ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿತಪ್ಪಿರುವ ರೈಲು ಯೋಜನೆ

Last Updated 22 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು- ಹಾಸನ ರೈಲುಮಾರ್ಗ ಯೋಜನೆ ಮಂಜೂರಾಗಿ 14 ವರ್ಷ ಕಳೆದರೂ ಸದ್ಯದಲ್ಲೇ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಆದರೆ, ಯೋಜನೆಯ ವೆಚ್ಚ ಮಾತ್ರ ಮೂರು ಪಟ್ಟು ಹೆಚ್ಚಾಗಿದೆ!

ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಂಜೂರಾದ 166 ಕಿ.ಮೀ ಉದ್ದದ ಈ ಯೋಜನೆಯ ಪ್ರಾರಂಭಿಕ ಅಂದಾಜು ವೆಚ್ಚ ಕೇವಲ ್ಙ 295 ಕೋಟಿ. ಈಗ ಅದರ ವೆಚ್ಚ ್ಙ 900 ಕೋಟಿ ದಾಟಿದೆ.

ಇನ್ನೂ ಶೇ 80ರಷ್ಟು ಕಾಮಗಾರಿ ಬಾಕಿ ಇದ್ದು, ಪೂರ್ಣವಾಗುವ ವೇಳೆಗೆ ಅದರ ಒಟ್ಟು ವೆಚ್ಚ ಸಾವಿರ ಕೋಟಿ ರೂಪಾಯಿ ದಾಟಿದರೂ ಆಶ್ಚರ್ಯ ಇಲ್ಲ ಎನ್ನುತ್ತವೆ ರೈಲ್ವೆ ಇಲಾಖೆ ಮೂಲಗಳು.

2006ರಲ್ಲಿ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆದಾಗ ಹಾಸನ- ಶ್ರವಣಬೆಳಗೊಳದ ನಡುವಿನ 43 ಕಿ.ಮೀ. ಉದ್ದದ ರೈಲ್ವೆ ಕಾಮಗಾರಿಯನ್ನು ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿತ್ತು.

ಮಸ್ತಕಾಭಿಷೇಕದ ವೇಳೆಗೆ ರೈಲುಗಳು ಸಂಚರಿಸಿದ್ದವು. ಆ ನಂತರ ನಿಂತ ರೈಲುಗಳ ಓಡಾಟ ಪುನಃ ಆರಂಭವೇ ಆಗಿಲ್ಲ. ಇದರಿಂದ ರೈಲ್ವೆ ಹಳಿಗಳ ಮಧ್ಯೆ ಗಿಡಗಳು ಬೆಳೆದು ಅವ್ಯವಸ್ಥೆಯ ಕೂಪವಾಗಿದೆ.
ಇದು ಬಿಟ್ಟರೆ ಆ ನಂತರ ಪ್ರಗತಿಯೇ ಕಾಣಲಿಲ್ಲ. ಅಲ್ಲಲ್ಲಿ ರೈಲ್ವೆ ಹಳಿ ಹಾಕಲು ಪೂರ್ವ ಸಿದ್ಧತೆ ಮಾಡಿಕೊಂಡಿದ್ದು ಬಿಟ್ಟರೆ ಬೇರೆ ಏನೂ ಆಗಲಿಲ್ಲ. ಜಮೀನು ಸ್ವಾಧೀನ ಸೇರಿದಂತೆ ಅನೇಕ ಸಮಸ್ಯೆಗಳಿಂದಾಗಿ ಕಾಮಗಾರಿ ವಿಳಂಬವಾಗಿದೆ. ಕುಣಿಗಲ್ ಪಟ್ಟಣದಲ್ಲಿನ ಕುದುರೆ ಫಾರಂ ಸ್ಥಳಾಂತರ ವಿವಾದವೂ ವಿಳಂಬಕ್ಕೆ ಕಾರಣವಾಗಿದೆ.

ಈ ಯೋಜನೆ ಪೂರ್ಣಗೊಳಿಸಿದರೆ ಕರಾವಳಿಯ ಸಂಪರ್ಕ ಸುಲಭವಾಗಲಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂದು ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ರೈಲ್ವೆ ಇಲಾಖೆ ಹೆಚ್ಚು ಆಸಕ್ತಿ ವಹಿಸದ ಕಾರಣ, ಇದನ್ನೂ ವೆಚ್ಚ ಹಂಚಿಕೆ ಒಪ್ಪಂದದ ವ್ಯಾಪ್ತಿಗೆ (ಕಾಮಗಾರಿ ತ್ವರಿತವಾಗಿ ಅನುಷ್ಠಾನವಾಗಲಿ ಎಂಬ ಉದ್ದೇಶದಿಂದ) ಸೇರಿಸಲಾಯಿತು.

ರೈಲ್ವೆ ಇಲಾಖೆ, ಈ ಯೋಜನೆ ಸಲುವಾಗಿ ಇದುವರೆಗೂ ್ಙ 355 ಕೋಟಿ  ವೆಚ್ಚ ಮಾಡಿದೆ. ಇನ್ನೂ ಸುಮಾರು ್ಙ572 ಕೋಟಿ   ವೆಚ್ಚ ಮಾಡಬೇಕಿದ್ದು, ಅದರಲ್ಲಿ ಶೇ 50ರಷ್ಟು ಹಣವನ್ನು (್ಙ 286 ಕೋಟಿ) ರಾಜ್ಯ ಸರ್ಕಾರ ಭರಿಸಲು ಕಳೆದ ಏಪ್ರಿಲ್‌ನಲ್ಲಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ ತಿಂಗಳಲ್ಲಿ ತನ್ನ ಪಾಲಿನ ್ಙ40 ಕೋಟಿ  ಹಣ ಬಿಡುಗಡೆ ಕೂಡ ಮಾಡಿದೆ. ಇಷ್ಟಾದರೂ ಕಾಮಗಾರಿಯ ವೇಗ ಚುರುಕುಗೊಂಡಿಲ್ಲ ಎನ್ನುತ್ತವೆ ಸರ್ಕಾರದ ಮೂಲಗಳು.

ಕುದುರೆ ಫಾರಂ: ಕುಣಿಗಲ್ ಸಮೀಪದ ಐತಿಹಾಸಿಕ ಕುದುರೆ ಫಾರಂ ಸ್ಥಳಾಂತರ ಮಾಡಬೇಕೆನ್ನುವುದು ವಿವಾದವಾದ ಕಾರಣ ಅದನ್ನು ಕೈಬಿಟ್ಟು, ಹಳಿಯ ಮಾರ್ಗವನ್ನೇ ಬದಲಿಸಲು ರೈಲ್ವೆ ನಿರ್ಧರಿಸಿದೆ. ಇದರಿಂದ ಸುಮಾರು ್ಙ 12 ಕೋಟಿ  ಹೆಚ್ಚುವರಿ ಖರ್ಚಾಗುತ್ತಿದ್ದು, ಅದನ್ನು ರಾಜ್ಯ ಸರ್ಕಾರ ಭರಿಸುವ ಭರವಸೆ ನೀಡಿದೆ. ಇಷ್ಟಾದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎನ್ನುವುದು ಸ್ಥಳೀಯರ ಅಳಲು.

ರೈಲ್ವೆ ಏನನ್ನುತ್ತದೆ?: ಯಥಾಪ್ರಕಾರ ಭೂಮಿ ಕೊಟ್ಟಿಲ್ಲ ಎನ್ನುವುದು ರೈಲ್ವೆ ಆರೋಪ. ಆದರೆ, ರಾಜ್ಯ ಸರ್ಕಾರದ ಮೂಲಸೌಲಭ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಭೂಮಿ ಹಸ್ತಾಂತರ ಬಹುತೇಕ ಮುಗಿದಿದೆ. ಅಲ್ಲಿ- ಇಲ್ಲಿ ಅಂತ ಸುಮಾರು 20 ಎಕರೆ ಜಮೀನು ಮಾತ್ರ ಕೊಡಬೇಕಾಗಿದೆ ಎನ್ನುತ್ತಾರೆ.

ಮಂಡ್ಯ ಜಿಲ್ಲೆ ವ್ಯಾಪ್ತಿಯ ಸುಮಾರು 200 ಎಕರೆ ಪೈಕಿ 192 ಎಕರೆಯನ್ನು ರೈಲ್ವೆಗೆ ಹಸ್ತಾಂತರ ಮಾಡಲಾಗಿದೆ. ಅಳಿಸಂದ್ರ ವ್ಯಾಪ್ತಿಯ ಎಂಟು ಎಕರೆ ಬಾಕಿ ಇದ್ದು ಅದನ್ನು ಒಂದು ವಾರದಲ್ಲಿ ಹಸ್ತಾಂತರ ಮಾಡಲಾಗುತ್ತದೆ ಎನ್ನುತ್ತಾರೆ ಪಾಂಡವಪುರ ಉಪ ವಿಭಾಗಾಧಿಕಾರಿ ಪ್ರಭು ಅವರು.
ಉಳಿದಂತೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಭೂಮಿ ಹಸ್ತಾಂತರ ಮಾಡಬೇಕಿದೆ ಎನ್ನುತ್ತವೆ ರೈಲ್ವೆ ಮೂಲಗಳು.

ಉನ್ನತ ಮಟ್ಟದ ಸಭೆ: ರೈಲ್ವೆ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ಈ ಸಲುವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರು ಮಂಗಳವಾರ ರೈಲ್ವೆ ಅಧಿಕಾರಿಗಳ ಉನ್ನತ ಮಟ್ಟದ ಸಭೆ ಕರೆದಿದ್ದು, ಅಲ್ಲಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

ರೈಲ್ವೆಯವರ ತಪ್ಪಿನಿಂದಾಗಿಯೇ ಭೂಮಿ ಹಸ್ತಾಂತರ ಕೆಲವೊಂದು ಕಡೆ ವಿಳಂಬವಾಗಿದೆ. ಎಲ್ಲವೂ ಸರಿ ಇರುವ ಕಡೆ ರೈಲ್ವೆ ಹಳಿ ಹಾಕಲು ಸಮಸ್ಯೆ ಏನು ಎನ್ನುವುದು ಸರ್ಕಾರದ ಪ್ರಶ್ನೆ. ಇದಕ್ಕೆ ರೈಲ್ವೆ ಇಲಾಖೆಯಿಂದ ಉತ್ತರ ಇಲ್ಲ. ಬದಲಿಗೆ, ಪೂರ್ಣ ಭೂಮಿ ಕೊಟ್ಟ ನಂತರವೇ ಕಾಮಗಾರಿ ಎಂದು ಆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT