ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಳುಗಟ್ಟುತ್ತಿರುವ ಹೊಸ ಚಿಂತನೆ

Last Updated 4 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ಬೆಂಗಳೂರು: ಚಳವಳಿಗಳು ಕ್ರಿಯಾಶೀಲತೆ ಕಳೆದುಕೊಂಡಿವೆ ಎಂಬ ಕಾರಣಕ್ಕೆ ಸಾಹಿತ್ಯ ನಿಂತ ನೀರಾಗಿದೆ ಎಂಬ ಮಾತಲ್ಲಿ ಹುರುಳಿಲ್ಲ. ಹೊಸ ಬಗೆಯ ಚಿಂತನೆಗಳು ಹರಳುಗಟ್ಟುತ್ತಿವೆ. ಕನ್ನಡ ಸಾಹಿತ್ಯ ಹೊಸ ಪ್ರಯೋಗಗಳಿಗೆ ತೆರೆದುಕೊಂಡಿದೆ ಎಂದು ಹಿರಿಯ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ವಿಶ್ಲೇಷಿಸಿದರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು’ ಕುರಿತು ಶುಕ್ರವಾರ ಆಯೋಜಿಸಿದ್ದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಲೇಖಕನಿಗೆ ಇಂದು ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಬೇಕಾದ ವಸ್ತುವನ್ನು ಬೇಕಾದ ರೀತಿಯಲ್ಲಿ ಬಳಸಿ ಸಾಹಿತ್ಯ ಸೃಷ್ಟಿಸುವ, ಚಿಂತನೆ ಹರಡುವ ಮುಕ್ತ ಅವಕಾಶ ದೊರೆತಿದೆ. ಈ ಸ್ವಾತಂತ್ರ್ಯದಿಂದ ಹೊಸ ಶೋಧಗಳು ನಡೆದಿವೆ. ಪ್ರಭೇದಗಳ ಪಲ್ಲಟ, ವೈಚಾರಿಕ ಸಿದ್ಧ ಮಾದರಿಗಳನ್ನು ಮೀರುವ ಪ್ರಯತ್ನಗಳು ಹೇರಳವಾಗಿ ಕಂಡುಬರುತ್ತಿವೆ ಎಂದರು.

ಇಂದು ಯಾವುದೇ ಚಳವಳಿ ಪ್ರಭಾವಿಯಾಗಿ ಎದ್ದುಕಾಣುತ್ತಿಲ್ಲ. ಚಳವಳಿಗಳು ಒಂದೇ ಬಗೆಯ ವೈಚಾರಿಕ ಅಲೆಗಳನ್ನು ಸೃಷ್ಟಿಸುತ್ತವೆ. ಆ ಚಳವಳಿ ಸ್ವೀಕರಿಸಲು ಸಾಧ್ಯವಿರುವ ಸಾಹಿತ್ಯ ಮಾತ್ರ ಸೃಷ್ಟಿಯಾಗುತ್ತದೆ. ಸಮಾಂತರ ಅಥವಾ ವಿರುದ್ಧ ಅಲೆ ಬೀಸಲು ಆಗ ಸಾಧ್ಯವಾಗುವುದಿಲ್ಲ. ಕಳೆದ 10-15 ವರ್ಷಗಳ ಅವಧಿಯಲ್ಲಿ ಚಳವಳಿಗಳು ಪ್ರಭಾವಿಯಾಗಿಲ್ಲ. ಹೀಗಾಗಿ ಪ್ರಯೋಗಕ್ಕೆ ಪೂರ್ಣ ಸ್ವಾತಂತ್ರ್ಯ ದೊರೆತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾವ್ಯ ಪ್ರಕಾರದ ಕಾಳಜಿಯೂ ಪ್ರಮುಖವಾಗಿ ಶೋಧವೇ ಆಗಿದೆ. ಅನೇಕ ನೆಲೆಗಳಲ್ಲಿ ಈ ಶೋಧ ನಡೆದಿದೆ. ಇದರಲ್ಲಿ ಹೊಸ ಕಟ್ಟುವಿಕೆಯನ್ನು ಅರಿಯುವ ಪ್ರಯತ್ನ ಇದೆ. ಈ ಹಿಂದೆ ಡಾ. ಅಂಬೇಡ್ಕರ್ ಒಬ್ಬರನ್ನು ಮಾತ್ರ ಒಪ್ಪಿಕೊಂಡ ದಲಿತ ಕವಿಗಳು ಹೆಚ್ಚು ಜನರಿದ್ದರು. ಈಗ ಅಂಬೇಡ್ಕರ್ ಅವರನ್ನು ಬಿಡದೆ ಅವರ ಜೊತೆಯಲ್ಲಿ ಗಾಂಧೀಜಿಯನ್ನು ಅನುಸಂಧಾನ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಎನ್‌ಆರ್ ವ್ಯಾಖ್ಯಾನಿಸಿದರು.

ಕನ್ನಡ ಕಥನ ಪ್ರಕಾರದಲ್ಲಿ ಇತ್ತೀಚೆಗೆ ಹಲವಾರು ಪ್ರಯೋಗಗಳು ನಡೆದಿವೆ. ಪ್ರಬಂಧ ಮಾದರಿಯ ಕಥನ, ಕಾವ್ಯಾತ್ಮಕ ಕಥೆ, ತಂತ್ರ ಪ್ರಯೋಗ ಹೀಗೆ ಅನೇಕ ಪ್ರಯೋಗಗಳಾಗಿವೆ. ಇದು ಪ್ರಕಾರ ಸಂಕರಗಳಿಗೆ ಕಾರಣವಾಗಿದೆ ಎಂದು ಕಥಾಸಾಹಿತ್ಯದ ಇತ್ತೀಚಿನ ಒಲವುಗಳು ಕುರಿತು ಮಾತನಾಡಿದ ಕಥೆಗಾರ ಚಿದಾನಂದ ಸಾಲಿ ಅಭಿಪ್ರಾಯಪಟ್ಟರು.

ರಚನೆಯ ದೃಷ್ಟಿಯಿಂದ ಹೊಸಗನ್ನಡ ಕಾವ್ಯದಲ್ಲಿಯೇ ಹೆಚ್ಚು ಶಕ್ತಿಶಾಲಿಯಾದ ಕವಿತೆಗಳು ರಚನೆಯಾದದ್ದು ಕಳೆದ ಒಂದು ದಶಕದ ಅವಧಿಯಲ್ಲಿ ಎಂದರೆ ಅತಿಶಯೋಕ್ತಿಯಲ್ಲ.ಸಿದ್ಧವಿನ್ಯಾಸದ ಮಾದರಿಯ ರಚನೆಗಳನ್ನು ಕೈಬಿಟ್ಟಿರುವ ಕವಿಗಳು ಪ್ರತಿಯೊಂದು ಕವಿತೆಯನ್ನೂ ಕಲಾಕೃತಿ ಆಗಿಸುವುದಕ್ಕೆ ನಡೆಸುತ್ತಿರುವ ಪ್ರಯತ್ನ ವಿನ್ಯಾಸದಲ್ಲಿ ಗೋಚರಿಸುತ್ತದೆ. ಅತ್ಯಂತ ಸೂಕ್ಷ್ಮ ಸಂವೇದನೆಯ ಕವಿಗಳು ಹಿಂದೆಂದಿಗಿಂತ ಹೆಚ್ಚು ಜಾತ್ಯತೀತವಾದ, ತಾಜಾ ಚಿಂತನಕ್ರಮ ಇರುವ ಕವಿತೆಗಳನ್ನು  ರಚಿಸುತ್ತಿದ್ದಾರೆ ಎಂದು ಕಾವ್ಯ ಕುರಿತು ಮಾತನಾಡಿದ ‘ಪ್ರಜಾವಾಣಿ’ ಯ ಹಿರಿಯ ವರದಿಗಾರ ದೇವು ಪತ್ತಾರ ಗುರುತಿಸಿದರು. ಹಿರಿಯರು ಈಗಾಗಲೇ ಕೆಲವೊಂದು ವಿಮರ್ಶಾ ಮಾದರಿಗಳನ್ನು ಕೊಟ್ಟಿದ್ದಾರೆ. ಅವುಗಳನ್ನು ಗೌರವಿಸುತ್ತಲೇ ಹೊಸ ಮಾದರಿಗಳನ್ನು ಹುಡುಕಬೇಕು. ವರ್ತಮಾನದ ತುರ್ತುಗಳನ್ನು ಗಮನಿಸಬೇಕು ಎಂದು ಸಾಹಿತಿ ಆನಂದ ಋಗ್ವೇದಿ ಹೇಳಿದರು.

‘ಬೆಳಕಿನ ಬೀಜ ಬಿತ್ತಬೇಕಾದ ಸಾಹಿತಿಗಳು ಅಮಾನವೀಯ ನಿಲುವು ತಳೆದಾಗ ಲೇಖಕ ಸಮುದಾಯ ಅದನ್ನು ವಿರೋಧಿಸಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಕವಿ ವಿ.ಗ. ನಾಯಕ ತಮ್ಮ ಆಶಯ ಭಾಷಣದಲ್ಲಿ ಆತಂಕ ವ್ಯಕ್ತಪಡಿಸಿದರು. ಆನೇಕಲ್ ಮಂಜುನಾಥ್ ಸ್ವಾಗತಿಸಿದರು. ವಾದಿರಾಜ್ ನಿರೂಪಿಸಿದರು.


 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT