ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಬೇರು-ಹೊಸ ಚಿಗುರು

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

`ರುಕ್ ಜಾನಾ ಓ ಜಾನೆ ಹಂಸೆ ದೋ ಬಾತೆ... ಕರ್‌ಕೆ ಚಲೀ ಜಾನಾ...  ಏ.. ಮೌಸಂ ಹೈ ದೀವಾನಾ... ರುಕ್ ರುಕ್ ರುಕ್~ ಹಾಡು ಜೋರುಧ್ವನಿಯಲ್ಲಿ ಕೇಳುತ್ತಿದ್ದರೆ ಮಕ್ಕಳೆಲ್ಲ ಅರಳುಕಂಗಳಾಗಿದ್ದರು. ತುಟಿಯಂಚಿನಲ್ಲಿ ಒಂದು ಕಿರುನಗೆ. ಪೇಪರ್ ಓದುವ ಅಜ್ಜ, ಟೀವಿ ನೋಡುವ ಅಜ್ಜಿ ಇಬ್ಬರೂ ಹೆಜ್ಜೆ ಹಾಕುತ್ತಿದ್ದಾರೆ.

ಇವರೇನಾ... ಮೊಣಕಾಲಿಗೆ ಕ್ರೀಮ್ ಹಚ್ಚಿಕೊಳ್ಳುವ ತಾತ? ಇವರೇನಾ ಮೆಟ್ಟಿಲು ಹತ್ತುವಾಗ ಕೋಲು ಹಿಡಿಯುವ ಅಜ್ಜಿ..? ಎಂಬ ಪ್ರಶ್ನೆಗಳನ್ನು ಕಣ್ಣಲ್ಲೇ ಕೇಳುವಂತೆ ನೋಡುತ್ತಿದ್ದರು ಚಿಣ್ಣರು.

ಇದು ಶಾಂತಿನಗರದಲ್ಲಿರುವ ಟ್ರೀಹೌಸ್‌ನಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದ ಬಗೆ. ಅಜ್ಜ-ಅಜ್ಜಿ-ತಾತನೊಂದಿಗೆ ಮೊಮ್ಮಕ್ಕಳು ಹಾಡಿ ತಣಿದರು. ಕುಣಿದು ದಣಿದರು.
ಹಳೆಬೇರು-ಹೊಸ ಚಿಗುರು ಕೂಡಿರಲು ಮರ ಸೊಗಸು ಎಂಬಂತೆ ಈ ಟ್ರೀಹೌಸ್ ಅಜ್ಜ-ಅಜ್ಜಿಯರಿಗಾಗಿ ಒಂದು ದಿನವನ್ನು ಏರ್ಪಡಿಸಿತ್ತು.

ತಮ್ಮ ವಂಶದ ಕುಡಿಗಳೊಂದಿಗೆ ಹಿರಿಜೀವಿಗಳು ಸಂತೋಷ ಹಂಚಿಕೊಳ್ಳುತ್ತ ತಾವೂ ಮಕ್ಕಳಾಗಿದ್ದರು. ಅಜ್ಜ ಅಜ್ಜಿಯೊಂದಿಗೆ ಹೆಜ್ಜೆ ಹಾಕುತ್ತಲೇ ಮೊಮ್ಮಕ್ಕಳು ನಲಿದಾಡಿದರು.

ಒಂದೆಡೆ ವಾತ್ಸಲ್ಯಮೂರ್ತಿಗಳಾದ ಹಿರಿಯರು, ಇನ್ನೊಂದೆಡೆ ಪ್ರೀತಿಯ ಕುಡಿಕೆಗಳಂತಿರುವ ಮಕ್ಕಳು. ಅನಂತ ಪ್ರೇಮದ ಪರಿಶುದ್ಧ ಪ್ರತೀಕದಂತಿದ್ದ ಎರಡೂ ತುದಿಗಳು ಸೇರಿದ್ದು ಟ್ರೀ ಹೌಸ್‌ನಲ್ಲಿ.

25 ಮಕ್ಕಳು ತಮ್ಮ ಅಜ್ಜ-ಅಜ್ಜಿಯರೊಂದಿಗೆ ಶಾಲೆಗೆ ಬಂದರು. ಅಲ್ಲಿ ಅವರಿಗಾಗಿ ಅಂತ್ಯಾಕ್ಷರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಅರವತ್ತಾದರೇನು? ಎಪ್ಪತ್ತಾದರೇನು? ಎಂಬಂತೆ ಎಲ್ಲರೂ ಹಳೆಯ ಹಿಂದಿ ಹಾಡಿಗೆ ಹೆಜ್ಜೆ ಹಾಕಿದರು.

ಇನ್ನಿತರ ಕ್ರೀಡೆಗಳಲ್ಲಿಯೂ ಭಾಗವಹಿಸಿದರು. ಮಕ್ಕಳು ಚಪ್ಪಾಳೆ ತಟ್ಟುತ್ತ, ಕೇಕೆ ಹಾಕಿ ಅವರಲ್ಲಿ ಉತ್ಸಾಹ ತುಂಬಿದರು.

ಮನಸು ಸಂತಸದಿಂದ ತುಂಬಿ, ದೇಹದ ದಣಿವನ್ನು ಹಿಂದಿಕ್ಕಿದಂತೆ ಆಯಿತು.
`ಟ್ರೀ ಹೌಸ್ ಎಜುಕೇಷನ್ ಅಂಡ್ ಆಕ್ಸೆಸರೀಸ್ ಲಿಮಿಟೆಡ್~ನ ಪ್ರವರ್ತಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಜೇಶ್ ಭಾಟಿಯಾ, `ಬಹಳಷ್ಟು ಉದ್ಯೋಗಸ್ಥ ಕುಟುಂಬಗಳಲ್ಲಿ ಮಕ್ಕಳು ಅವರ ಅಜ್ಜ-ಅಜ್ಜಿಯರೊಂದಿಗೆ ಬೆಳೆಯುತ್ತವೆ.  ಅಪ್ಪ-ಅಮ್ಮನಿಗಿಂತ ಹೆಚ್ಚಾಗಿ ಅವರನ್ನೇ  ಅವಲಂಬಿಸಿರುತ್ತಾರೆ.

ಹಾಗಾಗಿ ಅಜ್ಜ ಅಜ್ಜಿಯರನ್ನು ಆಹ್ವಾನಿಸಿ, ಮೊಮ್ಮಕ್ಕಳೊಡನೆ ನಲಿಯಲು ಒಂದು ಅವಕಾಶವನ್ನು ಸೃಷ್ಟಿಸಲಾಯಿತು. ಪ್ರೀತಿಯ ಈ ಪರಿಗೆ ಪ್ರೇಮಿಗಳ ದಿನವೇ ಸೂಕ್ತವೆನಿಸಿತು ಎಂದು ಹೇಳಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT