ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿ ಹುಡುಗಿ ನಾಯಕಿಯಾದ ದಾರಿ...

Last Updated 29 ಜನವರಿ 2012, 19:30 IST
ಅಕ್ಷರ ಗಾತ್ರ

`ಕ್ರಿಕೆಟ್ ಇಲ್ಲದೇ ಬದುಕಲಾರೆ. ಆದರೆ ಬೆಳಿಗ್ಗೆ ಎದ್ದರೆ ಕ್ರಿಕೆಟ್ ಆಡಲು ಕಣಕ್ಕಿಳಿಯುತ್ತೇನೆ ಎಂಬ ಭರವಸೆ ನನಗಿಲ್ಲ. ನಾನು ಹಲವು ಸಮಸ್ಯೆಗಳನ್ನು ದಾಟಿ ಬಂದವಳು~
-`ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕಿ ಜೂಲನ್ ಗೋಸ್ವಾಮಿ ಈ ರೀತಿ ಹೇಳಲು ಕಾರಣವಿತ್ತು.

ಕ್ರಿಕೆಟ್ ಬಗ್ಗೆ ಗಂಧಗಾಳಿಯೂ ಇಲ್ಲದ ಪಶ್ಚಿಮ ಬಂಗಾಳದ ಚಕ್ದಾ ಎಂಬ ಹಳ್ಳಿಯ ಹುಡುಗಿ ಜೂಲನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡುವ ಮುನ್ನ ನಡೆದು ಬಂದ ಹಾದಿಯಲ್ಲಿ ಹೀಯಾಳಿಕೆ, ಅವಮಾನ, ಮೂದಲಿಕೆ, ತಿರಸ್ಕಾರಗಳದ್ದೇ ಸಂತೆ.

ಕ್ರಿಕೆಟ್ ಆಡಲು ಶುರು ಮಾಡಿದಾಗ ಬೌಲಿಂಗ್ ಮಾಡಲು ಆ ಹಳ್ಳಿಯ ಹುಡುಗರು ಈಕೆಗೆ ಅವಕಾಶವನ್ನೇ ನೀಡುತ್ತಿರಲಿಲ್ಲ. ಮಗಳನ್ನು ಕ್ರಿಕೆಟ್ ಆಡಲು ಬಿಟ್ಟಿದ್ದಕ್ಕೆ ಅಕ್ಕಪಕ್ಕದ ಮನೆಯವರು ಆಕೆಯ ಪೋಷಕರನ್ನು ಹೀಯಾಳಿಸುತ್ತಿದ್ದರು. ಇದರಿಂದ ಬೇಸತ್ತ ಪೋಷಕರು ಒಮ್ಮೆ `ನೀನು ಕ್ರಿಕೆಟ್ ಆಡುವುದೇ ಬೇಡ~ ಎಂದಿದ್ದರು.
 
ಇದನ್ನೆಲ್ಲಾ ಸಹಿಸಿಕೊಂಡು ತರಬೇತಿಗಾಗಿ ಬೆಳಿಗ್ಗೆ ನಾಲ್ಕೂವರೆಗೆ ಎದ್ದು ರೈಲಿನಲ್ಲಿ 80 ಕಿ.ಮೀ.ದೂರದ ಕೋಲ್ಕತ್ತಕ್ಕೆ ಹೋಗಬೇಕಿತ್ತು. ಕೊಂಚ ತಡವಾದರೆ ಕೋಚ್‌ಗಳು ಶಿಬಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.

ಅವತ್ತು ಹೀಯಾಳಿಸುತ್ತಿದ್ದ ಹಳ್ಳಿಯ ಆ ಹುಡುಗರು ಈಗ ಏನಾಗಿದ್ದರೋ ಗೊತ್ತಿಲ್ಲ. ಅಕ್ಕಪಕ್ಕದ ಮನೆಯ ಪೋಷಕರು ಏನು ಮಾಡುತ್ತಿದ್ದಾರೆ ತಿಳಿಯದು. ಆದರೆ ಜೂಲನ್ ಪ್ರತಿಷ್ಠಿತ `ಪದ್ಮಶ್ರೀ~ ಪ್ರಶಸ್ತಿಗೆ ಆಯ್ಕೆ ಆಗಿರುವ ಸಾಧಕಿ. ಐಸಿಸಿ `ವರ್ಷದ ಅತ್ಯುತ್ತಮ ಆಟಗಾರ್ತಿ~ ಪ್ರಶಸ್ತಿ ಪುರಸ್ಕೃತೆ.
 
ಅದೆಲ್ಲಕ್ಕಿಂತ ಮುಖ್ಯವಾಗಿ ಭಾರತ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ನಾಯಕಿ. ಡಯಾನಾ ಎಡುಲ್ಜಿ ಬಳಿಕ `ಪದ್ಮಶ್ರೀ~ ಗೌರವ ಪಡೆದ ದೇಶದ ಎರಡನೇ ಆಟಗಾರ್ತಿ.
`ಇಂತಹ ಗೌರವಕ್ಕೆ ಅರ್ಹನಾಗುತ್ತೇನೆ ಎಂದು ನಾನು ಯಾವತ್ತೂ ಯೋಚಿಸಿರಲಿಲ್ಲ.

ಹಾಗಾಗಿ ಪ್ರಶಸ್ತಿ ಪಟ್ಟಿಯಲ್ಲಿ ನನ್ನ ಹೆಸರು ಕಾಣಿಸಿಕೊಂಡಾಗ ಅಚ್ಚರಿಯಾಯಿತು. ಈ ಪ್ರಶಸ್ತಿಯನ್ನು ನಾನು ಕುಟುಂಬ, ಕೋಚ್‌ಗಳು ಹಾಗೂ ಸಹ ಆಟಗಾರ್ತಿಯರಿಗೆ ಅರ್ಪಿಸುತ್ತೇನೆ. ನನ್ನ ಶ್ರಮಕ್ಕೆ ಕೊನೆಗೂ ಯಶಸ್ಸು ದೊರೆತಿದೆ~ ಎನ್ನುತ್ತಾರೆ 29 ವರ್ಷ ವಯಸ್ಸಿನ ಜೂಲನ್.

`ಕ್ರಿಕೆಟ್ ಆಡಲು ಶುರು ಮಾಡಿದಾಗ ನಾನು ಹೆಜ್ಜೆಹೆಜ್ಜೆಗೂ ಹಲವು ಅಡೆತಡೆಗಳನ್ನು ಎದುರಿಸಬೇಕಾಯಿತು. ಈಗ ಅವನ್ನೆಲ್ಲಾ ಮರೆತಿದ್ದೇನೆ. ಆದರೆ ಕ್ರಿಕೆಟ್ ಇಲ್ಲದೇ ಬದುಕಲು ನನಗೆ ಸಾಧ್ಯವಿಲ್ಲ. ಆಸಕ್ತಿ ಹಾಗೂ ಶ್ರಮದಿಂದ ಯಾರು ಏನು ಬೇಕಾದರೂ ಆಗಬಹುದು~ ಎಂದು ಅವರು ನುಡಿಯುತ್ತಾರೆ.

ಒಮ್ಮೆ ಯಾವುದೋ ಹಳ್ಳಿಗೆ ಕ್ರಿಕೆಟ್ ಆಡಲು ಹೋಗಿದ್ದ ಗೋಸ್ವಾಮಿ ತಡವಾಗಿ ಮನೆಗೆ ಬಂದಿದ್ದರು. ಇದರಿಂದ ಸಿಟ್ಟಾಗಿದ್ದ ತಾಯಿ ಮನೆಯ ಬಾಗಿಲನ್ನೇ ತೆರೆದಿರಲಿಲ್ಲವಂತೆ. ಬಳಿಕ ಅಪ್ಪ ಆಕೆಯನ್ನು ಒಳಕರೆದುಕೊಂಡು ಹೋಗಿದ್ದರಂತೆ. ಆಗ ಸಮಯ ರಾತ್ರಿ 3 ಗಂಟೆಯಾಗಿತ್ತು!

ಹುಡುಗಿಯರಿಗೇಕೆ ಕ್ರಿಕೆಟ್ ಎಂಬುದು ಆ ಊರಿನವರ ಪ್ರಶ್ನೆ. ಅದಕ್ಕೂ ಕಾರಣವಿತ್ತು. ಏಕೆಂದರೆ ಆಗ ಮಹಿಳಾ ಕ್ರಿಕೆಟ್ ಭಾರತದಲ್ಲಿ ಅಷ್ಟಕಷ್ಟೆ. ಆ ಹಳ್ಳಿಯ ಜನರಿಗೆ ಮಹಿಳೆಯರು ಕ್ರಿಕೆಟ್ ಆಡುತ್ತಾರೆ ಎಂಬುದು ಗೊತ್ತೂ ಇರಲಿಲ್ಲ. ಪಾಪ, ಆ ಹುಡುಗಿಯ ಆಸೆ, ಕನಸು ಈಡೇರುವುದಾದರೂ ಹೇಗೆ?

ಆದರೆ ಸ್ವಪನ್ ಸಾಧು ಎಂಬ ಕೋಚ್ ಆಕೆಯ ಪೋಷಕರು ಮನವೊಲಿಸಿ ಕ್ರಿಕೆಟ್ ಮುಂದುವರಿಸಲು ಅವಕಾಶ ಸಿಗುವಂತೆ ಮಾಡಿದರು. ಕೋಲ್ಕತ್ತದಲ್ಲಿ ತರಬೇತಿ ಶುರುವಾಯಿತು. ಊರಿನವರ ಮಾತುಗಳನ್ನು ಸವಾಲಾಗಿ ಸ್ವೀಕರಿಸಿದ ಜೂಲನ್ ಈಗ ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ಅತಿವೇಗದ ಬೌಲರ್.  2002ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಐಸಿಸಿ ನೀಡುವ `ವರ್ಷದ ಅತ್ಯುತ್ತಮ ಆಟಗಾರ್ತಿ~ ಪ್ರಶಸ್ತಿ 2007ರಲ್ಲಿ ಜೂಲನ್‌ಗೆ ಸಿಕ್ಕಾಗ ಖುಷಿ ವ್ಯಕ್ತಪಡಿಸಿದ್ದ ತಾಯಿ ಜರ್ನಾ, `ಮಗಳು ಮನೆಗೆ ಬಂದ ಕೂಡಲೆ ಕ್ಷಮೆಯಾಚಿಸುತ್ತೇನೆ~ ಎಂದಿದ್ದರು.  ಕ್ರಿಕೆಟ್ ಆಡುವುದನ್ನು ಆರಂಭದಲ್ಲಿ ವಿರೋಧಿಸಿದ್ದ ಕುಟುಂಬದವರು ಈಗ ಗೋಸ್ವಾಮಿಗೆ ಎಲ್ಲಾ ರೀತಿಯ ಸಹಾಯ ನೀಡುತ್ತಿದ್ದಾರೆ.

`ಕುಟುಂಬ ನೀಡುತ್ತಿರುವ ಸಹಕಾರದ ಕಾರಣ ನಾನು ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ಇನ್ನಷ್ಟು ಸಾಧಿಸುವ ಭರವಸೆ ಇದೆ~ ಎನ್ನುವ ಜೂಲನ್ 114    ಏಕದಿನ ಪಂದ್ಯಗಳಿಂದ 135 ವಿಕೆಟ್ ಹಾಗೂ 8 ಟೆಸ್ಟ್‌ಗಳಿಂದ 33 ವಿಕೆಟ್ ಗಳಿಸಿದ್ದಾರೆ.

`ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಮುಂಬರುವ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಇದು ಸ್ಫೂರ್ತಿಯಾಗಲಿದೆ. ಉಳಿದ ಮಹಿಳೆಯರಿಗೂ ಇದು ಪ್ರೇರಣೆ ಆಗಲಿದೆ~ ಎಂದು ಅವರು ಹೇಳುತ್ತಾರೆ.

ಮುಂದಿನ ತಿಂಗಳು ಭಾರತ ತಂಡದವರು ಟ್ವೆಂಟಿ-20 ಹಾಗೂ ಏಕದಿನ ಸರಣಿ ಆಡಲು ವೆಸ್ಟ್‌ಇಂಡೀಸ್‌ಗೆ ತೆರಳುತ್ತಿದ್ದಾರೆ. ಅದಕ್ಕಾಗಿ ಜೂಲನ್ ಸಾರಥ್ಯದ ಬಳಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ನಲ್ಲಿ ಅಭ್ಯಾಸ ನಿರತವಾಗಿದೆ.
ಏನೇ ಇರಲಿ, ಜೂಲನ್ ಸಾಧನೆ ಭಾರತದ ಇತರ ಹುಡುಗಿಯರಿಗೆ ಪ್ರೇರಣೆ ಆಗದೇ ಇರದು.   ಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT