ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಬಣ್ಣ ...

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸೌದಿ ಅರೇಬಿಯಾದಿಂದ ಇತ್ತೀಚೆಗಷ್ಟೇ ಬಂದು ಜೆ.ಪಿ.ನಗರ ಏಳನೇ ಹಂತದ ಮನೆಯಲ್ಲಿ ನೆಲೆಸಿರುವ ರಿಚರ್ಡ್– ಜಾಲಿ ಮಸ್ಕರೇನಸ್ ದಂಪತಿಯ ಮಗ ಮೂರರ ಹರೆಯದ ಪುಟಾಣಿ ಅಯಾನ್ ಮಸ್ಕರೇನಸ್‌ ಹಬ್ಬದ ತಯಾರಿ ನಡುವೆ ಸೌದಿ ಗೆಳೆಯರನ್ನು ನೆನಪಿಸಿಕೊಳ್ಳುತ್ತಿದ್ದಾನಂತೆ. ಈ ಬಾರಿಯ ಗೋದಲಿ ಅಲಂಕಾರವನ್ನು ಅವನ ಸುಪರ್ದಿಗೇ ಬಿಟ್ಟಿದ್ದಾರೆ ಅವರು. ಸಾಂಟಾಕ್ಲಾಸ್‌ನ ಸಣ್ಣದೊಡ್ಡ ಗೊಂಬೆ, 50 ಪುಟಾಣಿ ಗಂಟೆ, ಪುಟಾಣಿ ಕ್ರಿಸ್ಮಸ್‌ ಟ್ರೀಗಳನ್ನು ತಂದುಕೊಟ್ಟಿದ್ದಾರೆ.

ಮಂಗಳವಾರ ಬೆಳಗ್ಗಿನ ಕುಳಿರ್ಗಾಳಿಯಲ್ಲೂ ಮನೆ ಮುಂದಿನ ಲಾನ್‌ನಲ್ಲಿ ಗೋದಲಿ ಸಜ್ಜುಗೊಳಿಸುತ್ತಿದ್ದ ಅಯಾನ್‌. ಬಣ್ಣ ಬಣ್ಣದ ಮಿನಿಯೇಚರ್‌ ದೀಪಗಳ ಎರಡು ಕಟ್ಟು, ಪುಟ್ಟ ಪುಟ್ಟ ಕುರಿ, ಮೇಕೆ, ಹಸು, ಬೆಕ್ಕು, ಅಜ್ಜ ಅಜ್ಜಿ, ಒಂದಿಷ್ಟು ಮಂದಿ ಹೀಗೆ ಗೊಂಬೆಗಳನ್ನು ತುಂಬಿಕೊಂಡ ಮತ್ತೊಂದು ಬಾಕ್ಸ್‌ ಗೋದಲಿಯನ್ನು ಅಲಂಕರಿಸಲು ಕಾಯುತ್ತಿದ್ದವು. ಗೋದಲಿಗೆ ಹಟ್ಟಿಯ ಸ್ಪರ್ಶ ನೀಡಲು ಅಕೇಶಿಯಾ ಮರದ ಎಲೆಗಳೂ ಅಲ್ಲಿದ್ದವು. ಅಪ್ಪ ರಿಚರ್ಡ್‌ಗೆ ಬುಧವಾರ ಮಧ್ಯಾಹ್ನದ ಹಬ್ಬದೂಟಕ್ಕಾಗಿ ಮಹಾತ್ಮ ಗಾಂಧಿ ರಸ್ತೆಯ ಬಿನ್ನಿ ಮಿಲ್‌ ಮಳಿಗೆ ಬಳಿಯಿರುವ ಹೈಟೆಕ್‌ ಮಳಿಗೆಯಿಂದ ಹಂದಿ ಮಾಂಸ ತರುವ ಅವಸರ. ಈ ಬಾರಿಯಾದರೂ ತವರುನೆಲ ಮಂಗಳೂರಿನ ಮಾದರಿಯಲ್ಲೇ ಹಬ್ಬ ಮಾಡುವಾಸೆ ಜಾಲಿ ಅವರದು.

‘ರೋಸ್ ಕುಕೀಸ್, ಕರಂಜಿ (ಕರ್ಜಿಕಾಯಿ), ಶಂಕರಪೋಳೆ, ಸುಕ್ರುಂಡೆ, ಕಲ್ಕಲ್, ಅಕ್ಕಿ ಲಾಡುಗಳನ್ನು ಒಳಗೊಂಡ ‘ಕುಸ್ವಾರ್’

ಡಿಸೆಂಬರ್‌ನುದ್ದಕ್ಕೂ ಹಬ್ಬದ ಜಪ ಮಾಡಿದ ಕ್ರೈಸ್ತ ಬಾಂಧವರಿಗೆ ಇದೀಗ ಹಬ್ಬ ಸಂಪನ್ನಗೊಂಡ ಖುಷಿ. ಮುಂದಿನ ಹಬ್ಬದವರೆಗೂ ನೆನೆದು ಚಪ್ಪರಿಸುವಷ್ಟು ವಿಶಿಷ್ಟವಾಗಿಸುವ ಪ್ರಯತ್ನ ಪ್ರತಿಯೊಬ್ಬರದ್ದೂ. ಹಬ್ಬಕ್ಕೆ ಮನೆ, ಮನಗಳು ಸಜ್ಜಾಗಬೇಕಾದರೆ ಮಾರುಕಟ್ಟೆಯಲ್ಲೊಂದು ಸುತ್ತು ಹೊಡೆಯಲೇಬೇಕಲ್ಲ? ಶಿವಾಜಿನಗರದ ಸೇಂಟ್ ಮೇರಿ ಬೆಸಿಲಿಕಾ ಚರ್ಚ್ ಎದುರು ಪ್ರತಿವರ್ಷದಂತೆ ತೆರೆದುಕೊಂಡಿದ್ದ ಕ್ರಿಸ್ಮಸ್ ಮಾರುಕಟ್ಟೆಯಲ್ಲಿ ಜನ ಹಬ್ಬದ ಸರಕುಗಳನ್ನು ಮೊಗೆದುಕೊಂಡರು. ಇಷ್ಟಾದ ಮೇಲೆ ಹಬ್ಬದ ಅಡುಗೆಯನ್ನು ಮರೆಯುವುದುಂಟೆ? ಕ್ರಿಸ್ಮಸ್‌ನಲ್ಲಿ ಮರೆಯಲಾಗದ ಖಾದ್ಯಗಳು, ವಿಶೇಷ ಭೋಜನಗಳು ಒಳಮನೆಯಲ್ಲಿ ತಯಾರಾಗುತ್ತಿವೆ. ಹಬ್ಬವನ್ನು ಆಸ್ವಾದಿಸಲು, ಆನಂದಿಸಲು ಇಷ್ಟು ಸಾಲದೇ? ಅದೋ ಅಲ್ಲಿ ಕ್ರಿಸ್ಮಸ್ ಗಂಟೆಗಳ ಸದ್ದು... ಸಾಂಟಾಕ್ಲಾಸ್ ನಿಮ್ಮ ಮನೆಗೇ ಬಂದರೇನೊ...

ಸೌದಿಯಲ್ಲೂ ಸಿಗುತ್ತಿತ್ತು. ಆದರೆ ಎಲ್ಲವೂ ಜಂಕ್. ಅದಕ್ಕೆ ವಾರದ ಹಿಂದೆಯೇ ಅದನ್ನು ಮಾಡಿಟ್ಟಿದ್ದೇನೆ. ಈ ಬಾರಿ ಮಂಗಳೂರಿನಿಂದ ನಮ್ಮಿಬ್ಬರ ಮನೆಯವರೆಲ್ಲರೂ ಇಲ್ಲಿಯೇ ಸೇರಿ ಹಬ್ಬ ಮಾಡುವ ನಿರ್ಧಾರ ಮಾಡಿದ್ದೇವೆ. ಬುಧವಾರ ಮಧ್ಯಾಹ್ನ ಮಲ್ಲಿಗೆ ಇಡ್ಲಿ-ಕೋಳಿ ಸಾರು, ಆಪಂ– ಪಂದಿ ಕರಿ, ಕೋಳಿ ಸುಕ್ಕ, ಕಪ್ಪು ಕಡ್ಲೆ ಗಸಿ, ಗುಜ್ಜೆ (ಎಳೆಹಲಸು) ಪಲ್ಯ ಹೀಗೆ ಥೇಟ್ ಮಂಗಳೂರಿನ ಅಡುಗೆಗೆ ತಯಾರಿ ಮಾಡಿದ್ದೇನೆ. ಶಾಂಪೇನ್, ಬಿಯರ್, ವಿಸ್ಕಿ ಸಿದ್ಧವಿದೆ. ಅತ್ತೆ ಮತ್ತು ಅಮ್ಮ ವೈನ್ ತರುತ್ತಾರೆ’ ಎಂದು ಹೇಳುತ್ತಲೇ ಬಾಗಿಲಿಗೆ ಕ್ರಿಸ್ಮಸ್ ಗಂಟೆಯ ತೋರಣ ಕಟ್ಟಿದರು.

ಮನೆಯಾಚೆ...
ಕ್ರಿಸ್ಮಸ್, ಮನೆ ಮತ್ತು ಚರ್ಚ್‌ಗಷ್ಟೇ ಸೀಮಿತವಾಗಿ ಉಳಿದಿಲ್ಲ. ವ್ಯಾಪಾರ ಮಳಿಗೆಗಳು ಇದು ನಮ್ಮದೇ ಹಬ್ಬ. ನಮ್ಮಲ್ಲಿ ಬನ್ನಿ ನಿಮಗಾಗಿ ಕೊಡುಗೆಗಳು, ಉಡುಗೊರೆಗಳು ಕಾದಿವೆ. ಅದೇ ಸಾಂಟಾಕ್ಲಾಸ್ ಮಕ್ಕಳಿಗೆ ಉಡುಗೊರೆ ಕೊಟ್ಟು ಬೆರಗು ಮೂಡಿಸುತ್ತಾರಲ್ಲ ಹಾಗೆ ಎಂದು ಕ್ರಿಸ್ಮಸ್ ಮಾಸದುದ್ದಕ್ಕೂ ಆಹ್ವಾನ ನೀಡುತ್ತಾ ಬಂದಿವೆ. ಸಣ್ಣಪುಟ್ಟ ಮಳಿಗೆಗಳ ನೋಟ ಹೀಗಿದ್ದರೆ, ಒಂದೊಂದು ಮಾಲ್‌ಗಳೂ ಹಬ್ಬದ ಮೋಜು ಮಸ್ತಿಗೆ ಸಿದ್ಧವಾಗಿ ವಾರ ಕಳೆದಿದೆ. ಮಾಲ್‌ನ ಪಾರ್ಕಿಂಗ್ ತಾಣಗಳನ್ನೂ ವಿಭಿನ್ನವಾಗಿ ಅಲಂಕರಿಸಿ, ಒಂದೊಂದು ಪ್ರವೇಶದ್ವಾರಗಳನ್ನೂ ಸ್ಪರ್ಧೆಯೋಪಾದಿಯಲ್ಲಿ ಕ್ರಿಸ್ಮಸ್ ಗಂಟೆ, ಸಾಂಟಾಕ್ಲಾಸ್‌, ಉಡುಗೊರೆಯ ಪೊಟ್ಟಣಗಳಿಂದ ಸಿಂಗರಿಸಿ ರಸ್ತೆಯಲ್ಲಿ ಸಾಗುವವರೂ ಒಳಬಂದು ವಿಂಡೋ ಶಾಪಿಂಗ್‌ ಆದರೂ ಮಾಡಿಹೋಗುವಂತೆ ಆಕರ್ಷಿಸುತ್ತಿವೆ. ಇಷ್ಟು ಸಾಲದೆಂಬಂತೆ ಬಗೆ ಬಗೆಯ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಹಿರಿಕಿರಿಯ ಗ್ರಾಹಕರಲ್ಲಿ ಶಾಪಿಂಗ್ ಮೂಡ್‌ ಕಟ್ಟಿಕೊಟ್ಟಿದೆ.

ಮಕ್ಕಳ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡ ಮಾಲ್‌ಗಳು ಮಕ್ಕಳ ನೆಚ್ಚಿನ ಕಾರ್ಟೂನ್‌ ವೇಷಧಾರಿಗಳ ಮೂಲಕ ಅವರಿಗೆ ಅಚ್ಚರಿಯ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿವೆ. ಹಬ್ಬದ ದಿನ ವಿಶೇಷ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳಿ ಎಂಬ ಬಂಪರ್ ಪ್ರಕಟಣೆಯನ್ನೂ ಮುಂದಿಟ್ಟಿವೆ.

ಮೆನು ಮೇಲಾಟ
ಎಂದೂ ಕಾಣದಂತಹ ಸವಿಯೂಟದೊಂದಿಗೆ ಹಬ್ಬವನ್ನು ಆನಂದಿಸಿ ಎನ್ನುವುದು ರೆಸ್ಟೋರೆಂಟ್‌ಗಳ ಆಹ್ವಾನ. ಊಟದ ಕೊನೆಯಲ್ಲಿ ಸಾಂಟಾಕ್ಲಾಸ್ ವೇಷಧಾರಿ ಉಡುಗೊರೆ ಕೊಟ್ಟು ಬೀಳ್ಕೊಡುವವರೆಗೂ ಆತಿಥ್ಯ ಮುಂದುವರೆಯುತ್ತದೆ. ಕೊಡವ, ಮಂಗಳೂರು, ಗೋವಾ, ಊಟಿ ಶೈಲಿಯ ಆಹಾರ, ಖಾದ್ಯ, ‘ಅನ್‌ಲಿಮಿಟೆಡ್’ ಬಿಯರ್, ವೈನ್ ಕೊಡುತ್ತೇವೆ ಎಂದೂ ಹೇಳುತ್ತಿವೆ.

ಮನೆಗಳಿಗೆ ಭೇಟಿ ನೀಡಿ ಅಶಕ್ತರು, ಕಾಯಿಲೆಪೀಡಿತರು, ಬಾಣಂತಿಯರು ಮತ್ತು ಮಕ್ಕಳಿಗಾಗಿ ಯೇಸು ಭಜನೆ ಮಾಡುತ್ತಾ ತಿಂಗಳಿಡೀ ತಿರುಗಾಟ ನಡೆಸಿದ ಕ್ಯಾರಲ್‌ ತಂಡಗಳೂ ನಿರಾಳವಾಗಿವೆ.

ಹೀಗೆ ಡಿಸೆಂಬರ್‌ನುದ್ದಕ್ಕೂ ಹಬ್ಬದ ಜಪ ಮಾಡುತ್ತಿದ್ದ ಕ್ರೈಸ್ತ ಬಾಂಧವರಿಗೆ ಇದೀಗ ಹಬ್ಬ ಸಂಪನ್ನಗೊಂಡ ಖುಷಿ. ಮುಂದಿನ ಡಿಸೆಂಬರ್‌ವರೆಗೂ ನೆನೆದು ಚಪ್ಪರಿಸುವಷ್ಟು ವಿಶಿಷ್ಟವಾಗಿಸುವ ಪ್ರಯತ್ನ ಪ್ರತಿಯೊಬ್ಬರದ್ದೂ. ಅವರ ಪ್ರತಿ ಹೆಜ್ಜೆಯಲ್ಲೂ ಸಡಗರ...
ಅದೋ ಅಲ್ಲಿ ಕ್ರಿಸ್ಮಸ್ ಗಂಟೆಗಳ ಸದ್ದು ಕೇಳಿಬರುತ್ತಿದೆ. ಸಾಂಟಾಕ್ಲಾಸ್ ನಿಮ್ಮ ಮನೆಗೇ ಬಂದರೋ ನೋಡಿ... ಮೆರ್ರಿ ಕ್ರಿಸ್ಮಸ್...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT