ಡಾಯವಾಗಿ ಉಳಿಸುತ್ತಾ ಬಂದು ಆದಾಯ ತೆರಿಗೆಯ 80ಸಿ ಸೆಕ್ಷನ್‌ನ ಗರಿಷ್ಠ ಲಾಭ ಪಡೆಯಿರಿ. ಹೆಚ್ಚಿನ ಸಂಬಳ ಬರುವವರು ಗೃಹಸಾಲ ಪಡೆದು ಸ್ಥಿರ ಆಸ್ತಿ ಮಾಡಲು ಇದೊಂದು ಪರ್ವಕಾಲ.

ಸಾಲ ಪಡೆದಾದರೂ ಸ್ವಂತ ಮನೆ ಹೊಂದಿದಲ್ಲಿ ನೆನಪಿಡಿ... ಅದರಿಂದ ಉಳಿತಾಯವಾಗುವ ಮನೆ ಬಾಡಿಗೆ ಹಾಗೂ ತೆರಿಗೆ ವಿನಾಯಿತಿ ಎರಡನ್ನೂ ಸೇರಿಸಿದರೆ ಮುಕ್ಕಾಲು ಪಾಲು ಗೃಹಸಾಲದ ಕಂತು ಭರಿಸಬಹುದು. ಜತೆಗೆ ಜೀವನದ ಸಂಜೆಯಲ್ಲಿ ಸ್ವಂತ ಸೂರಿನಲ್ಲಿ ಹಾಯಾಗಿ ಬದುಕಬಹುದು.

2011ರ ಏಪ್ರಿಲ್ 1ರಿಂದ 2012ರ ಮಾರ್ಚ್ 31ರ ನಡುವಿನ ಹಣಕಾಸು ವರ್ಷಕ್ಕೆ ಮುಂದಿನ ಜುಲೈ 31ರೊಳಗೆ `ಐಟಿಆರ್‌ಐ~ ಫಾರಂ ಉಪಯೋಗಿಸಿ ರಿಟರ್ನ್ ಸಲ್ಲಿಸಿರಿ. ತೆರಿಗೆ ಪಾವತಿ ಮೊತ್ತ ಕಡಿಮೆ ಮಾಡುವುದರಿಂದಲೇ ಉಳಿತಾಯದ ಪಾಠ ಕಲಿಯಿರಿ. ನೆನಪಿಡಿ, ಜೀವನದ ಗುರಿ ತಲುಪಲು, ಸಮೃದ್ಧಿಯತ್ತ ಪಯಣಿಸಲು ಹಾಗೂ ನೆಮ್ಮದಿಯಿಂದ ಬಾಳಲು ಜೀವನದಲ್ಲಿ ಆರ್ಥಿಕ ಶಿಸ್ತು ಬಹುಮುಖ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT