ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ತಪ್ಪಿದ ಪಂಜಾಬ್ ಮೇಲ್: 27 ಪ್ರಯಾಣಿಕರಿಗೆ ಗಾಯ

Last Updated 6 ಮೇ 2012, 19:30 IST
ಅಕ್ಷರ ಗಾತ್ರ

ರೋಹ್ಟಕ್, ಹರಿಯಾಣ (ಪಿಟಿಐ): ಫಿರೋಜ್‌ಪುರ- ಮುಂಬೈ ನಡುವೆ ಸಂಚರಿಸುವ `ಪಂಜಾಬ್ ಮೇಲ್~ ರೈಲಿನ ಎಂಟು ಬೋಗಿಗಳು ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಹಳಿ ತಪ್ಪಿದ್ದರಿಂದ ಮೂವರು ಮಹಿಳೆಯರು ಸೇರಿ 27 ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. 

  `ರೈಲು ಮುಂಬೈಗೆ ತೆರಳುತ್ತಿದ್ದಾಗ ಬೆಳಗಿನ ಜಾವ 3.30ಕ್ಕೆ ಸಂಪ್ಲಾ- ಖರ್‌ವಾರ ಎಂಬಲ್ಲಿ ಈ ದುರ್ಘಟನೆ ನಡೆದಿದೆ`ಎಂದು ರೋಹ್ಟಕ್ ಐಜಿಪಿ ಅಲೋಕ್ ಮಿತ್ತಲ್ ತಿಳಿಸಿದ್ದಾರೆ.

ಒಟ್ಟು 24 ಬೋಗಿಗಳ ಪೈಕಿ ಎಸ್-5ನಿಂದ ಎಸ್-10 ವರೆಗಿನ ಸ್ಲೀಪರ್ ಬೋಗಿಗಳು ಮತ್ತು ಒಂದು ಲಗೇಜ್ ವ್ಯಾನ್ ಹಳಿ ತಪ್ಪಿವೆ. ಕಾರಣ ಪತ್ತೆ ಹಚ್ಚಲು ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಘಟನೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ರೈಲ್ವೆ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು.

`ರೈಲಿನಲ್ಲಿದ್ದ ವ್ಯಕ್ತಿಯೊಬ್ಬರು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರಿಂದ ತಕ್ಷಣ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು. ರೈಲ್ವೆ ಸಿಬ್ಬಂದಿ ಎರಡು ಗಂಟೆಗಳ ಕಾಲ ಕೆಲಸ ನಿರ್ವಹಿಸಿ ರೈಲು ಓಡಾಟಕ್ಕೆ ಮಾರ್ಗ ಸುಗಮಗೊಳಿಸಿದರು~ ಎಂದು ಮಿತ್ತಲ್ ತಿಳಿಸಿದ್ದಾರೆ.

50 ಮೀಟರ್‌ನಷ್ಟು ಹಳಿ ಹಾನಿಗೀಡಾಗಿದ್ದರಿಂದ ದುರ್ಘಟನೆ ಸಂಭವಿಸಿರಬಹುದೇ ಅಥವಾ ರೈಲು ದುರಂತದಿಂದ ಹಳಿಗೆ ಹಾನಿ ಸಂಭವಿಸಿರಬಹುದೇ ಎನ್ನುವುದು ಇನ್ನೂ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ರೈಲ್ವೆ ಸಚಿವ ಮುಕುಲ್ ರಾಯ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಗಾಯಾಳುಗಳ ಸಂಪೂರ್ಣ ವೆಚ್ಚವನ್ನು ಇಲಾಖೆ ಭರಿಸಲಿದೆ ಎಂದು ತಿಳಿಸಿದ್ದಾರೆ.

ದೆಹಲಿಯಿಂದ ಪ್ರಯಾಣ ಬೆಳೆಸಿದ್ದ ಈ ರೈಲು ಫಿರೋಜ್‌ಪುರ ಮಾರ್ಗವಾಗಿ ಮುಂಬೈಗೆ ತೆರಳಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT