ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಕಟ್ಟಡ ನೆಲಸಮಕ್ಕೆ ಸಮ್ಮತಿ

Last Updated 28 ಜನವರಿ 2012, 10:25 IST
ಅಕ್ಷರ ಗಾತ್ರ

ಹಾಸನ: `ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ಕೆಡವುವ ಮೊದಲು ಕಟ್ಟಡವಿರುವ ಜಾಗ ಡಿಡಿಪಿಐ ಹೆಸರಿನಲ್ಲಿ ಖಾತೆಯಾಗಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕು. ಈ ಬಗ್ಗೆ  ಸರಿಯಾದ ಮಾಹಿತಿ ಸಂಗ್ರಹಿಸಿದ ಬಳಿಕವೇ ಕಟ್ಟಡ ಕೆಡವಲು ಮುಂದಾಗಬೇಕು~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ಡಿಡಿಪಿಐ ಎ.ಟಿ. ಚಾಮರಾಜ್ ಅವರಿಗೆ ಸೂಚನೆ ನೀಡಿದರು.

ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

`ಜಿಲ್ಲೆಯ ವಿವಿಧ ಕಡೆ ಹಳೆಯ ಶಾಲಾ ಕಟ್ಟಡಗಳು ಕುಸಿಯುವ ಸ್ಥಿತಿಯಲ್ಲಿವೆ. ಅವುಗಳು ಬಿದ್ದು ಯಾರಿಗಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು   ಕೆಡವುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಮೂಡಲಹಿಪ್ಪೆ ಕ್ಷೇತ್ರದ ದೇವೇಗೌಡ (ಪಾಪಣ್ಣಿ) ಆಕ್ಷೇಪಿಸಿದರು.

 ಇತರ ಕೆಲವು ಸದಸ್ಯರೂ ಅದಕ್ಕೆ ಬೆಂಬಲ ಸೂಚಿಸಿದಾಗ ಈ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ       ಬಿ.ಆರ್. ಸತ್ಯನಾರಾಯಣ, `ಗ್ರಾಮಸ್ಥರು ದಾನ ನೀಡಿದ್ದ ಜಾಗದಲ್ಲೇ ಹಿಂದೆ ಶಾಲೆಗಳನ್ನು ನಿರ್ಮಿಸಲಾಗಿತ್ತು.

ಇಂಥವುಗಳಲ್ಲಿ ಅನೇಕ ಜಾಗಗಳು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆಯಾಗಿಲ್ಲ. ಈಗಲೂ ದಾನ ನೀಡಿದವರ ಹೆಸರಿನಲ್ಲೇ ಇವೆ. ಒಂದುವೇಳೆ ಕಟ್ಟಡವನ್ನು ಕೆಡವಿದರೆ ಅಂಥ ಜಾಗಗಳನ್ನು ಮತ್ತೆ ಅವರ ಕುಟುಂಬಸ್ಥರು ಪಡೆಯುವ ಅಥವಾ ಸುತ್ತಮುತ್ತಲಿನವರು ಒತ್ತುವರಿ ಮಾಡಿಕೊಳ್ಳುವ ಅಪಾಯವಿದೆ. ಆದ್ದರಿಂದ ಮೊದಲು ಜಾಗ ಇಲಾಖೆಯ ಹೆಸರಿನಲ್ಲಿ ಖಾತೆಯಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

`ಸಕಲೇಶಪುರ, ಚನ್ನರಾಯಪಟ್ಟಣ, ಬೇಲೂರು, ಹಳೇಬೀಡು ಮುಂತಾದ ತಾಲ್ಲೂಕುಗಳಿಂದ 30ಕ್ಕೂ ಹೆಚ್ಚು ಕಟ್ಟಡಗಳನ್ನು ಕೆಡವಬಹುದು ಎಂದು ಎಂಜಿನಿಯರ್‌ಗಳು ವರದಿ ನೀಡಿದ್ದಾರೆ~ ಎಂದು ಡಿಡಿಪಿಐ ಎ.ಟಿ. ಚಾಮರಾಜ್ ಸಭೆಗೆ ತಿಳಿಸಿದರು.

ಸ್ತ್ರೀಶಕ್ತಿ ಸಂಘಗಳಿಗೆ ಕಟ್ಟಡ:
ಹಳೆಯ ಕಟ್ಟಡಗಳನ್ನು ಕೆಡವುವುದು ಒಂದೆಡೆಯಾದರೆ ಈ ವರ್ಷ ಹಲವು ಶಾಲೆಗಳನ್ನು ಮುಚ್ಚಲಾಗಿದೆ. ಅಂಥ ಶಾಲೆಗಳ ಕಟ್ಟಡಗಳೂ ನಿರ್ವಹಣೆ ಇಲ್ಲದೆ ಹಾಲಾಗುತ್ತಿವೆ. ಅವುಗಳನ್ನೇನು ಮಾಡುತ್ತೀರಿ ಎಂದು ಕೆಲವು ಸದಸ್ಯರು ಪ್ರಶ್ನಿಸಿದರು.

ಈ ಬಗ್ಗೆ ದೀರ್ಘ ಚರ್ಚೆ ನಡೆದು, `ಮುಚ್ಚಿರುವ ಶಾಲೆಗಳ ಕಟ್ಟಡವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಸ್ವಾಧೀನಕ್ಕೆ ನೀಡಬೇಕು, ಅವರು ಬೇಕಾದಲ್ಲಿ ತಾತ್ಕಾಲಿಕ ಆಧಾರದಲ್ಲಿ ಗ್ರಾಮದ ಸ್ತ್ರೀಶಕ್ತಿ ಸಂಘಗಳಿಗೆ ನೀಡಬಹುದು. ಆದರೆ ಸಂಘಗಳವರೇ ಕಟ್ಟಡ ನಿರ್ವಹಣೆ ಮಾಡಿಕೊಂಡು ಅದನ್ನು ಬಳಸಬೇಕಾಗುತ್ತದೆ. ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.

ಅಡುಗೆ ಕೋಣೆಗೆ ಪ್ರಸ್ತಾವನೆ
ಶಾಲೆಗಳಲ್ಲಿ ಬಿಸಿಯೂಟಕ್ಕೆ ಅಡುಗೆಕೋಣೆ ನಿರ್ಮಿಸಲು 60ಸಾವಿರ ರೂಪಾಯಿ ಸಾಕಾಗುತ್ತಿಲ್ಲ. ಇತರ ಕೆಲವು ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಿಂದಲೂ ಇದಕ್ಕೆ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ಇಲ್ಲೂ ಆ ಬಗ್ಗೆ ಚಿಂತನೆ ಮಾಡಬೇಕು ಎಂದು ಸದಸ್ಯ ಅಮಿತ್ ಶೆಟ್ಟಿ ಸಲಹೆ ನೀಡಿದರು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಅಧ್ಯಕ್ಷರು ತಿಳಿಸಿದರು.

ಅರಕಲಗೂಡಿಗೆ ಬೋನುಗಳು
ಅರಕಲಗೂಡಿನಲ್ಲಿ ಮನುಷ್ಯನ ಮೇಲೆ ದಾಳಿ ಮಾಡುತ್ತಿರುವ ಚಿರತೆಯನ್ನು ಹಿಡಿಯದಿರುವುದಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

`ಅರಕಲಗೂಡಿನಲ್ಲಿ ಸದ್ಯ ಎರಡು ಬೋನುಗಳನ್ನಿಟ್ಟಿದ್ದೇವೆ. ಇನ್ನೂ ಕೆಲವು ಬೋನುಗಳನ್ನು ತರಿಸಲಾಗುತ್ತಿದ್ದು ಅವುಗಳನ್ನು ಅಲ್ಲಿಗೆ ಸಾಗಿಸಲಾಗುವುದು~ ಎಂದು ಅಧಿಕಾರಿ ಚಂದ್ರೇಗೌಡ ತಿಳಿಸಿದರು.

`ಎರಡು ಬೋನುಗಳನ್ನಿಟ್ಟು ಚಿರತೆ ಹಿಡಿಯಲು ಸಾಧ್ಯವಿಲ್ಲ. ಬೇರೆ ಬೇರೆ ಕಡೆ ಇಟ್ಟಿರುವ ಬೋನುಗಳನ್ನು ಸದ್ಯಕ್ಕೆ ಅರಕಲಗೂಡಿಗೆ ಸಾಗಿಸಿ. ಅಲ್ಲಿ ಭಯದ ವಾತಾವರಣವಿದ್ದು, ಚಿರತೆಯನ್ನು ಹಿಡಿಯುವ ಕೆಲಸವನ್ನು ಮಾಡಬೇಕು ಎಂದು ಸೂಚಿಸಲಾಯಿತು. ಅರಣ್ಯ ಇಲಾಖೆಯವರು ರೈತರಿಗೆ ನೀಡುವ ಗಿಡಗಳ ಗುಣಮಟ್ಟ ಸರಿಯಾಗಿರುವುದಿಲ್ಲ, ಜತೆಗೆ ರೈತರು ಕೇಳಿದ್ದನ್ನು ಬಿಟ್ಟು ಬೇರೆ ಗಿಡಗಳನ್ನು ನೀಡುತ್ತಾರೆ ಎಂದೂ ಸದಸ್ಯರು ಆಕ್ಷೇಪಿಸಿದರು. ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಜನ ಕುಮಾರ್ ಹಾಜರಿದ್ದರು.

ಕೋಗಿಲೆಮನೆಗೆ ಅನುದಾನ: ಆಕ್ಷೇಪ
ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಡಿ.ಬಿ. ಚಂದ್ರೇಗೌಡ ಪ್ರತಿನಿಧಿಸುವ ಕೋಗಿಲೆಮೆನೆ ಕ್ಷೇತ್ರಕ್ಕೆ 2011-12ನೇ ಸಾಲಿನಲ್ಲಿ ಹೆಚ್ಚಿನ ಕಾಮಗಾರಿಗಳನ್ನು ನೀಡಿದ್ದ ಬಗ್ಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು. ಬಿಜೆಪಿ ಸದಸ್ಯರು ಈ ಪ್ರಶ್ನೆಯನ್ನು ಎತ್ತಿದರೂ ಕೊನೆಯಲ್ಲಿ ಜೆಡಿಎಸ್‌ನ ಕೆಲವು ಸದಸ್ಯರೂ ದನಿಗೂಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಲಕ್ಷ್ಮಣ ಈ ಪ್ರಶ್ನೆ ಎತ್ತಿದರೆ, ಆಕ್ಷೇಪ ವ್ಯಕ್ತಪಡಿಸಿದ ಚಂದ್ರೇಗೌಡ, `ವಿಷಯ ಪಟ್ಟಿ ಪ್ರಕಾರ ಚರ್ಚೆಯಾಗಲಿ, ಈ ವಿಚಾರ ಈಗ  ಬೇಡ~ ಎಂದರು. ಕೊನೆಗೆ ಸಂಜೆ 3.30ರ ಬಳಿಕ ಈ ವಿಚಾರ ಚರ್ಚೆಗೆ ಬಂತು.

2011-12ರಲ್ಲಿ 3054 ಸಿ.ಎಂ ಸಡಕ್ ಗ್ರಾಮೀಣ ರಸ್ತೆ ಕಾಮಗಾರಿ ಯೋಜನೆಯಲ್ಲಿ ಇತರ ಸದಸ್ಯರ ಕ್ಷೇತ್ರಗಳಿಗೆ ತಲಾ 3 ಲಕ್ಷ ನೀಡಿದ್ದರೆ, ಕೋಗಿಲಮನೆಗೆ 21 ಲಕ್ಷ ರೂಪಾಯಿ ನೀಡಲಾಗಿದೆ. 13ನೇ ಹಣಕಾಸು ಆಯೋಗದ ರಸ್ತೆ ಅಭಿವೃದ್ಧಿ ಯೋಜನೆಯಡಿ 56 ಲಕ್ಷ (ಇತರ ಕ್ಷೇತ್ರಗಳಿಗೆ ತಲಾ 4ಲಕ್ಷ), ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯಡಿ 19ಲಕ್ಷ (ಇತರ ಕ್ಷೇತ್ರಗಳಿಗೆ ತಲಾ 3ಲಕ್ಷ), 2702 ಕೆರೆ ಅಭಿವೃದ್ಧಿ ಕಾಮಗಾರಿಗೆ 27 ಲಕ್ಷ (ಇತರ ಕ್ಷೇತ್ರಗಳಿಗೆ ತಲಾ 2ಲಕ್ಷ) ಹಾಗೂ 4702 (ಎಸ್‌ಡಿಪಿ) ಕೆರೆ ಅಭಿವೃದ್ಧಿಗೆ 8 ಲಕ್ಷ (ಇತರ ಕ್ಷೇತ್ರಗಳಿಗೆ ತಲಾ 2ಲಕ್ಷ) ನೀಡಲಾಗಿದೆ. ಜಿ.ಪಂ.ನಲ್ಲಿ ಆಗಿರುವ ತಾರತಮ್ಯ ಇದರಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿಯೂ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 59 ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಶೂನ್ಯವಾಗಿದೆ.
ಇದಕ್ಕೆ ಶಿಕ್ಷ–ಕರೊಬ್ಬರೇ ಕಾರಣವಲ್ಲ. ಸಮಾಜ, ಶಿಕ್ಷಣ ಇಲಾಖೆ, ಪೋಷಕರು, ನಾವು-ನೀವು ಎಲ್ಲರೂ ಹೊಣೆ. ಏಕೆ- ಹೇಗೆ ಎಂದೆಲ್ಲ ಇಲ್ಲಿ ಚರ್ಚಿಸಿ ಉಪಯೋಗವಿಲ್ಲ. 

 -ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ
`ಅರಣ್ಯ ಇಲಾಖೆಯನ್ನು ಮರಕ ಡಿಯಲು ಪರವಾನಿಗೆ ನೀಡುವ ಏಜನ್ಸಿಯಾಗಿಸಿದ್ದೀರಿ. ಬೇರೆ ಯಾವ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ~
–ಸದಸ್ಯ ಕಿಶೋರ್
ಮರಕಡಿಯಲು ಪರವಾನಿಗೆ ನೀಡುವುದು ಅರಣ್ಯ ಇಲಾಖೆಯ ಕೆಲಸಗಳಲ್ಲಿ ಒಂದು. ನಾವು ಪರವಾನಿಗೆ ನೀಡದಿದ್ದರೆ ನೀವೇ ನಮ್ಮ ಮೇಲೆ ಒತ್ತಡ ಹೇರುತ್ತೀರಿ
-ಎಸಿಎಫ್ ಚಂದ್ರೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT