ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಕ್ಕೆ ಬಂದ ಹುಬ್ಬಳ್ಳಿಯಾಂವ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

`ಹಲೋ......! ಯಾರ‌್ರೀ......? ಎಡಿಟರೇನ.....? ಶರಣ್ರೀಪ..... ನಾನ್ರೀ..... ಮುದ್ದೆಬಿಹಾಳ....~ ಅಂತ, ಫ್ರೀಲಾನ್ಸರ್ ಸಂಗನಬಸವ ಮುದ್ದೇಬಿಹಾಳ ಕಿವಿಗೆ ಫೋನ್ ಹೆಟ್ಟಿದ್ದೇ, ಮರಳುಗಾಡಿಗೆ ಬರಸಿಡಿಲು ಬಡಿದಂತೆ ಬೈಗುಳದ ಆನೆಪಟಾಕಿ ಪಟಪಟನೆ ಸಿಡಿದು, ಸಂಗ್ಯನ ಕಿವಿಹರಿದು ಹೆಬ್ಬಾಗಿಲಾಯ್ತು-
 
`ಸಂಗ್ಯ ಲೇ! ಭೋಸುಡಿಮಗನೆ, ಬದ್ಮಾಶ್, ಭಾಡ್‌ಖೋವ್, ನನ್ ನಸೀಬ್ ಖೊಟ್ಟಿ ಐತಿ ನೋಡ, ನಿ ಫ್ರೀಲಾನ್ಸರ ಆದಿ. ನಿನಮ್ಯಾಗೆ ದಬಾದುಬಿ ಮಾಡಂಗಿಲ್ಲ. ನೀನೇನಾರ ನಮ್ಮ ಶ್ಟಾಫ್‌ನಾಗ ಸೇರಿ ನೌಕರಿ ಮಾಡೂ ಇರಾದೆ ಐತಿ ಅಂದ್ರ ಒದರಲೆ. ಎಡ್ವಾನ್ಸಾಗೆ ಝಾಡಿಸಿ ಒದೀತೀನಿ ಮಗನೆ~ ಎಂದು `ಪಟಾಕಿ~ ಪತ್ರಿಕೆಯ ಸಂಪಾದಕ, ವರದಿಗಾರ, ಮುದ್ರಕ, ಪ್ರಕಾಶಕ ಎರೇಸೀಮಿ ಎಗರಾಡಿ:

`ಯಾಕ್ರೀ ಸರ? ಹಂಗ್ಯಾಕೆ ನಿಟ್ಟಾಡ್ಕಂತೀರಿ?~ ಮುದ್ದೇಬಿಹಾಳ ತಬ್ಬಿಬ್ಬಾದ. `ಅಲ್ಲೋ ಮಂಗನ ಮಗನ. ಶೆಟ್ರು ಕೇಶವಾಪುರದಾಗ ಮೊಕ್ಕಾಂ ಹೂಡಿದ್ದು ಖಬರ್ ಇಲ್ಲೇನ? ಉತ್ತರ ಕನ್ನಡ ಜಿಲ್ಲೆ ಮಂದಿ ಶೆಟ್ಟರ ಕಬ್ಜಾದಾನ ಅದಾರೊ! ಯಡಿಯೂರಪ್ಪನವರ ಕತಿ ಎಡವಟ್ಟಾಗೈತಿ ಕುತ್ತಿಗಿ ಮ್ಯಾಗ ಕಟ್ಟಿದ ಕರಡಗಿ ಈಗ ರುಬ್ಬುಗುಂಡಾಗಿ ಧಮ್ಕಿ ಕೊಡ್ಲಿಕ್ ಹತ್ತೈತಿ.

ಅತ್ತ ಗೌಡರ ಮಂದಿ ಮನಿಮುಂದ ಪಾಳಿ ಹಚ್ಚ್ಯಾರ-~ಶೆಟ್ರ ಕಿಸೆಯೊಳಗ ಹತ್ತು ಖಾತಾ ಐತಿ. ಅದ್ನೆಲ್ಲ ನಮ್ ಕಡೀವ್ರಿಗೆ ಕೊಟ್ರೆ, ಬಾಯಿ ಬಂದ್ ಮಾಡ್ಕಂಡ್ ಕುಂತೇವು ಇಲ್ಲ, ಗೌಡರು ಗದ್ದಲ ಮಾಡೂದಂತೂ ಖರೆ~ ಅಂತ ಒದರ್ಲಿಕ್ ಹತ್ತಾರ. ಇನ್ನು ಶೆಟ್ರ ಹೇಂತಿ ಶಿಲ್ಪಾ ಕಡಿ ಹೆಣಮಕ್ಳೇನ ಮಂಡಕ್ಕಿ ತಿನ್ನೂದೇನ?

`ಶೋಭಾವೈನಿ ಒಬ್ಬಳೇನ ಮಂತ್ರಿಮಂಡಳದಾಗ ಹೆಣಮಗಳು~ ಅಂತ ಕೇಳ್ತ ಕುಂತಾರ. ಶಿಲ್ಪಾ ತೆಲಿ ಒಳಗ ಹುಳ ಹೊಕ್ಕೈತಿ- `ಏ ಇಲ್ಲವ್ವ ಪರವ್ವ ಶೋಭಾನ ಹೆಣಮಗಳಂತ ಹೇಳೂಕ್ಕೆ ಬರೂದಿಲ್ಲವ್ವ. ಆಕಿ ಭಾಜಪದೊಳಗ ಒನಕಿ ಓಬವ್ವಾ ಇದ್ಹಾಂಗ. ಕಿತ್ತೂರು ಚೆನ್ನಮ್ಮ ಇದ್ಹಾಂಗ. ಆಕಿ ಗಂಡುಮೆಟ್ಟಿದ ನಾಡಿನೋಳಲ್ಲ ಖರೆ. ಆದರೆ ಆಕಿ ಮೈಯಾಗ ಮದಕರಿ ನಾಯಕನ ನೆತ್ತರು ಹರೀತೈತವ್ವ~ ಅಂದ್ರೂ ಮಂದಿ ಕೇಳಾಂಗಿಲ್ಲ. ಹೀಂಗೈತಿ ಕತಿ ಮಗನ/ಮುದ್ದೇಬಿಹಾಳ, ನೀ ಯಾವ ಸುಡುಗಾಡನಾಗ ಕುಂತೀ?~ ಎಂದು ಸಂಪಾದಕ ಅವ್ಯಾಹತವಾಗಿ ಬೈಗುಳದ ಗದಾಪ್ರಹಾರ ಮಾಡಿದ, ಪಾಪ!

ಸಂಗನಬಸವ ವಿಧಾನಸೌಧದ ಮೊಗಸಾಲೆಯಲ್ಲಿ ಕೂತು ಸ್ಕೂಪ್ ಹೊಸೆಯೋಣ ಅಂತ ಲೆಕ್ಕಾಚಾರ ಹಾಕಿ ಬಂದವ. ಅವನ ಹೇಂತಿ ಹಳೆ ತರಗುಪೇಟೆ ಕಿರಾಣಿ ಅಂಗಡಿ ಸಾದರ ಪತ್ರಪ್ಪನವರ ಮಗಳು ಭರ್‌ಪೂರ್ ಬಸುರಿ. ಈಗಲೋ ಆಗಲೋ ಡೆಲಿವರಿ. ಬೆಂಗಳ್ಳೂರಿನ ಟ್ರಾಫಿಕ್ ಜಾಮ್‌ಗೆ ಸಿಕ್ಕ ಸಹೋದ್ಯೋಗಿಯ (ಅವನೂ ನಿರುದ್ಯೋಗಿ, ಹಾಗಾಗಿ ಫ್ರೀಲಾನ್ಸರ್!) ಹೆಂಡತಿಗೆ ಬೈಕ್‌ನಲ್ಲೆ ಹೆರಿಗೆ ಆಗಿದ್ದು ಕೇಳಿ ಎದೆ ಧಸಕ್ಕೆಂದಿತು. ಏನೇ ಆಗಲಿ ಹೆಂಡತಿ ವೇಳೆಗೆ ಬೆಂಗಳ್ಳೂರಲ್ಲೆ ಇದ್ದು ಪತ್ರಿಕೆಗೆ ಒಂದು ಕತೆ ಹೆಣೆಯುವ ಅಂತ ವಿಧಾನಸೌಧದ ಗೇಟಿನ ತಾವು ಬಂದ. ರಕ್ಷಣಾ ಸಿಬ್ಬಂದಿ ತಡೆದರು. `ನಾನು ಜರ್ನಲಿಸ್ಟ್~ ಅಂದ. `ಜನರಲ್ ಪಬ್ಲಿಕ್‌ಗೇ ಎಂಟ್ರಿ ಇಲ್ಲ.
 
ಇನ್ನೂ ಜರ್ನಲಿಸ್ಟ್‌ಗಳಿಗೆಲ್ರಿ? ಯಾವ ಪ್ರೆಸ್ಸು ನಿಮ್ಮದು? ಪ್ರಿಂಟಿಂಗ್ ಪ್ರೆಸ್ಸೇ?~ ಅಂತ ಮಾಜಿ ಪತ್ರಿಕೋದ್ಯಮಿಯೊಬ್ಬ ಮುದ್ದೇಬಿಹಾಳನ ಕಾಲೆಳೆದ. ಬಿಸಿತುಪ್ಪ ನುಂಗುವಂತಿಲ್ಲ. ಉಗುಳುವಂತಿಲ್ಲ. ಆ ನೂಕು ನುಗ್ಗಲಿನಲ್ಲಿ ಅವನ ಲ್ಯಾಪ್‌ಟಾಪನ್ನು ಯಾರೋ ದೇಪಿಕೊಂಡು ಓಡಿದ್ದರು. ಕಂಪ್ಲೇಂಟ್ ಕೊಡುವಷ್ಟು ಟೇಮಿಲ್ಲ.

ಇತ್ತ ಗೇಟಿನ ಮುಂದೆ ಹಳೆ ಮೈಸೂರು ಪುಢಾರಿಗಳ ನಿಯೋಗವೊಂದು ಒಳನುಗ್ಗಲು ಕಾತರಿಸುತ್ತಿದೆ. ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಬರೆ ನಮ್ಮವರೆ ಇದ್ದರು ಟಿ. ಸುಬ್ರಹ್ಮಣ್ಯಂ, ಎ.ಜಿ. ರಾಮಚಂದ್ರರಾವ್, ಹೋಂ ಮಿನಿಸ್ಟರ್ ರಾಮರಾವ್, ಶಂಕರೇಗೌಡರು, ಕಡಿದಾಳ್ ಮಂಜಪ್ಪ ಇತ್ಯಾದಿ ಇತ್ಯಾದಿ ಈಗ ನೋಡಿದರೆ ಸುಂಕದ, ಬೆಲ್ಲದ, ಹಡಪದ, ಮೆಣಶಿನಕಾಯಿ, ಮಂಡಕ್ಕಿ ಅಂತ ಸಂಚಾರಿ ಅಕ್ಕಿಪೇಟೆಯೇ ತುಂಬಿದೆ. ನಮ್ಮವರ ದನಿ ಕೇಳೋರ‌್ಯಾರು? ಅಂತ ಹಳೇ ಮೈಸೂರಿನ ಮಂದಿ ಹಲುಬುತ್ತಿರೋಣ, ಬರಿ ಅರಣ್ಯರೋದನ.

ಇದು ಹೀಗಾದರೆ ಕಳಂಕಿತರನ್ನು ಕೈಬಿಡಬೇಕೆಂಬ ಕೂಗು ಆ ಕಡೆ `ಹಂಗಾದರೆ ಆ ಕಳಂಕಿತರು ಯಾರಂತ ಪ್ರಶ್ನೆ ಏಳುತೈತಿ ಸರ. ಮಂತ್ರಿಮಂಡಲ ಹೌಜ್ ಆಫ್ ಕಾರ್ಡ್ಸ್‌ನಂತ ಕುನೀತೈತಿ ತಿಳಿತೇನ. ಅಲ್ರೀ, ತಿರುಪತೀಲಿ ತೆಲಿ ಬೋಳಿಶ್ಕಂಡವರ ಕಡಿ ಬೆಟ್ಟುಮಾಡಿ ಇವ ಯಾರವ ಇವ ಯಾರವ ಅಂತ ಗುರ್ತು ಹಿಡೀಲಿಕ್ಕೆ ಆತೈತೇನ?

ದಿಗಂಬರರ ರಾಜ್ಯದೊಳಗ ಲಂಗೋಟಿ ಕಟ್ಟೂದಿಲ್ರಿ~ ಅಂತ ಅಲ್ಲೆ ಕ್ಯೂಗೆ ಅಂಟಿ ನಿಂತ ಡಿಸ್ಕ್ರೆಡಿಟೆಡ್ ಪತ್ರಕರ್ತನೊಬ್ಬ ಗುಂಯ್‌ಗುಟ್ಟಿದ ಅವನೂ ಮುದ್ದೇಬಿಹಾಳದವನೆ. ಶಾಸಕರ ಭವನದ ಲಾಬಿಯಲ್ಲಿ ಅಡ್ಡಾಡಿಕೊಂಡು, ಗೋಬಿಮಂಚೂರಿ ಮೆಲ್ಲುತ್ತ ಪತ್ರಕರ್ತರ ಕೋಟಾದಲ್ಲೊಂದು ಸೈಟು ಹೊಡೆದವ. ಆ ಹೊತ್ತಿಗೆ ಮೂರು ವಾಹಿನಿಗಳ ಮೂರೂವರೆ ಬಾತ್ಮೀದಾರರು, ಇಬ್ಬರು ಕ್ಯಾಮೆರಮನ್‌ಗಳು ವಿಧಾನಸೌಧದ ಮೊಗಸಾಲೆ ಬಿಟ್ಟು ಗೇಟಿನತ್ತ ಬರುತ್ತಿದ್ದುದನ್ನು ಕಂಡ ಮುದ್ದೆಬಿಹಾಳ ಒಬ್ಬ ಬಾತ್ಮೀದಾರನ ಕಾಲರ್ ಹಿಡಿದು- `ಏನು ಸುದ್ದಿ ಬ್ರದರ್. ಅತೃಪ್ತರ ಬಣ ಏನಂತೈತಿ? ಬೇಳೂರು ಗೋಪಾಲಕೃಷ್ಣ ಅಂಡ್ ಕೋ~, ಎಂದು ಕೇಳುತ್ತಿದ್ದ ಬಾತ್ಮೀದಾರ ಕೈಕೊಡವಿಕೊಂಡು ಟಾಟಾ ಎನ್ನುತ್ತ ಹೊರಹೊರಟ ಅವನನ್ನೂ ಕೋರ್ಟಿನ ಆವರಣದ ಗಲಭೆಯ ಹ್ಯಾಂಗ್‌ಓವರ್‌ನಿಂದ ಹೊರಬಂದಿರಲಿಲ್ಲವೆಂದು ತೋರುತ್ತೆ. ಹೋಗುವಾಗ ಒಂದು ಕಿವಿಮಾತನ್ನು ಕಿವಿಯೊಳಗೇ ಉಸುರಿ ಹೋಗಿದ್ದ ಬೀ ಕೇರ್‌ಫುಲ್ ಬ್ರದರ್, ನೋ `ಪಾರ್ಲಿಮೆಂಟರಿ ವರ್ಡ್ಸ್~!

ಏನಾದರಾಗಲಿ ಒಂದಿಷ್ಟು ಸುದ್ದಿ ಕೊಡುವ ಅಂತ `ಪಟಾಕಿ~ ಪತ್ರಿಕೆಗೆ ಫೋನಾಯಿಸಿದ್ದೇ, ಎಂಟರ್ ಎರೇಸೀಮಿ ಎರ‌್ರಾಬಿರ‌್ರೀ ಎಗರಾಡಿದ್ದ ಮುದ್ದೆಬಿಹಾಳ ಒಂದೇ ಮಾತಿನಲ್ಲಿ ಸುದ್ದಿ ಕೊಟ್ಟು ಮುಗಿಸಿದ `ಈ ಸರ್ಕಾರಕ್ಕೆ ಬಾಲಿರಿಷ್ಟ ಬಡಿದೈತಿ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT